ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಂದ ನವೆಂಬರ್ 15ರಂದು ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂ ಉದ್ಘಾಟನೆ
ನವೆಂಬರ್ 15 ಭಗವಾನ್ ಬಿರ್ಸಾ ಮುಂಡಾ ಅವರ – ಜಂಜಾತಿಯ ಗೌರವ ದಿನವಾಗಿ ಆಚರಣೆ
ಬುಡಕಟ್ಟು ಸಂಸ್ಕೃತಿ ಮತ್ತು ಇತಿಹಾಸ ಸಂರಕ್ಷಣೆ ಮತ್ತು ಉತ್ತೇಜನದಲ್ಲಿ ಪ್ರಮುಖ ಪಾತ್ರವಹಿಸಲಿರುವ ಮ್ಯೂಸಿಯಂ
ಮ್ಯೂಸಿಯಂ ಭಗವಾನ್ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಪ್ರತಿಮೆ ಒಳಗೊಂಡಿದೆ
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗೂ ಪ್ರಾಮುಖ್ಯತೆ
Posted On:
14 NOV 2021 4:16PM by PIB Bengaluru
ಭಾರತ ಸರ್ಕಾರ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಜಂಜಾತಿಯ ಗೌರವ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದೆ. ಅದರ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ನವೆಂಬರ್ 15ರಂದು ಬೆಳಗ್ಗೆ 9.45ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿ ಅವರು, ಬಡುಕಟ್ಟು ಸಮುದಾಯಗಳ ಅಮೂಲ್ಯ ಕೊಡುಗೆಯನ್ನು, ವಿಶೇಷವಾಗಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬಲಿದಾನ ಮಾಡಿದ್ದನ್ನು ಸದಾ ಸ್ಮರಿಸುತ್ತಾರೆ. 2016ರ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಮಂತ್ರಿ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ವಹಿಸಿದ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು ಮತ್ತು ಧೀರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಮ್ಯೂಸಿಯಂ ಕಟ್ಟಡಗಳನ್ನು ಲೋಕಾರ್ಪಣೆ ಮಾಡಬೇಕು. ಇದರಿಂದ ಮುಂಬರುವ ಪೀಳಿಗೆ ಬುಡಕಟ್ಟು ಜನರು ದೇಶಕ್ಕೆ ನೀಡಿರುವ ಕೊಡುಗೆಯನ್ನು ತಿಳಿಯಲು ಸಹಕಾರಿಯಾಗಲಿದೆ ಎಂದಿದ್ದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಈವರೆಗೆ 10 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ. ಈ ಮ್ಯೂಸಿಯಂಗಳು ನಾನಾ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ಸಹಾಯಕವಾಗಲಿದೆ.
ಭಗವಾನ್ ಬಿರ್ಸಾ ಮುಂಡಾ ಅವರ ಮ್ಯೂಸಿಯಂ ಅನ್ನು ಜಾರ್ಖಂಡ್ ಸರ್ಕಾರದ ಸಹಯೋಗದಲ್ಲಿ ಭಗವಾನ್ ಬಿರ್ಸಾ ಮುಂಡಾ ಬಲಿದಾನಗೈಯ್ದ ರಾಂಚಿಯ ಹಳೆಯ ಕಾರಾಗೃಹದ ಜಾಗದಲ್ಲಿ ನಿರ್ಮಿಸಲಾಗಿದೆ. ಇದು ಬುಡಕಟ್ಟು ಸಮುದಾಯ ಮತ್ತು ರಾಷ್ಟ್ರಕ್ಕೆ ಸಲ್ಲಿಸಿದ ಬಲಿದಾನಕ್ಕೆ ಸೂಚಿಸುವ ಗೌರವವಾಗಿದೆ. ಬುಡಕಟ್ಟು ಸಂಸ್ಕೃತಿ ಮತ್ತು ಇತಿಹಾಸ, ಸಂರಕ್ಷಣೆ ಮತ್ತು ಉತ್ತೇಜನ ನಿಟ್ಟಿನಲ್ಲಿ ಈ ಮ್ಯುಸಿಯಂ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ ಇದು ನಮ್ಮ ಅರಣ್ಯಗಳನ್ನು, ಭೂಮಿ ಹಕ್ಕುಗಳನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಲು ಆದಿವಾಸಿಗಳು ಹೇಗೆ ಹೋರಾಟ ಮಾಡಿದರು ಎಂಬುದನ್ನು ಸೂಚಿಸುತ್ತದೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಶೌರ್ಯ ಮತ್ತು ಬಲಿದಾನವನ್ನು ಬಿಂಬಿಸುತ್ತದೆ.
ಭಗವಾನ್ ಬಿರ್ಸಾ ಮುಂಡಾ ಅವರೊಂದಿಗೆ ಮ್ಯೂಸಿಯಂನಲ್ಲಿ ನಾನಾ ಚಳವಳಿಗಳಲ್ಲಿ ಭಾಗಿಯಾಗಿದ್ದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಾದ ಶಾಹಿದ್ ಬುಧು ಭಗತ್, ಸಿಧು-ಕನ್ಹು, ನೀಲಂಬರ್-ಪೀತಾಂಬರ, ದಿವಾ-ಕಿಸುನ್, ತೆಲಂಗಾ ಖಾದಿಯಾ, ಗಯಾ ಮುಂಡಾ, ಜಾತ್ರಾ ಭಗತ್, ಪೊಟೊ ಹೆಚ್, ಭಾಗೀರಥ ಮಾಂಝಿ, ಗಂಗಾ ನಾರಾಯಣ ಸಿಂಗ್ ಮತ್ತಿತರರ ಕೊಡುಗೆಯನ್ನೂ ಬಿಂಬಿಸಲಾಗುತ್ತಿದೆ. ಮ್ಯೂಸಿಯಂ ಭಗವಾನ್ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಮೂರ್ತಿ ಒಳಗೊಂಡಿದೆ ಮತ್ತು ಆ ಭಾಗದ ಇತರ ಸ್ವಾತಂತ್ರ್ಯ ಹೋರಾಟಗಾರರ 9 ಅಡಿ ಎತ್ತರದ ಮೂರ್ತಿಗಳಿವೆ.
ಅದಕ್ಕೆ ಹೊಂದಿಕೊಂಡ 25 ಎಕರೆ ಪ್ರದೇಶದಲ್ಲಿ ಸ್ಮೃತಿ ಉದ್ಯಾನವನ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಸಂಗೀತ ಕಾರಂಜಿ, ಫುಡ್ ಕೋರ್ಟ್, ಮಕ್ಕಳ ಉದ್ಯಾನವನ, ಇನ್ಫಿನಿಟಿ ಪೋಲ್, ಉದ್ಯಾನವನ ಮತ್ತು ಇತರ ಮನರಂಜನಾ ಸೌಕರ್ಯಗಳಿವೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
***
(Release ID: 1771757)
Visitor Counter : 248
Read this release in:
Malayalam
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu