ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ನಂತರದ ಅನುಗತ ರೋಗಲಕ್ಷಣಗಳ ಆರೋಗ್ಯ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ


ಕೋವಿಡ್|ನಿಂದ ದೀರ್ಘಕಾಲದಲ್ಲಿ ಎದುರಾಗುವ ವ್ಯತಿರಿಕ್ತ ಪರಿಣಾಮಗಳ ಪರಿಹಾರ ಕುರಿತ ಆರೋಗ್ಯ ಮಾರ್ಗದರ್ಶಿ ಕೈಪಿಡಿಯು ವೈದ್ಯರು, ಆರೋಗ್ಯ ಸಂರಕ್ಷಣಾ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದೆ: ಶ್ರೀ ಮಾಂಡವಿಯಾ

ಸಮರ್ಪಕ ಜ್ಞಾನ ಮತ್ತು ತರಬೇತಿ ಮೂಲಕ ಮುಂಚೂಣಿ ಕಾರ್ಯಕರ್ತರನ್ನು ಸಜ್ಜುಗೊಳಿಸಿದರೆ, ಕೋವಿಡ್ ನಂತರದ ಸವಾಲುಗಳ ವಿರುದ್ಧದ ಹೋರಾಟಕ್ಕೆ ಅವರು ಮೌಲ್ಯಯುತ ಸಂಪನ್ಮೂಲಗಳಾಗುತ್ತಾರೆ: ಡಾ. ಭಾರತಿ ಪ್ರವೀಣ್ ಪವಾರ್

Posted On: 23 SEP 2021 12:42PM by PIB Bengaluru

ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳ ಮಾಹಿತಿಯುಳ್ಳ ಕೈಪಿಡಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರು ಬಿಡುಗಡೆ ಮಾಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೋವಿಡ್-19 ಸೋಂಕು ಕಾಣಿಸಿಕೊಂಡ ನಂತರ ಎದುರಾಗುವ ಅನುಗತ ರೋಗ ಲಕ್ಷಣಗಳನ್ನು ಅರಿತುಕೊಳ್ಳಲು ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಈ ಸರಣಿ ಕೈಪಿಡಿ ಮಾದರಿಯು ನೆರವಾಗಲಿದೆ. ಕೋವಿಡ್ ಸೋಂಕಿನ ದೀರ್ಘಕಾಲೀನ ಪರಿಣಾಮಗಳನ್ನು ಸಮರ್ಥವಾಗಿ ನಿರ್ವಹಿಸಲು ದೇಶಾದ್ಯಂತ ಇರುವ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ನಿರ್ಮಾಣಕ್ಕೆ ಈ ಕೈಪಿಡಿ ನೆರವಾಗಲಿದೆ.

https://static.pib.gov.in/WriteReadData/userfiles/image/image002EELN.jpg

ಆರೋಗ್ಯ ಮಾರ್ಗಸೂಚಿಗಳ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ವೈದ್ಯರು ಮತ್ತು ಆರೋಗ್ಯ ಸಂರಕ್ಷಣಾ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಆರೋಗ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಅವರು ಇದರಿಂದ ಕೋವಿಡ್ ನಂತರ ದೀರ್ಘಕಾಲೀನ ಪರಿಣಾಮಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಕನಿಷ್ಠ ಅಡ್ಡ ಪರಿಣಾಮಗಳು ಸಹ ಕಾಣಿಸಿಕೊಳ್ಳದಂತೆ ಹಾಗೂ ಚಿಕಿತ್ಸೆಯಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗದಂತೆ ನೋಡಿಕೊಳ್ಳಬೇಕಾದರೆ, ಕೋವಿಡ್-19  ಸೋಂಕಿಗೆ ಸಮಗ್ರ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವುದು ಅತ್ಯಗತ್ಯ ಎಂದು ಸಚಿವರು ತಿಳಿಸಿದರು.

ಹೆಚ್ಚಿನ ಡೋಸ್ ಸ್ಟಿರಾಯ್ಡ್ ತೆಗೆದುಕೊಂಡ ರೋಗಿಗಳಲ್ಲಿ ಕೋವಿಡ್ ನಂತರ ಕಾಣಿಸಿಕೊಂಡ ವ್ಯತಿರಿಕ್ತ ಪರಿಣಾಮಗಳನ್ನು ನಾವೆಲ್ಲಾ ನೋಡಿದ್ದೇವೆ. ಇಂತಹ  ಕೋವಿಡ್ ರೋಗಿಗಳಲ್ಲಿ ಮ್ಯೂಕರ್|ಮೈಕೊಸಿಸ್ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಹಾಗಾಗಿ, ಅತಿ ಕನಿಷ್ಠ ಅಡ್ಡ ಪರಿಣಾಮವೂ ಉಂಟಾಗದ ಔಷಧಗಳನ್ನು ತೆಗೆದುಕೊಳ್ಳುವುದು ಅತಿ ಮುಖ್ಯ. ನಾವು ಮೊದಲೇ ಎಚ್ಚೆತ್ತುಕೊಂಡರೆ ಕೋವಿಡ್|ನ ವ್ಯತಿರಿಕ್ತ ಪರಿಣಾಮಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗುತ್ತೇವೆ. ನಮ್ಮ ಸಮಾಜದಲ್ಲಿ ಮನೆ ಮಾಡಿರುವ ಕೋವಿಡ್ ನಂತರದ ಆತಂಕ, ಭಯ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸಮರ್ಥವಾಗಿ ಹತ್ತಿಕ್ಕುವುದು ಸಹ ಅತಿಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್ ಕಾಣಿಸಿಕೊಂಡ ನಂತರ ಜನರಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದು ಬಹುಮುಖ್ಯ. ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಸಂಪನ್ಮೂಲ ವ್ಯಕ್ತಿಗಳು ದೇಶಾದ್ಯಂತ ನಡೆಸಿದ ಪ್ರಯತ್ನಗಳನ್ನು ಆಧರಿಸಿ, ಆರೋಗ್ಯ ಮಾರ್ಗಸೂಚಿ ಕೈಪಿಡಿ ಸಿದ್ಧಪಡಿಸಲಾಗಿದೆ. ಇವುಗಳು ಆರೋಗ್ಯ ವೃತ್ತಿಪರರ ವಿವಿಧ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ ವಿಶೇಷ ಮಾಡ್ಯೂಲ್‌ಗಳಾಗಿವೆ ಎಂದು ಸಚಿವರು ತಿಳಿಸಿದರು.

