ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಂಧರಾಪುರ(ಪಂಢರಾಪುರ)ದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 08 NOV 2021 6:24PM by PIB Bengaluru

ರಾಮಕೃಷ್ಣ ಹರಿ!

ರಾಮಕೃಷ್ಣ ಹರಿ!

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೊಶ್ಯಾರಿ ಜೀ, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಉದ್ಧವ್ ಠಾಕ್ರೆ ಜೀ, ನನ್ನ ಸಂಪುಟ ಸಹೋದ್ಯೋಗಿ ಶ್ರೀ ನಿತಿನ್ ಗಡ್ಕರಿ ಜೀ, ನನ್ನ ಇತರೆ ಸಹೋದ್ಯೋಗಿಗಳಾದ ನಾರಾಯಣ್ ರಾಣೆ ಜೀ, ರಾವ್ ಸಾಹೇಬ್ ದಾನ್ವೆ ಜೀ, ರಾಮ್ ದಾಸ್ ಅಥಾವಳೆ ಜೀ, ಕಪಿಲ್ ಪಾಟೀಲ್ ಜೀ, ಡಾ. ಭಗವತ್ ಕಾರದ್ ಜೀ, ಡಾ. ಭಾರತಿ ಪವಾರ್ ಜೀ, ಜನರಲ್ ವಿ.ಕೆ. ಸಿಂಗ್ ಜೀ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಜೀ, ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ಮತ್ತು ನನ್ನ ಸ್ನೇಹಿತ ಶ್ರೀ ದೇವೇಂದ್ಪ ಫಡ್ನವೀಸ್ ಜೀ, ವಿಧಾನಪರಿಷತ್ ಸಭಾಪತಿ ರಾಮ್ ರಾಜೇ ನಾಯಕ್ ಜೀ, ಮಹಾರಾಷ್ಟ್ರ ಸರ್ಕಾರದ ಎಲ್ಲಾ ಗೌರವಾನ್ವಿತ ಸಚಿವರು, ಸಂಸದರು, ಶಾಸಕರು, ಎಲ್ಲಾ ಜನಪ್ರತಿನಿಧಿಗಳು, ನಮ್ಮನ್ನು ಆಶೀರ್ವದಿಸಲು ಇಲ್ಲಿರುವ ಸಾಧು ಸಂತರು ಮತ್ತು ನನ್ನ ನಂಬಿಕೆಯ ಸ್ನೇಹಿತರೇ... !

ದೇವರ ಆಶೀರ್ವಾದದಿಂದ ನಾನು ಕೇವಲ 2 ದಿನಗಳ ಹಿಂದೆಯಷ್ಟೇ ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ನವೀಕೃತ ಸಮಾಧಿಯನ್ನು ಲೋಕಾರ್ಪಣೆ ಮಾಡುವ ಸದವಕಾಶ ನನ್ನದಾಯಿತು. ನಾನಿಂದು ವಿಠ್ಠಲ ದೇವನ ಶಾಶ್ವತ ತಾಣ ಪಂಧರ್ ಪುರ(ಪಂಢರಾಪುರ)ದಲ್ಲಿ ಬಂದು ನಿಂತಿದ್ದೇನೆ. ಇದಕ್ಕಿಂತ ಇನ್ನೂ ಹೆಚ್ಚಿನ ಆನಂದಕರ ವಿಚಾರ ಬೇರೆ ಏನಿದೆ ಹೇಳಿ... ದೇವರ ಆಶೀರ್ವಾದವನ್ನು ಮನಗಾಣುವ ಸದವಕಾಶ ನನ್ನದಾಗಿದೆ. ಆದಿಶಂಕರಾಚಾರ್ಯರೇ ಹೀಗೆ ಹೇಳಿದ್ದಾರೆ....

महा-योग-पीठे,

तटे भीम-रथ्याम्,

वरम् पुण्डरी-काय,

दातुम् मुनीन्द्रैः।

समागत्य तिष्ठन्तम्,

आनन्द-कन्दं,

परब्रह्म लिंगम्,

भजे पाण्डु-रंगम्॥

ಪಂಢರಾಪುರದ ಈ ಭವ್ಯ ಭೂಮಿಯಲ್ಲಿ ಭಗವಂತ ವಿಠ್ಠಲನು ಆನಂದದ ಮೂರ್ತರೂಪನಾಗಿದ್ದಾನೆ. ಆದ್ದರಿಂದ, ಪಂಢರಾಪುರವು ಆನಂದದ ನೇರ ರೂಪವಾಗಿದೆ ಮತ್ತು ಇಂದು ಸೇವೆಯ ರೂಪವೂ ಆಗಿದೆ. ಸಂತ ಜ್ಞಾನೋಬ ಮೌಳಿ ಮತ್ತು ಸಂತ ತುಕೋಬರಾಯನ ಪಾಲ್ಖಿ ಮಾರ್ಗವನ್ನು ಉದ್ಘಾಟಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಪಾದಚಾರಿ ಯಾತ್ರಿಗಳು (ವಾರಕಾರಿಗಳು) ಹೆಚ್ಚಿನ ಸಂಚಾರ ಸೌಲಭ್ಯಗಳನ್ನು ಪಡೆಯಲಿದ್ದಾರೆ. ರಸ್ತೆಗಳು ಅಭಿವೃದ್ಧಿಯ ಹೆಬ್ಬಾಗಿಲು ಎಂಬ ಮಾತಿದೆ. ಅಂತೆಯೇ, ಪಂಢರಿಗೆ ಹೋಗುವ ಈ ರಸ್ತೆಗಳು ಭಗವತ್ ಧರ್ಮದ ಧ್ವಜವನ್ನು ಇನ್ನಷ್ಟು ಎತ್ತರಕ್ಕೆ ಹಾರಿಸುವ ಹೆದ್ದಾರಿಗಳಾಗಿವೆ. ಇವು ಪವಿತ್ರ ಮಾರ್ಗಗಳಿಗೆ ಹೆಬ್ಬಾಗಿಲು ಆಗಲಿವೆ.

