ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಬನ್ನಿ, ಭಾರತದ 'ಸಿನಿಮ್ಯಾಟಿಕ್ ಕೆಲಿಡೋಸ್ಕೋಪ್'ನ 'ಸಹಯೋಗಿ ವೈವಿಧ್ಯತೆಯ' ಭಾಗವಾಗಿ: 52ನೇ ಐಎಫ್ಎಫ್ಐ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು
"ಭಾರತವನ್ನು ವಿಶ್ವ ಸಿನಿಮಾದ ಕೇಂದ್ರವನ್ನಾಗಿ, ಚಲನಚಿತ್ರ ತಯಾರಕರು ಮತ್ತು ಚಲನಚಿತ್ರ ಪ್ರೇಮಿಗಳ ಆಯ್ಕೆಯ ಸ್ಥಳವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಶ್ರೀ ಅನುರಾಗ್ ಸಿಂಗ್ ಠಾಕೂರ್
"ಸಂಪರ್ಕ, ಸಂಸ್ಕೃತಿ ಮತ್ತು ವಾಣಿಜ್ಯದ ವಿಶಿಷ್ಟ ಸಂಯೋಜನೆಯೊಂದಿಗೆ, ಭಾರತವು ಸಿನಿಮೀಯ ಪರಿಸರ ವ್ಯವಸ್ಥೆಯ ಕೇಂದ್ರಬಿಂದುವಾಗಿರಲು ಸಿದ್ಧವಾಗಿದೆ"
"ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ, ಭಾರತವು ಚಲನಚಿತ್ರ ನಿರ್ಮಾಣದಲ್ಲಿ ಜಾಗತಿಕವಾಗಿ ನೆಚ್ಚಿನ ತಾಣವಾಗುವ ಗುರಿ ಹೊಂದಿದೆ": ರಾಜ್ಯ ಸಚಿವ ಡಾ. ಎಲ್ ಮುರುಗನ್
ಆತ್ಮ ನಿರ್ಭರ ಭಾರತದ ಗುರಿಗೆ ಅನುಗುಣವಾಗಿ, ಚಲನಚಿತ್ರ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಗೋವಾ ಹೊಂದಿದೆ: ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್
ಕೋವಿಡ್-19 ಲಸಿಕಾಕರಣದಲ್ಲಿ ರಾಷ್ಟ್ರದ ಅದ್ಭುತ ಸಾಧನೆಯು ಚಲನಚಿತ್ರ ಪ್ರೇಮಿಗಳು ಐಎಫ್ಎಫ್ಐಅನ್ನು ವೈಭವದಿಂದ ಆಚರಿಸಲು ಸಹಾಯ ಮಾಡಿತು: ಕೇಂದ್ರ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ
ಅನೇಕ ಪ್ರಥಮಗಳೊಂದಿಗೆ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು ನವೆಂಬರ್ 20, 2021 ರಂದು ಗೋವಾದ ಪಣಜಿಯಲ್ಲಿರುವ ಡಾ. ಶ್ಯಾಮಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಭವ್ಯವಾದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿದೆ.
