ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ರಫ್ತುದಾರರು ಹಾಗೂ ಬ್ಯಾಂಕುಗಳಿಗೆ ಬೆಂಬಲ ನೀಡಲು 5 ವರ್ಷಗಳಲ್ಲಿ ಇಸಿಜಿಸಿ ಲಿಮಿಟೆಡ್‌ನಲ್ಲಿ 4,400 ಕೋಟಿ ರೂ. ಹೂಡಿಕೆಗೆ ಸರ್ಕಾರದ ಅನುಮೋದನೆ

ಇಸಿಜಿಸಿಯ ಅಪಾಯ ತಾಳಿಕೆ ಸಾಮರ್ಥ್ಯವನ್ನು  88,000 ಕೋಟಿ ರೂ.ಗೆ ಹೆಚ್ಚಿಸಲು ಬಂಡವಾಳ ಪುನರ್ಧನ ಮತ್ತು ಐಪಿಒ. ಐದು ವರ್ಷಗಳ ಅವಧಿಯಲ್ಲಿ 5.28 ಲಕ್ಷ ಕೋಟಿ ರೂ.ಹೆಚ್ಚುವರಿ ರಫ್ತುಗಳ ಉತ್ತೇಜನ

ಔಪಚಾರಿಕ ವಲಯದಲ್ಲಿ 2.6 ಲಕ್ಷ ಸೇರಿದಂತೆ 59 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲು  ನೆರವು

ಈ ನಿರ್ಧಾರವು ಕಳೆದ ಕೆಲವು ವರ್ಷಗಳಿಂದ ಸರ್ಕಾರವು ತೆಗೆದುಕೊಂಡ ಸರಣಿ ರಫ್ತು ಸಂಬಂಧಿತ ಯೋಜನೆಗಳು ಮತ್ತು ಉಪಕ್ರಮಗಳ ಭಾಗವಾಗಿದೆ

ವಿದೇಶಿ ವ್ಯಾಪಾರ ನೀತಿ (2015-20) 31 ಮಾರ್ಚ್ 2022 ರವರೆಗೆ ವಿಸ್ತರಣೆ

ಸೆಪ್ಟೆಂಬರ್ 2021 ರಲ್ಲಿ ಎಲ್ಲಾ ಬಾಕಿಗಳ ಪಾವತಿಗೆ 56,027 ಕೋಟಿ ರೂ. ಬಿಡುಗಡೆ

2021-22ನೇ ಹಣಕಾಸು ವರ್ಷದಲ್ಲಿ 12,454 ಕೋಟಿ ರೂ. ಮಂಜೂರು ಮೊತ್ತದೊಂದಿಗೆ ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ (RoDTEP) ಯೋಜನೆ ಆರಂಭ

ವ್ಯಾಪಾರದ ಅನುಕೂಲಕ್ಕಾಗಿ ಮತ್ತು ರಫ್ತುದಾರರಿಂದ ಎಫ್‌ಟಿಎ ಬಳಕೆಯನ್ನು ಹೆಚ್ಚಿಸಲು ಮೂಲ ಪ್ರಮಾಣಪತ್ರಕ್ಕಾಗಿ ಸಾಮಾನ್ಯ ಡಿಜಿಟಲ್ ಪ್ಲಾಟ್‌ಫಾರ್ಮ್ ಗೆ ಚಾಲನೆ

ಜಿಲ್ಲೆಗಳನ್ನು ರಫ್ತು ಕೇಂದ್ರಗಳಾಗಿ ಉತ್ತೇಜಿಸುವುದು

ಭಾರತದ ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಹೂಡಿಕೆಯ ಗುರಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿದೇಶದಲ್ಲಿರುವ ಭಾರತೀಯ ದೂತವಾಸಗಳ ಸಕ್ರಿಯ ಪಾತ್ರವನ್ನು ಹೆಚ್ಚಿಸಲಾಗಿದೆ

