ನೀತಿ ಆಯೋಗ
azadi ka amrit mahotsav

ನೀತಿ ಆಯೋಗವು ಜಿಲ್ಲಾ ಆಸ್ಪತ್ರೆಗಳ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಅಭ್ಯಾಸಗಳ ವರದಿಯನ್ನು ಬಿಡುಗಡೆ ಮಾಡಿದೆ

Posted On: 30 SEP 2021 4:46PM by PIB Bengaluru

ನೀತಿ ಆಯೋಗವು ಇಂದು ಜಿಲ್ಲಾ ಆಸ್ಪತ್ರೆಗಳ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಅಭ್ಯಾಸಗಳು ಎನ್ನುವ ಭಾರತದ ಜಿಲ್ಲಾ ಆಸ್ಪತ್ರೆಗಳ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ  ಭಾರತದ ಶಾಖೆಯ ಸಹಯೋಗದಿಂದಾಗಿ ತಯಾರಾಗಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಘಟಕವಾಗಿರುವ   ನ್ಯಾಷನಲ್ ಅಕ್ರಿಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಅಂಡ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಸಂಸ್ಥೆಯು  ಆಸ್ಪತ್ರೆಗಳಲ್ಲಿಯೇ  ದತ್ತಾಂಶದ ಮೌಲ್ಯಮಾಪನವನ್ನು ನಡೆಸಿದೆ.

ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್, ಹೆಚ್ಚುವರಿ ಕಾರ್ಯದರ್ಶಿ ಡಾ.ರಾಕೇಶ್ ಸರ್ವಲ್, ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ, ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ ಡಾ. ರೋಡೆರಿಕೊ ಆಫ್ರಿನ್, ಕ್ಯೂಸಿಐ ಅಧ್ಯಕ್ಷ ಆದಿಲ್ ಜೈನುಲ್ ಭಯ್ ಅವರ ಸಮ್ಮುಖದಲ್ಲಿ ವರದಿಯನ್ನು ಬಿಡುಗಡೆ ಮಾಡಲಾಯಿತು.    

ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್ ರವರು ವರದಿಯ ಮುನ್ನುಡಿಯಲ್ಲಿ 'ಆರೋಗ್ಯಕರ ಸಮುದಾಯಗಳನ್ನು ರಚಿಸುವಲ್ಲಿ, ಎಲ್ಲರಿಗೂ ಒದಗಿಸುವ ಆರೋಗ್ಯ ಸೇವೆಗಳ ವ್ಯಾಪಕ ಶ್ರೇಣಿಯನ್ನು ಒದಗಿಸುವಲ್ಲಿ ಜಿಲ್ಲಾ ಆಸ್ಪತ್ರೆಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿರುವರು. “ಮುಂದುವರಿದ  ಆರೈಕೆಯನ್ನು ಒದಗಿಸುವಲ್ಲಿ ಆಸ್ಪತ್ರೆಗಳ  ನಿರ್ಣಾಯಕ ಪಾತ್ರದ ಹೊರತಾಗಿಯೂ, ಮಾನವ ಸಂಪನ್ಮೂಲಗಳ, ಸಾಮರ್ಥ್ಯಗಳು, ಬಳಕೆ ಮತ್ತು ಸೇವೆಯನ್ನು ಪಡೆಯುವುದರಲ್ಲಿನ ಕೊರತೆಯಿಂದಾಗಿ ದುರದೃಷ್ಟವಶಾತ್ ಅಂತರಗಳಿವೆ,  "ಎಲ್ಲರಿಗೂ ಆರೋಗ್ಯ" ವನ್ನು ವಾಸ್ತವವಾಗಿಸಲು ಮತ್ತು ಪ್ರತಿಯೊಬ್ಬ ನಾಗರಿಕನು ಸುರಕ್ಷಿತ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಈ ಅಂತರವನ್ನು ಮುಚ್ಚಬೇಕು. ನೀತಿ ಆಯೋಗವು ಕೈಗೊಂಡ ಜಿಲ್ಲಾ ಆಸ್ಪತ್ರೆಯ ಕಾರ್ಯಕ್ಷಮತೆ ಮೌಲ್ಯಮಾಪನ ಕಾರ್ಯವು ಆ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.” ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಮಿತಾಬ್ ಕಾಂತ್ ಅವರು, ‘ಈ ವರದಿಯು ದೇಶಾದ್ಯಂತ ಕೈಗೊಂಡಿರುವ ಜಿಲ್ಲಾ ಆಸ್ಪತ್ರೆಗಳ ಕಾರ್ಯಕ್ಷಮತೆಯ ಮೌಲ್ಯಮಾಪನವಾಗಿದೆ. ಇದು ದತ್ತಾಂಶ ಚಾಲಿತ ಆಡಳಿತದ ಕಡೆಗೆ ಆರೋಗ್ಯ ರಕ್ಷಣೆಯ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡುತ್ತದೆ ಮತ್ತು ಸಮುದಾಯಗಳಿಗೆ ಮತ್ತು ಆರೋಗ್ಯ ಸೇವೆಗಳನ್ನು ಪಡೆಯುವ ಜನರಿಗೆ ನಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಕರೆದೊಯ್ಯುತ್ತದೆ. ಈ ಕಾರ್ಯದ ಸಂಪೂರ್ಣ ಉದ್ದೇಶವು ವಿವಿಧ ಪ್ರದೇಶಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಬಗ್ಗೆ ಹೆಚ್ಚು ತಿಳಿವಳಿಕೆಗಾಗಿ ಅನುಕೂಲ ಮಾಡಿಕೊಡುವುದಾಗಿದೆ. '

