ಇಂಧನ ಸಚಿವಾಲಯ

ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಿದ ಇಂಧನ ಸಚಿವರು


ವಿದ್ಯುತ್ ಘಟಕಗಳ ಬೇಡಿಕೆ ಪೂರೈಸಲು ಸಾಕಷ್ಟು ಕಲ್ಲಿದ್ದಲು ಲಭ್ಯ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವೆಂಬ ಭಯ ತಪ್ಪುಗ್ರಹಿಕೆಯಿಂದ ಕೂಡಿದೆ

Posted On: 10 OCT 2021 3:35PM by PIB Bengaluru

ಕೇಂದ್ರ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ದೆಹಲಿಯ ವಿದ್ಯುತ್ ವಿತರಣೆ ಮಾಡುವ ಕಂಪನಿಗಳಿಗೆ ವಿದ್ಯುತ್ ಪೂರೈಸುವ ಘಟಕಗಳೂ  ಸೇರಿದಂತೆ ಎಲ್ಲ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿನ ಕಲ್ಲಿದ್ದಲು ಸ್ಥಿತಿಗತಿ ಕುರಿತು ಪರಿಶೀಲನಾ ಸಭೆ ನಡೆಸಿದರು.

2021ರ ಅಕ್ಟೋಬರ್ 9 , ನಿನ್ನೆಯವರೆಗೆ ಎಲ್ಲ ಮೂಲಗಳಿಂದ (ಕೋಲ್ ಇಂಡಿಯಾ ಲಿಮಿಟೆಡ್, ಸಿಂಗರೇಣಿ ಕೋಲ್ಲಿರೀಸ್ ಕಂಪನಿ, ಕ್ಯಾಪ್ಟಿವ್ ಕೋಲ್ ಮೈನ್ಸ್ ಮತ್ತು ಆಮದು ಮಾಡಿಕೊಂಡ ಕಲ್ಲಿದ್ದಲು)  ಒಟ್ಟು ಕಲ್ಲಿದ್ದಲು ರವಾನೆಯಾಗಿರುವುದು 1.92 ಮಿಲಿಯನ್ ಟನ್, ಆದರೆ ಒಟ್ಟು ಬಳಕೆ ಮಾಡಿರುವುದು 1.87 ಮಿಲಿಯನ್ ಟನ್. ಹಾಗಾಗಿ ಬಳಕೆಗಿಂತ ಹೆಚ್ಚಿನ ಕಲ್ಲಿದ್ದಲನ್ನು ಪೂರೈಕೆ ಮಾಡಲಾಗಿದೆ, ಆ ಮೂಲಕ ಕ್ರಮೇಣ ಕಲ್ಲಿದ್ದಲು ದಾಸ್ತಾನು ಹೆಚ್ಚಳಕ್ಕೆ ಪರಿವರ್ತನೆಗೊಳ್ಳುವ ಸೂಚನೆ ಸಿಕ್ಕಿದೆ.

ಕಲ್ಲಿದ್ದಲು ಸಚಿವಾಲಯ ಮತ್ತು ಕೋಲ್ ಇಂಡಿಯಾ, ವಿದ್ಯುತ್ ಘಟಕಗಳ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಲಭ್ಯವಿದೆ ಎಂದು ಭರವಸೆ ನೀಡಿವೆ. ವಿದ್ಯುತ್ ವ್ಯತ್ಯಯದ ಯಾವುದೇ ಭಯ ತಪ್ಪು ಕಲ್ಪನೆಯಿಂದ ಕೂಡಿದೆ. ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ನಾಲ್ಕು ದಿನಗಳಿಗಿಂತ ಹೆಚ್ಚಿನ ಅವಧಿಗೆ  ಮತ್ತು ಸಿಐಎಲ್ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಳ ಮಾಡಿರುವುದರಿಂದ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಕ್ರಮೇಣ ಸುಧಾರಿಸತೊಡಗಿದೆ.