Posted On: 29 SEP 2021 3:54PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ರಫ್ತು ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ, ಸರ್ಕಾರವು ಇಂದು ಇಸಿಜಿಸಿ ಲಿಮಿಟೆಡ್‌ಗೆ (ಹಿಂದೆ ಇದನ್ನು ಭಾರತೀಯ ರಫ್ತು ಸಾಲ ಖಾತ್ರಿ ನಿಗಮ ಎಂದು ಕರೆಯಲಾಗುತ್ತಿತ್ತು) ಐದು ವರ್ಷಗಳ ಅವಧಿಯಲ್ಲಿ, ಅಂದರೆ 2021-2022 ರಿಂದ 2025- 2026 ನೇ ಹಣಕಾಸು ವರ್ಷದವರೆಗೆ, 4,400 ಕೋಟಿ ರೂ ಬಂಡವಾಳ ಪುನರ್ಧನವನ್ನು ಅನುಮೋದಿಸಿದೆ. ಅನುಮೋದಿತ ಪುನರ್ಧನ ಮತ್ತು ಐಪಿಒ ಮೂಲಕ ಅಧಿಕ ರಫ್ತುಗಳಿಗೆ ಬೆಂಬಲ ನೀಡಲು ಇಸಿಜಿಸಿಯ ತಾಳಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ವಾಣಿಜ್ಯ ಮತ್ತು ರಾಜಕೀಯ ಕಾರಣಗಳಿಂದಾಗಿ ಸಾಗರೋತ್ತರ ಖರೀದಿದಾರರಿಂದ ಪಾವತಿ ಮಾಡದಿರುವ ಅಪಾಯಗಳ ವಿರುದ್ಧ ರಫ್ತುದಾರರಿಗೆ ಕ್ರೆಡಿಟ್ ವಿಮಾ ಸೇವೆಗಳನ್ನು ಒದಗಿಸುವ ಮೂಲಕ ರಫ್ತುಗಳನ್ನು ಉತ್ತೇಜಿಸಲು 1957 ರಲ್ಲಿ ಕಂಪನಿಗಳ ಕಾಯಿದೆಯಡಿಯಲ್ಲಿ ಭಾರತ ಸರ್ಕಾರವು ಇಸಿಜಿಸಿಯನ್ನು ಸ್ಥಾಪಿಸಿತು. ಇದು ರಫ್ತು ಸಾಲಗಾರರಿಗೆ ರಫ್ತು ಕ್ರೆಡಿಟ್ ಸಾಲದ ಅಪಾಯಗಳ ವಿರುದ್ಧ ಬ್ಯಾಂಕುಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇಸಿಜಿಸಿ ತನ್ನ ಅನುಭವ, ಪರಿಣತಿ ಮತ್ತು ಪ್ರಗತಿಗೆ ಮತ್ತು ಭಾರತದ ರಫ್ತುಗಳ ಮುನ್ನಡೆಯ ಬದ್ಧತೆಯೊಂದಿಗೆ ಭಾರತೀಯ ರಫ್ತು ಉದ್ಯಮವನ್ನು ಬೆಂಬಲಿಸಲು ಶ್ರಮಿಸುತ್ತಿದೆ.

ಹೆಚ್ಚು ಕಾರ್ಮಿಕರು ಅಗತ್ಯವಿರುವ ವಲಯಗಳ ರಫ್ತುಗಳನ್ನು ಬೆಂಬಲಿಸುವಲ್ಲಿ ಮತ್ತು ಸಣ್ಣ ರಫ್ತುದಾರರ ಉದ್ಯಮಗಳಿಗೆ ಬ್ಯಾಂಕ್ ಸಾಲವನ್ನು ಉತ್ತೇಜಿಸುವಲ್ಲಿ ಇಸಿಜಿಸಿ ಅಪಾರ ಪಾತ್ರ ವಹಿಸುತ್ತದೆ ಮತ್ತು ಇದರಿಂದಾಗಿ ಅವರ ಪುನರುಜ್ಜೀವಕ್ಕೆ ಕಾರಣವಾಗುತ್ತದೆ. ಇಸಿಜಿಸಿಯಲ್ಲಿನ ಬಂಡವಾಳ ಪುನರ್ಧನವು ಅದರ ವ್ಯಾಪ್ತಿಯನ್ನು ರಫ್ತು-ಆಧಾರಿತ ಉದ್ಯಮಕ್ಕೆ ವಿಶೇಷವಾಗಿ ಹೆಚ್ಚು ಕಾರ್ಮಿಕರು ಅಗತ್ಯವಿರುವ ವಲಯಗಳಿಗೆ ವಿಸ್ತರಿಸಲು ಅನುಕೂಲ ಮಾಡಿಕೊಡುತ್ತದೆ. ಅನುಮೋದಿತ ಮೊತ್ತವನ್ನು ಕಂತುಗಳಲ್ಲಿ ನೀಡಲಾಗುತ್ತದೆ. ಇದರಿಂದಾಗಿ 88,000 ಕೋಟಿ ರೂ. ಗಳವರೆಗೆ ಅಪಾಯಗಳನ್ನು ಅಂಡರ್‌ರೈಟ್ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಇದು ಐದು ವರ್ಷಗಳ ಅವಧಿಯಲ್ಲಿ 5.28 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ರಫ್ತುಗಳನ್ನು ಬೆಂಬಲಿಸಲು ಇಸಿಜಿಸಿಗೆ ಸಾಧ್ಯವಾಗುತ್ತದೆ.

