ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ರಾಷ್ಟ್ರವ್ಯಾಪಿ ತಿಂಗಳಿಡಿ ನಡೆಯಲಿರುವ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿಂದ ಚಾಲನೆ ನೀಡಲಿರುವ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್


ಆಜಾ಼ದಿ ಕಾ ಅಮೃತಮಹೋತ್ಸವದ ಭಾಗವಾಗಿ ಕೈಗೆತ್ತಿಕೊಂಡಿರುವ ಈ ಸ್ವಚ್ಛತಾ ಅಭಿಯಾನದಲ್ಲಿ ತ್ಯಾಜ್ಯವನ್ನು, ಅದರಲ್ಲೂ ಮುಖ್ಯವಾಗಿ ಬಿಡಿ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆಯಲು ಜನತೆ ಪಾಲ್ಗೊಳ್ಳುವುದನ್ನು ಖಾತ್ರಿಪಡಿಸುವ ಉದ್ದೇಶ

Posted On: 29 SEP 2021 4:22PM by PIB Bengaluru

ಭಾರತ ಸರ್ಕಾರದ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆ ಜಾ಼ದಿ ಕಾ ಅಮೃತ ಮಹೋತ್ಸವ ಆಚರಣೆ ಅಂಗವಾಗಿ 2021 ಅಕ್ಟೋಬರ್ 1 ರಿಂದ ಅಕ್ಟೋಬರ್ 31ರವರೆಗೆ ರಾಷ್ಟ್ರವ್ಯಾಪಿ ಸ್ವಚ್ಛ ಭಾರತ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮವನ್ನು ದೇಶಾದ್ಯಂತ 744 ಜಿಲ್ಲೆಗಳ 6 ಲಕ್ಷ ಗ್ರಾಮಗಳಲ್ಲಿ ತನ್ನ ನೆಹರು ಯುವ ಕೇಂದ್ರ ಸಂಘಟನೆಗಳು (ಎನ್ ವೈಕೆಎಸ್ ) ಮತ್ತು ಮಾನ್ಯತೆ ಪಡೆದಿರುವ ಯೂತ್ ಕ್ಲಬ್ ಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮಾನ್ಯತೆ ಪಡೆದ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾಗುವುದು.

 

ನವದೆಹಲಿಯಲ್ಲಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಯುವಜನ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ, ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿಂದ ರಾಷ್ಟ್ರವ್ಯಾಪಿ ತಿಂಗಳೀಡಿ ನಡೆಯಲಿರುವ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ತ್ಯಾಜ್ಯವನ್ನು, ಅದರಲ್ಲೂ ಮುಖ್ಯವಾಗಿ ಬಿಡಿ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆಯಲು ಜನತೆ ಪಾಲ್ಗೊಳ್ಳುವುದನ್ನು ಖಾತ್ರಿಪಡಿಸುವುದು, ಅವರನ್ನು ಒಗ್ಗೂಡಿಸುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಸ್ವಚ್ಛತಾ ಅಭಿಯಾನದ ಉದ್ದೇಶ ಎಂದು ಅವರು ವಿವರಿಸಿದರು. ಬೃಹತ್ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸ್ವಯಂ ಪಾಲ್ಗೊಳ್ಳುವಿಕೆ ಮತ್ತು ಬೆಂಬಲದಿಂದ 75 ಲಕ್ಷ ಕೆ.ಜಿ. ತ್ಯಾಜ್ಯ, ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು ಮತ್ತು ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.

ಪ್ರಕಟಣೆಗೂ ಮುನ್ನ, ಶ್ರೀ ಅನುರಾಗ್ ಸಿಂಗ್ ಠಾಕೂರ್, 75 ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ರಾಷ್ಟ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಪಣ ತೊಡಬೇಕು ಎಂದು ಹೇಳಿದರು.

ವ್ಯಾಪ್ತಿ ಮತ್ತು ಜನಸಂಪರ್ಕ ಎರಡರ ದೃಷ್ಟಿಯಿಂದಲೂ ಕಾರ್ಯಕ್ರಮ ಅತ್ಯಂತ ವಿಭಿನ್ನವಾದುದು ಮತ್ತು ಜನ ಭಾಗಿದಾರಿಯಿಂದ ಜನಾಂದೋಲನ ಮಾದರಿಯಲ್ಲಿ ಇದನ್ನು ದೃಶ್ಯೀಕರಿಸಿಕೊಳ್ಳಬಹುದು. ಇದರ ಮೂಲಕ ಪ್ರತಿ ಪ್ರಜೆಯ ಕೊಡುಗೆ ಮತ್ತು ಪಾತ್ರವನ್ನು ಕಾರ್ಯಕ್ರಮದ ಯಶಸ್ಸು ಮತ್ತು ಸುಸ್ಥಿರತೆಯಲ್ಲಿ ಗುರುತಿಸಲಾಗುವುದು.

