ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ನವದೆಹಲಿಯ ಏಮ್ಸ್ 66 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಮತ್ತು ರಾಜ್ಯ ಸಚಿವೆ ಡಾ.ಭಾರತಿ ಪವಾರ್


"ನವದೆಹಲಿಯ ಏಮ್ಸ್, ಆರೋಗ್ಯ ಕ್ಷೇತ್ರಕ್ಕೆ ಒಂದು ದೀಪಸ್ತಂಭವಾಗಿದೆ"

ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದಾಗಿ ಇಂದು ಭಾರತದಲ್ಲಿ ಅಭಿವೃದ್ಧಿಯು ಆರೋಗ್ಯದೊಂದಿಗೆ ಬೆಸೆದಿದೆ: ಕೇಂದ್ರ ಆರೋಗ್ಯ ಸಚಿವರು

"ಅಂತ್ಯೋದಯದ ತತ್ವಗಳು, ಬಡವರ ಏಳಿಗೆ  ಮತ್ತು ಸರ್ವೋದಯ, ಎಲ್ಲರ ಅಭಿವೃದ್ಧಿಯು ಮಾರ್ಗದರ್ಶಕ ಬೆಳಕಾಗಿರಬೇಕು": ಡಾ. ಭಾರತಿ ಪ್ರವೀಣ್ ಪವಾರ್

Posted On: 25 SEP 2021 3:42PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಏಮ್ಸ್ ಅಧ್ಯಕ್ಷರಾದ ಶ್ರೀ ಮನ್ಸುಖ್ ಮಾಂಡವೀಯ ಅವರು ನವದೆಹಲಿಯ 66 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಉಪಸ್ಥಿತಿರಿದ್ದರು. 1956 ರಲ್ಲಿ ಏಮ್ಸ್ (ಎಐಐಎಂಎಸ್‌) ನ ಮೊದಲ ಬ್ಯಾಚ್ ಎಂಬಿಬಿಎಸ್ ತರಗತಿಗಳು ಈ ದಿನವು  ಆರಂಭವಾಗಿದ್ದವು.  ಈ ದಿನವನ್ನು ಸಂಸ್ಥಾಪನಾ ದಿನವಾಗಿ ಆಚರಿಸಲಾಗುತ್ತಿದೆ.

 

ಏಮ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಆರೋಗ್ಯ ಸಚಿವರು, ಯಶಸ್ಸು ಸಾಧಕರ ಮೇಲಿನ ನಿರೀಕ್ಷೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ವೈದ್ಯ ಸಮುದಾಯಕ್ಕೆ ತಿಳಿಸಿದರು. "ನವ ದೆಹಲಿಯ ಏಮ್ಸ್ ಭಾರತದಾದ್ಯಂತ ಹರಡಿರುವ ಎಲ್ಲಾ 22 ಹೊಸ ಏಮ್ಸ್ ಗಳಿಗೆ ದೀಪಸ್ತಂಭವಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶ್ರೀಮಂತ ಅನುಭವದ ಮೂಲಕ ಈ ಏಮ್ಸ್‌ನ ಯಶಸ್ಸನ್ನು ಭಾರತದಾದ್ಯಂತ ಪುನರಾವರ್ತಿಸಲು ಸಹಾಯ ಮಾಡಬಹುದು ಎಂದು ಸಚಿವರು ಹೇಳಿದರು.

ತಮ್ಮ ಆಸ್ಪತ್ರೆಗಳ ಭೇಟಿಯ ಅನುಭವವನ್ನು ಹಂಚಿಕೊಂಡ ಆರೋಗ್ಯ ಸಚಿವರು, "ನಾನು ಆಸ್ಪತ್ರೆಗೆ ಹೋದಾಗಲೆಲ್ಲ, ಅಲ್ಲಿ ಬೌನ್ಸರ್‌ಗಳನ್ನು ನೋಡಿ ತುಂಬಾ ಬೇಸರವಾಗುತ್ತದೆ, ಅಲ್ಲಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ, ಜಗಳವಾಡಲು ಅಲ್ಲ. ಆದರೆ ಅವರು ಜಗಳವಾಡುತ್ತಿದ್ದಾರೆ ಎಂದರೆ, ಅವರಿಗೆ ಸಿಟ್ಟು ಬಂದಿರುತ್ತದೆ ಮತ್ತು ಆ ಸಿಟ್ಟಿಗೆ ನಮ್ಮ ಕಡೆಯಿಂದ ಆಗಿರುವ ಲೋಪಗಳು ಕಾರಣವಾಗಿರಬಹುದು ಎಂದರು. “ವೈದ್ಯರು ರೋಗಿಯನ್ನು ದೇವರಂತೆ ನೋಡಿದಾಗ, ದೀರ್ಘ ಸರತಿ ಸಾಲುಗಳಲ್ಲಿರುವ ರೋಗಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ವಾಸ್ತವವಾಗಿ ಇದು ಈ ಉತ್ಸಾಹವಿದ್ದರೆ, ರೋಗಿಗಳ ಚಿಕಿತ್ಸೆಯು ಆದ್ಯತೆಯಾಗುತ್ತದೆ.” ಎಂದು ಸಚಿವರು ಹೇಳಿದರು.