ಇದರ ಜೊತೆಯಲ್ಲಿ, ಫೆಬ್ರವರಿ 2019 ರಲ್ಲಿ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಪ್ರಕಟಿಸಿದ 'ಉದ್ಯೋಗಗಳಿಗೆ ರಫ್ತು' ವರದಿಯ ಪ್ರಕಾರ, 5.28 ಲಕ್ಷ ಕೋಟಿ ರೂ. ರಫ್ತುಗಳು 2.6 ಲಕ್ಷ ಕಾರ್ಮಿಕರ ಔಪಚಾರಿಕತೆಗೆ ಕಾರಣವಾಗುತ್ತವೆ. ಇದಲ್ಲದೆ, ವರದಿಯ ಪ್ರಕಾರ ಒಟ್ಟು ಕಾರ್ಮಿಕರ ಸಂಖ್ಯೆ (ಔಪಚಾರಿಕ ಮತ್ತು ಅನೌಪಚಾರಿಕ) 59 ಲಕ್ಷಗಳಷ್ಟು ಹೆಚ್ಚಾಗುತ್ತದೆ.

ಇಸಿಜಿಸಿ - ಕಾರ್ಯಕ್ಷಮತೆಯ ಮುಖ್ಯಾಂಶಗಳು

 1. ಇಸಿಜಿಸಿ ಭಾರತದಲ್ಲಿ ರಫ್ತು ಸಾಲವಿಮಾ ಮಾರುಕಟ್ಟೆಯಲ್ಲಿ ಸುಮಾರು ಶೇ.85 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಅಗ್ರ ಸಂಸ್ಥೆಯಾಗಿದೆ.
 2. ಇಸಿಜಿಸಿ ಬೆಂಬಲಿತ ರಫ್ತು 2020-21ರಲ್ಲಿ 6.02 ಲಕ್ಷ ಕೋಟಿ ರೂ. ಗಳಷ್ಟಿತ್ತು, ಇದು ಭಾರತದ ಸರಕು ರಫ್ತಿನ ಸುಮಾರು ಶೇ.28 ಆಗಿದೆ
 3. 31/3/2021 ವೇಳೆಗೆ ಬ್ಯಾಂಕುಗಳಿಗೆ ರಫ್ತು ಸಾಲ ವಿಮೆ ಅಡಿಯಲ್ಲಿ 7,372 ಮತ್ತು 9,535 ಲಾಭ ಪಡೆದ ವಿಭಿನ್ನ ರಫ್ತುದಾರರ ಸಂಖ್ಯೆಯಾಗಿದೆ. ಇದರಲ್ಲಿ ಶೇ.97 ರಷ್ಟು ಸಣ್ಣ ರಫ್ತುದಾರರು
 4. ಬ್ಯಾಂಕುಗಳಿಂದ ವಿತರಿಸಲಾಗುವ ಒಟ್ಟು ರಫ್ತು ಸಾಲ ವಿತರಣೆಯ ಸುಮಾರು ಶೇ.50 ರಷ್ಟನ್ನು ಇಸಿಜಿಸಿ ವಿಮೆ ಮಾಡುತ್ತದೆ, ಇದು 22 ಬ್ಯಾಂಕುಗಳನ್ನು ಒಳಗೊಂಡಿದೆ (12 ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು 10 ಖಾಸಗಿ ವಲಯದ ಬ್ಯಾಂಕುಗಳು)
 5. ಇಸಿಜಿಸಿ ಐದು ಲಕ್ಷ ವಿದೇಶಿ ಖರೀದಿದಾರರ ಡೇಟಾಬೇಸ್ ಹೊಂದಿದೆ
 6. ಇದು ಕಳೆದ ದಶಕದಲ್ಲಿ 7,500 ಕ್ಕಿಂತ ಹೆಚ್ಚು ಕ್ಲೈಮುಗಳನ್ನು ಇತ್ಯರ್ಥಪಡಿಸಿದೆ
 7. ಇದು ಆಫ್ರಿಕನ್ ಟ್ರೇಡ್ ಇನ್ಶೂರೆನ್ಸ್ (ಎಟಿಐ) ನಲ್ಲಿ 11.7 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ, ಇದರಿಂದಾಗಿ ಆಫ್ರಿಕನ್ ಮಾರುಕಟ್ಟೆಗೆ ಭಾರತೀಯ ರಫ್ತುಗಳನ್ನು ಸುಲಭಗೊಳಿಸುತ್ತದೆ
 8. ಇಸಿಜಿಸಿ ನಿರಂತರ ಲಾಭ ತೋರಿಸಿದೆ ಮತ್ತು ಕಳೆದ 20 ವರ್ಷಗಳಿಂದ ಸರ್ಕಾರಕ್ಕೆ ಲಾಭಾಂಶ ಪಾವತಿ ಮಾಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರವು ತೆಗೆದುಕೊಂಡ ವಿವಿಧ ರಫ್ತು ಸಂಬಂಧಿತ ಯೋಜನೆಗಳು ಮತ್ತು ಉಪಕ್ರಮಗಳು.