ಗೋವಾಕ್ಕೆ ಚಿತ್ರಪ್ರೇಮಿಗಳನ್ನು ಸ್ವಾಗತಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ಗೋವಾ 60 ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಆದರೆ ದೇಶವು ಆಜಾದಿ ಕಾ ಅಮೃತ್ ಮಹೋತ್ಸವ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದೆ. ನಾವು ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಮೂಹಿಕ ಸಂಕಲ್ಪವನ್ನು ಮಾಡಲು ನಮಗೆ ಇದೊಂದು ಅವಕಾಶವಾಗಿದೆ ಎಂದರು. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ ಮತ್ತು ಎಲ್ಲಾ ವೇದಿಕೆಗಳಲ್ಲಿ, ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ, ದೇಶೀಯವಾಗಿ ಮತ್ತು ಜಾಗತಿಕವಾಗಿ ಎಲ್ಲಾ ಹಂತಗಳಲ್ಲಿ ವಿಷಯ ರಚನೆ ಮತ್ತು ಪ್ರಸರಣದಲ್ಲಿ ಹಲವಾರು ಸಾಧ್ಯತೆಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಈ ದೃಷ್ಟಿಕೋನದಿಂದ 52ನೇ ಐಎಫ್‌ಎಫ್‌ಐ ಪ್ರಪಂಚದಾದ್ಯಂತದ ವೈವಿಧ್ಯಮಯ ಚಲನಚಿತ್ರಗಳು ಮತ್ತು ಚಲನಚಿತ್ರ ತುಯಾರಕರನ್ನು ಒಟ್ಟುಗೂಡಿಸಿದೆ ಎಂದು ಸಚಿವರು ತಿಳಿಸಿದರು. “ಐಎಫ್‌ಎಫ್‌ಐನಲ್ಲಿ ಹಲವು ಪ್ರಥಮಗಳಿವೆ. ಮೊದಲ ಬಾರಿಗೆ, ಐಎಫ್‌ಎಫ್‌ಐ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರದರ್ಶಿಸಲು ಮತ್ತು ಅವರು ಕಳೆದ ಕೆಲವು ವರ್ಷಗಳಲ್ಲಿ ತಯಾರಿಸಿದ್ದನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಐಎಫ್‌ಎಫ್‌ಐ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಬದಲಾವಣೆಯ ವೇಗಕ್ಕೆ ಅನುಗುಣವಾಗಿ ಕಲಾವಿದರು ಮತ್ತು ಉದ್ಯಮವು ಪರಸ್ಪರ ತೊಡಗಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸುತ್ತಿದೆ ಎಂದು ಸಚಿವರು ಹೇಳಿದರು.
ಮೊದಲ ಬಾರಿಗೆ, ಐದು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಭಾರತದ ಚಲನಚಿತ್ರಗಳನ್ನು ಐಎಫ್‌ಎಫ್‌ಐ ಜೊತೆಗೆ ಬ್ರಿಕ್ಸ್ ಚಲನಚಿತ್ರೋತ್ಸವದ ಮೂಲಕ ಪ್ರದರ್ಶಿಸಲಾಗುತ್ತದೆ. ಐಎಫ್‌ಎಫ್‌ಐ ನಲ್ಲಿ 300 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಸುಮಾರು 75 ರಾಷ್ಟ್ರಗಳ 148 ಅಂತಾರಾಷ್ಟ್ರೀಯ ಚಲನಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಐಎಫ್ಎಫ್ಐನಿಂದ 75 ಉದಯೋನ್ಮುಖ “ನಾಳಿನ ಸೃಜನಶೀಲ ಯುವ ಮನಸ್ಸುಗಳ” ಪ್ರಕಟಣೆ ಮತ್ತು ಅಭಿನಂದನೆ
ನಾವು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯದ 75 ನೇ ವರ್ಷವನ್ನು ದೇಶವು ಆಚರಿಸುತ್ತಿರುವಾಗ, ದೇಶದ ಪ್ರತಿಯೊಂದು ರಾಜ್ಯದಲ್ಲೂ ಆಜಾದಿ ಕಾ ಅಮೃತ್ ಮಹೋತ್ಸವದ ಧ್ವಜಗಳು ರಾರಾಜಿಸುತ್ತಿವೆ, ಐಎಫ್‌ಎಫ್‌ಐಗೆ ವಿಶೇಷ ಅತಿಥಿಗಳಾಗಿ ಭಾಗವಹಿಸಲು ದೇಶದಾದ್ಯಂತ 75 ಯುವ ಮಹತ್ವಾಕಾಂಕ್ಷಿ ಚಲನಚಿತ್ರ ತಯಾರಕರು ಆಯ್ಕೆಯಾಗಿದ್ದಾರೆ. ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಜೇತರ ಹೆಸರನ್ನು ಪ್ರಕಟಿಸಲಾಯಿತು.