ಸ್ನೇಹಿತರೇ,

ಶ್ರೀಸಂತ ಧ್ಯಾನೇಶ್ವರ ಮಹಾರಾಜ ಪಾಲ್ಖಿ ಮಾರ್ಗ ಮತ್ತು ಸಂತ ತುಕಾರಾಮ್ ಮಹಾರಾಜ ಪಾಲ್ಖಿ ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶ್ರೀಸಂತ ಧ್ಯಾನೇಶ್ವರ ಮಹಾರಾಜ ಪಾಲ್ಖಿ ಮಾರ್ಗವು 5 ಹಂತಗಳಲ್ಲಿ ನಿರ್ಮಾಣವಾಗಲಿದೆ. ಸಂತ ತುಕಾರಾಮ್ ಮಹಾರಾಜ ಪಾಲ್ಖಿ ಮಾರ್ಗವು 3 ಹಂತಗಳಲ್ಲಿ ನಿರ್ಮಾಣ ಪೂರ್ಣವಾಗಲಿದೆ. ಈ ಎಲ್ಲಾ ಹಂತಗಳ 350 ಕಿ.ಮೀ. ಉದ್ದದ ಹೆದ್ದಾರಿಗಳು 11,000 ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಲಿವೆ. ಬಹುಮುಖ್ಯ ವಿಷಯವೇನೆಂದರೆ, ಈ ಹೆದ್ದಾರಿಗಳ ಎರಡೂ ಬದಿಯಲ್ಲಿ ಪಾಲ್ಖಿ ಯಾತ್ರೆ ನಡೆಸುವ ಪಾದಚಾರಿ ಯಾತ್ರಿ(ವಾರಕಾರಿ)ಗಳಿಗಾಗಿ ವಿಶೇಷ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಅದಲ್ಲದೆ, ಪಂಢರಾಪುರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 225 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಸಹ ಉದ್ಘಾಟಿಸಲಾಗಿದೆ. ಇದಕ್ಕೆ 1,200 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸತಾರ, ಕೊಲ್ಹಾಪುರ, ಸಾಂಗ್ಲಿ, ಬಿಜಾಪುರ, ಮರಾಠವಾಡ ಪ್ರದೇಶ ಮತ್ತು ಮಹಾರಾಷ್ಟ್ರದ ಉತ್ತರ ಭಾಗದಿಂದ ಪಂಢರಾಪುರಕ್ಕೆ ಬರುವ ಭಕ್ತ ಕೋಟಿಗೆ ಈ ಹೆದ್ದಾರಿ ಸಹಾಯಕವಾಗಲಿದೆ. ವಿಠ್ಠಲನ ಅಪಾರ ಭಕ್ತರಿಗೆ ಈ ಹೆದ್ದಾರಿ ಅನುಕೂಲ ಕಲ್ಪಿಸುವ ಜತೆಗೆ, ಈ ಪ್ರದೇಶದ ಎಲ್ಲಾ ಧಾರ್ಮಿಕ ತಾಣಗಳ ಅಭಿವೃದ್ಧಿಗೂ ಮಾಧ್ಯಮವಾಗಲಿದೆ. ಈ ಹೆದ್ದಾರಿಯು ದಕ್ಷಿಣ ಭಾರತಕ್ಕೆ ಸಂಪರ್ಕ ಕಲ್ಪಿಸಲಿದೆ. ಇನ್ನುಮುಂದೆ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಸರಾಗವಾಗಿ ಬರಲು, ಹೋಗಲು ಸಾಧ್ಯವಾಗಲಿದೆ. ಈ ಭಾಗದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಈ ಪವಿತ್ರ ಯೋಜನೆಗಳನ್ನು ಕಾರ್ಯಗತಗೊಳಿಸಲು ಶ್ರಮಿಸಿದ ಪ್ರತಿಯೊಬ್ಬರನ್ನೂ ನಾನು ಅಭಿನಂದಿಸುತ್ತೇನೆ. ಇಂತಹ ಯೋಜನೆಗಳ ಯಶಸ್ಸಿನಿಂದ ನಮಗೆ ಆಧ್ಯಾತ್ಮಿಕ ಸಂತೃಪ್ತಿಯ ಜತೆಗೆ ಜೀವನ ಪ್ರಾಮುಖ್ಯವನ್ನು ನೀಡುತ್ತವೆ. ವಿಠ್ಠಲನ ಅಸಂಖ್ಯಾತ ಭಕ್ತರನ್ನು ನಾನು ಅಭಿನಂದಿಸುತ್ತೇನೆ. ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿರುವ ಈ ಭಾಗದ ಜನತೆ ಮತ್ತು ಪಾದಚಾರಿ ಯಾತ್ರಿ(ವಾರಕಾರಿ)ಗಳನ್ನು ಸಹ ಅಭಿನಂದಿಸುತ್ತೇನೆ. ವಿಠ್ಠಲ ದೇವ, ಇಲ್ಲಿರುವ ಅಪಾರ ಸಾಧು ಸಂತರ ಪಾದಕ್ಕೆ ತಲೆಬಾಗಿ ನಮಿಸುತ್ತೇನೆ.

