ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ವೈದ್ಯಕೀಯ ಸಾಧನಗಳನ್ನು ಬೆಂಬಲಿಸುವ ಪ್ರಮುಖ ಉಪಕ್ರಮವಾದ "ವೈದ್ಯಕೀಯ ಸಾಧನ ಪಾರ್ಕ್‌ಗಳ ಉತ್ತೇಜನ"ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿದೆ
400 ಕೋಟಿ ರೂ.ಗಳ ಹಣಕಾಸು ನಿಧಿಯೊಂದಿಗೆ ಈ ಯೋಜನೆಯು ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ, ಸಂಪನ್ಮೂಲಗಳನ್ನು ಉತ್ತಮಗೊಳಿಸುವ, ಪರಿಮಾಣದ ಆರ್ಥಿಕತೆಗಳನ್ನು ನಿರ್ಮಿಸುವ ಮತ್ತು ಪ್ರಮಾಣಿತ ಪರೀಕ್ಷೆ ಮತ್ತು ಮೂಲಸೌಕರ್ಯ ಸೌಲಭ್ಯಗಳಿಗೆ ಸುಲಭ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ
ಹಿಮಾಚಲ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ಈ ಯೋಜನೆಯಡಿ ʻವೈದ್ಯಕೀಯ ಸಾಧನ ಪಾರ್ಕ್ʼಗಳನ್ನು ಸ್ಥಾಪಿಸಲು "ತಾತ್ವಿಕ" ಅನುಮೋದನೆ ಪಡೆದಿವೆ
Posted On:
24 SEP 2021 2:41PM by PIB Bengaluru
ಭಾರತವನ್ನು 'ಆತ್ಮನಿರ್ಭರ್' ಮಾಡುವ ದಿಟ್ಟ ಕ್ರಮದಲ್ಲಿ, ಭಾರತ ಸರ್ಕಾರವು ಮುಂಬರುವ ವರ್ಷಗಳಲ್ಲಿ ವೈದ್ಯಕೀಯ ಸಾಧನಗಳ ಉದ್ಯಮವನ್ನು ಅದರ ಗರಿಷ್ಠ ಸಾಮರ್ಥ್ಯವನ್ನು ತಲುಪಲು ಬೆಂಬಲಿಸಲು ಪ್ರಮುಖ ಉಪಕ್ರಮವನ್ನು ಕೈಗೊಂಡಿದೆ. ಈ ಉದ್ಯಮವನ್ನು ಉತ್ಪನ್ನಗಳ ವೈವಿಧ್ಯತೆ ಮತ್ತು ಉದ್ಯೋಗ ಸೃಷ್ಟಿಗೆ ಅತ್ಯಧಿಕ ಸಾಮರ್ಥ್ಯವನ್ನು ಹೊಂದಿರುವ ಉದಯೋನ್ಮುಖ ವಲಯವಾಗಿ ಗುರುತಿಸಲಾಗಿದೆ. ಈ ವಲಯದಲ್ಲಿ ಸೂಕ್ತ ಮೂಲಸೌಕರ್ಯಗಳ ಸೃಷ್ಟಿಗಾಗಿ ಹೆಚ್ಚಿನ ಮಟ್ಟದ ಹೂಡಿಕೆಗಳ ಅಗತ್ಯವನ್ನು ಗುರುತಿಸಿದ ಔಷಧ ಇಲಾಖೆಯು ಈ ಕೆಳಗಿನ ಉದ್ದೇಶಗಳೊಂದಿಗೆ "ವೈದ್ಯಕೀಯ ಸಾಧನ ಪಾರ್ಕ್‌ಗಳ ಉತ್ತೇಜನ" ಯೋಜನೆಗೆ ಅಧಿಸೂಚನೆ ಹೊರಡಿಸಿದೆ.
ಎ. ವಿಶ್ವದರ್ಜೆಯ ಸಾಮಾನ್ಯ ಮೂಲಸೌಕರ್ಯಗಳ ಸೃಷ್ಟಿ ಮೂಲಕ ಪ್ರಮಾಣಿತ ಪರೀಕ್ಷೆ ಮತ್ತು ಮೂಲಸೌಕರ್ಯ ಸೌಲಭ್ಯಗಳಿಗೆ ಸುಲಭ ಪ್ರವೇಶ ಕಲ್ಪಿಸುವುದರಿಂದ ವೈದ್ಯಕೀಯ ಸಾಧನಗಳ ಉತ್ಪಾದನಾ ವೆಚ್ಚವನ್ನು ಗಮನೀಯವಾಗಿ ಕಡಿಮೆ ಮಾಡಬಹುದು. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ವೈದ್ಯಕೀಯ ಸಾಧನಗಳ ಉತ್ತಮ ಲಭ್ಯತೆ ಮತ್ತು ಕೈಗೆಟುಕುವ ದರ ನಿಗದಿಗೆ ದಾರಿಯಾಗುತ್ತದೆ.
ಬಿ. ಸಂಪನ್ಮೂಲಗಳು ಮತ್ತು ಪ್ರಮಾಣ ಆರ್ಥಿಕತೆಗಳ ಗರಿಷ್ಠ ಸದ್ಬಳಕೆಯಿಂದ ಉದ್ಭವಿಸುವ ಪ್ರಯೋಜನಗಳನ್ನು ಪಡೆಯುವುದು.
