ಉಕ್ಕು ಸಚಿವಾಲಯ

ಎಲ್ಲ ವರ್ಗದ ಜನರಿಗೆ ತರಬೇತಿಯ ಮಹತ್ವವನ್ನು ಪ್ರತಿಪಾದಿಸಿದ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್

Posted On: 01 NOV 2021 10:55AM by PIB Bengaluru

ಕೇಂದ್ರ ಉಕ್ಕು ಸಚಿವ ಗೌರವಾನ್ವಿತ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ನಿನ್ನೆ ನಾಗ್ಪುರದ ನೇರ ತೆರಿಗೆಗಳ ರಾಷ್ಟ್ರೀಯ ಅಕಾಡೆಮಿಗೆ ಭೇಟಿ ನೀಡಿದ್ದರು. ಅವರನ್ನು ಅಕಾಡೆಮಿಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ (ತರಬೇತಿ) ಶ್ರೀಮತಿ ರುಬಿ ಶ್ರೀವಾತ್ಸವ ಮತ್ತು ಇತರೆ ಬೋಧನಾ ಸಿಬ್ಬಂದಿ ಸ್ವಾಗತಿಸಿದರು.

2021ರ ಅಕ್ಟೋಬರ್ 31ರಂದು ಭಾನುವಾರು ಅವರು ಎನ್ ಎಡಿಟಿಗೆ ಭೇಟಿ ನೀಡಿದ್ದಾಗ ಅವರನ್ನು ಎನ್ ಎಡಿಟಿ ಕ್ಯಾಂಪಸ್ ನ ಆಡಳಿತ ಕಚೇರಿಯ ಆರ್ಕೈವ್ಸ್ ವಿಭಾಗಕ್ಕೆ ಕರೆದೊಯ್ಯಲಾಯಿತು. ಆರ್ಕೈವ್ಸ್ ಆದಾಯ ತೆರಿಗೆ ಇಲಾಖೆಯಲ್ಲಿನ ತರಬೇತಿ ಇತಿಹಾಸವನ್ನು ಒಳಗೊಂಡಿದೆ ಮತ್ತು ಅದನ್ನು ಪ್ರದರ್ಶಿಸುತ್ತದೆ.ಸಚಿವರು ಆಕಾಡೆಮಿಯ ಆವರಣದೊಳಗೆ ಸುತ್ತಾಡಿದ ಅನಂತರ ಬೋಧಕ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಮೂಲಸೌಕರ್ಯ ಮತ್ತು ಅಭಿವೃದ್ಧಿಗಾಗಿ ಮತ್ತು ಅದು ಎನ್ ಎಡಿಟಿ ನೀಡುತ್ತಿರುವ ತರಬೇತಿ ಮೇಲೆ ಬೀರುತ್ತಿರುವ ಪರಿಣಾಮಕ್ಕಾಗಿ ಎನ್ ಎಡಿಟಿ ತಂಡವನ್ನು ಸಚಿವರು ಅಭಿನಂದಿಸಿದರು. ಪ್ರಶಿಕ್ಷಣಾರ್ಥಿಗಳಿಗೆ ಮತ್ತು ಸಮಾಜದ ಎಲ್ಲ ವರ್ಗದ ಜನರಿಗೆ ತರಬೇತಿಯ ಪ್ರಾಮುಖ್ಯವನ್ನು ಪ್ರಮುಖವಾಗಿ ಪ್ರತಿಪಾದಿಸಿದ ಶ್ರೀ ಸಿಂಗ್ ಅವರು, ಉತ್ತಮ ಪದ್ದತಿಗಳ ಹಂಚಿಕೆಗೆ ಸಂಬಂಧಿಸಿದಂತೆ, ನಡೆವಳಿಕೆಯ ತರಬೇತಿ, ಸಂವಾದಾತ್ಮಕ ತರಬೇತಿ ಮತ್ತು ಇತ್ತೀಚಿನ ಕಾನೂನು ಸ್ಥಿತಿಗತಿ ಬಗ್ಗೆ ಮಾಹಿತಿ ವಿನಿಮಯ ಸೇರಿದಂತೆ ಸಂಭಾವ್ಯ ತರಬೇತಿ ಆಯಾಮಗಳ ಕುರಿತು  ಸಂಕ್ಷಿಪ್ತವಾಗಿ ವಿವರಿಸಿದರು. ದೈಹಿಕ ಮತ್ತು  ಮಾನಸಿಕ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಪ್ರೇರಕವಾಗಿ ತರಬೇತುದಾರರ ಪಾತ್ರವನ್ನು ಅವರು ಒತ್ತಿ ಹೇಳಿದರು.