 1. ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ವಿದೇಶಿ ವ್ಯಾಪಾರ ನೀತಿ (2015-20) ಯನ್ನು 30-09-2021 ವರೆಗೆ ವಿಸ್ತರಿಸಲಾಗಿದೆ
 2. ಕೋವಿಡ್ -19 ಸಮಯದಲ್ಲಿ ಹಣಕಾಸಿನ ಹರಿವು ಒದಗಿಸಲು ಎಲ್ಲಾ ಸ್ಕ್ರಿಪ್ಟ್ ಬೇಸ್ ಯೋಜನೆಗಳ ಅಡಿಯಲ್ಲಿದ್ದ ಎಲ್ಲಾ ಬಾಕಿಗಳನ್ನು ಚುಕ್ತಾ ಮಾಡಲುಯ ಸೆಪ್ಟೆಂಬರ್ 2021 ರಲ್ಲಿ ರೂ 56,027 ಕೋಟಿ ಬಿಡುಗಡೆ
 3. ಹೊಸ ಯೋಜನೆಗೆ ಚಾಲನೆ - ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳಿಗೆ ವಿನಾಯಿತಿ (RoDTEP). 2021-22 ನೇ ಹಣಕಾಸು ವರ್ಷದಲ್ಲಿ ಯೋಜನೆಗೆ ಮಂಜೂರಾದ ಹಣ ರೂ 12,454 ಕೋಟಿ. ತೆರಿಗೆಗಳು/ ಸುಂಕಗಳು/ ಸುಂಕಗಳ ಮರುಪಾವತಿಗಾಗಿ ಇದು ಡಬ್ಲ್ಯುಟಿಒ ಹೊಂದಾಣಿಕೆಯ ಕಾರ್ಯವಿಧಾನವಾಗಿದೆಪ್ರಸ್ತುತ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಬೇರೆ ಯಾವುದೇ ಕಾರ್ಯವಿಧಾನದ ಅಡಿಯಲ್ಲಿಯೂ ಮರುಪಾವತಿ ವ್ಯವಸ್ಥೆ ಇಲ್ಲ.
 4. ಆರ್‌ಒಎಸ್‌ಸಿಟಿಎಲ್ ಯೋಜನೆಯ ಮೂಲಕ ಜವಳಿ ಕ್ಷೇತ್ರಕ್ಕೆ ಕೇಂದ್ರ/ ರಾಜ್ಯ ತೆರಿಗೆಗಳ ವಿನಾಯ್ತಿ ಬೆಂಬಲವನ್ನು ಹೆಚ್ಚಿಸಲಾಯಿತು, ಇದನ್ನು ಈಗ ಮಾರ್ಚ್ 2024 ರವರೆಗೆ ವಿಸ್ತರಿಸಲಾಗಿದೆ
 5. ವ್ಯಾಪಾರಕ್ಕೆ ಅನುಕೂಲವಾಗುವಂತೆ ಮತ್ತು ರಫ್ತುದಾರರಿಂದ ಎಫ್ ಟಿ ಬಳಕೆಯನ್ನು ಹೆಚ್ಚಿಸಲು ಮೂಲ ಪ್ರಮಾಣಪತ್ರಕ್ಕಾಗಿ ಸಾಮಾನ್ಯ ಡಿಜಿಟಲ್ ವೇದಿಕೆಯನ್ನು ಆರಂಭಿಸಲಾಗಿದೆ
 6. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯಗಳಿಗೆ ಸಂಬಂಧಿಸಿದ ಕೃಷಿ ರಫ್ತುಗಳಿಗೆ ಉತ್ತೇಜನ ನೀಡಲು ಸಮಗ್ರ "ಕೃಷಿ ರಫ್ತು ನೀತಿ" ಅನುಷ್ಠಾನದಲ್ಲಿದೆ