"ದೇಶಭಕ್ತಿ ಗಡಿಯಲ್ಲಿ ನಿಂತಿರುವ ಸೈನಿಕರ ಜವಾಬ್ದಾರಿ ಮಾತ್ರವಲ್ಲ, ನಮ್ಮ ನಾಗರಿಕರ ಉತ್ತಮ ಆರೋಗ್ಯವನ್ನು ಖಾತ್ರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ನಮ್ಮ ಜನರ ಆರೋಗ್ಯವನ್ನು ದೇಶಭಕ್ತಿಯೊಂದಿಗೆ ಜೋಡಿಸಿದಾಗ ಧನಾತ್ಮಕ ಬದಲಾವಣೆಯಾಗುತ್ತದೆ” ಎಂದು ಅವರು ಹೇಳಿದರು.

ಸರ್ಕಾರದ ದೃಷ್ಟಿಕೋನದ ಕುರಿತು ಮಾತನಾಡಿದ ಅವರು, ಶ್ರೀ ನರೇಂದ್ರ ಮೋದಿಯವರ ಅವಿರತ ಪ್ರಯತ್ನದಿಂದಾಗಿ ಭಾರತದಲ್ಲಿ ಆರೋಗ್ಯ ರಕ್ಷಣೆಯು ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದೆ ಎಂದರು. "ಆರೋಗ್ಯ ಕ್ಷೇತ್ರದ ಬಜೆಟ್ ವೆಚ್ಚವು ಕಳೆದ ವರ್ಷಕ್ಕಿಂತ ಶೇ.137 ರಷ್ಟು ಹೆಚ್ಚಾಗಿ 2.7 ಲಕ್ಷ ಕೋಟಿಗೆ ತಲುಪಿದೆ.  ಆಯುಷ್ಮಾನ್ ಭಾರತ್ ದೇಶದಲ್ಲಿ ಆರೋಗ್ಯ ರಕ್ಷಣೆಯ ಪರಿವರ್ತನೆಗೆ ಕಾರಣವಾಗಿದೆ. ಈ ಯೋಜನೆಯ ಮೂಲಕ ಬಡ ರೋಗಿಗಳು ಸರ್ಕಾರೇತರ ಚಿಕಿತ್ಸಾ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದನ್ನು ಮೊದಲು ಇದನ್ನು ಹಣವಿದ್ದವರು ಮಾತ್ರ ಪಡೆಯುತ್ತಿದ್ದರು.  ಸರ್ಕಾರಗಳು ಕಾರ್ಯಕ್ರಮಗಳನ್ನು ಮಾತ್ರ ಪ್ರಾರಂಭಿಸಬಹುದು, ಸೇವಾ ಮನೋಭಾವದ ಉತ್ಸಾಹಿಗಳು ಸಮರ್ಪಣೆಯ ಭಾವನೆಯಿಂದ ಎಲ್ಲರಿಗೂ ಸೇವೆ ಸಲ್ಲಿಸಬೇಕು ಎಂದು ಅವರು ವೈದ್ಯ ಸಮುದಾಯಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಡಾ.ಭಾರತಿ ಪವಾರ್, ಐದು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಎಐಐಎಂಎಸ್ ಸಮುದಾಯದ ನಿರಂತರ ಮತ್ತು ನಿಸ್ವಾರ್ಥ ಪ್ರಯತ್ನಗಳನ್ನು ಶ್ಲಾಘಿಸಿದರು. "1994 ರಲ್ಲಿ ಭಾರತದಲ್ಲಿ ಮೊದಲ ಹೃದಯ ಕಸಿ, 2005 ರಲ್ಲಿ ಮೊದಲ ರೊಬೊಟಿಕ್ ಶಸ್ತ್ರಚಿಕಿತ್ಸೆ, 2014 ರಲ್ಲಿ ಮೊದಲ ಟಿಎಂಜೆ (ಟೋಟಲ್ ಟೆಂಪೊರೊಮಾಂಡಿಬ್ಯುಲರ್ ಜಾಯಿಂಟ್) ಬದಲಾವಣೆಯೊಂದಿಗೆ, ಏಮ್ಸ್ ಖ್ಯಾತಿಯನ್ನು ಗಳಿಸಿದೆ. ಶೈಕ್ಷಣಿಕ, ಸಂಶೋಧನೆ ಮತ್ತು ರೋಗಿಗಳ ಆರೈಕೆಯಲ್ಲಿ ಗಣನೀಯ ಕೊಡುಗೆ ನೀಡಿದೆ.”  ಎಂದು ಅವರು ಹೇಳಿದರು. ಅಂತ್ಯೋದಯ ಮತ್ತು ಸರ್ವೋದಯದ ಬಗ್ಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಮೊದಲ 24 ಗಂಟೆಗಳ ಉಚಿತ ಚಿಕಿತ್ಸೆ ಮತ್ತು ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಬಗ್ಗೆ ಅಭಿನಂದಿಸಿದರು ಮತ್ತು ದಾದಿಯರು, ಸ್ವಾಗತಕಾರರು ಮತ್ತು ಸಿಬ್ಬಂದಿಯು ರೋಗಿಗಳ ಬಗ್ಗೆ ಸಹಾನುಭೂತಿ ತೋರಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ, ಶ್ರೀ ಮಾಂಡವೀಯ ಮತ್ತು ಡಾ.ಪವಾರ್ ಅವರು 33 ಪ್ರಶಸ್ತಿಗಳು ಮತ್ತು ಪದಕಗಳನ್ನು ಬೋಧಕವರ್ಗ ಮತ್ತು ಪದವೀಧರ ವಿದ್ಯಾರ್ಥಿಗಳಿಗೆ ನೀಡಿದರು. ತಮ್ಮ ಜೀವನದ ಆರಂಭಿಕ ದಿನಗಳಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಪ್ರಬಂಧವನ್ನು ಬರೆದಿದ್ದಕ್ಕಾಗಿ ತಮ್ಮನ್ನು ಅಭಿನಂದಿಸಿದ ಘಟನೆಯನ್ನು ನೆನಪು ಮಾಡಿಕೊಂಡ ಶ್ರೀ ಮಾಂಡವಿಯ ಅವರು, ಇದು ಈ ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನವನ್ನು ಕೈಗೊಳ್ಳಲು ಮತ್ತು ಇಂದಿನ ತಮ್ಮ ಜೀವನವನ್ನು ರೂಪಿಸಲು ಪ್ರೋತ್ಸಾಹಿಸಿತು ಎಂದರು.

