ಪ್ರಧಾನ ಮಂತ್ರಿಯವರ ಕಛೇರಿ
ಸೂರತ್ತಿನಲ್ಲಿ ಸೌರಾಷ್ಟ್ರ ಪಟೇಲ್ ಸೇವಾಸಮಾಜ ನಿರ್ಮಾಣ ಮಾಡುವ ಹಾಸ್ಟೆಲ್ ಕಟ್ಟಡ ಹಂತ-1 ರ ಭೂಮಿ ಪೂಜನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
15 OCT 2021 2:04PM by PIB Bengaluru
ನಮಸ್ಕಾರ್!
ಕಾರ್ಯಕ್ರಮದಲ್ಲಿ ಹಾಜರಿರುವ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಜೀ, ಕೇಂದ್ರ ಸರಕಾರದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಮನ್ಸುಖ್ ಮಾಂಡವೀಯ, ಶ್ರೀ ಪರಶೋತ್ತಮ ಭಾಯಿ ರೂಪಾಲಾ, ದರ್ಶನಾ ಬೆನ್, ನನ್ನ ಲೋಕಸಭಾ ಸಹೋದ್ಯೋಗಿ ಮತ್ತು ಗುಜರಾತ್ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ ಸಿ.ಆರ್. ಪಾಟೀಲ್ ಜೀ, ಸೌರಾಷ್ಟ್ರ ಪಟೇಲ್ ಸೇವಾ ಸಮಾಜ ಅಧ್ಯಕ್ಷ ಶ್ರೀ ಕಾಂಜಿ ಭಾಯಿ, ಸೇವಾ ಸಮಾಜದ ಎಲ್ಲಾ ಗೌರವಾನ್ವಿತ ಸದಸ್ಯರೇ, ಮತ್ತು ಬೃಹತ್ ಸಂಖ್ಯೆಯಲ್ಲಿ ಸೇರಿರುವ ಸಹೋದರರೇ ಮತ್ತು ಸಹೋದರಿಯರೇ!. ಸೌರಾಷ್ಟ್ರ ಪಟೇಲ್ ಸೇವಾ ಸಮಾಜವು ಇಂದು ವಿಜಯ ದಶಮಿಯ ಸಂದರ್ಭದಲ್ಲಿ ಬಹಳ ಶ್ರೇಷ್ಟವಾದ ಯೋಜನೆಯನ್ನು ಆರಂಭ ಮಾಡುತ್ತಿದೆ.ನಾನು ನಿಮಗೆಲ್ಲಾ ಹಾಗು ಇಡೀ ದೇಶಕ್ಕೆ ವಿಜಯ ದಶಮಿಯ ಶುಭಾಶಯಗಳನ್ನು ಹಾರೈಸುತ್ತೇನೆ.
ಸ್ನೇಹಿತರೇ,
ರಾಮಚರಿತಮನಸ್ ಭಗವಾನ್ ಶ್ರೀರಾಮನ ಭಕ್ತರನ್ನು ಕುರಿತು ಹೇಳುತ್ತದೆ. ರಾಮಚರಿತಮನಸ್ ನಲ್ಲಿ ಹೇಳಲಾಗುತ್ತದೆ:
''प्रबल अबिद्या तम मिटि जाई।
हारहिं सकल सलभ समुदाई''॥
ಅಂದರೆ, ಅರಿವಿನ ಕೊರತೆ, ನಿರ್ಲಕ್ಷ್ಯ ಮತ್ತು ಕತ್ತಲೆಯನ್ನು ಭಗವಾನ್ ರಾಮ ಅವರ ಆಶೀರ್ವಾದದಿಂದ ತೊರೆಯಬಹುದು ಮತ್ತು ಅವರನ್ನು ಅನುಸರಿಸುವ ಮೂಲಕ ನಿವಾರಿಸಬಹುದು. ಎಲ್ಲಾ ಋಣಾತ್ಮಕ ಅಂಶಗಳನ್ನು ಸೋಲಿಸಬಹುದು. ಭಗವಾನ್ ಶ್ರೀರಾಮರನ್ನು ಅನುಸರಿಸುವುದೆಂದರೆ ಮಾನವತೆಯ ಅನುಸರಣೆ, ಜ್ಞಾನದ ಅನುಸರಣೆ!. ಆದುದರಿಂದ ಬಾಪು ಅವರು ಗುಜರಾತಿನ ಮಣ್ಣಿನಿಂದ ಶ್ರೀರಾಮನ ಆದರ್ಶವನ್ನು ಆಧರಿಸಿದ ಸಮಾಜವನ್ನು ಕಲ್ಪಿಸಿಕೊಂಡಿದ್ದರು. ಗುಜರಾತಿನ ಜನತೆ ಆ ಮೌಲ್ಯಗಳನ್ನು ಅನುಸರಿಸುತ್ತಿರುವುದಲ್ಲದೆ, ಅವುಗಳನ್ನು ಬಲಪಡಿಸುತ್ತಿರುವುದಕ್ಕೆ ನನಗೆ ಸಂತೋಷವಿದೆ. ಸೌರಾಷ್ಟ್ರ ಪಟೇಲ್ ಸೇವಾ ಸಮಾಜ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂದಿರುವ ಉಪಕ್ರಮ ಇದರ ಒಂದಂಗ. ಇಂದು ಹಾಸ್ಟೆಲ್ ಹಂತ -1 ರ ಭೂಮಿ ಪೂಜನ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ.
ಎರಡೂ ಹಂತಗಳ ಕಾಮಗಾರಿ 2024ರೊಳಗೆ ಪೂರ್ಣಗೊಳ್ಳುತ್ತದೆ ಎಂದು ನನಗೆ ತಿಳಿಸಲಾಗಿದೆ. ಬಹಳ ದೊಡ್ಡ ಸಂಖ್ಯೆಯ ಯುವಜನತೆ, ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ನಿಮ್ಮ ಪ್ರಯತ್ನಗಳಿಂದಾಗಿ ಹೊಸ ನಿರ್ದೇಶನಗಳನ್ನು ಪಡೆಯಲಿದ್ದಾರೆ ಮತ್ತು ಅವರಿಗೆ ಅವರ ಕನಸುಗಳನ್ನು ನನಸು ಮಾಡಲು ಅವಕಾಶ ದೊರೆಯಲಿದೆ. ಈ ಪ್ರಯತ್ನಗಳಿಗಾಗಿ ನಾನು ಸೌರಾಷ್ಟ್ರ ಪಟೇಲ್ ಸೇವಾ ಸಮಾಜವನ್ನು ಅಭಿನಂದಿಸುತ್ತೇನೆ. ಮತ್ತು ಅದರಲ್ಲೂ ಅದರ ಅಧ್ಯಕ್ಷ ಶ್ರೀ ಕಾಂಜಿ ಭಾಯಿ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸೇವಾ ಕಾರ್ಯವನ್ನು ಮಾಡುತ್ತಿರುವಾಗ ಸಮಾಜದ ಪ್ರತೀ ವರ್ಗವನ್ನೂ ಜೊತೆಗೆ ಕೊಂಡೊಯ್ಯುವ ಪ್ರಯತ್ನಗಳ ಬಗ್ಗೆ ನನಗೆ ಬಹಳ ತೃಪ್ತಿ ಇದೆ.
