ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯ ಪ್ರದೇಶದ ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ


1.7 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಇ-ಆಸ್ತಿ ಕಾರ್ಡ್ ವಿತರಿಸಿದ ಪ್ರಧಾನಿ

ಗ್ರಾಮದ ಆಸ್ತಿ, ಭೂಮಿ ಅಥವಾ ಮನೆ ಮಾಲೀಕತ್ವದ ದಾಖಲೆಗಳನ್ನು ಅನಿಶ್ಚಿತತೆ ಮತ್ತು ಅಪನಂಬಿಕೆಯಿಂದ ಮುಕ್ತಗೊಳಿಸುವುದು ನಿರ್ಣಾಯಕ: ಪ್ರಧಾನಿ

"ಸ್ವಾತಂತ್ರ್ಯ ಗಳಿಸಿ ಹಲವು ದಶಕಗಳ ಬಳಿಕವೂ ಹಳ್ಳಿಗಳ ಸಾಮರ್ಥ್ಯಕ್ಕೆ ಸಂಕೋಲೆ ಹಾಕಲಾಯಿತು. ಗ್ರಾಮಗಳ ಶಕ್ತಿ, ಜಮೀನು, ಗ್ರಾಮದ ಜನರ ಮನೆಗಳನ್ನು ಸಂಪೂರ್ಣವಾಗಿ ಅವರ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ”

"ಸ್ವಾಮಿತ್ವ ಯೋಜನೆಯು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹಳ್ಳಿಗಳಲ್ಲಿ ಅಭಿವೃದ್ಧಿ ಮತ್ತು ವಿಶ್ವಾಸವನ್ನು ಸುಧಾರಿಸುವ ಹೊಸ ಮಂತ್ರವಾಗಿದೆ"

"ಈಗ ಸರಕಾರವೇ ಬಡವರ ಬಳಿಗೆ ಬಂದು ಅವರನ್ನು ಸಶಕ್ತಗೊಳಿಸುತ್ತಿದೆ"

"ಡ್ರೋನ್‌ಗಳು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿವೆ"

Posted On: 06 OCT 2021 2:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದಲ್ಲಿ ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಯೋಜನೆಯಡಿ ಪ್ರಯೋಜನ ಪಡೆದ 1,71,000 ಫಲಾನುಭವಿಗಳಿಗೆ -ಆಸ್ತಿ ಕಾರ್ಡ್‌ಗಳನ್ನು ವಿತರಿಸಿದರು. ಕೇಂದ್ರ ಸಚಿವರು, ಮಧ್ಯಪ್ರದೇಶ ಮುಖ್ಯಮಂತ್ರಿ, ಸಂಸತ್ ಸದಸ್ಯರು ಮತ್ತು ಶಾಸಕರು, ಫಲಾನುಭವಿಗಳು; ಗ್ರಾಮ, ಜಿಲ್ಲೆ ಮತ್ತು ರಾಜ್ಯ ಸರಕಾರದ ವಿವಿಧ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹರ್ದಾ ಜಿಲ್ಲೆಯ ಹಂದಿಯಾ ನಗರದ  ಶ್ರೀ ಪವನ್‌ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಆಸ್ತಿ ಕಾರ್ಡ್ ಪಡೆದ ಬಳಿಕ ಅನುಭವದ ಬಗ್ಗೆ ಕೇಳಿದರು. ವೇಳೆ ಪವನ್‌ ಅವರು ಕಾರ್ಡ್ ನೆರವಿನಿಂದ 2 ಲಕ್ಷ 90 ಸಾವಿರ ರೂಪಾಯಿಗಳ ಸಾಲವನ್ನು ಪಡೆಯಲು ಹಾಗೂ ಅಂಗಡಿಯನ್ನು ಬಾಡಿಗೆಗೆ ಪಡೆಯಲು ಸಾಧ್ಯವಾಯಿತು ಮತ್ತು ಈಗಾಗಲೇ ಸಾಲ ಮರುಪಾವತಿ  ಪ್ರಾರಂಭಿಸಿರುವುದಾಗಿ ಮಾಹಿತಿ ನೀಡಿದರು. ಡಿಜಿಟಲ್ ವಹಿವಾಟು ಹೆಚ್ಚಿಸುವಂತೆ ಪವನ್‌ ಅವರಿಗೆ ಪ್ರಧಾನಿ ಸೂಚಿಸಿದರು. ಗ್ರಾಮದಲ್ಲಿ ಡ್ರೋನ್ ಮೂಲಕ ಸಮೀಕ್ಷೆ ನಡೆಸಿದಾಗ ಊರಿನ ಜನರಿಗಾದ ಅನುಭವದ ಬಗ್ಗೆ ಶ್ರೀ ಮೋದಿ ಚರ್ಚಿಸಿದರು. ಕಾರ್ಡ್ ಪಡೆಯುವ ಪ್ರಕ್ರಿಯೆಯು ಸುಗಮವಾಗಿತ್ತು ಮತ್ತು ಕಾರ್ಡ್‌ ಪಡೆದ ನಂತರ ತಮ್ಮ ಜೀವನವು ಸಕಾರಾತ್ಮಕ ಪರಿವರ್ತನೆಯನ್ನು ಕಂಡಿದೆ ಎಂದು ಶ್ರೀ ಪವನ್‌ ಹೇಳಿದರು. ನಾಗರಿಕರ ಜೀವನ ಸುಗಮತೆಯನ್ನು ಹೆಚ್ಚಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು.