ದೆಹಲಿಯ ವಿತರಣಾ ಕಂಪನಿಗಳು ತಮ್ಮ ಬೇಡಿಕೆಗೆ ತಕ್ಕಂತೆ ಎಷ್ಟು ಬೇಕೋ ಅಷ್ಟು ವಿದ್ಯುತ್ ಅನ್ನು ಪಡೆದುಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು. ಡಿಸ್ಕಾಂಗಳ ಬೇಡಿಕೆಗೆ ಅನುಗುಣವಾಗಿ ಎನ್ ಟಿಪಿಸಿ ಮತ್ತು ಡಿವಿಸಿ ಪೂರ್ಣ ವಿದ್ಯುತ್ ಅನ್ನು ಒದಗಿಸುವಂತೆ ನಿರ್ದೇಶನ ನೀಡಲಾಯಿತು.

ಗೇಲ್ ಇಂಡಿಯಾ ಲಿಮಿಟೆಡ್,  ಎಲ್ಲ ಲಭ್ಯ ಮೂಲಗಳಿಂದ ಅಂದರೆ ಎಪಿಎಂ, ಎಸ್ ಪಿಒಟಿ, ಎಲ್ ಟಿ-ಆರ್ ಎಲ್ ಎನ್ ಜಿ ಮೂಲಗಳಿಂದ ದೆಹಲಿಯ ವಿದ್ಯುತ್ ಘಟಕಗಳಿಂದ ಅನಿಲ ಲಭ್ಯವಾಗುವಂತೆ ಮಾಡಬೇಕೆಂದು ಸೂಚಿಸಲಾಯಿತು. ಅನಿಲ ವಿದ್ಯುತ್ ಘಟಕಗಳಿಗೆ ಹಂಚಿಕೆಯಾಗಿರುವಂತೆ ದೆಹಲಿಯ ಡಿಸ್ಕಾಂಗಳಿಗೆ ಘೋಷಿತ ಸಾಮರ್ಥ್ಯವನ್ನು ಪಿಪಿಎ ಅಡಿಯಲ್ಲಿ ಒದಗಿಸುವಂತೆ ಎನ್ ಟಿಪಿಸಿಗೆ ಸೂಚಿಸಲಾಗಿದೆ.  ಪಿಪಿಎ ಅನುಗುಣವಾಗಿ ವಿದ್ಯುತ್ ಲಭ್ಯವಿದ್ದರೂ ಸಹ ಯಾವುದೇ ಡಿಸ್ಕಾಂಗಳು ವಿದ್ಯುತ್ ನಿಲುಗಡೆ ಮಾಡಲು ಮುಂದಾದರೆ ಅಂತಹವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು.

2021ರ ಆಗಸ್ಟ್- ಸೆಪ್ಟಂಬರ್ ನಡುವೆ ಭಾರಿ ಮಳೆ ಇದ್ದರೂ ಸಹ ಆರ್ಥಿಕ ಚೇತರಿಕೆಯಿಂದಾಗಿ ವಿದ್ಯುತ್ ಗೆ ಭಾರಿ ಬೇಡಿಕೆ ಎದುರಾಗಿದೆ ಮತ್ತು ಆಮದು ಮಾಡಿಕೊಂಡ ಕಲ್ಲಿದ್ದಲು ಬೆಲೆ ಹೆಚ್ಚಳವಾಗಿದೆ, ದೇಶೀಯ ಕಲ್ಲಿದ್ದಲು ಪೂರೈಕೆಯಿಂದ ವಿದ್ಯುತ್ ಘಟಕಗಳ ಕಾರ್ಯಾಚರಣೆ ಸುಸ್ಥಿರವಾಗಿದೆ ಮತ್ತು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವುಗಳ ಬೇಡಿಕೆಗೆ ತಕ್ಕಂತೆ ಪೂರ್ಣ ವಿದ್ಯುತ್ ಪೂರೈಕೆ ಖಾತ್ರಿ ಪಡಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

***



(Release ID: 1762786) Visitor Counter : 242