ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ಕೋವಿಡ್-19 ಸಮಾವೇಶದಲ್ಲಿ ಪ್ರಧಾನ ಮಂತ್ರಿ ಪ್ರತಿಕ್ರಿಯೆ: ಸಾಂಕ್ರಾಮಿಕ ಸೋಂಕು ನಿರ್ಮೂಲನೆ ಮಾಡಿ, ಭವಿಷ್ಯದ ಸಿದ್ಧತೆಗಾಗಿ ಉತ್ತಮ ಆರೋಗ್ಯ ಭದ್ರತೆಯ ಮರುನಿರ್ಮಾಣ

Posted On: 22 SEP 2021 10:49PM by PIB Bengaluru

ಮಹನೀಯರೆ,

ಕೋವಿಡ್-19 ಸಾಂಕ್ರಾಮಿಕ ಸೋಂಕು ಹಿಂದೆಂದೂ ಕಾಣದ ಮನುಕುಲದ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಅದು ಇನ್ನೂ ಮುಕ್ತಾಯವಾಗಿಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇನ್ನೂ ಕೋವಿಡ್-19 ಲಸಿಕೆ ಹಾಕಬೇಕಿದೆ. ಕಾರಣಕ್ಕಾಗಿಯೇ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಅವರು ಸಕಾಲದಲ್ಲಿ ಸಮಾವೇಶ ಆಯೋಜಿಸಿರುವುದು ಸ್ವಾಗತಾರ್ಹ.

ಗಣ್ಯರೇ,

ಭಾರತ ಸದಾ ಕಾಲವೂ ಇಡೀ ಮನುಕುಲವನ್ನು ಒಂದು ಕುಟುಂಬದಂತೆ ಕಾಣುತ್ತಾ ಬಂದಿದೆ. ಭಾರತದ ಔಷಧ ಉದ್ಯಮವು ವೆಚ್ಚ ಪರಿಣಾಮಕಾರಿಯಾದ ರೋಗ ಪತ್ತೆ ಕಿಟ್ ಗಳು, ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಪಿಪಿಇ ಕಿಟ್ ಗಳನ್ನು ಉತ್ಪಾದಿಸಿದೆ. ಎಲ್ಲಾ ಔಷಧ ಸಾಧನ ಸಲಕರಣೆಗಳನ್ನು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೈಗೆಟಕುವ ಬೆಲೆಗೆ ಒದಗಿಸುತ್ತಿದೆ. ನಾವೀಗ 150ಕ್ಕಿಂತ ಹೆಚ್ಚಿನ ರಾಷ್ಟ್ರಗಳಿಗೆ ಔಷಧಗಳು ಮತ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತಿದ್ದೇವೆ. ದೇಶೀಯವಾಗಿ ಅಭಿವೃದ್ಧಿಪಡಿಸಿರುವ 2 ಲಸಿಕೆಗಳಿಗೆ ಭಾರತದಲ್ಲಿತುರ್ತು ಬಳಕೆಯ ಪ್ರಮಾಣೀಕರಣಪಡೆದುಕೊಂಡಿವೆ. ವಿಶ್ವದ ಚೊಚ್ಚಲ ಡಿಎನ್ಎ ಆಧರಿತ ಲಸಿಕೆಗೂ ಪ್ರಮಾಣೀಕರಣ ಲಭಿಸಿದೆ.

ಭಾರತದ ಹಲವಾರು ಕಂಪನಿಗಳು ಪರವಾನಗಿ ಪಡೆದು ಹಲವಾರು ಲಸಿಕೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ.

ವರ್ಷದ ಆರಂಭದಲ್ಲಿ ನಾವು ನಮ್ಮ ಲಸಿಕೆಗಳನ್ನು 95 ರಾಷ್ಟ್ರಗಳೊಂದಿಗೆ ಹಂಚಿಕೊಂಡಿದ್ದೇವೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೂ ನಾವು ಲಸಿಕೆ ಪೂರೈಸಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಭಾರತ ಕೋವಿಡ್-19 2ನೇ ಅಲೆಯ ಸಂಕಷ್ಟದಲ್ಲಿದ್ದಾಗ ಇಡೀ ವಿಶ್ವವೇ ಒಂದು ಕುಟುಂಬದಂತೆ, ಭಾರತದ ಜತೆ ನಿಂತುಕೊಂಡಿತ್ತು, ಹೆಗಲು ನೀಡಿತು.

ಭಾರತಕ್ಕೆ ನೀವೆಲ್ಲಾ ನೀಡಿದ ಒಗ್ಗಟ್ಟು ಮತ್ತು ಬೆಂಬಲಕ್ಕಾಗಿ, ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಗಣ್ಯರೇ,

ಭಾರತವೀಗ ವಿಶ್ವದಲ್ಲೇ ಬೃಹತ್ ಆದ ಲಸಿಕಾ ಅಭಿಯಾನವನ್ನು ದೇಶಾದ್ಯಂತ ನಡೆಸುತ್ತಿದೆ. ಇತ್ತೀಚೆಗಷ್ಟೇ ನಾವು ಒಂದೇ ದಿನ ಸುಮಾರು 25 ದಶಲಕ್ಷ ಜನರಿಗೆ ಲಸಿಕೆ ಹಾಕಿದ್ದೇವೆ. ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯರು ಸೇರಿದಂತೆ ನಮ್ಮಲ್ಲಿರುವ ತಳಮಟ್ಟದ ಆರೋಗ್ಯ ವ್ಯವಸ್ಥೆಯ ಮೂಲಕ ಇಲ್ಲಿಯ ತನಕ 800 ದಶಲಕ್ಷ ಜನರಿಗೆ ಅಂದರೆ 80 ಕೋಟಿ ಜನರಿಗೆ ಲಸಿಕೆ ನೀಡಿದೆ.