ʻಪಿಎಂ ಸ್ವಾಮಿತ್ವʼ ಯೋಜನೆಯ ಮೂಲಕ ಆಸ್ತಿ ಕಾರ್ಡ್ ಪಡೆದ ದಿಂಡೋರಿ ಜಿಲ್ಲೆಯ ಶ್ರೀ ಪ್ರೇಮ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಯವರು ಅಭಿನಂದಿಸಿದರು. ಡ್ರೋನ್‌ಗಳ ಮೂಲಕ ಸಮೀಕ್ಷೆ ನಡೆಸಲು ತೆಗೆದುಕೊಂಡ ಸಮಯದ ಬಗ್ಗೆ ಪ್ರಧಾನಿ ವಿಚಾರಿಸಿದರು. ಆಸ್ತಿ ಕಾರ್ಡ್ ಪಡೆದ ನಂತರ ಶ್ರೀ ಪ್ರೇಮ್ ಸಿಂಗ್ ಅವರ ಮುಂದಿನ ಯೋಜನೆಗಳ ಬಗ್ಗೆ ಪ್ರಧಾನಿ ಕೇಳಿದರು. ತಮ್ಮ ಮನೆಯನ್ನು ಸುಸ್ಥಿರ ಕಟ್ಟಡವಾಗಿ ಮಾಡಲು ಯೋಜಿಸಿರುವುದಾಗಿ ಶ್ರೀ ಪ್ರೇಮ್ ಹೇಳಿದರು. ಯೋಜನೆಯ ಬಗ್ಗೆ ನಿಮಗೆ ಹೇಗೆ ತಿಳಿಯಿತು ಎಂದು ಪ್ರಧಾನಿ ಕೇಳಿದರು. ʻಸ್ವಾಮಿತ್ವʼ ಅಭಿಯಾನದ ನಂತರ ಬಡವರು ಮತ್ತು ಅವಕಾಶ ವಂಚಿತರ ಆಸ್ತಿ ಹಕ್ಕುಗಳ ಸುರಕ್ಷತೆಯ ಬಗ್ಗೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು.