ಸ್ನೇಹಿತರೇ,

ಈ ಹಿಂದೆ ಭಾರತದ ಮೇಲೆ ಹಲವಾರು ಬಾರಿ ದಾಳಿಗಳು ನಡೆದಿವೆ. ಈ ದೇಶ ನೂರಾರು ವರ್ಷಗಳ ಕಾಲ ಗುಲಾಮಗಿರಿಯಲ್ಲಿತ್ತು. ಪ್ರಕೃತಿ ವಿಕೋಪಗಳು, ಸವಾಲುಗಳು ಮತ್ತು ಇತರ ಕಷ್ಟಗಳು ಇದ್ದವು. ಆದರೆ, ವಿಠ್ಠಲ್ ದೇವನಲ್ಲಿ ನಾವು ಹೊಂದಿರುವ ನಂಬಿಕೆಯು ನಿರಂತರವಾಗಿ ಉಳಿದುಕೊಂಡುಬಂದಿದೆ. ಇಂದಿಗೂ, ಈ ಯಾತ್ರೆಯನ್ನು ವಿಶ್ವದ ಅತ್ಯಂತ ಪುರಾತನ ಮತ್ತು ಅತಿದೊಡ್ಡ ಜನಾಂದೋಲನವಾಗಿ  ನೋಡಲಾಗುತ್ತದೆ. 'ಆಷಾಢ ಏಕಾದಶಿ'ಯಂದು ಪಂಢರಾಪುರ ಯಾತ್ರೆಯ ವಿಹಂಗಮ ನೋಟವನ್ನು ಯಾರು ಮರೆಯಲು ಸಾಧ್ಯ. ನೂರಾರು ಮತ್ತು ಸಾವಿರಾರು ಭಕ್ತರು ಅದರ ಕಡೆಗೆ ಆಕರ್ಷಿತರಾಗುತ್ತಾರೆ.  'ರಾಮಕೃಷ್ಣ ಹರಿ', 'ಪುಂಡಲೀಕ ವರದೇ ಹರಿ ವಿಠ್ಠಲ' ಮತ್ತು 'ಜ್ಞಾನಬಾ ತುಕಾರಾಂ' ಎಂಬ ಕೀರ್ತನೆಗಳು ಎಲ್ಲೆಡೆ ಮೊಳಗುತ್ತಿರುತ್ತದೆ. ಸಂಪೂರ್ಣ 21 ದಿನಗಳವರೆಗೆ ಅನನ್ಯವಾದ ಶಿಸ್ತು ಮತ್ತು ಅಸಾಧಾರಣ ಸಂಯಮ ಗೋಚರಿಸುತ್ತದೆ. ವಿವಿಧ ಪಾಲ್ಖಿ ಮಾರ್ಗಗಳಲ್ಲಿ ಹಲವಾರು ಯಾತ್ರೆಗಳನ್ನು ಕೈಗೊಳ್ಳಬಹುದು. ಆದರೆ ತಲುಪುವ ತಾಣ ಒಂದೇ ಆಗಿದೆ. ಇದು ಭಾರತದ ಬೋಧನೆಯ ಸಂಕೇತವಾಗಿದೆ, ಅದು ನಮ್ಮ ನಂಬಿಕೆಯನ್ನು ಬಂಧಿಸುವುದಿಲ್ಲ, ಆದರೆ ಮುಕ್ತಗೊಳಿಸುತ್ತದೆ. ವಿಭಿನ್ನ ಮಾರ್ಗಗಳು, ವಿಧಾನಗಳು ಮತ್ತು ಆಲೋಚನೆಗಳು ಇರಬಹುದು. ಆದರೆ ನಮ್ಮ ಗುರಿ ಒಂದೇ ಆಗಿರುತ್ತದೆ. ಕೊನೆಯಲ್ಲಿ ಎಲ್ಲಾ ಪಂಗಡಗಳು 'ಭಾಗವತ ಪಂಥ'ವೇ ಆಗಿವೆ. ಆದ್ದರಿಂದ, ನಮ್ಮ ಧರ್ಮಗ್ರಂಥಗಳು ಅದನ್ನು ಬಹಳ ವಿಶ್ವಾಸದಿಂದ ಹೇಳುತ್ತವೆ - एकम् सत् विप्राः बहुधा वदन्ति (There is one truth with endless manifestations)

ಸ್ನೇಹಿತರೇ,

ಸಂತ ತುಕಾರಾಮ್ ಮಹಾರಾಜರು ನಮಗೆ ಮಂತ್ರವನ್ನು ನೀಡಿ ಹೋಗಿದ್ದಾರೆ. ಅದು ಏನು ಹೇಳುತ್ತದೆ ಅಂದರೆ:

विष्णूमय जग वैष्णवांचा धर्म, भेदाभेद भ्रम अमंगळ अइका जी तुम्ही भक्त भागवत, कराल तें हित सत्य करा। कोणा ही जिवाचा न घडो मत्सर, वर्म सर्वेश्वर पूजनाचे॥

ಅಂದರೆ ವಿಶ್ವದಲ್ಲಿರುವ ಪ್ರತಿಯೊಂದು ಸಹ ವಿಷ್ಣುವಿಗೆ ಸೇರಿದೆ. ಆದ್ದರಿಂದ ಜೀವಿಗಳ ನಡುವೆ ತಾರತಮ್ಯ ಮಾಡುವುದು ಅಶುಭ. ದ್ವೇಷ ಮತ್ತು ಅಸೂಯೆ ಇರಬಾರದು; ನಾವು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಇದೇ ನಿಜವಾದ ಧರ್ಮ. ಆದ್ದರಿಂದಲೇ ದಿಂಡಿಯಲ್ಲಿ ಜಾತಿ, ಭೇದ ಭಾವವಿಲ್ಲ. ಪ್ರತಿಯೊಬ್ಬ ವಾರಕರಿಯೂ ಸಮಾನ. ಪ್ರತಿಯೊಬ್ಬ ವಾರಕರಿಯು ಪರಸ್ಪರರ 'ಗುರುಭಾವು' ಮತ್ತು 'ಗುರು ಬಹಿನ್'. ಎಲ್ಲರೂ ಒಂದೇ ವಿಠ್ಠಲನ ಮಕ್ಕಳು, ಆದ್ದರಿಂದ ಪ್ರತಿಯೊಬ್ಬರಿಗೂ ಒಂದೊಂದು ‘ಗೋತ್ರ’ ಇರುತ್ತದೆ. ಅದೇ ‘ವಿಠ್ಠಲ ಗೋತ್ರ’. ವಿಠ್ಠಲ ದೇವನ ದರ್ಬಾರು ಎಲ್ಲರಿಗೂ ಸದಾ ತೆರೆದಿರುತ್ತದೆ. ನಾನು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಬಗ್ಗೆ ಮಾತನಾಡುವಾಗ, ಅದೇ ಭಾವನೆ ಇದರ ಹಿಂದೆ ಇದೆ. ಈ ಚೈತನ್ಯವು ದೇಶದ ಅಭಿವೃದ್ಧಿಗೆ ನಮ್ಮನ್ನು ಪ್ರೇರೇಪಿಸುತ್ತದೆ, ಎಲ್ಲರನ್ನೂ ಕರೆದುಕೊಂಡು ಹೋಗುತ್ತದೆ. ಎಲ್ಲರ ಅಭಿವೃದ್ಧಿಗೆ ನಮ್ಮನ್ನು ಪ್ರೇರೇಪಿಸುತ್ತದೆ.