ಸ್ನೇಹಿತರೇ,
ವಿವಿಧ ಕ್ಷೇತ್ರಗಳಲ್ಲಿ ಸೇವೆಯ ಇಂತಹ ಕೃತ್ಯಗಳನ್ನು ನೋಡಿದಾಗ, ಗುಜರಾತ್ ಸರ್ದಾರ್ ಪಟೇಲ್ ಅವರ ತತ್ವಾದರ್ಶಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರೀತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಸರ್ದಾರ್ ಸಾಹೇಬ್ ಏನು ಹೇಳಿದ್ದರು ಎಂಬುದನ್ನು ನಾವು ಸದಾ ಸ್ಮರಿಸುತ್ತಿರಬೇಕು. ಜಾತಿ ಮತ್ತು ನಂಬಿಕೆ ಅವಕಾಶಕ್ಕೆ ಒಂದು ಹಿಂಜರಿತ ಅಥವಾ ಅಡ್ಡಿ ಎಂದು ನಾವು ಭಾವಿಸಬಾರದು ಎಂದು ಸರ್ದಾರ್ ಸಾಹೇಬ್ ಅವರು ಹೇಳುತ್ತಿದ್ದರು. ನಾವೆಲ್ಲರೂ ಭಾರತ ಮಾತೆಯ ಪುತ್ರರು ಮತ್ತು ಪುತ್ರಿಯರು. ನಾವೆಲ್ಲರೂ ನಮ್ಮ ದೇಶವನ್ನು ಪ್ರೀತಿಸಬೇಕು, ನಮ್ಮ ಅದೃಷ್ಟವನ್ನು, ಮುಂದಿನ ಹಾದಿಯನ್ನು ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ರೂಪಿಸಿಕೊಳ್ಳಬೇಕು. ಸರ್ದಾರ ಸಾಹೇಬ್ ಅವರ ಈ ಭಾವನೆಗಳನ್ನು ಗುಜರಾತ್ ಹೇಗೆ ಸದಾ ಬಲಿಷ್ಟಗೊಳಿಸಿತು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಸರ್ದಾರ್ ಸಾಹೇಬ್ ಅವರ ಅನುಯಾಯಿಗಳಿಗೆ ದೇಶ ಮೊದಲು ಎಂಬುದು ಜೀವನ ಮಂತ್ರವಾಗಿತ್ತು. ನೀವು ಈ ಜೀವನ ಮಂತ್ರವನ್ನು ದೇಶದಲ್ಲಿ ಅಥವಾ ವಿದೇಶಗಳಲ್ಲಿ ಗುಜರಾತಿನ ಜನತೆಯಲ್ಲಿ ಎಲ್ಲೆಲ್ಲೂ ಕಾಣಬಹುದಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ಭಾರತವು ಈಗ ತನ್ನ ಸ್ವಾತಂತ್ರ್ಯದ 75 ನೇ ವರ್ಷದಲ್ಲಿದೆ. ಹೊಸ ದೃಢ ನಿರ್ಧಾರಗಳ ಜೊತೆ, ಈ ಪುಣ್ಯಕರ ಕಾಲ ಸಾರ್ವಜನಿಕ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಆ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲು ಪ್ರೇರಣೆಯನ್ನು ನೀಡುತ್ತದೆ. ಅವರ ಬಗ್ಗೆ ತಿಳಿದುಕೊಳ್ಳುವುದು ಇಂದಿನ ತಲೆಮಾರಿಗೆ ಬಹಳ ಮುಖ್ಯವಾದ ಸಂಗತಿ. ಇಂತಹ ಹಲವು ಜನರ ಸಂಯಮ ಮತ್ತು ತಪಸ್ಸು ಗುಜರಾತಿನ ಅಭೂತಪೂರ್ವ ಪ್ರಗತಿಯ ಹಿಂದಿದೆ. ಅಲ್ಲಿ ಇಂತಹ ಹಲವು ವ್ಯಕ್ತಿಗಳಿದ್ದಾರೆ, ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಗುಜರಾತಿನ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಬಹಳ ಶ್ರೇಷ್ಟ ವ್ಯಕ್ತಿ ಛಗನ್ ಭಾ ಅವರ ಬಗ್ಗೆ ಬಹುಷಃ ನಮಗೆಲ್ಲರಿಗೂ ಗೊತ್ತಿರಬಹುದು. ಅವರು ಉತ್ತರ ಗುಜರಾತಿನಲ್ಲಿ ಜನಿಸಿದರು ಮತ್ತು ಇಂದು ಅವರನ್ನು ಇಡೀ ರಾಜ್ಯ ಸ್ಮರಿಸುತ್ತಿದೆ. ಸಮಾಜವನ್ನು ಸಶಕ್ತಗೊಳಿಸಲು ಶಿಕ್ಷಣವು ಒಂದು ಬಹಳ ದೊಡ್ಡ ಸಾಧನ ಎಂದವರು ದೃಢವಾಗಿ ನಂಬಿದ್ದರು. ಅವರು 102 ವರ್ಷಗಳ ಹಿಂದೆ 1919ರಲ್ಲಿ ಸರ್ವ ವಿದ್ಯಾಲಯ ಕೆಲವಾನಿ ಮಂಡಲ್ ಸಂಸ್ಥೆಯನ್ನು ಕಡಿಯಲ್ಲಿ ಸ್ಥಾಪಿಸಿದ್ದರು ಎಂಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ?. ಇದು ಛಗನ್ ಭಾ ಅವರ ದೂರದೃಷ್ಟಿಯಾಗಿತ್ತು. “ಕರ್ ಭಾಲಾ, ಹೊಗ ಭಾಲ” (ಒಳ್ಳೆಯ ಕೆಲಸ ಸದಾ ಜೊತೆಯಾಗಿರುತ್ತದೆ) ಎಂಬುದು ಅವರ ಜೀವನ ಮಂತ್ರವಾಗಿತ್ತು. ಮತ್ತು ಈ ಸ್ಪೂರ್ತಿ, ಉತ್ಸಾಹದೊಂದಿಗೆ ಅವರು ಬರಲಿರುವ ಜನಾಂಗಗಳ ಭವಿಷ್ಯವನ್ನು ರೂಪಿಸುತ್ತಾ ನಡೆದರು. ಗಾಂಧೀಜಿ ಅವರೂ ಛಗನ್ ಭಾಯಿ ಅವರನ್ನು ಶ್ಲಾಘಿಸಿದ್ದರಲ್ಲದೆ, ಅವರು ಬಹಳ ದೊಡ್ಡ ಸೇವೆಯನ್ನು ಮಾಡುತ್ತಿದ್ದಾರೆಂದು ಅವರು 1929 ರಲ್ಲಿ ತಮ್ಮನ್ನು ಭೇಟಿಯಾಗಲು ಬಂದಾಗ ಹೇಳಿದ್ದರು. ಅವರು ಜನರಿಗೆ ಅವರ ಮಕ್ಕಳನ್ನು ಛಗನ್ ಭಾ ಅವರ ಟ್ರಸ್ಟಿಗೆ ಕಲಿಯಲು ಕಳುಹಿಸುವಂತೆ ಹೇಳುತ್ತಿದ್ದರು.
ಸ್ನೇಹಿತರೇ,
ದೇಶದ ಮುಂದಿನ ತಲೆಮಾರಿನವರಿಗಾಗಿ ತಮ್ಮ ವರ್ತಮಾನವನ್ನು ವಿನಿಯೋಗಿಸಿದ ಇನ್ನೋರ್ವ ವ್ಯಕ್ತಿಯ ಬಗ್ಗೆಯೂ ನಾನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ ಮತ್ತು ಅವರೇ ಭಾಯಿ ಕಾಕಾ. ಭಾಯಿ ಕಾಕಾ ಅವರು ಆನಂದ್ ಮತ್ತು ಖೇಡಾ ಸುತ್ತ ಮುತ್ತಲ ಪ್ರದೇಶಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಬಹಳ ಕೆಲಸ ಮಾಡಿದರು. ಭಾಯಿ ಕಾಕಾ ಅವರು ಇಂಜಿನಿಯರ್ ಆಗಿದ್ದರು, ಅವರ ವೃತ್ತಿ ಜೀವನ ಉತ್ತಮವಾಗಿ ಸಾಗುತ್ತಿತ್ತು, ಆದರೆ ಸರ್ದಾರ್ ಸಾಹೇಬ್ ಅವರ ಸಲಹೆಯ ಮೇರೆಗೆ ಅವರು ಕೆಲಸ ತೊರೆದರು ಮತ್ತು ಅಹ್ಮದಾಬಾದ್ ಮುನ್ಸಿಪಾಲಿಟಿಯಲ್ಲಿ ಕೆಲಸಕ್ಕೆ ಬಂದರು. ಬಳಿಕ ಅವರು ಚರೋಟಾರ್ ಗೆ ಹೋದರು, ಅಲ್ಲಿ ಆನಂದ್ ನಲ್ಲಿ ಅವರು ಚರೋಟಾರ್ ಶಿಕ್ಷಣ ಸೊಸೈಟಿಯನ್ನು ನಿರ್ವಹಣೆ ಮಾಡಿದರು.ಬಳಿಕ ಅವರು ಚರೋಟಾರ್ ವಿದ್ಯಾ ಮಂಡಲದ ಜೊತೆಗೂ ಸಂಪರ್ಕಕ್ಕೆ ಬಂದರು. ಭಾಯಿ ಕಾಕಾ ಅವರು ಆ ಕಾಲದಲ್ಲಿ ಗ್ರಾಮೀಣ ವಿಶ್ವವಿದ್ಯಾಲಯದ ಕನಸು ಕಂಡಿದ್ದರು. ಗ್ರಾಮದಲ್ಲಿ ವಿಶ್ವವಿದ್ಯಾಲಯ ಇರಬೇಕು ಮತ್ತು ಗ್ರಾಮೀಣ ವ್ಯವಸ್ಥೆಯ ವಿಷಯಗಳು ಅದರ ತಿರುಳಾಗಿರಬೇಕು ಎಂದವರು ಆಶಿಸಿದ್ದರು. ಈ ಸ್ಪೂರ್ತಿ ಮತ್ತು ಉತ್ಸಾಹದಲ್ಲಿ ಅವರು ಸರ್ದಾರ್ ವಲ್ಲಭಭಾಯಿ ವಿದ್ಯಾಪೀಠವನ್ನು ಸ್ಥಾಪಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದರು. ಭಿಕಾಭಾಯಿ ಪಟೇಲ್ ಕೂಡಾ ಭಾಯಿ ಕಾಕಾ ಮತ್ತು ಸರ್ದಾರ್ ಪಟೇಲ್ ಅವರೊಂದಿಗೆ ಕೆಲಸ ಮಾಡಿದಂತಹವರು.
ಸ್ನೇಹಿತರೇ,
ಗುಜರಾತಿನ ಬಗ್ಗೆ ಕಡಿಮೆ ಮಾಹಿತಿ ಇರುವವರಿಗೆ, ನಾನು ವಲ್ಲಭ ವಿದ್ಯಾನಗರ ಅವರನ್ನು ಪರಿಚಯಿಸಲು ಇಚ್ಛಿಸುತ್ತೇನೆ. ಈ ಸ್ಥಳ ಕರಾಂಸಡ್ –ಬಕ್ರೋಲ್ ಮತ್ತು ಆನಂದ್ ನಡುವೆ ಇರುವುದು ಗೊತ್ತಿದೆ. ಈ ಸ್ಥಳವನ್ನು ಶಿಕ್ಷಣವನ್ನು ಹರಡಬಹುದು ಮತ್ತು ಗ್ರಾಮದ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸಬಹುದು ಎಂಬ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಹಿರಿಯ ನಾಗರಿಕ ಸೇವಾ ಅಧಿಕಾರಿ ಎಚ್.ಎಂ. ಪಟೇಲ್ ಅವರು ವಲ್ಲಭ ವಿದ್ಯಾನಗರದ ಜೊತೆ ಸಂಬಂಧ ಹೊಂದಿದ್ದರು. ಸರ್ದಾರ್ ಸಾಹೀಬ್ ಅವರು ದೇಶದ ಗೃಹ ಸಚಿವರಾಗಿದ್ದಾಗ ಎಚ್.ಎಂ. ಪಟೇಲ್ ಅವರು ಗೃಹ ಸಚಿವರಿಗೆ ಪರಮಾಪ್ತರಾಗಿದ್ದ ಕೆಲವೇ ಮಂದಿಯಲ್ಲಿ ಒಬ್ಬರಾಗಿದ್ದರು. ಬಳಿಕ ಅವರೂ ಜನತಾ ಪಾರ್ಟಿ ಸರಕಾರದಲ್ಲಿ ಹಣಕಾಸು ಸಚಿವರಾದರು.
ಸ್ನೇಹಿತರೇ,
ನನ್ನ ಮನಸ್ಸಿನಲ್ಲಿ ಹಲವಾರು ಹೆಸರುಗಳು ಬರುತ್ತಿವೆ. ಸೌರಾಷ್ಟ್ರದ ಬಗ್ಗೆ ನಾವು ಮಾತನಾಡಿದರೆ, ನಮ್ಮ ಮೋಹನ್ ಲಾಲ್ ಲಾಲ್ಜೀ ಭಾಯಿ ಪಟೇಲ್, ಅವರನ್ನು ನಾವು ಮೋಲಾ ಪಟೇಲ್ ಎಂದು ಗುರುತಿಸುತ್ತೇವೆ, ಅವರು ಬಹಳ ದೊಡ್ಡ ಶಿಕ್ಷಣ ಸಂಕೀರ್ಣವನ್ನು ನಿರ್ಮಾಣ ಮಾಡಿದರು. ಇನ್ನೋರ್ವ ಮೋಹನ ಭಾಯಿ ವಿರ್ಜೀ ಭಾಯಿ ಪಟೇಲ್ ಜೀ ಅವರು ನೂರು ವರ್ಷಗಳಿಗೂ ಮೊದಲು ಅಮ್ರೇಲಿಯಲ್ಲಿ “ಪಟೇಲ್ ಆಶ್ರಮ” ಸ್ಥಾಪಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಕಾರ್ಯನಿರತರಾದರು. ಕೇಶವಾಜೀ ಭಾಯಿ ಅರ್ಜಿಭಾಯಿ ವಿರಾನಿ ಮತ್ತು ಕರ್ಷಣ್ ಭಾಯಿ ಬೇಚಾರ್ ಭಾಯಿ ವಿರಾನಿ ಅವರು ದಶಕಗಳ ಮೊದಲು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಜಾಮ್ ನಗರದಲ್ಲಿ ಹಾಸ್ಟೆಲ್ ಗಳನ್ನು ಮತ್ತು ಶಾಲೆಗಳನ್ನು ನಿರ್ಮಾಣ ಮಾಡಿದರು. ಅದೇ ರೀತಿ ನಗೀನ್ ಭಾಯಿ ಪಟೇಲ್, ಸಕಾಲ್ ಚಂದ ಪಟೇಲ್ ಮತ್ತು ಗಣಪತ್ ಭಾಯಿ ಪಟೇಲ್ ರಂತಹವರು ಮಾಡಿದ ಪ್ರಯತ್ನಗಳನ್ನು ಗುಜರಾತಿನ ವಿವಿಧ ವಿಶ್ವವಿದ್ಯಾಲಯಗಳ ರೂಪದಲ್ಲಿ ಕಾಣಬಹುದು. ಇಂದಿನ ಸಂದರ್ಭ ಅವರನ್ನೆಲ್ಲ ನೆನಪಿಸಿಕೊಳ್ಳಲು ಒಂದು ಬಹಳ ದೊಡ್ಡ ಅವಕಾಶ ಒದಗಿಸಿದ ದಿನ. ಇಂತಹ ಎಲ್ಲಾ ಜನರ ಜೀವನ ಚರಿತ್ರೆಯನ್ನು ನೋಡಿದರೆ ಅವರು ಸಣ್ಣ ಪ್ರಯತ್ನಗಳ ಮೂಲಕ ಹೇಗೆ ದೊಡ್ಡ ದೊಡ್ಡ ಗುರಿಗಳನ್ನು ಸಾಧಿಸಿದರು ಎಂಬುದು ನಮ್ಮ ಅರಿವಿಗೆ ಬರುತ್ತದೆ.ಇಂತಹ ಪ್ರಯತ್ನಗಳು ಸಾಮೂಹಿಕವಾದಾಗ ಅವುಗಳು ಬಹಳ ದೊಡ್ಡ ಫಲಿತಾಂಶವನ್ನು ನೀಡುತ್ತವೆ.
ಸ್ನೇಹಿತರೇ,
ಕುಟುಂಬ ಇಲ್ಲದ, ಅಥವಾ ರಾಜಕೀಯ ಹಿನ್ನೆಲೆ ಇಲ್ಲದ ಅಥವಾ ಜಾತಿವಾದಿ ರಾಜಕೀಯದಲ್ಲಿ ಯಾವುದೇ ಬೇರುಗಳಿಲ್ಲದ ನನ್ನಂತಹ ಬಹಳ ಸಾಮಾನ್ಯ ವ್ಯಕ್ತಿಯ ಮೇಲೆ ನಿಮ್ಮ ಆಶೀರ್ವಾದಗಳು ಇದ್ದುದರಿಂದ ನೀವು ನನಗೆ 2001 ರಲ್ಲಿ ಗುಜರಾತಿನಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ಕೊಟ್ಟಿರಿ. ನಿಮ್ಮ ಆಶೀರ್ವಾದದ ಬಲದಿಂದ ನಾನು ದೇಶಕ್ಕೆ 20 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಸೇವೆ ಸಲ್ಲಿಸುವಂತಾಗಿದೆ. ಅದು ಮೊದಲು ಗುಜರಾತಿನಲ್ಲಿ ಮತ್ತು ಈಗ ದೇಶಕ್ಕೆ.
ಸ್ನೇಹಿತರೇ,
“ಸಬ್ ಕಾ ಸಾಥ್, ಸಬ್ ಕಾ ವಿಕಾಸ್”ನ ಶಕ್ತಿಯನ್ನು ನಾನು ಗುಜರಾತಿನಿಂದಲೇ ಕಲಿತುಕೊಂಡೆ. ಗುಜರಾತಿನಲ್ಲಿ ಉತ್ತಮ ಶಾಲೆಗಳ ಕೊರತೆ ಇರುವ ಕಾಲವೊಂದಿತ್ತು. ಮತ್ತು ಅಲ್ಲಿ ಉತ್ತಮ ಶಿಕ್ಷಣಕ್ಕಾಗಿ ಶಿಕ್ಷಕರ ಕೊರತೆಯೂ ಇತ್ತು. ಖೋಡಾಲ್ ಧಾಮಕ್ಕೆ ಭೇಟಿಯ ಬಳಿಕ ಉಮಿಯ ಮಾತಾ ಅವರ ಆಶೀರ್ವಾದದೊಂದಿಗೆ ಈ ಸಮಸ್ಯೆ ಪರಿಹಾರಕ್ಕೆ ನಾನು ಜನತೆಯ ಬೆಂಬಲ ಕೋರಿದೆ ಮತ್ತು ಅವರನ್ನು ನನ್ನ ಜೊತೆ ಸೇರಿಸಿಕೊಂಡೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಗುಜರಾತ್ “ಪ್ರವೇಶೋತ್ಸವ” ಯೋಜನೆಯನ್ನು ಆರಂಭ ಮಾಡಿದ್ದನ್ನು ನೀವು ನೆನಪಿಸಿಕೊಳ್ಳಬಹುದು. “ಸಾಕ್ಷರದೀಪ” ಮತ್ತು “ಗುಣೋತ್ಸವ”ದಂತಹ ಯೋಜನೆಗಳನ್ನು ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಆರಂಭಿಸಲಾಯಿತು.
ಸವಾಲಾಗಿತ್ತು. ನಮ್ಮ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಕೂಡ ಇದನ್ನು ಈಗಷ್ಟೇ ಉಲ್ಲೇಖಿಸಿದರು. ಅದಕ್ಕೆ ಅನೇಕ ಸಾಮಾಜಿಕ ಮತ್ತು ಪ್ರಾಯೋಗಿಕ ಕಾರಣಗಳಿದ್ದವು. ಅನೇಕ ಹೆಣ್ಣು ಮಕ್ಕಳಿಗೆ ಶಾಲೆಗಳಿಗೆ ಹೋಗುವ ಆಸೆ ಇದ್ದರೂ ಅಲ್ಲಿ ಅವರಿಗೆ ಶೌಚಾಲಯಗಳು ಇರಲಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಗುಜರಾತ್ ಪಂಚಶಕ್ತಿಗಳಿಂದ ಪ್ರೇರಣೆಯನ್ನು ಪಡೆಯಿತು. ಪಂಚಶಕ್ತಿಗಳೆಂದರೆ ಜ್ಞಾನ ಶಕ್ತಿ, ಮಾನವ ಶಕ್ತಿ, ಜಲಶಕ್ತಿ, ಇಂಧನ ಶಕ್ತಿ ಮತ್ತು ರಕ್ಷಣಾ ಶಕ್ತಿ!. ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಯಿತು. ವಿದ್ಯಾಲಕ್ಷ್ಮೀ ಬಾಂಡ್ ಗಳು, ಸರಸ್ವತಿ ಸಾಧನಾ ಯೋಜನಾ, ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಂತಹ ಯೋಜನೆಗಳ ಮೂಲಕ ಗುಜರಾತಿನಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲಾಯಿತು ಮಾತ್ರವಲ್ಲದೆ, ಶಾಲೆ ತೊರೆಯುವ ಮಕ್ಕಳ ಸಂಖ್ಯೆಯಲ್ಲಿಯೂ ಇಳಿಕೆಯಾಯಿತು.
ಇಂದು ಶಿಕ್ಷಣಕ್ಕೆ ಮತ್ತು ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ದೊಡ್ಡ ಮಟ್ಟದ ಪ್ರಯತ್ನಗಳು ಜಾರಿಯಲ್ಲಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ನೀವು “ಬೇಟಿ ಬಚಾವೋ ಅಭಿಯಾನ”ವನ್ನು ಸೂರತ್ತಿನಿಂದ ಆರಂಭ ಮಾಡಿ ಬಳಿಕ ಅದನ್ನು ಇಡೀ ಗುಜರಾತಿಗೆ ವಿಸ್ತರಿಸಿದ್ದು ನನಗೆ ನೆನಪಿದೆ. ನಾನು ನಿಮ್ಮಲ್ಲಿಗೆ ಭೇಟಿ ನೀಡುವಾಗೆಲ್ಲ, ನಾನು ಈ ಕಹಿ ಸತ್ಯವನ್ನು ಹೇಳಲು ದೊರೆಯುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ನೀವು ನನ್ನ ಮಾತನ್ನು ಒಪ್ಪುತ್ತೀರೋ ಇಲ್ಲವೋ, ಅದರ ಬಗ್ಗೆ ನಾನು ಚಿಂತಿಸುವುದಿಲ್ಲ. ಸಿಟ್ಟಿಗೆದ್ದರೂ ಆ ಬಗ್ಗೆ ಗಮನ ಕೊಡುವುದಿಲ್ಲ, ಆದರೆ ಹೆಣ್ಣು ಮಕ್ಕಳನ್ನು ರಕ್ಷಿಸಬೇಕಾದ ಕಹಿ ವಾಸ್ತವದ ಬಗ್ಗೆ ನಾನು ಸದಾ ಆದ್ಯತೆ ಕೊಟ್ಟು ಹೇಳುತ್ತಲೇ ಬಂದಿದ್ದೇನೆ. ಮತ್ತು ನೀವೆಲ್ಲರೂ ಇದನ್ನು ಸ್ವಾಗತಿಸಿದ್ದಕ್ಕೆ ನನಗೆ ಸಂತೋಷವಿದೆ. ಸೂರತ್ತಿನಿಂದ ಇಡೀ ಗುಜರಾತಿಗೆ ನೀವು ಜಾಥಾ ಕೈಗೊಂಡಾಗ ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸುವಂತೆ ಜನರಿಗೆ ಪ್ರತಿಜ್ಞೆ ಬೋಧಿಸುವಾಗ ನಿಮ್ಮ ಬಹಳ ದೊಡ್ಡ ಪ್ರಯತ್ನದಲ್ಲಿ ಭಾಗಿಯಾಗುವ ಅದೃಷ್ಟ ನನಗೆ ಲಭಿಸಿತ್ತು. ಭೂಪೇಂದ್ರ ಭಾಯಿ ಆವರು ಗುಜರಾತಿನ ರಕ್ಷಾ ಶಕ್ತಿ ವಿಶ್ವವಿದ್ಯಾಲಯದ ಬಗ್ಗೆ ಪ್ರಸ್ತಾಪಿಸಿದಂತೆ ಮತ್ತು ನಾನು ಕೂಡಾ ಅದನ್ನು ಪುನರುಚ್ಛರಿಸಲು ಬಯಸುತ್ತೇನೆ ಯಾಕೆಂದರೆ ಈ ಕಾರ್ಯಕ್ರಮವನ್ನು ನೋಡುತ್ತಿರುವವರು ಇದರ ಬಗ್ಗೆ ತಿಳಿದುಕೊಳ್ಳಲಿ ಎಂಬುದಕ್ಕಾಗಿ. ಇಷ್ಟೊಂದು ಸಣ್ಣ ಅವಧಿಯಲ್ಲಿ ಗುಜರಾತ್ ವಿಶ್ವದ ಮೊದಲ ಅಪರಾಧ ವಿಜ್ಞಾನ ವಿಶ್ವವಿದ್ಯಾಲಯವಾದ ರಕ್ಷಾ ಶಕ್ತಿ ವಿಶ್ವವಿದ್ಯಾಲಯದಂತಹ ಉಪಕ್ರಮಗಳ ಮೂಲಕ ಹೊಸ ಹಾದಿಯನ್ನು ತೋರಿಸಿತು. ಕಾನೂನು ವಿಶ್ವವಿದ್ಯಾಲಯ ಮತ್ತು ದೀನ ದಯಾಳ ಇಂಧನ ವಿಶ್ವವಿದ್ಯಾಲಯ, ವಿಶ್ವದ ಮೊದಲ ಮಕ್ಕಳ ವಿಶ್ವವಿದ್ಯಾಲಯ, ಶಿಕ್ಷಕರ ತರಬೇತಿ ವಿಶ್ವವಿದ್ಯಾಲಯ, ಕ್ರೀಡಾ ವಿಶ್ವವಿದ್ಯಾಲಯ, ಕಾಮಧೇನು ವಿಶ್ವವಿದ್ಯಾಲಯ ಇತ್ಯಾದಿಗಳ ಮೂಲಕ ಅದು ಹೊಸ ಉಪಕ್ರಗಳನ್ನು ಕೈಗೊಂಡಿದೆ. ಇಂದು ಗುಜರಾತಿನ ಯುವ ತಲೆಮಾರು ಈ ಎಲ್ಲಾ ಪ್ರಯತ್ನಗಳ ಪ್ರಯೋಜನವನ್ನು ಪಡೆಯುತ್ತಿದೆ. ನಿಮ್ಮಲ್ಲಿ ಬಹುತೇಕ ಮಂದಿಗೆ ಈ ಉಪಕ್ರಮಗಳು ತಿಳಿದಿರಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ಭುಪೇಂದ್ರ ಭಾಯಿ ಕೂಡಾ ಅವುಗಳನ್ನು ಉಲ್ಲೇಖಿಸಿದರು. ಆದರೆ ನಾನು ಈ ಸಂಗತಿಗಳನ್ನು ನಿಮ್ಮೆದುರು ಪುನರುಚ್ಛರಿಸುತ್ತಿದ್ದೇನೆ, ಯಾಕೆಂದರೆ ನೀವು ನನಗೆ ಪೂರ್ಣ ಹೃದಯದ ಬೆಂಬಲ ನೀಡಿದ್ದೀರಿ ಮತ್ತು ಆ ಪ್ರಯತ್ನಗಳಿಂದ ಗಳಿಸಿದ ಅನುಭವ ಇಂದು ದೇಶದಲ್ಲಿ ಬಹಳ ದೊಡ್ಡ ಬದಲಾವಣೆಗಳನ್ನು ತರಲು ಕಾರಣವಾಗಿದೆ.
ಸ್ನೇಹಿತರೇ,
ಇಂದು ದೇಶದ ಶಿಕ್ಷಣ ವ್ಯವಸ್ಥೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಆಧುನೀಕರಣಗೊಳ್ಳುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿಯೂ ವೃತ್ತಿಪರ ಕೋರ್ಸುಗಳ ಬೋಧನೆಗೆ ಅವಕಾಶವಿದೆ. ಇದರ ಪರಿಣಾಮ ಎಷ್ಟು ಬೃಹತ್ ಪ್ರಮಾಣದಲ್ಲಾಗುತ್ತದೆ ಎಂಬುದನ್ನು ಬರೇ ಕೆಲವೇ ಕೆಲವು ಮಂದಿ ಮಾತ್ರವೇ ತಿಳಿದುಕೊಳ್ಳಬಲ್ಲರು. ಹಳ್ಳಿಯ ಮಗುವೊಂದು ಮತ್ತು ಬಡ ಮಗು ಕೂಡಾ ತನ್ನ ಕನಸನ್ನು ನನಸು ಮಾಡಿಕೊಳ್ಳುವುದು ಈಗ ಸಾಧ್ಯವಿದೆ. ಭಾಷೆ ಆ ಮಗುವಿನ ಜೀವನಕ್ಕೆ ಒಂದು ಅಡ್ಡಿಯಾಗುವುದಿಲ್ಲ. ಈಗ ಅಧ್ಯಯನ ಪದವಿಗಳಿಗೆ ಮಾತ್ರ ಸೀಮಿತವಲ್ಲ. ಬದಲು ಅವುಗಳನ್ನು ಕೌಶಲ್ಯಗಳ ಜೊತೆ ಜೋಡಿಸಲಾಗುತ್ತಿದೆ. ದೇಶವು ತನ್ನ ಸಾಂಪ್ರದಾಯಿಕ ಕೌಶಲ್ಯಗಳನ್ನು ಆಧುನಿಕ ಸಾಧ್ಯತೆಗಳ ಜೊತೆ ಜೋಡಿಸುತ್ತಿದೆ.
ಸ್ನೇಹಿತರೇ,
ನೀವಲ್ಲದೆ ಬೇರೆ ಯಾರು ಕೌಶಲ್ಯಗಳ ಮಹತ್ವವನ್ನು ತಿಳಿದುಕೊಳ್ಳಬಲ್ಲರು?. ಅದಾವುದೋ ಒಂದು ಕಾಲಘಟ್ಟದಲ್ಲಿ ನಿಮ್ಮಲ್ಲಿ ಬಹುತೇಕ ಜನರು ಸೌರಾಷ್ಟ್ರದಲ್ಲಿ ನಿಮ್ಮ ಮನೆಗಳನ್ನು, ಗದ್ದೆ ತೋಟಗಳನ್ನು, ಸಂಬಂಧಿಕರು ಮತ್ತು ಸ್ನೇಹಿತರನ್ನು ಬಿಟ್ಟು ಸೂರತ್ತಿಗೆ ವಜ್ರವನ್ನು ಕೆತ್ತಲು ಬಂದಿರಿ. ಎಂಟರಿಂದ ಹತ್ತು ಜನರು ಸಣ್ಣ ಕೋಣೆಯಲ್ಲಿ ಬದುಕುತ್ತಿದ್ದಿರಿ. ಆದರೆ ನಿಮ್ಮ ಕೌಶಲ್ಯ ಇಂದು ನಿಮ್ಮ ಬೆಳವಣಿಗೆಗೆ ಕಾರಣವಾಗಿದೆ. ಆದುದರಿಂದ ಪಾಂಡುರಂಗ ಶಾಸ್ತ್ರೀ ಜೀ ಅವರು ನಿಮ್ಮನ್ನು ರತ್ನಗಳ ಕರಕುಶಲಗಾರರು ಎಂದು ಕರೆದರು. ನಮ್ಮ ಕಾಂಜಿ ಸಹೋದರ ತಾನೇ ಒಂದು ಉದಾಹರಣೆಯಾಗಿದ್ದಾರೆ. ಅವರ ವಯಸ್ಸು ಎಷ್ಟೇ ಆಗಿರಲಿ, ಅವರು ನಿರಂತರ ಅಧ್ಯಯನ ಮಾಡಿ ಹೊಸ ಕೌಶಲ್ಯಗಳನ್ನು ಸೇರಿಸಿಕೊಳ್ಳುತ್ತಲೇ ಬಂದಿದ್ದಾರೆ. ಇಂದೂ ಕೂಡಾ ನೀವು ಕಾಂಜಿ ಭಾಯಿ ಅವರನ್ನು ಕೇಳಿದರೆ ಅವರು ಏನನ್ನೋ ಕಲಿಯುತ್ತಾ ಇರಬಹುದು. ಇದು ಬಹಳ ಪ್ರೇರಣೆ ನೀಡುವಂತಹ ಸಂಗತಿ.
ಸ್ನೇಹಿತರೇ,
ಕೌಶಲ್ಯ ಮತ್ತು ಪರಿಸರ ವ್ಯವಸ್ಥೆ ಒಟ್ಟು ಸೇರಿದರೆ ಇಂದಿನ ನವ ಭಾರತದ ಶಿಲಾನ್ಯಾಸ ಮಾಡಿದಂತಾಗುತ್ತದೆ. ಭಾರತದಲ್ಲಿ ನವೋದ್ಯಮಗಳ ಯಶೋಗಾಥೆ ನಮ್ಮೆದುರು ಇದೆ. ಇಂದು ಭಾರತದ ನವೋದ್ಯಮಗಳು ಜಗತ್ತಿನಾದ್ಯಂತ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಮತ್ತು ನಮ್ಮ ಯೂನಿಕಾರ್ನ್ ಗಳು ದಾಖಲೆಗಳನ್ನು ಬರೆಯುತ್ತಿವೆ. ಭಾರತದ ಬಗ್ಗೆ ಇಡೀ ಜಗತ್ತಿಗೆ ಭಾರೀ ಭರವಸೆ ಇದೆ. ಕೊರೊನಾದ ಕಷ್ಟದ ಸಮಯದ ಬಳಿಕ ನಮ್ಮ ಆರ್ಥಿಕತೆ ಬಹಳ ವೇಗದಲ್ಲಿ ಚೇತರಿಸಿಕೊಂಡಿದೆ. ಇತ್ತೀಚೆಗೆ ಜಾಗತಿಕ ಸಂಘಟನೆಯೊಂದು ಭಾರತವು ಮತ್ತೆ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ ಎಂದು ಹೇಳಿದೆ. ನನಗೆ ಖಚಿತವಿದೆ, ಗುಜರಾತ್ ಈ ಹಿಂದಿನಂತೆ ಸದಾ ಅತ್ಯುತ್ತಮವಾಗಿರುತ್ತದೆ ಮತ್ತು ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ತನ್ನ ಪ್ರಯತ್ನಗಳಲ್ಲಿ ಅತ್ಯುತ್ತಮವಾದುದನ್ನು ಅಡಕಗೊಳಿಸಿಕೊಂಡಿರುತ್ತದೆ. ಈಗ ಭೂಪೇಂದ್ರ ಭಾಯಿ ಪಟೇಲ್ ಜೀ ಮತ್ತು ಅವರ ಇಡೀ ತಂಡ ಗುಜರಾತಿನ ಈ ಪ್ರಗತಿಯ ಆಂದೋಲನಕ್ಕೆ ಹೊಸ ಶಕ್ತಿ ನೀಡಲು ಬದ್ಧವಾಗಿದೆ.
ಸ್ನೇಹಿತರೇ,
ಈ ರೀತಿಯಾಗಿ ನಾನಿಂದು ಭೂಪೇಂದ್ರ ಭಾಯಿ ಅವರ ನಾಯಕತ್ವದಲ್ಲಿ ಹೊಸ ಸರಕಾರ ರಚನೆಯಾದ ಬಳಿಕ ಬಹಳ ದೀರ್ಘವಾಗಿ ಗುಜರಾತಿನ ಜನತೆಯನ್ನು ಉದ್ದೇಶಿಸಿ ಮಾತನಾಡುವ ಅವಕಾಶವನ್ನು ಪಡೆದಿದ್ದೇನೆ. ಸಹ ಕಾರ್ಯಕರ್ತರಾಗಿ ಭೂಪೇಂದ್ರ ಭಾಯಿ ಅವರ ಜೊತೆ ನನ್ನ ಸಾಹಚರ್ಯ 25 ವರ್ಷಕ್ಕಿಂತಲೂ ಹಳೆಯದು. ತಂತ್ರಜ್ಞಾನದಲ್ಲಿ ಬಹಳ ಪ್ರಾವೀಣ್ಯತೆ ಹೊಂದಿರುವ ಮತ್ತು ಅದೇ ಕಾಲಕ್ಕೆ ವಾಸ್ತವದ ಸ್ಥಿತಿಯನ್ನು ಅರಿತಿರುವ ಭೂಪೇಂದ್ರ ಭಾಯಿ ಅವರು ಮುಖ್ಯಮಂತ್ರಿ ಆಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ವಿವಿಧ ಸ್ಥರಗಳಲ್ಲಿ ಅವರು ಕೆಲಸ ಮಾಡಿ ಪಡೆದಿರುವ ಅನುಭವ ಗುಜರಾತಿನ ಅಭಿವೃದ್ಧಿಯಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ. ಕಳೆದ 25 ವರ್ಷಗಳಲ್ಲಿ ಅವರು ಮೊದಲು ಸಣ್ಣ ಪುರಸಭೆಯ ಸದಸ್ಯರಾಗಿ, ಬಳಿಕ ಪುರಸಭೆಯ ಅಧ್ಯಕ್ಷರಾಗಿ, ಅಹ್ಮದಾಬಾದ್ ಮಹಾನಗರಪಾಲಿಕೆಯ ಕಾರ್ಪೋರೇಟರ್ ಆಗಿ ಬಳಿಕ ಅಹ್ಮದಾಬಾದ್ ಮಹಾನಗರ ಪಾಲಿಕೆಯ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಮತ್ತು ಬಳಿಕ ಪ್ರತಿಷ್ಟಿತ ಎ.ಯು.ಡಿ.ಎ.ಯಂತಹ ಸಂಸ್ಥೆಯ ಅಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ ಮತ್ತು ಅವರು ಗಳಿಸಿರುವ ತಳಮಟ್ಟದ ಅನುಭವದಿಂದಾಗಿ ಮತ್ತು ಆಡಳಿತಾನುಭವದಿಂದಾಗಿ ಇಂತಹ ಅನುಭವೀ ವ್ಯಕ್ತಿ ಗುಜರಾತಿನ ಅಭಿವೃದ್ಧಿಯ ಪ್ರಯಾಣಕ್ಕೆ ತ್ವರಿತಗತಿಯನ್ನು ತಂದುಕೊಡುವಲ್ಲಿ ಮುಂಚೂಣಿ ನಾಯಕತ್ವ ವಹಿಸಿರುವುದಕ್ಕೆ ನನಗೆ ಬಹಳ ಸಂತೋಷವಿದೆ.
ಸ್ನೇಹಿತರೇ,
ಬಹಳ ದೀರ್ಘಕಾಲದ ಸಾರ್ವಜನಿಕ ಜೀವನದಲ್ಲಿ ಭೂಪೇಂದ್ರ ಭಾಯಿ ಅವರು ಕಳಂಕರಹಿತ ದಾಖಲೆಯನ್ನು ಹೊಂದಿರುವುದಕ್ಕೆ ಪ್ರತಿಯೊಬ್ಬ ಗುಜರಾತಿಯೂ ಬಹಳ ಹೆಮ್ಮೆ ಪಡುತ್ತಾರೆ. ಇಂತಹ ಉನ್ನತ ಸ್ಥಾನ ಮಾನಗಳನ್ನು ಹೊಂದಿಯೂ, 25 ವರ್ಷಗಳ ಕಾಲ ಕೆಲಸ ಮಾಡುತಿದ್ದರೂ ಭೂಪೇಂದ್ರ ಭಾಯಿ ಬಹಳ ಕಡಿಮೆ ಮಾತನಾಡುತ್ತಾರೆ ಆದರೆ ತಮ್ಮ ಕೆಲಸದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅವರೊಬ್ಬ ಮೌನಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಾರೆ. ಮೌನಿ ಸೇವಕನಂತೆ ಅವರ ಕೆಲಸದ ಶೈಲಿ ಇರುತ್ತದೆ. ಭೂಪೇಂದ್ರ ಭಾಯಿ ಅವರ ಕುಟುಂಬ ಆಧ್ಯಾತ್ಮಿಕತೆಗೆ ಅರ್ಪಿಸಿಕೊಂಡಿದೆ ಎಂಬುದು ಬಹಳ ಕಡಿಮೆ ಮಂದಿಗೆ ಗೊತ್ತಿದೆ. ಅವರ ತಂದೆ ಆಧ್ಯಾತ್ಮಿಕ ಕ್ಷೇತ್ರದ ಜೊತೆ ಸಂಪರ್ಕ ಹೊಂದಿದ್ದರು. ಗುಜರಾತ್, ಬಹಳ ಉತ್ತಮ ಮೌಲ್ಯಗಳನ್ನು ಹೊಂದಿರುವ ಭೂಪೇಂದ್ರ ಭಾಯಿ ಅವರ ನಾಯಕತ್ವದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.
ಸ್ನೇಹಿತರೇ,
ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿ ನಿಮ್ಮೆಲ್ಲರಲ್ಲಿಯೂ ನನ್ನ ಕೋರಿಕೆಯೊಂದಿದೆ. ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ನೀವೆಲ್ಲರೂ ದೃಢ ನಿರ್ಧಾರಗಳನ್ನು ಮಾಡಬೇಕು ಮತ್ತು ದೇಶಕ್ಕಾಗಿ ಏನನ್ನಾದರೂ ನೀಡಲು ಆಂದೋಲನವನ್ನು ಕೈಗೊಳ್ಳಬೇಕು. ಈ ಆಂದೋಲನ ಎಂತಹದಿರಬೇಕು ಎಂದರೆ ಅದರ ಪರಿಣಾಮ ಗುಜರಾತಿನ ಮೂಲೆ ಮೂಲೆಗಳಲ್ಲೂ ಕಾಣಸಿಗುವಂತಿರಬೇಕು. ನನಗೆ ನಿಮ್ಮ ಸಾಮರ್ಥ್ಯ ಗೊತ್ತಿದೆ. ಮತ್ತು ನೀವಿದನ್ನು ಒಗ್ಗೂಡಿ ಮಾಡಬಲ್ಲಿರಿ. ನಿಮ್ಮ ಪ್ರಯತ್ನದ ಪ್ರಮುಖ ಭಾಗ ನಮ್ಮ ಹೊಸ ತಲೆಮಾರನ್ನು ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಬದುಕುವಂತೆ ಪ್ರೇರಣೆ ನೀಡುವಂತಹದಾಗಿರಬೇಕು. “ಸೇವಾ ಸೇ ಸಿದ್ದಿ” ಮಂತ್ರವನ್ನು ಅನುಸರಿಸಿ ನಾವು ಗುಜರಾತನ್ನು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ. ಬಹಳ ಕಾಲದ ಬಳಿಕ ನಿಮ್ಮೊಂದಿಗೆ ಇರುವಂತಹ ಅದೃಷ್ಟ ಪಡೆದಿದ್ದೇನೆ ಮತ್ತು ನಾನು ನಿಮ್ಮೆಲ್ಲರನ್ನೂ ಗಮನಿಸುತ್ತಿದ್ದೇನೆ ಮತ್ತು ನನ್ನೆದುರು ಹಳೆಯ ಮುಖಗಳಿವೆ, ಅವುಗಳನ್ನು ನೋಡುತ್ತಿದ್ದೇನೆ.
ಈ ಶುಭ ಹಾರೈಕೆಗಳೊಂದಿಗೆ, ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು!.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1768897)
Visitor Counter : 198
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Telugu
,
Malayalam