ಈ ವಿನೂತನ ಉಪಕ್ರಮದ ಬಗ್ಗೆ ಮಾತನಾಡಿದ ಸಚಿವರು, “ಭಾರತ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ನಾವು ಮೊದಲ ಬಾರಿಗೆ 75 ಭರವಸೆಯ ಯುವ ಮನಸ್ಸುಗಳನ್ನು ಗುರುತಿಸಿ ಮಾರ್ಗದರ್ಶನ ನೀಡುತ್ತಿದ್ದೇವೆ. ನಿಖರವಾದ ಆಯ್ಕೆ ಪ್ರಕ್ರಿಯೆಯ ನಂತರ ಗ್ರ್ಯಾಂಡ್ ಜ್ಯೂರಿ ಮತ್ತು ಆಯ್ಕೆ ತೀರ್ಪುಗಾರರಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
75 ಉದಯೋನ್ಮುಖ ಕಲಾವಿದರ ಪಟ್ಟಿಯಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿಗೆ ಕೇವಲ 16 ವರ್ಷ ಮತ್ತು ಭಾರತದ ವಿವಿಧ ಸಣ್ಣ ಪಟ್ಟಣಗಳು ಮತ್ತು ನಗರಗಳಿಂದ ಆಯ್ಕೆಯಾದ ಅನೇಕರು ಇದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಐಎಫ್‌ಎಫ್‌ಐ ಕುರಿತ ಸರ್ಕಾರದ ಪ್ರಗತಿಪರ ಮತ್ತು ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಸಚಿವರು ವಿವರಿಸಿದರು. ಐಎಫ್‌ಎಫ್‌ಐಗಾಗಿ ನಮ್ಮ ಸರ್ಕಾರದ ದೃಷ್ಟಿಕೋನವು ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ, ಬದಲಿಗೆ ಭಾರತವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಐಎಫ್‌ಎಫ್‌ಐ ಹೇಗಿರಬೇಕು ಎಂಬುದರ ಬಗ್ಗೆ ಇದೆ ಎಂದು ಅವರು ಹೇಳಿದರು.
ಭಾರತವನ್ನು ಕಂಟೆಂಟ್ ರಚನೆಯ ಶಕ್ತಿ ಕೇಂದ್ರವನ್ನಾಗಿ ಮಾಡಲು ಮತ್ತು ವಿಶ್ವದ ನಿರ್ಮಾಣ ನಂತರದ (ಪೋಸ್ಟ್-ಪ್ರೊಡಕ್ಷನ್) ಹಬ್ ಮಾಡುವ ಸರ್ಕಾರದ ದೃಢವಾದ ಬದ್ಧತೆಯನ್ನು ಸಚಿವರು ವ್ಯಕ್ತಪಡಿಸಿದರು. “ನಾವು ವಿಶೇಷವಾಗಿ ಪ್ರಾದೇಶಿಕ ಉತ್ಸವಗಳನ್ನು ಹೆಚ್ಚಿಸುವ ಮೂಲಕ ಭಾರತವನ್ನು ಕಂಟೆಂಟ್ ರಚನೆಯ ಶಕ್ತಿ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ನಮ್ಮ ನುರಿತ ಯುವಕರಲ್ಲಿರುವ ಅಗಾಧವಾದ ತಾಂತ್ರಿಕ ಪ್ರತಿಭೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತವನ್ನು ವಿಶ್ವದ ಪೋಸ್ಟ್ ಪ್ರೊಡಕ್ಷನ್ ಕೇಂದ್ರವನ್ನಾಗಿ ಮಾಡುವ ನಮ್ಮ ಪ್ರಯತ್ನಗಳಲ್ಲಿ ನಾವು ದೃಢವಾಗಿದ್ದೇವೆ. ಭಾರತವನ್ನು ವಿಶ್ವ ಸಿನಿಮಾದ ಕೇಂದ್ರವಾಗಿಸುವ ಚಲನಚಿತ್ರಗಳು ಮತ್ತು ಉತ್ಸವಗಳ ತಾಣವಾಗಿಸುವ ಮತ್ತು ಚಲನಚಿತ್ರ ತಯಾರಕರು ಮತ್ತು ಪ್ರೇಮಿಗಳಿಗೆ ಹೆಚ್ಚು ಮೆಚ್ಚಿನ ಸ್ಥಳವಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಸಚಿವರು ಹೇಳಿದರು.