ಸ್ವಚ್ಛ ಭಾರತ ಕಾರ್ಯಕ್ರಮದ ಕೇಂದ್ರ ಬಿಂದು ಗ್ರಾಮವಾದರೂ ಸಹ, ನಿರ್ದಿಷ್ಠವಾಗಿ ಧಾರ್ಮಿಕ ಸಂಸ್ಥೆಗಳು, ಶಿಕ್ಷಕರು, ಕಾರ್ಪೋರೇಟ್ ಸಂಸ್ಥೆಗಳು, ಟಿವಿ ಮತ್ತು ಚಿತ್ರ ನಟರು, ಮಹಿಳಾ ಗುಂಪುಗಳು ಮತ್ತು ಇತರೆ ಸಂಸ್ಥೆಗಳೂ ಸಹ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ನಿರ್ದಿಷ್ಟ ದಿನಗಳಂದು  ಭಾಗವಹಿಸಿ ತಮ್ಮ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ ಮತ್ತು ಅದನ್ನು ಸಾರ್ವಜನಿಕ ಚಳವಳಿಯನ್ನಾಗಿ ಮಾಡಿದ್ದಾರೆ

ತ್ಯಾಜ್ಯ ಸಂಗ್ರಹಣಾ ಚೀಲಗಳನ್ನು ಇಡಲು ಮತ್ತು ನಂತರ ಜಿಲ್ಲಾಡಳಿತ ಹಾಗೂ ಮುನಿಸಿಪಲ್ ಕಾರ್ಪೋರೇಷನ್ ಗಳ ಮೂಲಕ ನಿರ್ದಿಷ್ಟ ಜಾಗಗಳಲ್ಲಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಎಚ್ಚರಿಕೆಯ ಯೋಜನೆಗಳನ್ನು ರೂಪಿಸಲಾಗಿದೆ. ಇಷ್ಟೇ ಅಲ್ಲದೆ, ಸಂಗ್ರಹ ಮಾಡಲಾದ ತ್ಯಾಜ್ಯವನ್ನು ತೂಕ ಮಾಡಲಾಗುವುದು ಮತ್ತು ಸ್ವೀಕೃತಿ ಪತ್ರವನ್ನೂ ಸಹ ನೀಡಲಾಗುವುದು.

ಐತಿಹಾಸಿಕ/ಆಯಕಟ್ಟಿನ ಜಾಗಗಳು ಮತ್ತು ಬಸ್ ನಿಲ್ದಾಣ/ರೈಲು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಮತ್ತು ಶಿಕ್ಷಣ ಸಂಸ್ಥೆಗಳಂತಹ ಜನದಟ್ಟಣೆ ಜಾಗಗಳಲ್ಲಿ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಗುವುದು.

ಕಾರ್ಯಕ್ರಮದ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ವಚ್ಛ ಭಾರತ ಕೇವಲ ಒಂದು ಕಾರ್ಯಕ್ರಮವಾಗಿಲ್ಲ, ಅದು ಸಾಮಾನ್ಯ ಜನರ ನಿಜವಾದ ಕಾಳಜಿಯನ್ನು ಮತ್ತು ಸಮಸ್ಯೆಗೆ ನೇರ ಪರಿಹರಿಸುವ ಅವರ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014ರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು ಮತ್ತು ಅಂದಿನಿಂದ ಇದು ಗಮನಾರ್ಹವಾಗಿ ಮುನ್ನಡೆದಿರುವುದನ್ನು ನಾವು ನೋಡಬಹುದಾಗಿದೆ. ಸ್ವಚ್ಛ ಭಾರತ ಕಾರ್ಯಕ್ರಮವು ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ವಿಶೇಷ ಗಮನ ಮತ್ತು ಬದ್ಧತೆಯಿಂದ ಮುಂದುವರಿದಿದೆ.

ಸ್ವಚ್ಛ ಭಾರತ ಕಾರ್ಯಕ್ರಮದ ಭಾಗವಾಗಲು ಜನತೆಗೆ ನಿಜಕ್ಕೂ ಇದೊಂದು ಉತ್ತಮ ಅವಕಾಶವಾಗಿದೆ. ಯುವಕರು, ನಾಗರಿಕರು ಮತ್ತು ಎಲ್ಲ ಪಾಲುದಾರರ ಬೆಂಬಲದೊಂದಿಗೆ, ಭಾರತವು ನಿಸ್ಸಂದೇಹವಾಗಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತದೆ ಮತ್ತು ತನ್ನ ಪ್ರಜೆಗಳಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ.

***


(Release ID: 1759336) Visitor Counter : 274