200 ದಶಲಕ್ಷಕ್ಕಿಂತ ಹೆಚ್ಚಿನ ಜನರು ಅಂದರೆ 20 ಕೋಟಿಗಿಂತ ಹೆಚ್ಚಿನ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ನಮ್ಮ ಹೊಸತನದ ಡಿಜಿಟಲ್ ವೇದಿಕೆ ಕೊ-ವಿನ್ ಮೂಲಕ ಬೃಹತ್ ಲಸಿಕಾ ಅಭಿಯಾನ ಸಾಧ್ಯವಾಗಿದೆ.

ಭಾರತವು CO-WIN ಮತ್ತು ಇತರ ಹಲವು ಡಿಜಿಟಲ್ ಪರಿಹಾರಗಳನ್ನು ಮುಕ್ತ-ಮೂಲ ತಂತ್ರಾಂಶವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ. ಭಾರತದ ಹೊಸತನದಶೋಧನೆಯನ್ನು ವಿನಿಮಯ ಮಾಡಿಕೊಳ್ಳುವ ಸ್ಫೂರ್ತಿ ಇದಾಗಿದೆ.

ಮಹನೀಯರೆ,

ಭಾರತದ ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಜತೆಗೆ, ನಾವು ಈಗಿರುವ ಲಸಿಕೆಗಳ ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತಿದ್ದೇವೆ. ಏಕೆಂದರೆ, ನಾವು ಲಸಿಕೆ ಉತ್ಪಾದನೆಯನ್ನು ಹೆಚ್ಚು ಮಾಡಿದಂತೆ, ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಹೆಚ್ಚಿಸಲು ಸಾಧ್ಯವಾಗಲಿದೆ. ಇದಕ್ಕಾಗಿ, ಕಚ್ಚಾ ವಸ್ತುಗಳ ಪೂರೈಕೆ ಸರಪಳಿಯನ್ನು ಸದಾ ಮುಕ್ತವಾಗಿಡಬೇಕು. ತೆರೆದಿಡಬೇಕು.

ನಮ್ಮ ಕ್ವಾಡ್ (ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತ) ಅಥವಾ ನಾಲ್ವರು ಪಾಲುದಾರರೊಂದಿಗೆ , ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಲಸಿಕೆಗಳನ್ನು ತಯಾರಿಸುವ ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೇವೆ.

ಕೋವಿಡ್-19 ಲಸಿಕೆಗಳು, ರೋಗಗಳ ಪತ್ತೆ ಮತ್ತು ಔಷಧಗಳ ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದದಡಿ ಸುಂಕ ಮನ್ನಾ ಮಾಡುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ವಿಶ್ವ ವ್ಯಾಪಾರ ಸಂಘಟನೆಗೆ ಮನವಿ ಮಾಡಿವೆ.

ಡಬ್ಲ್ಯುಟಿಒ ನಮ್ಮ ಮನವಿಗೆ ಸ್ಪಂದಿಸಿದರೆ, ಕೋವಿಡ್ ಸಾಂಕ್ರಾಮಿಕ ಸೋಂಕಿನ ವಿರುದ್ಧದ ಹೋರಾಟವನ್ನು ತ್ವರಿತಗೊಳಿಸಲು ಸಾಧ್ಯವಾಗಲಿದೆ. ಸಾಂಕ್ರಾಮಿಕ ಸೋಂಕಿನಿಂದ ಎದುರಾಗುತ್ತಿರುವ ಆರ್ಥಿಕ ಪರಿಣಾಮಗಳ ಕಡೆಗೂ ನಾವು ಗಮನ ಹರಿಸಬೇಕಿದೆ.

ನಿಟ್ಟಿನಲ್ಲಿ, ಲಸಿಕೆ ಪ್ರಮಾಣಪತ್ರಗಳನ್ನು ಪರಸ್ಪರ ಗುರುತಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸಬೇಕು.

ಗಣ್ಯರೇ,

ನಾನು ಮತ್ತೊಮ್ಮೆ ಕ್ವಾಡ್ ಶೃಂಗಸಭೆಯ ಘನ ಉದ್ದೇಶಗಳನ್ನು ಮತ್ತು ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಅವರ ದೃಷ್ಟಿಕೋನವನ್ನು ಅನುಮೋದಿಸುತ್ತೇನೆ.

ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ತೊಲಗಿಸಲು ಇಡೀ ವಿಶ್ವದ ಜತೆ ಕೆಲಸ ಮಾಡಲು ಭಾರತ ಸದಾ ಸಿದ್ಧವಿದೆ.

ಧನ್ಯವಾದಗಳು.

ತುಂಬ ಧನ್ಯವಾದಗಳು.

***



(Release ID: 1757188) Visitor Counter : 229