ಸ್ನೇಹಿತರೇ,

ಪಂಢರಾಪುರದ ಸೆಳೆತ, ಅನುಭವ ಮತ್ತು ಅಭಿವ್ಯಕ್ತಿ ಎಲ್ಲವೂ ಅಲೌಕಿಕ. आपण म्हणतो ना! माझे माहेर पंढरी, आहे भिवरेच्या तीरी. ನಿಜವಾಗಿ ಹೇಳಬೇಕೆಂದರೆ, ಪಂಢರಾಪುರ ತವರು ಮನೆ ಇದ್ದಂತೆ. ಆದರೆ ನನಗೆ ಪಂಢರಾಪುರದೊಂದಿಗೆ ಇನ್ನೂ 2 ವಿಶೇಷ ಸಂಬಂಧಗಳಿವೆ. ಇದನ್ನು ನಾನು ಸಾಧು ಸಂತರ ಮುಂದೆ ಹೇಳಲು ಬಯಸುತ್ತೇನೆ. ನನ್ನ ಮೊದಲ ಸಂಬಂಧ ಗುಜರಾತಿನ  ದ್ವಾರಕಾದೊಂದಿಗೆ ಇದೆ. ಭಗವಾನ್ ದ್ವಾರಕಾಧೀಶ ವಿಠ್ಠಲನ ರೂಪದಲ್ಲಿ ಇಲ್ಲಿ ನೆಲೆಸಿದ್ದಾನೆ. ಮತ್ತು ನನ್ನ ಎರಡನೇ ಸಂಬಂಧ ಕಾಶಿಯೊಂದಿಗೆ. ನಾನು ಕಾಶಿಯಿಂದ ಬಂದವನು. ಈ ಪಂಢರಾಪುರ ನಮ್ಮ 'ದಕ್ಷಿಣ ಕಾಶಿ'. ಆದ್ದರಿಂದ ನಾನು ಪಂಢರಾಪುರಕ್ಕೆ ಸಲ್ಲಿಸುವ ಸೇವೆಯು ಶ್ರೀ ನಾರಾಯಣ ಹರಿಗೆ ಸಲ್ಲಿಸುತ್ತಿರುವ ಸೇವೆಯಾಗಿದೆ. ಭಕ್ತರಿಗಾಗಿ ಇಂದಿಗೂ ಭಗವಂತ ನೆಲೆಸಿರುವ ನಾಡು ಈ ಪವಿತ್ರ ಭೂಮಿಯಾಗಿದೆ. ಸಂತ ನಾಮದೇವ್ ಜೀ ಮಹಾರಾಜರು ಜಗತ್ತು ಸೃಷ್ಟಿಯಾಗುವ ಮುನ್ನವೇ ಪಂಢರಾಪುರವಿತ್ತು ಎಂದು ಹೇಳಿದ್ದಾರೆ. ಪಂಢರಾಪುರವು ನಮ್ಮ ಮನಸ್ಸಿನಲ್ಲಿ ಭೌತಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ನೆಲೆಸಿದೆ. ಸಂತ ಜ್ಞಾನೇಶ್ವರ, ಸಂತ ನಾಮದೇವ್, ಸಂತ ತುಕಾರಾಂ, ಸಂತ ಏಕನಾಥರಂತಹ ಹಲವಾರು ಸಂತರನ್ನು ಯುಗ ಯುಗಾಂತರಗಳಿಂದ ಸಂತರನ್ನಾಗಿಸಿರುವ ಪುಣ್ಯಭೂಮಿ ಇದಾಗಿದೆ. ಈ ಭೂಮಿ ಭಾರತಕ್ಕೆ ಹೊಸ ಶಕ್ತಿಯನ್ನು ನೀಡಿತು, ಭಾರತವನ್ನು ಪುನರುಜ್ಜೀವಗೊಳಿಸಿತು. ಭಾರತದ ವಿಶೇಷತೆ ಎಂದರೆ ಕಾಲಕಾಲಕ್ಕೆ ವಿವಿಧ ಪ್ರದೇಶಗಳಲ್ಲಿ ಇಂತಹ ಮಹಾನ್ ವ್ಯಕ್ತಿಗಳು, ಸಾಧು ಸಂತರು, ಪುಣ್ಯ ಪುರುಷರು ಮೈದಳೆದು ದೇಶಕ್ಕೆ ಸ್ಪಷ್ಟ ದಿಕ್ಕು ತೋರಿದ್ದಾರೆ. ದಕ್ಷಿಣದಲ್ಲಿ ಮಧ್ವಾಚಾರ್ಯರು, ನಿಂಬಾರ್ಕಾಚಾರ್ಯರು, ವಲ್ಲಭಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಪಶ್ಚಿಮದಲ್ಲಿ ನರಸಿ ಮೆಹ್ತಾ, ಮೀರಾಬಾಯಿ, ಧೀರೋ ಭಗತ್, ಭೋಜ ಭಗತ್, ಪ್ರೀತಮ್ ಜನಿಸಿದರು. ಉತ್ತರದಲ್ಲಿ ರಮಾನಂದ, ಕಬೀರದಾಸ್, ಗೋಸ್ವಾಮಿ ತುಳಸಿದಾಸ್, ಸೂರದಾಸ್, ಗುರುನಾನಕ್ ದೇವ್, ಸಂತ ರಾಯ್ ದಾಸ್ ಜನ್ಮ ತಳೆದರು. ಪೂರ್ವದಲ್ಲಿ, ಚೈತನ್ಯ ಮಹಾಪ್ರಭು ಮತ್ತು ಶಂಕರ್ ದೇವ್ ಅವರಂತಹ ಸಾಧು ಸಂತರ ಚಿಂತನೆಗಳು ದೇಶದ ವಿವಿಧ ಸ್ಥಳಗಳಲ್ಲಿ ಮತ್ತು ವಿಭಿನ್ನ ಯುಗಗಳಲ್ಲಿ ಶ್ರೀಮಂತಗೊಳಿಸಿದವು. ಇವರೆಲ್ಲರೂ ಭಾರತೀಯ ಜನಮಾನಸದಲ್ಲಿ ಹೊಸ ಪ್ರಜ್ಞೆ ಉಸಿರಾಡುವಂತೆ ಮಾಡಿದರು. ಭಾರತೀಯರಲ್ಲಿ ಭಕ್ತಿಯ ಶಕ್ತಿಯನ್ನು ಅರಿತುಕೊಳ್ಳುವಂತೆ ಮಾಡಿದರು. ಅದೇ ರೀತಿ, ಮಥುರೆಯ ಕೃಷ್ಣ ಗುಜರಾತಿನಲ್ಲಿ ದ್ವಾರಿಕಾಧೀಶನಾಗುತ್ತಾನೆ, ಉಡುಪಿಯಲ್ಲಿ ಬಾಲಕೃಷ್ಣ ಪಂಢರಾಪುರಕ್ಕೆ ಬಂದಾಗ ವಿಠ್ಠಲನಾಗುವುದನ್ನೂ ನೋಡುತ್ತೇವೆ. ಅದೇ ಭಗವಂತ ವಿಠ್ಠಲನು ಕನಕದಾಸರು ಮತ್ತು ಪುರಂದರದಾಸರಂತಹ ಸಂತ ಕವಿಗಳ ಮೂಲಕ ದಕ್ಷಿಣ ಭಾರತದಲ್ಲಿ ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದುತ್ತಾನೆ. ಅವನೇ ಲೀಲಾಶುಕ್ ಪದ್ಯಗಳಲ್ಲಿ ಕೇರಳದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ನಮ್ಮನ್ನು ಬಂಧಿಸುವ ಭಕ್ತಿಯ ಶಕ್ತಿಯಾಗಿದೆ. ಇದು 'ಏಕ್ ಭಾರತ್, ಶ್ರೇಷ್ಠ ಭಾರತ' (ಒಂದು ಭಾರತ, ಸರ್ವೋಚ್ಚ ಭಾರತ)ದ ಉದಾತ್ತ ತತ್ವವಾಗಿದೆ.