"ಇಂದು, ಜಗತ್ತು ಭಾರತದ ಕಥೆಯನ್ನು ಕೇಳಲು ಬಯಸುತ್ತದೆ"
ಉದಯಿಸುತ್ತಿರುವ, ಶಕ್ತಿಯುತ ಮತ್ತು ರೋಮಾಂಚಕ ಶತಕೋಟಿ ಜನರ ಕಥೆಯು ಜಗತ್ತನ್ನು ಭಾರತದ ದಾರಿಯಲ್ಲಿ ಮುನ್ನಡೆಸಲು ಸಿದ್ಧವಾಗಿದೆ. ಭಾರತವು ತನ್ನ ಕಥೆಯನ್ನು ವಿವರಿಸುವ ಮೂಲಕ ಜಗತ್ತನ್ನು ಆಕರ್ಷಿಸಬಹುದು ಎಂದು ಸಚಿವರು ಹೇಳಿದರು.
ಈ ವಲಯದ ಅಗಾಧ ಉದ್ಯೋಗ ಸಾಮರ್ಥ್ಯದ ಬಗ್ಗೆ ಸಚಿವರು ಒತ್ತಿ ಹೇಳಿದರು. "ಸಿನಿಮಾ ಮತ್ತು ಮನರಂಜನಾ ಉದ್ಯಮವು ನಾವು ಕಂಟೆಂಟ್ ಮತ್ತು ಚಲನಚಿತ್ರ ತಯಾರಿಕೆಯ ಡಿಜಿಟಲ್ ಯುಗಕ್ಕೆ ಜಿಗಿಯುತ್ತಿರುವಾಗ ದೊಡ್ಡ ಉದ್ಯೋಗಾವಕಾಶವನ್ನು ನೀಡುತ್ತದೆ, ಭವಿಷ್ಯದ ಪೀಳಿಗೆಯ ಚಲನಚಿತ್ರ ಪ್ರೇಮಿಗಳಿಗಾಗಿ ಚಲನಚಿತ್ರ ಸಂಗ್ರಹವನ್ನೂ ನಾವು ಮರೆಯಬಾರದು." ಎಂದರು.
ಚಲನಚಿತ್ರ ನಿರ್ಮಾಣದಲ್ಲಿ ಅನೇಕರು ಯುವಕರಿದ್ದಾರೆ ಎಂದು ತಿಳಿಸಿದ ಸಚಿವರು, ಯುವಕರು ತಾಜಾ ವಿಷಯಕ್ಕೆ ಶಕ್ತಿಯಾಗಿದ್ದಾರೆ ಎಂದರು. “ಮಾಧ್ಯಮ ಮತ್ತು ಮನರಂಜನಾ ವಲಯಕ್ಕೆ ಭಾರತವು ಮೂರು ವೈಶಿಷ್ಟ್ಯಗಳನ್ನು - ಹೇರಳವಾದ ಮತ್ತು ಸಮರ್ಥ ಕಾರ್ಮಿಕರು, ನಿರಂತರವಾಗಿ ಬೆಳೆಯುತ್ತಿರುವ ಬಳಕೆಯ ವೆಚ್ಚ ಮತ್ತು ವೈವಿಧ್ಯಮಯ ಸಂಸ್ಕೃತಿ ಮತ್ತು ಭಾಷಾ ಪರಂಪರೆ- ನೀಡುತ್ತದೆ. ಮೊಬೈಲ್, ಇಂಟರ್ನೆಟ್ ಮತ್ತು ಡಿಜಿಟಲೀಕರಣದ ವ್ಯಾಪಕವಾದ ಹೆಜ್ಜೆಗುರುತುಗಳಿರುವ ಇವುಗಳನ್ನು ನೀವು ಜಗತ್ತಿನಲ್ಲಿ ಬೇರೆಲ್ಲಿಯೂ ಹೊಂದಿರಲಾರಿರಿ ಎಂದು ಸಚಿವರು ಹೇಳಿದರು.