ಬುಧ್ನಿ-ಸೆಹೋರ್ ಜಿಲ್ಲೆಯ ಶ್ರೀ ವಿನೀತಾ ಬಾಯಿ ಅವರೊಂದಿಗೆ ಮಾತನಾಡಿದ ಪ್ರಧಾನಿಯವರು ಯೋಜನೆಯ ಮೂಲಕ ಆಸ್ತಿ ಕಾರ್ಡ್‌ ಪಡೆದ ನಂತರ ಭವಿಷ್ಯದ ಯೋಜನೆಗಳ ಬಗ್ಗೆ ವಿಚಾರಿಸಿದರು. ಬ್ಯಾಂಕಿನಿಂದ ಸಾಲವನ್ನು ಪಡೆಯುವ ಮೂಲಕ ಅಂಗಡಿಯನ್ನು ತೆರೆಯಲು ಬಯಸುತ್ತೇನೆ ಎಂದು ಅವರು ಉತ್ತರಿಸಿದರು. ತಮ್ಮ ಆಸ್ತಿಯ ಬಗ್ಗೆ ಸುರಕ್ಷತಾ ಭಾವ ಉಂಟಾಗಿದೆ ಎಂದರು. ಯೋಜನೆಯಿಂದ ನ್ಯಾಯಾಲಯಗಳು ಮತ್ತು ಹಳ್ಳಿಗಳಲ್ಲಿ ಪ್ರಕರಣಗಳ ಹೊರೆ ಕಡಿಮೆಯಾಗುತ್ತದೆ ಮತ್ತು ದೇಶ ಪ್ರಗತಿ ಸಾಧಿಸುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ವಿನೀತಾ ಬಾಯಿ ಮತ್ತು ಅವರ ಕುಟುಂಬಕ್ಕೆ ಪ್ರಧಾನಿ ನವರಾತ್ರಿ ಶುಭಾಶಯ ಹಾರೈಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಪಿಎಂ ಸ್ವಾಮಿತ್ವʼ ಯೋಜನೆ ಆರಂಭಿಸುವ ಮೂಲಕ ಬ್ಯಾಂಕುಗಳಿಂದ ಸಾಲ ಪಡೆಯುವುದು ಸುಲಭವಾಗಿದೆ ಎಂದರು. ಮಧ್ಯಪ್ರದೇಶವು ಯೋಜನೆಯನ್ನು ಜಾರಿಗೆ ತಂದ ವೇಗದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ರಾಜ್ಯದ 3000 ಹಳ್ಳಿಗಳಲ್ಲಿ 1.70 ಲಕ್ಷ ಕುಟುಂಬಗಳು ಕಾರ್ಡ್ ಪಡೆದಿವೆ. ಅವರೆಲ್ಲರ ಪಾಲಿಗೆ ಕಾರ್ಡ್ ಸಮೃದ್ಧಿಯ ವಾಹಕವಾಗಲಿದೆ ಎಂದು ಪ್ರಧಾನಿ ಹೇಳಿದರು.

ಭಾರತದ ಆತ್ಮವು ಹಳ್ಳಿಗಳಲ್ಲಿ ಅಡಗಿದೆ ಎಂದು ಹೇಳಲಾಗುತ್ತದೆಯಾದರೂ, ಸ್ವಾತಂತ್ರ್ಯ ಪಡೆದು  ದಶಕಗಳ ನಂತರವೂ, ಹಳ್ಳಿಗಳ ಸಾಮರ್ಥ್ಯಕ್ಕೆ ಅಂಕುಶ ಹಾಕಲಾಗಿದೆ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು. ಗ್ರಾಮಗಳ ಅಧಿಕಾರ, ಜಮೀನು ಮತ್ತು ಗ್ರಾಮದ ಜನರ ಮನೆಗಳನ್ನು ಅಭಿವೃದ್ಧಿಗಾಗಿ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಗ್ರಾಮದ ಜನರ ಶಕ್ತಿ, ಸಮಯ ಮತ್ತು ಹಣವು ಗ್ರಾಮದ ಭೂಮಿ ಹಾಗೂ ಮನೆಗಳ ಕುರಿತಾದ ವಿವಾದಗಳು, ವ್ಯಾಜ್ಯಗಳಲ್ಲಿ ವ್ಯಯವಾಯಿತು ಎಂದರುಮಹಾತ್ಮಾ ಗಾಂಧಿ ಅವರು ಸಹ ಸಮಸ್ಯೆಯ ಬಗ್ಗೆ ಹೇಗೆ ಚಿಂತಿತರಾಗಿದ್ದರು ಎಂಬುದನ್ನು ಸ್ಮರಿಸಿದ ಪ್ರಧಾನಿ, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನಲ್ಲಿ ಜಾರಿಗೆ ಬಂದ 'ಸಾಮ್ರಾಟ್ ಗ್ರಾಮ ಪಂಚಾಯತ್ ಯೋಜನೆ'ಯನ್ನು ನೆನಪಿಸಿಕೊಂಡರು.