https://static.pib.gov.in/WriteReadData/userfiles/image/image003586B.jpg

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಒತ್ತು ನೀಡಬೇಕು. ಗುರಿ ತಲುಪುವ ತನಕ ಪ್ರಯತ್ನ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ನಮ್ಮ ಆರೋಗ್ಯ ಮತ್ತು ಆರೋಗ್ಯ ಸಂರಕ್ಷಣಾ ವ್ಯವಸ್ಥೆಯ ಮೇಲೆ ಕೋವಿಡ್-19 ಹಿಂದೆಂದೂ ಕಾಣದ ಬಹುದೊಡ್ಡ ಸವಾಲನ್ನು ಹಾಕಿದೆ. ಮಾನಸಿಕ ಆರೋಗ್ಯ ನಿರ್ವಹಣೆಯು ಬೃಹತ್ ಜನಸಂಖ್ಯೆ ಹೊಂದಿರುವ ದೇಶಕ್ಕೆ ಬಹುದೊಡ್ಡ ಸವಾಲಾಗಿದೆ. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಬೇಕಾದರೆ, ನಾವು ಸಾಮರ್ಥ್ಯ ನಿರ್ಮಾಣ ಮಾಡುವ, ಹೆಚ್ಚಿಸುವ ಅಗತ್ಯವಿದೆ. ಮುಂಚೂಣಿ ಕಾರ್ಯಕರ್ತರನ್ನು ಸಮರ್ಪಕ ಜ್ಞಾನ ಮತ್ತು ಸೂಕ್ತ ತರಬೇತಿಯಿಂದ ಸಜ್ಜುಗೊಳಿಸಿದರೆ, ಕೋವಿಡ್ ನಂತರದ ಸವಾಲುಗಳನ್ನು ಹತ್ತಿಕ್ಕುವ ಹೋರಾಟಕ್ಕೆ ಅವರು ಮೌಲ್ಯಯತ ಸಂಪನ್ಮೂಲವಾಗುತ್ತಾರೆ. ಕೋವಿಡ್ ನಂತರದ ವ್ಯತಿರಿಕ್ತ ಪರಿಣಾಮಗಳ ವಿರುದ್ಧ ಹೋರಾಡಲು ತಾವು ನಮ್ಮಷ್ಟಕ್ಕೆ ಸಜ್ಜಾಗಲು ಪ್ರಯತ್ನಿಸುತ್ತಿರುವಾಗ, ಈ ಹೋರಾಟವನ್ನು ಕೊನೆಯ ತನಕ ಕೊಂಡೊಯ್ಯುವುದು ಸಹ ಅತಿಮುಖ್ಯ. ಮಾನಸಿಕ ಆರೋಗ್ಯ ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕೆ ತರಬೇತಿ ಮಾಡ್ಯುಲ್|ಗಳನ್ನು ಸಿದ್ಧಪಡಿಸಲಾಗಿದೆ. ರಾಜ್ಯಗಳ ಆರೋಗ್ಯ ತಜ್ಞರು ಹೊರಹಾಕಿದ ಅಗತ್ಯಗಳಿಗೆ ತಕ್ಕಂತೆ ಈ ತರಬೇತಿ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಕೋವಿಡ್-19 ಮನುಕುಲದ ಕೊನೆಯ ಸಾಂಕ್ರಾಮಿಕ ಸೋಂಕು ಎಂಬುದನ್ನು ಖಾತ್ರಿಪಡಿಸಲು ನಾವೆಲ್ಲಾ ಜತಗೂಡಿ ಕೆಲಸ ಮಾಡಬೇಕಿದೆ ಎಂದು ಸಚಿವೆ ಭಾರತಿ ಪ್ರವೀಣ್ ಪವಾರ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಸುನಿಲ್ ಕುಮಾರ್ ಮತ್ತು ಇತರೆ ಉನ್ನತಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

***



(Release ID: 1757310) Visitor Counter : 280