ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರೊಂದಿಗೆ ದೂರವಾಣಿ ಮೂಲಕ ಪ್ರಧಾನಿ ಮೋದಿ ಮಾತುಕತೆ

Posted On: 11 OCT 2021 6:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

ಈ ವರ್ಷದ ಆರಂಭದಲ್ಲಿ ನಡೆದ ವರ್ಚ್ಯುಯಲ್ ಶೃಂಗಸಭೆಯ ನಂತರ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು. ಜೊತೆಗೆ ವರ್ಚ್ಯುಯಲ್ ಶೃಂಗಸಭೆಯಲ್ಲಿ ಅಂಗೀಕರಿಸಲಾದ ʻಮಾರ್ಗಸೂಚಿ-2030ʼರ ಅಡಿಯಲ್ಲಿ ಈಗಾಗಲೇ ಪ್ರಾರಂಭಿಸಲಾದ ಉಪಕ್ರಮಗಳ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಸುಧಾರಿತ ವ್ಯಾಪಾರ ಪಾಲುದಾರಿಕೆಯ ಪ್ರಗತಿಯನ್ನೂ ಪರಿಶೀಲಿಸಿದರು. ಇದೇ ವೇಳೆ, ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ಸಂಪರ್ಕಗಳನ್ನು ತ್ವರಿತವಾಗಿ ವಿಸ್ತರಿಸಲು ಇರುವಂತಹ ಸಾಮರ್ಥ್ಯದ ಬಗ್ಗೆ ಸಹಮತ ವ್ಯಕ್ತಪಡಿಸಿದರು. 

ನವೆಂಬರ್ 2021ರಲ್ಲಿ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ʻಯುಎನ್ಎಫ್ಸಿಸಿಸಿ ಸಿಒಪಿ-26’ ಸಭೆಯ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಾಯಕರು ವ್ಯಾಪಕ ಚರ್ಚೆ ನಡೆಸಿದರು. ನವೀಕರಿಸಬಹುದಾದ ಇಂಧನವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಗುರಿ ಹಾಗೂ ಇತ್ತೀಚೆಗೆ ಘೋಷಿಸಲಾದ ʻರಾಷ್ಟ್ರೀಯ ಹೈಡ್ರೋಜನ್ ಯೋಜನೆʼಗಳ ಮೂಲಕ ʻಹವಾಮಾನ ಕುರಿತ ಉಪಕ್ರಮʼಕ್ಕೆ (ಕ್ಲೈಮೇಟ್‌ ಆಕ್ಷನ್) ಭಾರತ ತೋರಿರುವ ಬದ್ಧತೆಯನ್ನು ಪ್ರಧಾನಿ ವಿವರಿಸಿದರು.

ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ, ವಿಶೇಷವಾಗಿ ಆಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆಯೂ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ನಿಟ್ಟಿನಲ್ಲಿ, ಉಗ್ರವಾದ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳು, ಮಾನವ ಹಕ್ಕುಗಳ ಬಗ್ಗೆ ಒಂದು ಸಾಮಾನ್ಯ ಅಂತಾರಾಷ್ಟ್ರೀಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವ ಅಗತ್ಯದ ಬಗ್ಗೆ ನಾಯಕರು ಪರಸ್ಪರ ಸಹಮತ ವ್ಯಕ್ತಪಡಿಸಿದರು. 


****


(Release ID: 1763144) Visitor Counter : 221