ಸಂಪರ್ಕ, ಸಂಸ್ಕೃತಿ ಮತ್ತು ವಾಣಿಜ್ಯದ ಈ ವಿಶಿಷ್ಟ ಸಂಯೋಜನೆಯೊಂದಿಗೆ, ಭಾರತವು ಸಿನಿಮಾ ಪರಿಸರ ವ್ಯವಸ್ಥೆಯ ಕೇಂದ್ರಬಿಂದುವಾಗಿರಲು ಸಿದ್ಧವಾಗಿದೆ ಎಂದು ಸಚಿವರು ಹೇಳಿದರು. "ಇಂದು ಭಾರತದ ಕಥೆಯನ್ನು ಭಾರತೀಯರು ಬರೆಯುತ್ತಿದ್ದಾರೆ ಮತ್ತು ವ್ಯಾಖ್ಯಾನಿಸುತ್ತಿದ್ದಾರೆ."ಎಂದರು.
ಚಿತ್ರಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸಹಯೋಗಿ ವೈವಿಧ್ಯತೆಯ ಸಿನಿಮೀಯ ಕೆಲಿಡೋಸ್ಕೋಪ್‌ನ ಭಾಗವಾಗುವಂತೆ ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಚಲನಚಿತ್ರ ತಯಾರಕರಿಗೆ ಆಹ್ವಾನ ನೀಡಿದರು. "ಭಾರತದ ಕಥೆಯನ್ನು ಭಾರತೀಯರು ಬರೆಯುತ್ತಾರೆ ಮತ್ತು ವ್ಯಾಖ್ಯಾನಿಸುತ್ತಾರೆ. ಎಲ್ಲಾ ಚಲನಚಿತ್ರ ನಿರ್ಮಾತೃಗಳಿಗೆ ನಮ್ಮ ಸಂದೇಶವೇನೆಂದರೆ, ಮಹತ್ವಾಕಾಂಕ್ಷೆಯ ಶತಕೋಟಿ ಜನರ ಧ್ವನಿಯಾಗಿ ಹೊಸ ದಾಪುಗಾಲು ಹಾಕಲು ಸಿದ್ಧವಾಗಿರುವ ಮುನ್ನಡೆಸಲು ಮತ್ತು ಈ ದಶಕ ಮತ್ತು ಅದರಾಚೆಗೂ ಕೇಂದ್ರಸ್ಥಾನವನ್ನು ಅಲಂಕರಿಸಲು ಸಜ್ಜಾಗಿರುವ 'ಸಹಯೋಗಿ ವೈವಿಧ್ಯತೆಯ' ಭಾರತದ 'ಸಿನಿಮ್ಯಾಟಿಕ್ ಕೆಲಿಡೋಸ್ಕೋಪ್'ನ ಭಾಗವಾಗಿ” ಎಂದು ಹೇಳಿದರು.
ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದ ಹಾಲಿವುಡ್ ಚಲನಚಿತ್ರ ತಯಾರಕ ಮಾರ್ಟಿನ್ ಸ್ಕೋರ್ಸೆಸೆ ಮತ್ತು ಹಂಗೇರಿಯ ಚಲನಚಿತ್ರ ನಿರ್ಮಾತೃ ಇಸ್ಟೆವಾನ್ ಸ್ಜಾಬೋ ಅವರನ್ನು ಸಚಿವರು ಅಭಿನಂದಿಸಿದರು.
ಶ್ರೀ ಠಾಕೂರ್ ಅವರು ಅವರು 2021 ರ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು "ಡ್ರೀಮ್ ಗರ್ಲ್" ಹೇಮಾ ಮಾಲಿನಿ ಅವರಿಗೆ ಪ್ರದಾನ ಮಾಡಿ ಅವರನ್ನು ಶ್ಲಾಘಿಸಿದರು. ಗೀತರಚನೆಕಾರ ಮತ್ತು ಸಿ ಬಿ ಎಫ್ ಸಿ ಅಧ್ಯಕ್ಷ ಪ್ರಸೂನ್ ಜೋಶಿಯವರಿಗೂ ಸಹ 2021 ರ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿದ ಸಚಿವರು ಅವರ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ. ಎಲ್ ಮುರುಗನ್ ಮಾತನಾಡಿ, ಐಎಫ್‌ಎಫ್‌ಐ ವಿಶ್ವ ಸಿನಿಮಾದ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ನೀತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ನಮ್ಮ ನಟರು ಪೌರಾಣಿಕ ನಾಯಕರು ಮತ್ತು ಉತ್ತಮ ಘಟನೆಗಳನ್ನು ಜೀವಂತಗೊಳಿಸಿದ್ದಾರೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕ್ರಿಯಾಶೀಲ ನಾಯಕತ್ವದಲ್ಲಿ ಭಾರತವು ಚಲನಚಿತ್ರ ನಿರ್ಮಾಣಕ್ಕೆ ಆಕರ್ಷಕ ತಾಣವಾಗುವ ಗುರಿ ಹೊಂದಿದೆ. ನಾವು ಚಲನಚಿತ್ರ ತಯಾರಕರಿಗೆ ಅನುಕೂಲವಾಗುವಂತೆ ಸಂಪರ್ಕದ ಏಕೈಕ ಬಿಂದುವಾಗಿ ಚಲನಚಿತ್ರ ಫೆಸಿಲಿಟೇಶನ್ ಕಚೇರಿಯನ್ನು ತೆರೆದಿದ್ದೇವೆ ಎಂದು ಸಚಿವರು ಹೇಳಿದರು.
52 ನೇ ಐಎಫ್‌ಎಫ್‌ಐಗೆ ಪ್ರತಿನಿಧಿಗಳು ಮತ್ತು ಅತಿಥಿಗಳನ್ನು ಸ್ವಾಗತಿಸಿದ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಅವರು, ಮಾಜಿ ಕೇಂದ್ರ ರಕ್ಷಣಾ ಸಚಿವ ಡಾ. ಮನೋಹರ್ ಪರಿಕ್ಕರ್ ಅವರನ್ನು ನೆನಪಿಸಿಕೊಂಡರು, ಅವರು ಗೋವಾದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಗೋವಾದಲ್ಲಿ ಐಎಫ್‌ಎಫ್‌ಐ ಅನ್ನು ಆಯೋಜಿಸಿದ್ದರು, ಅದರ ನಂತರ ಕಳೆದ 17 ವರ್ಷಗಳಿಂದ ಬೀಚ್ ಸಿಟಿಯಲ್ಲಿ ಐಎಫ್‌ಎಫ್‌ಐ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಪ್ರವಾಸೋದ್ಯಮ ರಾಜ್ಯವಾದ ಗೋವಾದಲ್ಲಿ ಚಲನಚಿತ್ರ ಚಿತ್ರೀಕರಣವನ್ನು ಉತ್ತೇಜಿಸಲು, ನಾವು ರಾಜ್ಯದಲ್ಲಿ ಏಕಗವಾಕ್ಷಿ ಅನುಮತಿ ನೀಡುತ್ತಿದ್ದೇವೆ ಎಂದರು. ದೇಶವು ನೂರಾರು ಕೋಟಿ ಜನರಿಗೆ ತ್ವರಿತ ಗತಿಯಲ್ಲಿ ಲಸಿಕೆ ಹಾಕುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಪ್ರಧಾನಿಯವರನ್ನು ಮುಖ್ಯಮಂತ್ರಿ ಅಭಿನಂದಿಸಿದರು. ಆತ್ಮ ನಿರ್ಭರ ಭಾರತ ಗುರಿಗೆ ಅನುಗುಣವಾಗಿ ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಚಲನಚಿತ್ರ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಗೋವಾ ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮಾತನಾಡಿ, ಐಎಫ್‌ಎಫ್‌ಐ 50 ವರ್ಷಗಳ ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇಶದ ಅತಿದೊಡ್ಡ ಮತ್ತು ಅತ್ಯುತ್ತಮ ಚಲನಚಿತ್ರೋತ್ಸವವಾಗಿದೆ. ಒಂಬತ್ತು ದಿನಗಳ ಐಎಫ್‌ಎಫ್‌ಐ ಉತ್ಸವವು ಒಂದೇ ಸ್ಥಳದಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತದ ಉತ್ತಮ ಚಲನಚಿತ್ರಗಳ ಆಚರಣೆಯಾಗಿದೆ ಎಂದರು.
