ಪ್ರಧಾನ ಮಂತ್ರಿಯವರ ಕಛೇರಿ
ನವೆಂಬರ್ 20-21ರಂದು ಲಖನೌದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ʻ56ನೇ ಡಿಜಿಪಿ ಸಮಾವೇಶʼದಲ್ಲಿ ಭಾಗವಹಿಸಲಿರುವ ಪ್ರಧಾನಿ
Posted On:
18 NOV 2021 1:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 20-21ರಂದು ಲಖನೌದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ʻಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್‌ಗಳ (ಐಜಿಪಿ) 56ನೇ ಸಮಾವೇಶʼದಲ್ಲಿ ಭಾಗವಹಿಸಲಿದ್ದಾರೆ.
ಎರಡು ದಿನಗಳ ಈ ಸಮಾವೇಶವು ಹೈಬ್ರಿಡ್ ಸ್ವರೂಪದಲ್ಲಿ ನಡೆಯಲಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಲಖನೌದ ಕಾರ್ಯಕ್ರಮದ ಸ್ಥಳದಲ್ಲಿ ಭೌತಿಕವಾಗಿ ಭಾಗವಹಿಸಲಿದ್ದಾರೆ. ಉಳಿದ ಆಹ್ವಾನಿತರು ವಿವಿಧ ಸ್ಥಳಗಳಲ್ಲಿರುವ ಐಬಿ/ಎಸ್‌ಐಬಿ ಪ್ರಧಾನ ಕಚೇರಿಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಸೈಬರ್ ಅಪರಾಧ, ದತ್ತಾಂಶ ನಿರ್ವಹಣೆ, ಭಯೋತ್ಪಾದನೆ ನಿಗ್ರಹ ಸವಾಲುಗಳು, ಎಡಪಂಥೀಯ ಉಗ್ರವಾದ, ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು, ಜೈಲು ಸುಧಾರಣೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
2014ರಿಂದಲೂ ʻಡಿಜಿಪಿ ಸಮಾವೇಶʼದಲ್ಲಿ ಪ್ರಧಾನಿ ತೀವ್ರ ಆಸಕ್ತಿ ವಹಿಸಿದ್ದಾರೆ. ಸಾಂಕೇತಿಕ ಉಪಸ್ಥಿತಿಯ ಬದಲಿಗೆ ಸಮಾವೇಶದ ಎಲ್ಲಾ ಅಧಿವೇಶನಗಳಿಗೆ ಹಾಜರಾಗುವುದನ್ನು ಅವರು ಅತ್ಯಗತ್ಯ ಎಂದು ಪರಿಗಣಿಸುತ್ತಾರೆ ಹಾಗೂ ಮುಕ್ತ ಮತ್ತು ಅನೌಪಚಾರಿಕ ಚರ್ಚೆಗಳನ್ನು ಪ್ರೋತ್ಸಾಹಿಸುತ್ತಾರೆ. ಇದು ದೇಶದ ಮೇಲೆ ಪರಿಣಾಮ ಬೀರುವ ಪ್ರಮುಖ ಭದ್ರತೆ ಮತ್ತು ಆಂತರಿಕ ಭದ್ರತಾ ವಿಷಯಗಳ ಬಗ್ಗೆ ನೇರವಾಗಿ ಪ್ರಧಾನಿಗೆ ವಿವರಿಸಲು ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೊರೆಯುವ ಅವಕಾಶವೆಂದು ಪ್ರಧಾನಿ ಭಾವಿಸುತ್ತಾರೆ.
ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಸಾರವಾಗಿ, ದೆಹಲಿಯಲ್ಲಿ ರೂಢಿಗತವಾಗಿ ಆಯೋಜಿಸುತ್ತಿದ್ದ ವಾರ್ಷಿಕ ಸಮಾವೇಶಗಳನ್ನು 2014ರಿಂದ ಈಚೆಗೆ ದೆಹಲಿಯ ಹೊರಗೆ ಆಯೋಜಿಸಲಾಗುತ್ತಿದೆ. 2020ರ ಸಾಲಿನ ಸಮಾವೇಶವನ್ನು ಮಾತ್ರ ಸಾಂಕ್ರಾಮಿಕದ ಕಾರಣಗಳಿಂದಾಗಿ ವರ್ಚ್ಯುಯಲ್ ರೂಪದಲ್ಲಿ ನಡೆಸಲಾಯಿತು. 2014ರಲ್ಲಿ ಗುವಾಹಟಿಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿತ್ತು; 2015ರಲ್ಲಿ ಗುಜರಾತ್‌ನ ರಣ್ ಜಿಲ್ಲೆಯ ಧೋರ್ಡೊ; 2016ರಲ್ಲಿ ಹೈದರಾಬಾದ್ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿ; 2017ರಲ್ಲಿ ತೆಕಾನ್ಪುರದ ಬಿಎಸ್ಎಫ್ ಅಕಾಡೆಮಿ; 2018ರಲ್ಲಿ ಕೆವಾಡಿಯಾ; ಮತ್ತು 2019ರಲ್ಲಿ ಪುಣೆಯ ʻಐಐಎಸ್ಇಆರ್ʼನಲ್ಲಿ ಈ ಸಮಾವೇಶ ಆಯೋಜಿಸಲಾಗಿತ್ತು.
***
(Release ID: 1772922)
Visitor Counter : 266
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam