ಪ್ರಧಾನ ಮಂತ್ರಿಯವರ ಕಛೇರಿ

ಜಿ20 ಶೃಂಗಸಭೆಯ 2ನೇ ಅಧಿವೇಶನ: ʻಹವಾಮಾನ ಬದಲಾವಣೆ ಮತ್ತು ಪರಿಸರʼ ಕುರಿತು ಪ್ರಧಾನಮಂತ್ರಿಯವರ ಭಾಷಣ

Posted On: 31 OCT 2021 11:50PM by PIB Bengaluru

ಘನತೆವೆತ್ತ ನಾಯಕರೇ,

ಇಂದು ಜಿ-20 ರಾಷ್ಟ್ರಗಳ ಉಪಸ್ಥಿತಿಯ ನಡುವೆ ಇರುವ ನಾನು, ಹವಾಮಾನ ಉಪಕ್ರಮಗಳ ವಿಚಾರದಲ್ಲಿ ನನ್ನ ಎರಡು ಪ್ರಮುಖ ಜವಾಬ್ದಾರಿಗಳ ಕುರಿತ ಅಂಶಗಳನ್ನು ಸಂಪೂರ್ಣ ಸಂವೇದನಾಶೀಲತೆಯಿಂದ ಪ್ರಸ್ತುತಪಡಿಸಲು ಬಯಸುತ್ತೇನೆ. ಇದರಲ್ಲಿ ಮೊದಲ ಜವಾಬ್ದಾರಿಯೆಂದರೆ ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವುದು (ಕ್ಲೈಮೇಟ್‌ ಮಿಟಿಗೇಶನ್‌). ಇದು ಸಾವಿರಾರು ವರ್ಷಗಳ ಹಳೆಯ ಭಾರತೀಯ ಸಂಪ್ರದಾಯದಿಂದ ಪ್ರೇರಿತವಾಗಿದೆ. ನಾವು ವಿಷಯದಲ್ಲಿ ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ ಮುಂದುವರಿಯುತ್ತಿದ್ದೇವೆ. ನಾವು ʻಪ್ಯಾರಿಸ್ ಒಪ್ಪಂದʼ ವೇಳೆ ನಮ್ಮ ಗುರಿಗಳನ್ನು ಘೋಷಿಸಿದಾಗ, ಭಾರತವು 175 ಗಿಗಾ ವ್ಯಾಟ್‌ (GW) ನವೀಕರಿಸಬಹುದಾದ ಇಂಧನದಂತಹ ಬೃಹತ್‌ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆಯೇ ಎಂದು ಅನೇಕರು ಕೇಳಿದರು. ಆದರೆ ಭಾರತ ಗುರಿಗಳನ್ನು ವೇಗವಾಗಿ ಸಾಧಿಸುವುದು ಮಾತ್ರವಲ್ಲದೆ ಮತ್ತಷ್ಟು ಎತ್ತರದ ಗುರಿಗಳನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ʻಪ್ಯಾರಿಸ್ ಒಪ್ಪಂದದʼ ಬದ್ಧತೆಗಳಿಗೆ ಮಿಗಿಲಾಗಿ ಭಾರತವು 26 ದಶಲಕ್ಷ ಹೆಕ್ಟೇರ್ ಬಂಜರು ಭೂಮಿಗಳ ಪುನಶ್ಚೇತನದ ಗುರಿಯನ್ನು ಹೊಂದಿದೆ. ಪ್ರತಿ ವರ್ಷ ಸರಾಸರಿ 8 ಶತಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿರುವ, ವಿಶ್ವದ ಅತಿದೊಡ್ಡ ರೈಲ್ವೆ ಸಂಪರ್ಕ ಜಾಲವೆನಿಸಿರುವ ಭಾರತೀಯ ರೈಲ್ವೆ, '2030 ವೇಳೆಗೆ ನಿವ್ವಳ ಶೂನ್ಯʼ ಸಂಕಲ್ಪ ತೊಟ್ಟಿದೆ. ನಿರ್ಧಾರದೊಂದಿಗೆ, ಭಾರತೀಯ ರೈಲ್ವೆಯು ವರ್ಷಕ್ಕೆ 60 ದಶಲಕ್ಷ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುತ್ತದೆ. ನಾವು 2025 ವೇಳೆಗೆ ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣದ ಗುರಿಯತ್ತ ಕೆಲಸ ಮಾಡುತ್ತಿದ್ದೇವೆ. ದೇಶದಲ್ಲಿ ಏಷ್ಯಾಟಿಕ್ ಸಿಂಹಗಳು, ಹುಲಿಗಳು, ಘೇಂಡಾಮೃಗ ಮತ್ತು ಡಾಲ್ಫಿನ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಇದರೊಂದಿಗೆ  ಪರಿಸರವನ್ನು ರಕ್ಷಿಸುವ ನಮ್ಮ ಬದ್ಧತೆಯು ಕೇವಲ ಇಂಧನ ಕುರಿತ ಚರ್ಚೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಭಾರತ ಸಾಬೀತುಪಡಿಸಿದೆ. ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವ ಜವಾಬ್ದಾರಿಯಿಂದ ಭಾರತ ಎಂದಿಗೂ ಹಿಂದೆ ಸರಿದಿಲ್ಲ, ಅಥವಾ ಅದು ಎಂದಿಗೂ ಹಿಂತಿರುಗುವುದಿಲ್ಲ. ಹಲವು ವರ್ಷಗಳಿಂದ ಮಾಡಿದ ಪ್ರಯತ್ನಗಳಿಂದಾಗಿ, ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಚಾರದಲ್ಲಿ ಇಂದು ಭಾರತವು ವಿಶ್ವದ ಅಗ್ರ 5 ದೇಶಗಳಲ್ಲಿ ಒಂದಾಗಿದೆ. ಭಾರತದ ಯಶಸ್ಸನ್ನು ಜಗತ್ತು ಸಹ ಗುರುತಿಸಿದೆ. ಅಮೆರಿಕ, ಫ್ರಾನ್ಸ್, ಬ್ರಿಟನ್‌ ಮತ್ತು ಸ್ವೀಡನ್ ನಂತಹ ದೇಶಗಳು ʻಐಎಸ್ಎʼ ಮತ್ತು ʻಸಿಆರ್‌ಡಿಐʼನಂತಹ ನಮ್ಮ ಅನೇಕ

ಉಪಕ್ರಮಗಳಲ್ಲಿ ಪಾಲುದಾರಿಕೆಯನ್ನೂ ಪಡೆದಿವೆ.

ಘನತೆವೆತ್ತ ನಾಯಕರೇ,

ನನ್ನ ಎರಡನೇ ಜವಾಬ್ದಾರಿ - ʻಹವಾಮಾನ ನ್ಯಾಯʼ ಬಗ್ಗೆ ಯೋಚಿಸುವಾಗ ನನ್ನ ಹೃದಯದಲ್ಲಿ ನೋವು ಸಹ ಇದೆ. ʻಹವಾಮಾನ ನ್ಯಾಯʼವನ್ನು ಮರೆಯುವ ಮೂಲಕ, ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನ್ಯಾಯ ಮಾಡುತ್ತಿದ್ದೇವೆ ಮಾತ್ರವಲ್ಲ, ನಾವು ಇಡೀ ಮಾನವಕುಲಕ್ಕೆ ದ್ರೋಹ ಬಗೆಯುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಹಣಕಾಸಿನ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿರುವ ಭಾರತವು ಕಡೆಗಣಿಸಲು ಸಾಧ್ಯವಿಲ್ಲ. ಹವಾಮಾನ ಹಣಕಾಸಿನ ವಿಚಾರದಲ್ಲಿ ಯಾವುದೇ ದೃಢವಾದ ಪ್ರಗತಿಯಿಲ್ಲದೆ, ಹವಾಮಾನ ಉಪಕ್ರಮಕ್ಕಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಒತ್ತಡ ಹೇರುವುದು ಅನ್ಯಾಯ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಸುರು ಯೋಜನೆಗಳಿಗೆ ಹಣಕಾಸು ಒದಗಿಸಲು ತಮ್ಮ ಜಿಡಿಪಿಯ ಕನಿಷ್ಠ ಶೇಕಡಾ 1 ರಷ್ಟನ್ನು ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿರಬೇಕು ಎಂದು ನಾನು ಸೂಚಿಸುತ್ತೇನೆ.

ಘನತೆವೆತ್ತ ನಾಯಕರೇ,

ಜಿ-20 ಪಾಲುದಾರರ ಮುಂದೆ ಮೂರು ಕಾರ್ಯಸಾಧ್ಯ ಅಂಶಗಳನ್ನು ಪ್ರಸ್ತುತಪಡಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ಜಿ-20 ದೇಶಗಳು 'ಶುದ್ಧ ಇಂಧನ ಯೋಜನೆಗಳ ನಿಧಿ'ಯನ್ನು ಸ್ಥಾಪಿಸಬೇಕು, ಇದನ್ನು ಇನ್ನೂ ಉತ್ತುಂಗ ಕಂಡುಬರದ ದೇಶಗಳಲ್ಲಿ ಬಳಸಬಹುದು. ನಿಧಿಯು ʻಐಎಸ್ಎʼನಂತಹ ಇತರ ಸಂಸ್ಥೆಗಳನ್ನು ಸಹ ಬೆಂಬಲಿಸಬಹುದು. ಎರಡನೆಯದಾಗಿ, ನಾವು ಜಿ-20 ದೇಶಗಳಲ್ಲಿ ಶುದ್ಧ-ಇಂಧನದ ಮೇಲೆ ಕೆಲಸ ಮಾಡುವ ಸಂಶೋಧನಾ ಸಂಸ್ಥೆಗಳ ಜಾಲವನ್ನು ರಚಿಸಬೇಕು, ಜಾಲವು ಹೊಸ ತಂತ್ರಜ್ಞಾನಗಳು ಮತ್ತು ಅವುಗಳ ನಿಯೋಜನೆ ಸಂಬಂಧಿತ ಉತ್ತಮ ಕಾರ್ಯವಿಧಾನಗಳ ಮೇಲೆ ಕೆಲಸ ಮಾಡಬೇಕು. ಮೂರನೆಯದಾಗಿ, ಜಿ-20 ರಾಷ್ಟ್ರಗಳು ಹಸುರು ಹೈಡ್ರೋಜನ್ ಕ್ಷೇತ್ರದಲ್ಲಿ ಜಾಗತಿಕ ಮಾನದಂಡಗಳನ್ನು ರಚಿಸಲು ಮತ್ತು ಮೂಲಕ ಅದರ ಉತ್ಪಾದನೆ ಹಾಗೂ ಬಳಕೆಯನ್ನು ಉತ್ತೇಜಿಸಲು ಒಂದು ಸಂಸ್ಥೆಯನ್ನು ಸ್ಥಾಪಿಸಬೇಕು. ಎಲ್ಲ ಪ್ರಯತ್ನಗಳಿಗೆ ಭಾರತವೂ ಸಂಪೂರ್ಣ ಕೊಡುಗೆ ನೀಡುತ್ತದೆ.

ಧನ್ಯವಾದಗಳು.

ಗಮನಿಸಿ: ಇದು ಪ್ರಧಾನ ಮಂತ್ರಿಯವರ ಹೇಳಿಕೆಗಳ ಭಾವಾನುವಾದವಾಗಿದೆ. ಮೂಲ ಭಾಷಣವು ಹಿಂದಿಯಲ್ಲಿತ್ತು.

***



(Release ID: 1768893) Visitor Counter : 144