 7. 12 ಚಾಂಪಿಯನ್ ಸೇವಾ ವಲಯಗಳಿಗೆ ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಅನುಸರಿಸುವ ಮೂಲಕ ಸೇವೆಗಳ ರಫ್ತುಗಳನ್ನು ಉತ್ತೇಜಿಸಲಾಗುತ್ತಿದೆ ಮತ್ತು ವೈವಿಧ್ಯಗೊಳಿಸಲಾಗುತ್ತಿದೆ.
 8. ಪ್ರತಿ ಜಿಲ್ಲೆಯಲ್ಲಿ ರಫ್ತು ಸಾಮರ್ಥ್ಯವಿರುವ ಉತ್ಪನ್ನಗಳನ್ನು ಗುರುತಿಸುವ ಮೂಲಕ ಜಿಲ್ಲೆಗಳನ್ನು ರಫ್ತು ಕೇಂದ್ರಗಳಾಗಿ ಉತ್ತೇಜಿಸಲಾಗುವುದು. ಉತ್ಪನ್ನಗಳನ್ನು ರಫ್ತು ಮಾಡಲು ಇರುವ ಅಡೆತಡೆಗಳನ್ನು ಪರಿಹರಿಸಲಾಗುತ್ತಿದೆ ಮತ್ತು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಸ್ಥಳೀಯ ರಫ್ತುದಾರರು/ತಯಾರಕರನ್ನು ಬೆಂಬಲಿಸಲಾಗುತ್ತಿದೆ.
 9. ಭಾರತದ ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಹೂಡಿಕೆಯ ಗುರಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿದೇಶದಲ್ಲಿರುವ ಭಾರತೀಯ ದೂತವಾಸಗಳ ಸಕ್ರಿಯ ಪಾತ್ರವನ್ನು ಹೆಚ್ಚಿಸಲಾಗಿದೆ.
 10. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶೀಯ ಉದ್ಯಮವನ್ನು ವಿವಿಧ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಪರಿಹಾರ ಕ್ರಮಗಳ ಮೂಲಕ ಬೆಂಬಲಿಸಲು ವಿಶೇಷವಾಗಿ ರಫ್ತಿನಲ್ಲಿ ಪ್ರಮುಖ ಪಾಲು ಹೊಂದಿರುವ ಎಂ ಎಸ್ ಎಂ ಗಳಿಗೆ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ.
 11. ವ್ಯಾಪಾರ ಮೂಲಸೌಕರ್ಯ ಮತ್ತು ಮಾರುಕಟ್ಟೆಗಳನ್ನು ಉತ್ತೇಜಿಸಲು ರಫ್ತು ಯೋಜನೆಗಾಗಿ ವ್ಯಾಪಾರ ಮೂಲಸೌಕರ್ಯ (ಟಿಐಇಎಸ್), ಮಾರುಕಟ್ಟೆ ಪ್ರವೇಶ ಉಪಕ್ರಮಗಳು (ಎಂಎಐ) ಯೋಜನೆ ಮತ್ತು ಸಾರಿಗೆ ಮತ್ತು ಮಾರುಕಟ್ಟೆ ನೆರವು (ಟಿಎಂಎ) ಯೋಜನೆಗಳನ್ನು ಜಾರಿ ಮಾಡಲಾಗಿದೆ.

***(Release ID: 1759354) Visitor Counter : 87