ಕೊರೊನಾ ಅವಧಿಯಲ್ಲಿ ಗ್ರಾಮಗಳ ಕಾರ್ಯಕ್ಷಮತೆ ಬಗ್ಗೆ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು. ಭಾರತದ ಹಳ್ಳಿಗಳು ಒಂದೇ ಗುರಿಯೊಂದಿಗೆ ಹೇಗೆ ಒಟ್ಟಾಗಿ ಕೆಲಸ ಮಾಡಿದವು ಮತ್ತು ಸಾಂಕ್ರಾಮಿಕ ರೋಗವನ್ನು ಬಹಳ ಜಾಗರೂಕತೆಯಿಂದ ನಿಭಾಯಿಸಿದವು ಎಂಬುದನ್ನು ಅವರು ವಿವರಿಸಿದರು. ಪ್ರತ್ಯೇಕ ಜೀವನದ ವ್ಯವಸ್ಥೆ ಹಾಗೂ ಹೊರಗಿನಿಂದ ಬರುವ ಜನರಿಗೆ ಆಹಾರ ಮತ್ತು ಕೆಲಸದ ವ್ಯವಸ್ಥೆಯಂತಹ ಮುನ್ನೆಚ್ಚರಿಕೆ ವಿಚಾರದಲ್ಲಿ ಭಾರತದ ಹಳ್ಳಿಗಳು ಸಾಕಷ್ಟು ಮುಂದಿವೆಲಸಿಕೆ ವಿಚಾರದಲ್ಲೂ ಬಹಳಷ್ಟು ಶ್ರದ್ಧೆ ತೋರಿಸಲಾಗುತ್ತಿದೆ ಎಂದು ಅವರು ಹೇಳಿದರು. ಕಷ್ಟದ ಸಮಯದಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಹಳ್ಳಿಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಪ್ರಧಾನಿ ಹೇಳಿದರು.

ದೇಶದ ಗ್ರಾಮಗಳು, ಗ್ರಾಮಗಳ ಆಸ್ತಿ, ಭೂಮಿ ಮತ್ತು ಮನೆ ದಾಖಲೆಗಳನ್ನು ಅನಿಶ್ಚಿತತೆ ಮತ್ತು ಅಪನಂಬಿಕೆಯಿಂದ ಮುಕ್ತಗೊಳಿಸಬೇಕಾದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ʻಪಿಎಂ ಸ್ವಾಮಿತ್ವʼ ಯೋಜನೆಯು ಗ್ರಾಮದ ನಮ್ಮ ಸಹೋದರ ಮತ್ತು ಸಹೋದರಿಯರ ದೊಡ್ಡ ಶಕ್ತಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ʻಸ್ವಾಮಿತ್ವʼ ಯೋಜನೆ ಕೇವಲ ಆಸ್ತಿ ದಾಖಲೆಗಳನ್ನು ಒದಗಿಸುವ ಯೋಜನೆಯಲ್ಲ. ಇದು ಆಧುನಿಕ ತಂತ್ರಜ್ಞಾನದ ಸಹಾಯದಿಂದ ದೇಶದ ಹಳ್ಳಿಗಳಲ್ಲಿ ಅಭಿವೃದ್ಧಿ ಮತ್ತು ನಂಬಿಕೆಯನ್ನು ಸುಧಾರಿಸಲು ಹೊಸ ಮಂತ್ರವಾಗಿದೆ ಎಂದು ಪ್ರಧಾನಿ ಹೇಳಿದರು. "ಸಮೀಕ್ಷೆ ನಡೆಸಲು ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾರಾಡುತ್ತಿರುವ ಡ್ರೋನ್, ಭಾರತದ ಹಳ್ಳಿಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ,” ಎಂದು ಅವರು ಬಣ್ಣಿಸಿದರು.