 

ಆರ್‌ಎಕೆ ಕಟ್ಟಡದಲ್ಲಿ 50 ಲ್ಯಾಬೊರೇಟರಿ ಡಯಾಗ್ನೋಸ್ಟಿಕ್ ಪರೀಕ್ಷೆಗಳನ್ನು ನಡೆಸುವ ಮತ್ತು 2-3 ಗಂಟೆಗಳಲ್ಲಿ ಫಲಿತಾಂಶಗಳನ್ನು ನೀಡಬಲ್ಲ ಉನ್ನತ ಥ್ರೋಪುಟ್ ಲ್ಯಾಬ್ ಅನ್ನು ಕೇಂದ್ರ ಆರೋಗ್ಯ ಸಚಿವರು ಡಿಜಿಟಲ್ ಆಗಿ ಉದ್ಘಾಟಿಸಿದರು. ಅವರು ರಾಜ್ಯ ಸಚಿವರೊಂದಿಗೆ, "ಡಿಜಿಟಲ್ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ" ವಿಷಯ ಕುರಿತ  ಪ್ರದರ್ಶನವನ್ನು ಉದ್ಘಾಟಿಸಿದರು. ಎಲ್ಲಾ ವಿಭಾಗಗಳು ವಿವಿಧ ವಿಷಯಗಳ ಕುರಿತು ಪ್ರದರ್ಶನಗಳನ್ನು ನೀಡಿವೆ.

ಏಮ್ಸ್ ನಿರ್ದೇಶಕ ಪ್ರೊ.ರಣದೀಪ್ ಗುಲೇರಿಯಾ, ಜಂಟಿ ಕಾರ್ಯದರ್ಶಿ (ಆರೋಗ್ಯ ಸಚಿವಾಲಯ) ಶ್ರೀ ವಿಶಾಲ್ ಚೌಹಾಣ್ ಮತ್ತು ಏಮ್ಸ್ ಉಪ ನಿರ್ದೇಶಕಿ ಡಾ.ಅನಿತಾ ಸಕ್ಸೇನಾ, ನವದೆಹಲಿಯ ಏಮ್ಸ್ ಡೀನ್ (ಅಕಾಡೆಮಿಕ್ಸ್) ಡಾ.ಪೂಷ್ ಸಾಹ್ನಿ, ವೈಜ್ಞಾನಿಕ ಪ್ರದರ್ಶನ ಸಮಿತಿಯ ಅಧ್ಯಕ್ಷ ಮತ್ತು ಇತರ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು https://youtu.be/FZ1q1F40LVY ನಲ್ಲಿ ವೆಬ್‌ಕಾಸ್ಟ್ ಮಾಡಲಾಯಿತು.

***



(Release ID: 1758140) Visitor Counter : 231