ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೃತಕ ಬುದ್ಧಿಮತ್ತೆಯು ಭಾರತೀಯ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಚಾಲಕ ಶಕ್ತಿಯಾಗಿದೆ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
Posted On:
27 OCT 2021 4:16PM by PIB Bengaluru
"ಕೃತಕ ಬುದ್ಧಿಮತ್ತೆಯು ಭಾರತೀಯ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಚಾಲಕ ಶಕ್ತಿಯಾಗಿದೆ” ಎಂದು ಭಾರತ ಸರಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (ಎಂಇಐಟಿವೈ) ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು. ʻಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿʼಯ(ಅಸೋಚಾಮ್) 5ನೇ ಸಮ್ಮೇಳನದಲ್ಲಿ ʻಸ್ಥಿತಿಸ್ಥಾಪಕ ಬೆಳವಣಿಗೆಗಾಗಿ ಕೃತಕ ಬುದ್ಧಿಮತ್ತೆʼ ಎಂಬ ವಿಷಯದ ಬಗ್ಗೆ ವರ್ಚ್ಯಯಲ್ ವಿಚಾರಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೃತಕ ಬುದ್ಧಿಮತ್ತೆಯು (ಎಐ) ಕೆಲವರಿಗೆ ದೊಡ್ಡ ವ್ಯವಹಾರವಾಗಬಹುದು, ಆದರೆ ಭಾರತ ಸರಕಾರದ ಪಾಲಿಗೆ ಮಾತ್ರ ಕೃತಕ ಬುದ್ಧಿಮತ್ತೆ ಬಳಕೆ ಎಂದರೆ ಆಡಳಿತ ಒದಗಿಸುವುದು, ಕೃಷಿ ಕಾರ್ಯಕ್ರಮಗಳು, ರಕ್ಷಣೆ, ಭದ್ರತೆ ಮತ್ತು ಗುಪ್ತಚರ ಸಂಬಂಧಿತ ಕಾರ್ಯಕ್ರಮಗಳು, ಆದಾಯ/ತೆರಿಗೆ ಸಂಗ್ರಹಣೆ ಹಾಗೂ ನ್ಯಾಯ ಮತ್ತು ಕಾನೂನಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸುಧಾರಣೆ ಎಂದರ್ಥ. ʻಎಐʼ ಬಗ್ಗೆ ಸರ್ಕಾರದ ಕಾರ್ಯವಿಧಾನವನ್ನು ಹಂಚಿಕೊಂಡ ಅವರು, "ನಾವು, ಅಪಾಯ ನಿರ್ವಹಣೆ ಮತ್ತು ನೈತಿಕ ಬಳಕೆಯ ಗುಣಾತ್ಮಕ ಅಂಶಗಳಾಗಿ ʻಎಐʼ ಅನ್ನು ನಿರ್ಮಿಸುತ್ತೇವೆ” ಎಂದರು.
ಭಾರತದಲ್ಲಿ ʻಎಐʼ ಬೆಳವಣಿಗೆಗೆ ಅದ್ಭುತ ವೇಗವನ್ನು ಸೃಷ್ಟಿಸುವ ಮೂರು ಪ್ರಮುಖ ಅಂಶಗಳನ್ನು ಶ್ರೀ ರಾಜೀವ್ ಚಂದ್ರಶೇಖರ್ ಅವರು ಎತ್ತಿ ತೋರಿಸಿದರು. ಮೊದಲನೆಯದಾಗಿ, ಗ್ರಾಮೀಣ ಬ್ರಾಡ್‌ಬ್ಯಾಂಡ್ ಸಂಪರ್ಕ ಕಾರ್ಯಕ್ರಮವಾದ ʻಭಾರತಗ್‌ನೆಟ್ʼ ಮೂಲಕ ಗ್ರಾಮೀಣ ಕುಟುಂಬಗಳನ್ನು ಅಂತರ್ಜಾಲದೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿರುವುದರಿಂದ ಭಾರತವು ಶೀಘ್ರದಲ್ಲೇ ಅತಿದೊಡ್ಡ ಸಂಪರ್ಕಿತ ರಾಷ್ಟ್ರವಾಗಲಿದೆ ಎಂದು ಅವರು ಉಲ್ಲೇಖಿಸಿದರು. ಪ್ರಸ್ತುತ, ಸುಮಾರು 800 ದಶಲಕ್ಷ ಭಾರತೀಯರು ಇಂಟರ್ನೆಟ್ ಬಳಸುತ್ತಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಈ ಸಂಖ್ಯೆ 100 ಕೋಟಿ ದಾಟುವ ನಿರೀಕ್ಷೆ ಇದೆ. ಎರಡನೆಯದಾಗಿ, ಡಿಜಿಟಲ್ ಇಂಡಿಯಾ ಅಭಿಯಾನವು ಈಗಾಗಲೇ ಸಾರ್ವಜನಿಕ ಸೇವೆಗಳು, ʻಫಿನ್ ಟೆಕ್ʼ, ಆರೋಗ್ಯ ಮತ್ತು ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿನ ಆವಿಷ್ಕಾರದಲ್ಲಿ ಭಾರತವನ್ನು ಮುಂಚೂಣಿ ಸ್ಥಾನದಲ್ಲಿರಿಸಿದೆ. ಮೂರನೆಯದಾಗಿ, ಸರಕಾರ ಮತ್ತು ಒಟ್ಟಾರೆ ಆರ್ಥಿಕತೆಯ ವೇಗವರ್ಧಿತ ಡಿಜಿಟಲೀಕರಣವು ದೇಶದಲ್ಲಿ ಡಿಜಿಟಲ್ ಅಳವಡಿಕೆಯ ದರವನ್ನು ಹೆಚ್ಚಿಸುತ್ತದೆ ಎಂದರು.