ಸ್ನೇಹಿತರೇ,

ವಾರಕರಿ ಚಳವಳಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅದು ನಮ್ಮ ಸಹೋದರಿಯರು. ದೇಶದ ಮಾತೃಶಕ್ತಿ, ದೇಶದ ಸ್ತ್ರೀ ಶಕ್ತಿ, ಪುರುಷರೊಂದಿಗೆ ಹೆಜ್ಜೆ ಹೆಜ್ಜೆಗೂ ‘ವಾರಿ’ಯಲ್ಲಿ ನಡೆಯುವುದು! ಪಂಢರಿಯ ‘ವಾರಿ’ ಅವಕಾಶಗಳ ಸಮಾನತೆಯನ್ನು ಸಂಕೇತಿಸುತ್ತದೆ. ವಾರಕರಿ ಚಳವಳಿಯ ಧ್ಯೇಯವಾಕ್ಯ 'भेदाभेद अमंगळ'  (ತಾರತಮ್ಯ ಎಂಬುದು ದುಷ್ಟಶಕ್ತಿ)! ಎಂಬುದಾಗಿದೆ.

ಇದು ಸಾಮಾಜಿಕ ಸಾಮರಸ್ಯದ ಘೋಷಣೆಯಾಗಿದೆ, ಲಿಂಗ ಸಮಾನತೆಯೂ ಈ ಸಾಮರಸ್ಯದಲ್ಲಿ ಅಂತರ್ಗತವಾಗಿದೆ. ಅನೇಕ ವಾರಕರಿಗಳು, ಮಹಿಳೆಯರು ಮತ್ತು ಪುರುಷರು ಒಬ್ಬರನ್ನೊಬ್ಬರು 'ಮೌಲಿ' ಎಂದು ಕರೆಯುತ್ತಾರೆ. ಭಗವಾನ್ ವಿಠ್ಠಲ ಮತ್ತು ಸಂತ ಜ್ಞಾನೇಶ್ವರರ ರೂಪವನ್ನು ಪರಸ್ಪರ ನೋಡುತ್ತಾರೆ. ‘ಮೌಳಿ’ ಎಂದರೆ ತಾಯಿ ಎಂದು ನಿಮಗೂ ಗೊತ್ತು. ಅಂದರೆ ಇದು ಮಾತೃಶಕ್ತಿಯ ಹೆಮ್ಮೆಯೂ ಹೌದು.

ಸ್ನೇಹಿತರೇ,

ಮಹಾತ್ಮ ಫುಲೆ ಮತ್ತು ವೀರ್ ಸಾವರ್ಕರ್ ಅವರಂತಹ ಮಹನೀಯರು ಮಹಾರಾಷ್ಟ್ರದಲ್ಲಿ ನೆಡಸಿದ ಹೋರಾಟ ಪ್ರಯತ್ನಗಳಲ್ಲಿ ಯಶಸ್ಸಿನ ಉತ್ತುಂಗವನ್ನು ತಲುಪಿದ್ದರೆ, ಅದಕ್ಕೆ ಅಡಿಪಾಯ ಹಾಕಿದ ವಾರಕರಿ ಚಳವಳಿಯ ಕೊಡುಗೆಯೇ ಪ್ರಮುಖ ಕಾರಣ. ವಾರಕರಿ ಚಳವಳಿಯಲ್ಲಿ ಯಾರು ಇರಲಿಲ್ಲ ಹೇಳಿ?  ಸಂತ ಸಾವ್ತಾ ಮಹಾರಾಜ್, ಸಂತ ಚೋಖಾ, ಸಂತ ನಾಮದೇವ್ ಮಹಾರಾಜ್, ಸಂತ ಗೋರೋಬಾ, ಸೇನ್ ಜೀ ಮಹಾರಾಜ್, ಸಂತ ನರಹರಿ ಮಹಾರಾಜ್, ಸಂತ ಕನ್ಹೋಪಾತ್ರ ಸೇರಿದಂತೆ ಸಮಾಜದ ಪ್ರತಿಯೊಂದು ಸಮುದಾಯವೂ ವಾರಕರಿ ಚಳವಳಿಯ ಭಾಗವಾಗಿತ್ತು.