ರಚನೆ  ಮತ್ತು ಫಲಿತಾಂಶಗಳ ಕ್ಷೇತ್ರಗಳಾದ್ಯಂತ 10 ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ಮೌಲ್ಯಮಾಪನ ಚೌಕಟ್ಟು  ಒಳಗೊಂಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಒಟ್ಟು 707 ಜಿಲ್ಲಾ ಆಸ್ಪತ್ರೆಗಳು ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ಭಾಗವಹಿಸಿವೆ. 2017–18ನೇ ಸಾಲಿನ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್ಎಮ್‌ಐಎಸ್)  ದತ್ತಾಂಶವನ್ನು ಈ ಕಾರ್ಯಕ್ಕೆ  ಆಧಾರವಾಗಿ ಬಳಸಲಾಗಿದೆ. ಈ ಚೌಕಟ್ಟು ಆಸ್ಪತ್ರೆಗಳನ್ನು ಮೂರು ವಿಭಾಗಗಳಲ್ಲಿ ವರ್ಗೀಕರಿಸುತ್ತದೆ: ಸಣ್ಣ ಆಸ್ಪತ್ರೆಗಳು (200 ಹಾಸಿಗೆಗಳಿಗಿಂತ ಕಡಿಮೆ ಅಥವಾ ಸಮ), ಮಧ್ಯಮ ಗಾತ್ರದ ಆಸ್ಪತ್ರೆಗಳು (201–300 ಹಾಸಿಗೆಗಳು) ಮತ್ತು ದೊಡ್ಡ ಆಸ್ಪತ್ರೆಗಳು (300 ಕ್ಕೂ ಹೆಚ್ಚು ಹಾಸಿಗೆಗಳು). 10 ಸೂಚಕಗಳಲ್ಲಿ ಪ್ರತಿ ಆಸ್ಪತ್ರೆಯ ವಿಭಾಗದಲ್ಲಿ ಅತ್ಯುತ್ತಮ ಕಾರ್ಯ ಮಾಡುವ ಜಿಲ್ಲಾ ಆಸ್ಪತ್ರೆಗಳ ಕೆಲವು ಉತ್ತಮ ಅಭ್ಯಾಸಗಳನ್ನು ವರದಿಯು ದಾಖಲಿಸುತ್ತದೆ.

ಒಟ್ಟಾರೆಯಾಗಿ, 24 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 75 ಜಿಲ್ಲಾ ಆಸ್ಪತ್ರೆಗಳು ಹಾಸಿಗೆಗಳ ಲಭ್ಯತೆ, ವೈದ್ಯಕೀಯ ಮತ್ತು ಅರೆ ವೈದ್ಯ   ಸಿಬ್ಬಂದಿ,   ಮೂಲ ಆರೋಗ್ಯ ಮತ್ತು ರೋಗನಿರ್ಣಯ ಪರೀಕ್ಷಾ ಸೇವೆಗಳಂತಹ ಸೂಚಕಗಳಲ್ಲಿ ಹಾಗೂ ಒಳ ರೋಗಿಗಳ ಪ್ರಮಾಣ ಮತ್ತು ಪ್ರತಿ ಶಸ್ತ್ರಚಿಕಿತ್ಸಕ ವೈದ್ಯರಿಂದಾದ ಶಸ್ತ್ರಚಿಕಿತ್ಸೆ ಸಂಖ್ಯೆಗಳಂತಹ ಫಲಿತಾಂಶದ ಸೂಚಕಗಳಲ್ಲಿ ಅಗ್ರ ಕಾರ್ಯ ಪ್ರದರ್ಶನ ನೀಡಿವೆ.

ವರದಿಯು ಆರೋಗ್ಯ ವ್ಯವಸ್ಥೆಯು ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ದೇಶದ ಜಿಲ್ಲಾ ಆಸ್ಪತ್ರೆಗಳ ಸ್ಥಿತಿಯನ್ನು ಉತ್ತಮಗೊಳಿಸಲು ಕೆಲವು ಸಮರ್ಥನೀಯ ಪರಿಹಾರಗಳನ್ನು ಒದಗಿಸುತ್ತದೆ, ಪ್ರಾಥಮಿಕವಾಗಿ ಎಚ್ಎಮ್‌ಐಎಸ್.ನಲ್ಲಿ ದತ್ತಾಂಶ ವರದಿ ಮಾಡುವಿಕೆಯನ್ನು ಸುಧಾರಿಸುವುದು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಣೆಯ ಸೇವೆಯಲ್ಲಿ  ಹೆಚ್ಚಿನ ಹೊಣೆಗಾರಿಕೆಯನ್ನು ತರಲು ಇಂತಹ ಕಾರ್ಯಕ್ಷಮತೆಯ ಮೌಲ್ಯಮಾಪನ ಕಾರ್ಯಗಳನ್ನು ಪ್ರೋತ್ಸಾಹಿಸುವುದು 
ಈ ವರದಿಯು ದೇಶದಲ್ಲಿ ಉನ್ನತೀಕರಿಸಿದ ಮತ್ತು ಸುಧಾರಿತ ಜಿಲ್ಲಾ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವ ಮಾರ್ಗಸೂಚಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ.

ಸಂಪೂರ್ಣ ವರದಿಯನ್ನು ಇಲ್ಲಿ ಓದಬಹುದು 

****


(Release ID: 1759817) Visitor Counter : 384