ಬಡವರು ಯಾರ ಮೇಲೂ ಅವಲಂಬನೆಯಾಗದಂತೆ ಅವರನ್ನು ಮುಕ್ತಗೊಳಿಸಲು ಕಳೆದ 6-7 ವರ್ಷಗಳಿಂದ ಸರಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಈಗ, ಸಣ್ಣ ಕೃಷಿ ಅಗತ್ಯಗಳಿಗಾಗಿ ʻಪಿಎಂ ಕಿಸಾನ್ ಸಮ್ಮಾನ್ ನಿಧಿ ʼಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಬಡವರು ಪ್ರತಿಯೊಂದಕ್ಕೂ ಸರಕಾರಿ ಕಚೇರಿಗಳಿಗೆ ಎಡತಾಕಬೇಕಾದ ದಿನಗಳು ಕಳೆದುಹೋಗಿವೆ ಎಂದು ಶ್ರೀ ಮೋದಿ ಹೇಳಿದರು. ಈಗ ಸರಕಾರವೇ ಬಡವರ ಬಳಿಗೆ ಬಂದು ಅವರನ್ನು ಸಶಕ್ತಗೊಳಿಸುತ್ತಿದೆ. ಯಾವುದೇ ಮೇಲಾಧಾರ (ಒತ್ತೆ) ಇಲ್ಲದೆ ಸಾಲದ ಮೂಲಕ ಜನರಿಗೆ ಹಣಕಾಸು ಲಭ್ಯವಾಗುವಂತೆ ಮಾಡಿದ ಮುದ್ರಾ ಯೋಜನೆಯನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. ಕಳೆದ 6 ವರ್ಷಗಳಲ್ಲಿ 15 ಲಕ್ಷ ಕೋಟಿ ರೂ. ಮೊತ್ತದ ಸುಮಾರು 29 ಕೋಟಿ ಸಾಲಗಳನ್ನು ಅನುಮೋದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇಂದು ದೇಶದಲ್ಲಿ 70 ಲಕ್ಷ ಸ್ವಸಹಾಯ ಗುಂಪುಗಳು ಕೆಲಸ ಮಾಡುತ್ತಿವೆ ಮತ್ತು ʻಜನ್‌ಧನ್ʼ ಖಾತೆಗಳ ಮೂಲಕ ಮಹಿಳೆಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸ್ವಸಹಾಯ ಗುಂಪುಗಳಿಗೆ ಮೇಲಾಧಾರವಿಲ್ಲದ ನೀಡಲಾಗುವ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಿದ ಇತ್ತೀಚಿನ ನಿರ್ಧಾರವನ್ನು ಅವರು ಉಲ್ಲೇಖಿಸಿದರು. ಅದೇ ರೀತಿ 25 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ʻಸ್ವಾನಿಧಿʼ ಯೋಜನೆಯಡಿ ಸಾಲ ಪಡೆದಿದ್ದಾರೆ ಎಂದರು.

ರೈತರು, ರೋಗಿಗಳು ಮತ್ತು ದೂರದ ಪ್ರದೇಶಗಳು ಡ್ರೋನ್ ತಂತ್ರಜ್ಞಾನದಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಇತ್ತೀಚೆಗೆ ಅನೇಕ ನೀತಿ ಉಪಕ್ರಮಗಳನ್ವಯ ಕೈಗೊಳ್ಳಲಾಗಿದೆ  ಎಂದು ಪ್ರಧಾನಿ ಹೇಳಿದರು. ಭಾರತದಲ್ಲಿ ಡ್ರೋನ್ ಉತ್ಪಾದನೆಯನ್ನು ಪ್ರೋತ್ಸಾಹಿಸುವ ʻಪಿಎಲ್‌ಐʼ ಯೋಜನೆಯನ್ನು ಸಹ ಘೋಷಿಸಲಾಗಿದೆ. ಇದರಿಂದ ಭಾರತದಲ್ಲಿ ಆಧುನಿಕ ಡ್ರೋನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಲು ಮತ್ತು ಪ್ರಮುಖ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲು ಸಾಧ್ಯವಾಗಲಿದೆ. ಭಾರತದಲ್ಲಿ ಕಡಿಮೆ ವೆಚ್ಚದ ಡ್ರೋನ್‌ಗಳನ್ನು ತಯಾರಿಸಲು ವಿಜ್ಞಾನಿಗಳು, ಎಂಜಿನಿಯರ್‌ಗಳು, ತಂತ್ರಾಂಶ ಅಭಿವೃದ್ಧಿಕಾರರು ಮತ್ತು ನವೋದ್ಯಮಿಗಳು ಮುಂದೆ ಬರಬೇಕು ಎಂದು ಪ್ರಧಾನಿ ಕರೆ ನೀಡಿದರು. "ಡ್ರೋನ್‌ಗಳು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿವೆ" ಎಂದು ಅವರು ಹೇಳಿದರು.

***



(Release ID: 1761428) Visitor Counter : 256