ಸ್ನೇಹಿತರೇ,

ಪಂಢರಪುರವು ಮಾನವತೆಗೆ ಭಕ್ತಿ ಮತ್ತು ದೇಶಭಕ್ತಿಯ ಮಾರ್ಗವನ್ನು ತೋರಿಸಿದೆ, ಜತೆಗೆ ಭಕ್ತಿಯ ಶಕ್ತಿಯೊಂದಿಗೆ ಮಾನವೀಯತೆಯನ್ನು ಪರಿಚಯಿಸಿದೆ. ಜನರು ಹೆಚ್ಚಾಗಿ ದೇವರಿಗೆ ಏನನ್ನೂ ಕೇಳಲು ಇಲ್ಲಿಗೆ ಬರುವುದಿಲ್ಲ. ಭಗವಾನ್ ವಿಠ್ಠಲನ ದರ್ಶನವು ಅವರ ನಿಸ್ವಾರ್ಥ ಭಕ್ತಿ ಮತ್ತು ಜೀವನದ ಗುರಿಯಾಗಿದೆ. ಭಕ್ತಾದಿಗಳ ಅಣತಿಯಂತೆ, ಇಲ್ಲಿ ಭಗವಂತನೇ ತನ್ನ ಸೊಂಟದ ಮೇಲೆ ಕೈಹೊತ್ತು ನಿಂತಿದ್ದಾನೆ. ಭಕ್ತ ಪುಂಡಲೀಕನು ತನ್ನ ತಂದೆ ತಾಯಿಯಲ್ಲಿ ದೇವರನ್ನು ಕಂಡಿದ್ದ. ಅದನ್ನು 'ನರರ ಸೇವೆಯೇ ನಾರಾಯಣ ಸೇವೆ' ಎಂದು ಪರಿಗಣಿಸಿದ್ದ. ಇಂದಿಗೂ ಅದೇ ಆದರ್ಶವನ್ನು ನಮ್ಮ ಸಮಾಜವು ಸೇವಾ-ದಿಂಡಿಗಳ ಮೂಲಕ ಜೀವಿಗಳ ಸೇವೆಯನ್ನು ಸಾಧನವೆಂದು ಪರಿಗಣಿಸಿ ಅನುಸರಿಸುತ್ತಿದೆ. ಪ್ರತಿಯೊಬ್ಬ ವಾರಕರಿಯು ಯಾವ ಮನೋಭಾವದಿಂದ ಭಕ್ತಿಯನ್ನು ಮಾಡುತ್ತಾನೋ ಅದೇ ಮನೋಭಾವದಿಂದ ನಿಸ್ವಾರ್ಥ ಸೇವೆಯನ್ನು ಸಹ ಮಾಡುತ್ತಾನೆ. ‘ಅಮೃತ ಕಲಶ ದಾನ-ಅನ್ನದಾನ’ದೊಂದಿಗೆ ಬಡವರ ಸೇವೆ ಮಾಡುವ ಯೋಜನೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಿಮ್ಮ ಸೇವೆ ಸಮಾಜವನ್ನು ಸಶಕ್ತಗೊಳಿಸುವ ವಿಶಿಷ್ಟ ಉದಾಹರಣೆಯಾಗಿದೆ. ನಮ್ಮ ದೇಶದಲ್ಲಿ ದೇಶ ಸೇವೆ ಮತ್ತು ದೇಶಭಕ್ತಿಗೆ ನಂಬಿಕೆ ಮತ್ತು ಭಕ್ತಿ ಹೇಗೆ ಸಂಬಂಧಿಸಿದೆ ಎಂಬುದಕ್ಕೆ ಸೇವಾ ದಿಂಡಿ ಒಂದು ಉತ್ತಮ ಉದಾಹರಣೆಯಾಗಿದೆ. ಗ್ರಾಮಗಳ ಉನ್ನತಿ ಮತ್ತು ಪ್ರಗತಿಗೆ ಸೇವಾ ದಿಂಡಿ ಉತ್ತಮ ಮಾಧ್ಯಮವಾಗಿದೆ. ನಮ್ಮ ವಾರಕರಿ ಸಹೋದರರು ಮತ್ತು ಸಹೋದರಿಯರು ಹಳ್ಳಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳಲ್ಲಿ ಬಹುದೊಡ್ಡ ಪ್ರಭಾವ ಹೊಂದಿದ್ದಾರೆ. ದೇಶವು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿತು. ಇಂದು ವಿಠ್ಠಲನ ಭಕ್ತರು 'ನಿರ್ಮಲ್ ವಾರಿ' ಅಭಿಯಾನದ ಮೂಲಕ ಅದಕ್ಕೆ ವೇಗ ನೀಡುತ್ತಿದ್ದಾರೆ. ಅದೇ ರೀತಿ, ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನವಾಗಿರಲಿ, ಅಥವಾ ಜಲ ಸಂರಕ್ಷಣೆಗಾಗಿ ನಮ್ಮ ಪ್ರಯತ್ನಗಳಾಗಿರಲಿ, ನಮ್ಮ ಆಧ್ಯಾತ್ಮಿಕ ಪ್ರಜ್ಞೆಯು ನಮ್ಮ ರಾಷ್ಟ್ರೀಯ ಸಂಕಲ್ಪಕ್ಕೆ ಶಕ್ತಿ ನೀಡುತ್ತಿದೆ. ಇಂದು ನಾನು ನನ್ನ ವಾರಕರಿ ಸಹೋದರ, ಸಹೋದರಿಯರೊಂದಿಗೆ ಮಾತನಾಡುತ್ತಿರುವಾಗ, ನಾನು ನಿಮಗೆ 3 ವಿಷಯಗಳನ್ನು ಆಶೀರ್ವಾದವಾಗಿ ಕೇಳಲು ಬಯಸುತ್ತೇನೆ. ನಾನು ಮಾಡಬೇಕಾ? ಖಚಿತಪಡಿಸಲು ನಿಮ್ಮ ಕೈಗಳನ್ನು ಮೇಲಕ್ಕೆತ್ತಿ. ಇಂದು ನೀವು ಕೈ ಎತ್ತಿ ಆಶೀರ್ವದಿಸಿದ ರೀತಿ ನೋಡಿದರೆ ನಿಮ್ಮೆಲ್ಲರ ವಾತ್ಸಲ್ಯ ಸದಾ ನನ್ನೊಂದಿಗಿದೆ. ಶ್ರೀಶಾಂತ್ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗ ಮತ್ತು ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ಉದ್ದಕ್ಕೂ ನಿರ್ಮಿಸಲಾಗುತ್ತಿರುವ ವಾರಕಾರಿಗಳ ವಿಶೇಷ ನಡಿಗೆಯ ಪಾದಚಾರಿ ಮಾರ್ಗಗಳಲ್ಲಿ ನೆರಳಿನ ಮರಗಳನ್ನು ನೆಡಬೇಕು ಎಂಬುದು ನಾನು ಬಯಸುವ ಮೊದಲ ಆಶೀರ್ವಾದ. ನೀವು ನನಗಾಗಿ ಇದನ್ನು ಮಾಡುತ್ತೀರಾ? ನನ್ನ ಮಂತ್ರ 'ಸಬ್ಕಾ ಪ್ರಯಾಸ್' (ಸಾಮೂಹಿಕ ಪ್ರಯತ್ನಗಳು). ಇವು ತಯಾರಾಗುವ ಹೊತ್ತಿಗೆ ಈ ಮರಗಳೂ ಬೆಳೆದು ಇಡೀ ನಡಿಗೆ ದಾರಿ ನೆರಳಾಗುತ್ತದೆ. ಈ ಸಾಮೂಹಿಕ ಆಂದೋಲನವನ್ನು ಮುನ್ನಡೆಸಲು ಈ ಪಾಲ್ಖಿ ಮಾರ್ಗಗಳ ಉದ್ದಕ್ಕೂ ಇರುವ ಅನೇಕ ಹಳ್ಳಿಗಳನ್ನು ನಾನು ವಿನಂತಿಸುತ್ತೇನೆ. ಪ್ರತಿ ಗ್ರಾಮವು ತನ್ನ ಪ್ರದೇಶದಲ್ಲಿ ಹಾದುಹೋಗುವ ಪಾಲ್ಖಿ ಮಾರ್ಗದ ಉದ್ದಕ್ಕೂ ಮರಗಳನ್ನು ನೆಡುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ಈ ಕೆಲಸವನ್ನು ತ್ವರಿತವಾಗಿ ಮಾಡಬಹುದು.