ಕೋವಿಡ್-19 ಸವಾಲಿನ ಹೊರತಾಗಿಯೂ ಉತ್ಸವವು ದೊಡ್ಡದಾಗಿದೆ ಎಂದು ಕಾರ್ಯದರ್ಶಿ ವಿವರಿಸಿದರು. “ನಾವು ಹೈಬ್ರಿಡ್ ಮೋಡ್‌ನಲ್ಲಿ ಆಚರಿಸುತ್ತಿದ್ದರೂ, ಚಲನಚಿತ್ರೋತ್ಸವವು ಇತರ ಉತ್ಸವಗಳಿಗಿಂತ ದೊಡ್ಡದಾಗಿದೆ. ಕಳೆದ ವರ್ಷ ಭಾಗವಹಿಸಿದ 69 ದೇಶಗಳಿಗೆ ಹೋಲಿಸಿದರೆ, ಈ ಬಾರಿ ಕೋವಿಡ್ ಹೊರತಾಗಿಯೂ ನಾವು 96 ದೇಶಗಳಿಂದ 624 ಪ್ರವೇಶಗಳನ್ನು ಸ್ವೀಕರಿಸಿದ್ದೇವೆ. ಭಾರತೀಯ ಪನೋರಮಾ ವಿಭಾಗದಲ್ಲಿ ಭಾರತದ 18 ವಿವಿಧ ಭಾಷೆಗಳ 44 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ, ಇದರಲ್ಲಿ ಡಿಮಾಸಾ ಭಾಷೆಯ ಚಲನಚಿತ್ರವೂ ಸೇರಿದೆ, ಈ ಭಾಷೆಯು ಸಂವಿಧಾನದ 8 ನೇ ಶೆಡ್ಯೂಲ್‌ನಲ್ಲಿಯೂ ಇಲ್ಲ. 12 ವಿಶ್ವ ಪ್ರೀಮಿಯರ್‌ಗಳು, 7 ಅಂತರರಾಷ್ಟ್ರೀಯ ಪ್ರೀಮಿಯರ್‌ಗಳು ಮತ್ತು 64 ರಾಷ್ಟ್ರೀಯ ಪ್ರೀಮಿಯರ್‌ಗಳು ಇವೆ, ಇದು ಐಎಫ್ಎಫ್ಐ ಮೇಲಿನ ಪ್ರೀತಿಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವುದನ್ನು ತೋರಿಸುತ್ತದೆ. ಈ ಕೋವಿಡ್ ಸಮಯದಲ್ಲಿ ನಾವು ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ ಎಂದರು.
