ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಡಿಜಿಟಲ್ ಶಿಕ್ಷಣದ ಮೂಲಕ ಗುಣಮಟ್ಟದ ಶಿಕ್ಷಣ ಸಾರ್ವತ್ರೀಕರಣ ಕುರಿತು ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ


ಎಲ್ಲಾ ಹಂತದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಹಾಲಿ ವ್ಯವಸ್ಥೆಯನ್ನು ವಿಸ್ತರಿಸಲು ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ

Posted On: 22 SEP 2021 4:38PM by PIB Bengaluru

ಡಿಜಿಟಲ್ ಶಿಕ್ಷಣದ ಮೂಲಕ ಗುಣಮಟ್ಟದ ಶಿಕ್ಷಣ ಸಾರ್ವತ್ರೀಕರಣ ಕುರಿತು ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಶಿಕ್ಷಣ ಖಾತೆ ಸಹಾಯಕ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ, ಅನಿತಾ ಕರ‍್ವಾಲ್, ಕಾರ್ಯದರ್ಶಿ ಡಾ. ಟಿ.ಪಿ. ಸಿಂಗ್, ಪ್ರಸಾರ ಭಾರತಿ ಸಿಇಒ ಶಶಿ ಎಸ್. ವೆಂಪತಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಿಕ್ಷಣ ವ್ಯವಸ್ಥೆಯಲ್ಲಿ ಉಪಗ್ರಹ ತಂತ್ರಜ್ಞಾನ, ಅಂತರ್ಜಾಲ ಬಳಕೆ ಮೂಲಕ ಸಮಗ್ರ ಡಿಜಿಟಲ್ ಶಿಕ್ಷಣ ವ್ಯವಸ್ಥೆ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಸೇರಿದಂತೆ ಈಗಿರುವ ಶಿಕ್ಷಣ ವ್ಯವಸ್ಥೆಗೆ ತಂತ್ರಜ್ಞಾನ ಅಳವಡಿಸಲು ಇರುವ ಹೊಸತನದ ಕಾರ್ಯ ವಿಧಾನಗಳನ್ನು ರೂಪಿಸುವಂತೆ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದರು.

ಈಗಿರುವ ಸ್ವಯಂಪ್ರಭಾ ಉಪಕ್ರಮವನ್ನು ವಿಸ್ತರಿಸಲು ಮತ್ತು ಬಲಪಡಿಸಲು ಹಾಗೂ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪ ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯಂತಹ ಉಪಕ್ರಮಗಳನ್ನು ಮತ್ತಷ್ಟು ಸಮರ್ಥಗೊಳಿಸಲು ಇರುವ ಮಾರ್ಗೋಪಾಯಗಳನ್ನುಹುಡುಕುವಂತೆ ಸಚಿವರು ಸಲಹೆ ನೀಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲ್ ಶಿಕ್ಷಣ ಕಲಿಕೆಗೆ ಇರುವ ತಾರತಮ್ಯಗಳನ್ನು ನಿವಾರಿಸಿ, ಎಲ್ಲರಿಗೂ ಸಮಾನವಾಗಿ ಡಿಜಿಟಲ್ ಶಿಕ್ಷಣ ಲಭ್ಯವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವಾಲಯ, ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ, ದೂರಸಂಪರ್ಕ ಸಚಿವಾಲಯ, ಪ್ರಸಾರ ಭಾರತಿ, ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವಾಲಯ ಹಾಗೂ ಬಾಹ್ಯಾಕಾಶ ಸಚಿವಾಲಯದ ಉನ್ನತಾಧಿಕಾರಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ ಎಂದು ಸಚಿವರು ತಿಳಿಸಿದರು.

***



(Release ID: 1757063) Visitor Counter : 135