ಈ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವ ವೈದ್ಯಕೀಯ ಸಾಧನಗಳ ಪಾರ್ಕ್‌ಗಳು ಒಂದೇ ಸ್ಥಳದಲ್ಲಿ ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುತ್ತವೆ. ಆ ಮೂಲಕ ದೇಶದಲ್ಲಿ ವೈದ್ಯಕೀಯ ಸಾಧನ ತಯಾರಿಕೆಗೆ ದೃಢವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತವೆ. ಜೊತೆಗೆ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಈ ಯೋಜನೆಯ ಒಟ್ಟು ವೆಚ್ಚ 400 ಕೋಟಿ ರೂ. ಮತ್ತು ಯೋಜನೆಯ ಅವಧಿ ಹಣಕಾಸು ವರ್ಷ 2021-21ರಿಂದ ಹಣಕಾಸು ವರ್ಷ 2024-25ರವರೆಗೂ ಇರಲಿದೆ. ಆಯ್ಕೆಯಾದ ʻವೈದ್ಯಕೀಯ ಸಾಧನ ಪಾರ್ಕ್ʼ ಯೋಜನೆಯೊಂದಕ್ಕೆ ಅದರ ಸಾಮಾನ್ಯ ಮೂಲಸೌಕರ್ಯ ಸೃಷ್ಟಿಗೆ ಆಗುವ ಯೋಜನಾ ವೆಚ್ಚದಲ್ಲಿ 70%ರಷ್ಟನ್ನು ಆರ್ಥಿಕ ನೆರವಿನ ರೂಪದಲ್ಲಿ ನೀಡಲಾಗುತ್ತದೆ. ಈಶಾನ್ಯ ರಾಜ್ಯಗಳು ಮತ್ತು ಗುಡ್ಡಗಾಡು ರಾಜ್ಯಗಳ ವಿಚಾರದಲ್ಲಿ, ಯೋಜನಾ ವೆಚ್ಚದ 90%ರಷ್ಟು ಆರ್ಥಿಕ ನೆರವು ನೀಡಲಾಗುವುದು. ಯಾವುದೇ ಒಂದು ʻವೈದ್ಯಕೀಯ ಸಾಧನ ಪಾರ್ಕ್ʼಗೆ ಈ ಯೋಜನೆಯಡಿ ನೀಡಲಾಗುವ ಗರಿಷ್ಠ ನೆರವನ್ನು 100 ಕೋಟಿ ರೂ.ಗಳಿಗೆ ಸೀಮಿತಗೊಳಿಸಲಾಗಿದೆ.
ಈ ಯೋಜನೆಯಡಿ ಒಟ್ಟಾರೆಯಾಗಿ 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಯ್ಕೆ ಪ್ರಕ್ರಿಯೆಯು ಸವಾಲಿನ ವಿಧಾನವನ್ನು ಆಧರಿಸಿದ್ದು, ಯೋಜನೆಯ ಮೌಲ್ಯಮಾಪನದಲ್ಲಿ ನಿಗದಿತ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕ ನೀಡುವ ವಿಧಾನವು
ಯೋಜನೆಯ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾದ ಮಾನದಂಡಗಳನ್ನು ಆಧರಿಸಿದೆ. ಇವುಗಳಲ್ಲಿ ಬಳಕೆ ಶುಲ್ಕಗಳು, ರಾಜ್ಯ ನೀತಿ ಪ್ರೋತ್ಸಾಹಕಗಳು, ಪಾರ್ಕ್‌ನ ಒಟ್ಟು ಪ್ರದೇಶ, ಭೂಮಿಯ ಗುತ್ತಿಗೆ ದರ, ಪಾರ್ಕ್‌ಗೆ ಸಂಪರ್ಕ ವ್ಯವಸ್ಥೆ, ಸುಗಮ ವ್ಯವಹಾರ ಶ್ರೇಯಾಂಕ, , ತಾಂತ್ರಿಕ ಕೌಶಲವುಳ್ಳ ಮಾನವಸಂಪನ್ಮೂಲದ ಲಭ್ಯತೆ ಇತ್ಯಾದಿಗಳು ಸೇರಿವೆ. ಮೌಲ್ಯಮಾಪನದ ಆಧಾರದ ಮೇಲೆ, ಹಿಮಾಚಲ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯ ಸರಕಾರಗಳ ಪ್ರಸ್ತಾಪಗಳಿಗೆ ಈ ಯೋಜನೆಯಡಿ "ತಾತ್ವಿಕ" ಅನುಮೋದನೆ ನೀಡಲಾಗಿದೆ. ಸದರಿ ರಾಜ್ಯಗಳನ್ನು ಹಣಕಾಸಿನ ಸಾಮರ್ಥ್ಯ, ಪರಿಸರ ವ್ಯವಸ್ಥೆಯ ಆಕರ್ಷಣೀಯತೆ ಮತ್ತು ಕೈಗಾರಿಕೆಗಳ ಉಪಸ್ಥಿತಿಯ ದೃಷ್ಟಿಯಿಂದ ಮತ್ತಷ್ಟು ಗುಣಾತ್ಮಕ ಮೌಲ್ಯಮಾಪನ ನಡೆಸಲಾಗಿದ್ದು, ಅದರಲ್ಲೂ ಈ ರಾಜ್ಯಗಳ ಆಯ್ಕೆ ಸಮರ್ಥನೀಯವಾಗಿದೆ.
ಈ ಯೋಜನೆಯು ಸಹಕಾರ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಈ ವಲಯದ ಉತ್ತಮ ಕಾರ್ಯಕ್ಷಮತೆ ದೃಷ್ಟಿಯಿಂದ ʻವೈದ್ಯಕೀಯ ಸಾಧನ ಪಾರ್ಕ್ʼಗಳ ಅಭಿವೃದ್ಧಿಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಪಾಲುದಾರರಾಗಲಿವೆ.
***
(Release ID: 1757881)
Visitor Counter : 277