ಬ್ರಿಕ್ಸ್ ರಾಷ್ಟ್ರಗಳ ಸಿನಿಮೀಯ ರತ್ನಗಳು ಬ್ರಿಕ್ಸ್ ಚಲನಚಿತ್ರೋತ್ಸವ ಮತ್ತು ಫೋಕಸ್ ಕಂಟ್ರಿ ವಿಭಾಗಗಳೆರಡರಲ್ಲೂ ಪ್ರದರ್ಶನ
ಐಎಫ್‌ಎಫ್‌ಐ 52ರ ಹಲವು ಪ್ರಥಮಗಳ ಕುರಿತು ಮಾತನಾಡಿದ ಕಾರ್ಯದರ್ಶಿಯವರು, ಮೊದಲ ಬಾರಿಗೆ ಐದು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಭಾರತದ ಚಲನಚಿತ್ರಗಳನ್ನು ಐಎಫ್‌ಎಫ್‌ಐ ಜೊತೆಗೆ ಬ್ರಿಕ್ಸ್ ಚಲನಚಿತ್ರೋತ್ಸವದ ಮೂಲಕ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು. ಎಲ್ಲಾ ಐದು ಬ್ರಿಕ್ಸ್ ದೇಶಗಳು ಐಎಫ್‌ಎಫ್‌ಐ 52 ರಲ್ಲಿ ಫೋಕಸ್ ಕಂಟ್ರಿಗಳಾಗಿವೆ. ಇದು ಚಲನಚಿತ್ರ ಪ್ರೇಮಿಗಳು ಎಲ್ಲಾ ಐದು ದೇಶಗಳ ಸಿನಿಮೀಯ ಶ್ರೇಷ್ಠತೆ ಮತ್ತು ಕೊಡುಗೆಗಳಿಂದ ಪ್ರೇರಿತರಾಗಲು ಅನುವು ಮಾಡಿಕೊಡುತ್ತದೆ ಎಂದರು.
ಐಎಫ್‌ಎಫ್‌ಐ ಇತಿಹಾಸದಲ್ಲಿ ಮೊದಲ ಬಾರಿಗೆ, ನೆಟ್ ಫ್ಲಿಕ್ಸ್, ಅಮೆಜಾನ್, ಸೋನಿ ಮತ್ತಿತರ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳು, ವಿಶೇಷ ಮಾಸ್ಟರ್ ತರಗತಿಗಳು, ಕಂಟೆಂಟ್ ಬಿಡುಗಡೆಗಳು ಮತ್ತು ಪೂರ್ವವೀಕ್ಷಣೆಗಳು, ಕ್ಯುರೇಟೆಡ್ ಚಲನಚಿತ್ರ ಪ್ಯಾಕೇಜ್ ಪ್ರದರ್ಶನಗಳ ಮೂಲಕ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ ಎಂದು ಕಾರ್ಯದರ್ಶಿ ತಿಳಿಸಿದರು. ಒಟಿಟಿ ಪ್ಲಾಟ್‌ಫಾರ್ಮ್‌ಗಳ ಭಾಗವಹಿಸುವಿಕೆಯು ಭವಿಷ್ಯದಲ್ಲಿ ನಿಯಮಿತ ವೈಶಿಷ್ಟ್ಯವಾಗಿರುತ್ತದೆ ಎಂದು ಅವರು ಹೇಳಿದರು.
ಆರು ತಿಂಗಳ ಅವಧಿಯಲ್ಲಿ 1.16 ಶತಕೋಟಿ ಕೋವಿಡ್-19 ಲಸಿಕೆ ಡೋಸ್‌ಗಳನ್ನು ನೀಡುವ ಅದ್ಭುತ ಸಾಧನೆಯನ್ನು ರಾಷ್ಟ್ರವು ಸಾಧಿಸಲು ಸಾಧ್ಯವಾಗಿರುವುದರಿಂದ ಚಲನಚಿತ್ರ ಪ್ರೇಮಿಗಳು ಉದ್ಘಾಟನಾ ಸಮಾರಂಭದಲ್ಲಿ ಒಟ್ಟಾಗಿ ಸೇರಲು ಸಾಧ್ಯವಾಯಿತು ಎಂದು ಕಾರ್ಯದರ್ಶಿ ತಿಳಿಸಿದರು.
***
(Release ID: 1773605)
Visitor Counter : 216