ಸ್ನೇಹಿತರೇ,

ನಾನು ಬಯಸುವ 2ನೇ ಆಶೀರ್ವಾದವೆಂದರೆ, ಈ ಕಾಲುದಾರಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ಈ ಮಾರ್ಗಗಳಲ್ಲಿ ಕುಡಿಯುವ ನೀರಿನ ಸ್ಥಳ ನಿರ್ಮಿಸಬೇಕು. ಭಗವಾನ್ ವಿಠ್ಠಲನ ಭಕ್ತಿಯಲ್ಲಿ ಮುಳುಗಿದ ಭಕ್ತರು ಪಂಢರಾಪುರಕ್ಕೆ ತೆರಳಿದಾಗ, ಅವರು 21 ದಿನಗಳವರೆಗೆ ಎಲ್ಲವನ್ನೂ ಮರೆತುಬಿಡಬೇಕು. ಅಷ್ಟರಮಟ್ಟಿಗೆ ಇವು ಭಕ್ತರಿಗೆ ಉಪಯೋಗವಾಗಬೇಕು. ನಾನು ಬಯಸುವ ಮತ್ತು ನೀವು ನನ್ನನ್ನು ನಿರಾಸೆಗೊಳಿಸದ 3ನೇ ಆಶೀರ್ವಾದವೆಂದರೆ, ಭವಿಷ್ಯದಲ್ಲಿ ಭಾರತದ ಸ್ವಚ್ಛ ಯಾತ್ರಾ ಸ್ಥಳಗಳಲ್ಲಿ ಪಂಢರಾಪುರವನ್ನು ನೋಡಲು ನಾನು ಬಯಸುತ್ತೇನೆ. ಭಾರತದಲ್ಲಿ ಸ್ವಚ್ಛವಾದ ಯಾತ್ರಾಸ್ಥಳ ಯಾವುದು ಎಂದು ಯಾರಾದರೂ ಹುಡುಕಲು ಬಯಸಿದಾಗ, ಅದು ನನ್ನ ವಿತೋಬನಾಗಿರಬೇಕು, ವಿಠ್ಠಲನ ಪುಣ್ಯಭೂಮಿ ಮತ್ತು ಪಂಢರಾಪುರ. ಈ ಮೂರು ವಿಷಯಗಳನ್ನು ನಾನು ನಿಮ್ಮಿಂದ ಬಯಸುತ್ತೇನೆ. ಇದನ್ನು ಸಾರ್ವಜನಿಕ ಸಹಭಾಗಿತ್ವದ ಮೂಲಕ ಮಾಡಬೇಕು. ಸ್ಥಳೀಯ ಜನರು ತಮ್ಮ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನದ ನೇತೃತ್ವ ವಹಿಸಿದಾಗ ಮಾತ್ರ ಈ ಕನಸು ನನಸಾಗಲು ಸಾಧ್ಯವಾಗುತ್ತದೆ. ಇದು ನಾನು ಯಾವಾಗಲೂ ಪ್ರತಿಪಾದಿಸುವ ‘ಸಬ್ಕಾ ಪ್ರಯಾಸ್’.

ಸ್ನೇಹಿತರೇ,

ನಾವು ಪಂಢರಾಪುರದಂತಹ ನಮ್ಮ ಯಾತ್ರಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುವಾಗ, ಅದು ಸಾಂಸ್ಕೃತಿಕ ಪ್ರಗತಿಗೆ ಕಾರಣವಾಗುವ ಜೆತೆಗ, ಇಡೀ ಪ್ರದೇಶದ ಅಭಿವೃದ್ಧಿಗೆ ವೇಗ ನೀಡುತ್ತದೆ. ಇಲ್ಲಿ ವಿಸ್ತರಣೆಯಾಗುತ್ತಿರುವ ರಸ್ತೆಗಳು ಮತ್ತು ಅನುಮೋದನೆ ಪಡೆದಿರುವ ಹೊಸ ಹೆದ್ದಾರಿಗಳು ಧಾರ್ಮಿಕ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡುತ್ತವೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಸೇವಾ ಅಭಿಯಾನಗಳಿಗೆ ವೇಗ ನೀಡುತ್ತದೆ. ನಮ್ಮ ಪೂಜ್ಯ ಅಟಲ್ ಬಿಹಾರಿ ವಾಜಪೇಯಿ ಜೀ ಅವರು, ಹೆದ್ದಾರಿಗಳು ಮತ್ತು ರಸ್ತೆಗಳು ಸಾಗುವ ಸ್ಥಳದಲ್ಲಿ ಅಭಿವೃದ್ಧಿಯ ಹೊಸ ಹೊಳೆ ಹರಿಯಲು ಪ್ರಾರಂಭಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು, ಅವರು ದೇಶದ ಹಳ್ಳಿಗಳನ್ನು ರಸ್ತೆಗಳೊಂದಿಗೆ ಸಂಪರ್ಕಿಸಲು ಸುವರ್ಣ ಚತುಷ್ಪಥ ಅಭಿಯಾನ ಪ್ರಾರಂಭಿಸಿದರು. ಅದೇ ಆದರ್ಶಗಳ ಮೇಲೆ, ದೇಶದಲ್ಲಿ ಆಧುನಿಕ ಮೂಲಸೌಕರ್ಯಗಳ ಮೇಲೆ ತ್ವರಿತವಾಗಿ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಉತ್ತೇಜಿಸಲು ಯೋಗಕ್ಷೇಮ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಮತ್ತು ಡಿಜಿಟಲ್ ವ್ಯವಸ್ಥೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಇಂದು ದೇಶದಲ್ಲಿ ಹೊಸ ಹೆದ್ದಾರಿಗಳು, ಜಲಮಾರ್ಗಗಳು, ರೈಲು ಮಾರ್ಗಗಳು, ಮೆಟ್ರೋ ಮಾರ್ಗಗಳು, ಆಧುನಿಕ ರೈಲು ನಿಲ್ದಾಣಗಳು, ಹೊಸ ವಿಮಾನ ನಿಲ್ದಾಣಗಳು ಮತ್ತು ಹೊಸ ವಿಮಾನ ಮಾರ್ಗಗಳ ವ್ಯಾಪಕ ಜಾಲವನ್ನು ನಿರ್ಮಿಸಲಾಗುತ್ತಿದೆ. ದೇಶದ ಪ್ರತಿಯೊಂದು ಗ್ರಾಮವನ್ನು ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ನೊಂದಿಗೆ ಸಂಪರ್ಕಿಸುವ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ. ಈ ಎಲ್ಲಾ ಯೋಜನೆಗಳನ್ನು ಮತ್ತಷ್ಟು ವೇಗಗೊಳಿಸಲು ಉತ್ತಮ ಸಮನ್ವಯಕ್ಕಾಗಿ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್  ಪ್ರಾರಂಭಿಸಲಾಗಿದೆ. ಬಡವರಿಗೆ ಪಕ್ಕಾ ಮನೆ, ಪ್ರತಿ ಮನೆಯಲ್ಲಿ ಶೌಚಾಲಯ, ಪ್ರತಿ ಕುಟುಂಬಕ್ಕೂ ವಿದ್ಯುತ್ ಸಂಪರ್ಕ, ಪ್ರತಿ ಮನೆಗೆ ನಲ್ಲಿ ನೀರು, ನಮ್ಮ ತಾಯಂದಿರಿಗೆ ಅಡುಗೆ ಅನಿಲ ಸಂಪರ್ಕದ ಕನಸುಗಳು ಇಂದು ನನಸಾಗುತ್ತಿವೆ. ಸಮಾಜದ ಬಡವರು, ವಂಚಿತರು, ದೀನ ದಲಿತರು ಮತ್ತು ಮಧ್ಯಮ ವರ್ಗದವರು ಗರಿಷ್ಠ ಲಾಭ ಪಡೆಯುತ್ತಿದ್ದಾರೆ.