ದೇಶವು ಹೊಂದಿರುವ ಸಾಮರ್ಥ್ಯವನ್ನು ವಾಸ್ತವಿಕ ರೂಪಕ್ಕೆ ಸಾಕಾರಗೊಳಿಸುವಲ್ಲಿ ನರೇಂದ್ರ ಮೋದಿ ಸರಕಾರದ ಸಕ್ರಿಯ ಕಾರ್ಯವಿಧಾನವನ್ನೂ ಶ್ರೀ ರಾಜೀವ್ ಚಂದ್ರಶೇಖರ್ ಅವರು ಒತ್ತಿ ಹೇಳಿದರು. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಚಾಲಿತ ಲಸಿಕೆ ಅಭಿಯಾನದ ಯಶಸ್ಸನ್ನು ಉಲ್ಲೇಖಿಸಿದ ಅವರು, "ಭಾರತದ ನೈಜ ಸಾಮರ್ಥ್ಯದ ಬಗ್ಗೆ ಗಮನ ಸೆಳೆಯಲು ಭಾರತ ಹೊಂದಿರುವ ಅಗಾಧ ಜನಸಂಖ್ಯಾ ಲಾಭದ ಬಗ್ಗೆ ಹಲವು ದಶಕಗಳಿಂದಲೂ ಹೇಳಲಾಗುತ್ತಿತ್ತು. ಆದರೆ, ಕಳೆದ 7 ವರ್ಷಗಳಲ್ಲಿ, ನಿರ್ಣಾಯಕ ನಾಯಕತ್ವ ಮತ್ತು ಸಕ್ರಿಯ ನೀತಿಗಳ ಸಂಯೋಜನೆಯಿಂದಾಗಿ ದೇಶದ ಸಾಮರ್ಥ್ಯವನ್ನು ಹೇಗೆ ವಾಸ್ತವ ರೂಪಕ್ಕೆ ಸಾಕಾರಗೊಂಡಿತು ಎಂಬುದನ್ನು ನಾವು ನೋಡಿದ್ದೇವೆ” ಎಂದರು.
"2021ರಲ್ಲಿ ನಮ್ಮ ಮಹತ್ವಾಕಾಂಕ್ಷೆಗಳು 2014 ಮತ್ತು ಆ ಮುನ್ನ ಯಾವುದೇ ಸಮಯದಲ್ಲಿ ಇದ್ದುದಕ್ಕಿಂತಲೂ ಗಮನಾರ್ಹವಾಗಿ ಹೆಚ್ಚಾಗಿವೆ. ಈ ಮಹತ್ವಾಕಾಂಕ್ಷೆಗಳ ಬಗ್ಗೆ ಮತ್ತು ಮುಂದಿನ ಮಾರ್ಗ ಬಗ್ಗೆ ನಮಗೆ ಸಂಪೂರ್ಣ ಸ್ಪಷ್ಟತೆ ಇದೆ. 1 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯ ಲೆಕ್ಕಾಚಾರವು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿದೆ” ಎಂದು ಹೇಳಿ ಶ್ರೀ ರಾಜೀವ್ ಚಂದ್ರಶೇಖರ್ ಮಾತು ಮುತಿಸಿದರು.
***
(Release ID: 1767184)
Visitor Counter : 221