ಶ್ರೀ ಸಿಂಗ್ ಅವರು 1984ರ ಬ್ಯಾಚ್ ನ  ಉತ್ತರಪ್ರದೇಶ ವೃಂದದ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ನಾನಾ ಹುದ್ದೆಗಳಲ್ಲಿ ಮತ್ತು ಸ್ಥಾನಗಳಲ್ಲಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ರಾಜ್ಯ ಮತ್ತು ಕೇಂದ್ರಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು. ಅವರು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಉತ್ತರಪ್ರದೇಶದ ರಾಮ್ ಪುರ, ಬಾರಾಬಂಕಿ, ಹಮೀರ್ ಪುರ್ ಮತ್ತು ಫತೇಪುರ್ ಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು, ಯುಪಿ ಕೈಮಗ್ಗ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು 2001-2005ರವರೆಗೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಹೆಚ್ಚುವರಿ ಸಿಇಒ ಆಗಿದ್ದರು. 

ಶ್ರೀ ಸಿಂಗ್ ಅವರು ಐಎಎಸ್ ನಲ್ಲಿ ಯುಪಿ ವೃಂದ ಸೇರುವ ಮುನ್ನ ಭಾರತೀಯ ಕಂದಾಯ ಸೇವೆಗೆ ನೇಮಕಗೊಂಡಿದ್ದರು ಮತ್ತು ನಾಗ್ಪುರದ ನೇರ ತೆರಿಗೆಗಳ ರಾಷ್ಟ್ರೀಯ ಅಕಾಡೆಮಿಯಲ್ಲಿ 1982ನೇ ಬ್ಯಾಚ್ ನ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿ ತರಬೇತಿ ಪಡೆದಿದ್ದರು. 2010ರಲ್ಲಿ ಐಎಎಸ್ ನಿಂದ ಸ್ವಯಂ ನಿವೃತ್ತಿ ಪಡೆದ ಅವರು, ಸಕ್ರಿಯ ರಾಜಕೀಯ ಪ್ರವೇಶಿಸಿದರು ಮತ್ತು 2010ರ ಜೂನ್ ನಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಅನಂತರ ಸಂಸತ್ತಿನ ಪ್ರತಿಷ್ಠಿತ ಸಮಿತಿಗಳ ಸದಸ್ಯರಾಗಿ ರಾಷ್ಟ್ರಮಟ್ಟದಲ್ಲಿ ನೀತಿ ನಿರೂಪಣೆ ಮತ್ತು ಆಡಳಿತಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಅವರು ರೈಲ್ವೆ, ಡಿಒಪಿಟಿ ಮತ್ತು ಗೃಹ ಸ್ಥಾಯಿ ಸಮಿತಿ, ವಿದೇಶಾಂಗ ವ್ಯವಹಾರಗಳ ಮತ್ತು ಗೃಹ ಸಚಿವಾಲಯದ ಸಲಹಾ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ  ಸಲ್ಲಿಸಿದ್ದಾರೆ. ಅವರು 2018ರ ಸೆಪ್ಟಂಬರ್ ನಿಂದ 2019ರ ಮೇ ತಿಂಗಳವರೆಗೆ ಕೈಗಾರಿಕಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

***



(Release ID: 1768448) Visitor Counter : 180