ಸ್ನೇಹಿತರೇ,

ನಮ್ಮ ವಾರಕರಿ ಗುರುಭಾವುಗಳಲ್ಲಿ ಹೆಚ್ಚಿನವರು ರೈತ ಕುಟುಂಬಗಳಿಂದ ಬಂದವರಾಗಿದ್ದಾರೆ. ಗ್ರಾಮೀಣ ಬಡವರಿಗಾಗಿ ಭಾರತ ಸರ್ಕಾರ ನಡೆಸುತ್ತಿರುವ  ಪ್ರಯತ್ನಗಳು ಇಂದು ಸಾಮಾನ್ಯ ಮಾನವರ ಜೀವನವನ್ನು ಹೇಗೆ ಬದಲಾಯಿಸುತ್ತಿವೆ ಎಂಬುದನ್ನು ನೀವೆಲ್ಲರೂ ನೋಡುತ್ತಿದ್ದೀರಾ. ಗ್ರಾಮೀಣ  ಬಡ ಕೃಷಿಕರು ಗ್ರಾಮೀಣ ಆರ್ಥಿಕತೆಯ ಚಾಲನಾಶಕ್ತಿಯಾಗಿದ್ದಾರೆ. ಸಮಾಜದ ಸಂಸ್ಕೃತಿ ಮತ್ತು ರಾಷ್ಟ್ರದ ಏಕತೆಗೆ ಅವರು ನಾಯಕತ್ವ ವಹಿಸಿದ್ದಾರೆ. ಶತಮಾನಗಳಿಂದ ಭಾರತದ ಸಂಸ್ಕೃತಿ ಮತ್ತು ಆದರ್ಶಗಳನ್ನು ಜೀವಂತವಾಗಿಟ್ಟವರು ಮಣ್ಣಿನ ಮಕ್ಕಳು ಅರ್ಥಾತ್ ನೇಗಿಲ ಯೋಗಿಗಳು. ನಿಜವಾದ ‘ಅನ್ನದಾತ’ ಸಮಾಜವನ್ನು ಒಂದುಗೂಡಿಸುತ್ತಾನೆ, ಸಮಾಜದಲ್ಲಿ ಬದುಕುತ್ತಾನೆ ಮತ್ತು ಸಮಾಜಕ್ಕಾಗಿ ಬದುಕುತ್ತಾನೆ. ನೀವು ಸಮಾಜದ ಪ್ರಗತಿಯ ಪ್ರತಿಬಿಂಬವಾಗಿದ್ದೀರಿ, ಕಾರಣಕರ್ತರೂ ಆಗಿದ್ದೀರಿ. ಆದ್ದರಿಂದ, ದೇಶದ ಸಂಕಲ್ಪ, ಮಹತ್ವದ ನಿರ್ಧಾರಗಳಲ್ಲಿ ನಮ್ಮ ರೈತರು ನಮ್ಮ ಪ್ರಗತಿಯ ಕೇಂದ್ರವಾಗಿದ್ದಾರೆ. ಈ ಭಾವನೆಯಿಂದಲೇ ದೇಶ ಮುನ್ನಡೆಯುತ್ತಿದೆ.

ಸ್ನೇಹಿತರೇ,

ಸಂತ ಧ್ಯಾನೇಶ್ವರ ಮಹಾರಾಜ್ ಜೀ ಅವರು ನಮ್ಮೆಲ್ಲರಿಗೂ ಸುಂದವಾದ ಸಂದೇಶವನ್ನು ಬಿಟ್ಟುಹೋಗಿದ್ದಾರೆ:

दुरितांचे तिमिर जावो । विश्व स्वधर्म सूर्यें पाहो । जो जे वांच्छिल तो तें लाहो, प्राणिजात।

ಅಂದರೆ, ದುಷ್ಟತನದ ಕಗ್ಗತ್ತಲೆ ಪ್ರಪಂಚದಿಂದ ಕೊನೆಗೊಳ್ಳಬೇಕು. ಇಡೀ ಜಗತ್ತಿನಲ್ಲಿ ಸದಾಚಾರ ಮತ್ತು ಜವಾಬ್ದಾರಿಯ ಸೂರ್ಯ ಉದಯಿಸಲಿ ಮತ್ತು ಪ್ರತಿ ಜೀವಿಯ ಸದಾಶಯಗಳು ಈಡೇರಲಿ!  ನಮ್ಮ ಶ್ರದ್ಧೆ ಮತ್ತು ಪ್ರಯತ್ನಗಳು ಸಂತ ಜ್ಞಾನೇಶ್ವರ ಜೀ ಅವರ ಈ ಹೃದಯದ ಭಾವನೆಗಳನ್ನು ಖಂಡಿತವಾಗಿ ಸಾಕಾರಗೊಳಿಸುತ್ತವೆ ಎಂಬ ಸಂಪೂರ್ಣ ನಂಬಿಕೆ ನಮಗಿದೆ. ಈ ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ ಎಲ್ಲಾ ಸಾಧು ಸಂತರು ಮತ್ತು ವಿಠ್ಠಲನ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಎಲ್ಲರಿಗೂ ತುಂಬು ಧನ್ಯವಾದಗಳನ್ನು ಅರ್ಪಿಸುತ್ತೇನೆ!

ಜೈ ಜೈ ರಾಮಕೃಷ್ಣ ಹರಿ!

ಜೈ ಜೈ ರಾಮಕೃಷ್ಣ ಹರಿ!

***


(Release ID: 1771669) Visitor Counter : 237