ಇಂಧನ ಸಚಿವಾಲಯ

ಭಾರತ ಸರಕಾರದ ಎಲ್ಲಾ ವಿದ್ಯುತ್ ಸಂಬಂಧಿತ ಯೋಜನೆಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು: ಇಂಧನ ಸಚಿವಾಲಯ


ಜನರಿಗೆ ವಿದ್ಯುತ್ ಸೇವೆಗಳ ಪೂರೈಕೆಯ ಪರಿಣಾಮವನ್ನೂ ಸಹ ಸಮಿತಿ ಪರಿಶೀಲಿಸಲಿದೆ

ಜಿಲ್ಲೆಯ ಅತ್ಯಂತ ಹಿರಿಯ ಸಂಸದರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು; ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇದರ ಸದಸ್ಯರಾಗಿರುತ್ತಾರೆ; ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ

Posted On: 17 SEP 2021 1:37PM by PIB Bengaluru

ಕೇಂದ್ರ ವಿದ್ಯುತ್ ಸಚಿವಾಲಯವು ಜಿಲ್ಲಾ ಮಟ್ಟದ ಸಮಿತಿಗಳನ್ನು ಸ್ಥಾಪಿಸಲು ಆದೇಶ ಹೊರಡಿಸಿದೆ. ಈ ಸಮಿತಿಯು ಭಾರತ ಸರಕಾರದ ಎಲ್ಲಾ ವಿದ್ಯುತ್ ಸಂಬಂಧಿತ ಯೋಜನೆಗಳ ಮೇಲ್ವಿಚಾರಣೆಯನ್ನು ನಡೆಸಲಿದೆ; ಹಾಗೆಯೇ ಜನರಿಗೆ ಸೇವೆಗಳನ್ನು ಒದಗಿಸುವಲ್ಲಿ ಅದರ ಪರಿಣಾಮವನ್ನೂ ಸಹ ಪರಿಶೀಲಿಸಲಿದೆ. ದೇಶದಲ್ಲಿ ವಿದ್ಯುತ್ ವಲಯದ ಸುಧಾರಣೆಗಳು ಮತ್ತು ಅವುಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಮೇಲ್ವಿಚಾರಣೆಯನ್ನು ಖಾತರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. 

ಸಮಿತಿಯ ರಚನೆ ಹೀಗಿದೆ:
(ಎ) ಜಿಲ್ಲೆಯ ಅತ್ಯಂತ ಹಿರಿಯ ಸಂಸದರು: ಅಧ್ಯಕ್ಷರು
(ಬಿ) ಜಿಲ್ಲೆಯ ಇತರ ಸಂಸತ್ ಸದಸ್ಯರು: ಸಹ-ಅಧ್ಯಕ್ಷರು
(ಸಿ) ಜಿಲ್ಲಾಧಿಕಾರಿ: ಸದಸ್ಯ ಕಾರ್ಯದರ್ಶಿ
(ಡಿ) ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು: ಸದಸ್ಯರು
(ಇ) ಜಿಲ್ಲೆಯ ಶಾಸಕರು: ಸದಸ್ಯರು
(ಎಫ್) ಸಂಬಂಧಪಟ್ಟ ಜಿಲ್ಲೆಯಲ್ಲಿರುವ ವಿದ್ಯುತ್, ಹೊಸ ಮತ್ತು ನವೀಕೃತ ಇಂಧನ ಸಚಿವಾಲಯದ ಅಡಿಯ ಸಾರ್ವಜನಿಕ ವಲಯದ ಸಂಸ್ಥೆಗಳ (ಸಿಪಿಎಸ್‌ಯು) ಅತ್ಯಂತ ಹಿರಿಯ ಪ್ರತಿನಿಧಿಗಳು ಅಥವಾ ಅವರಿಂದ ಜಿಲ್ಲೆಗೆ ನಾಮನಿರ್ದೇಶನಗೊಂಡ ಅಧಿಕಾರಿಗಳು.
(ಜಿ) ಡಿಸ್ಕಾಂ/ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಮುಖ್ಯ ಎಂಜಿನಿಯರ್ /ಸೂಪರಿಂಟೆಂಡಿಂಗ್ ಎಂಜಿನಿಯರ್

ಸರಕಾರದ ಯೋಜನೆಗಳಿಗೆ ಅನುಗುಣವಾಗಿ ಜಿಲ್ಲೆಯ ವಿದ್ಯುತ್ ಸರಬರಾಜು ಮೂಲಸೌಕರ್ಯದ ಒಟ್ಟಾರೆ ಅಭಿವೃದ್ಧಿಯನ್ನು ಪರಿಶೀಲಿಸಲು ಮತ್ತು ಸಮನ್ವಯಗೊಳಿಸಲು ಜಿಲ್ಲೆಯ ಸಮಿತಿಯು ಕನಿಷ್ಠ ಮೂರು ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರದಲ್ಲಿ ಸಭೆ ಸೇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ, ಈ ಸಭೆಯು ಕೆಳಗಿನ ಅಂಶಗಳನ್ನು ಒಳಗೊಂಡಿರಬಹುದು:

ಎ. ಭಾರತ ಸರಕಾರದ ಎಲ್ಲಾ ಯೋಜನೆಗಳು (ವಿದ್ಯುತ್ ಸಂಬಂಧಿತ), ಅವುಗಳ ಪ್ರಗತಿ ಮತ್ತು ಗುಣಮಟ್ಟದ ಸಮಸ್ಯೆಗಳು.
ಬಿ. ನಿಯಮಿತ ಕಾರ್ಯಾಚರಣೆಗಳು ಮತ್ತು ಸಂಪರ್ಕಜಾಲ ನಿರ್ವಹಣೆ ಒಳಗೊಂಡಂತೆ ಉಪ-ಪ್ರಸರಣ ಮತ್ತು ವಿತರಣಾ ಜಾಲದ ಅಭಿವೃದ್ಧಿ ಹಾಗೂ ಬಲಪಡಿಸುವಿಕೆ ಅಗತ್ಯವಿರುವ ಮತ್ತಷ್ಟು ಪ್ರದೇಶಗಳನ್ನು ಗುರುತಿಸುವುದು.
ಸಿ. ವಿದ್ಯುತ್ ಪೂರೈಕೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಮೇಲೆ ಕಾಮಗಾರಿಗಳ ಪರಿಣಾಮ ಪರಿಶೀಲನೆ.
ಡಿ. ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಪೂರೈಕೆಯ ಗ್ರಾಹಕ ಸೇವೆಗಳ ಗುಣಮಟ್ಟ ಪರಿಶೀಲನೆ.
ಇ. ದೂರುಗಳು ಮತ್ತು ಕುಂದುಕೊರತೆ ಪರಿಹಾರ ವ್ಯವಸ್ಥೆ.
ಎಫ್‌. ಇತರ ಯಾವುದೇ ಸಂಬಂಧಿತ ವಿಷಯ

ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳನ್ನು(ವಿದ್ಯುತ್/ಇಂಧನ) ಉದ್ದೇಶಿಸಿ ಈ ಆದೇಶವನ್ನು ಹೊರಡಿಸಲಾಗಿದೆ. ಆದೇಶದಲ್ಲಿ ಸೂಚಿಸಿರುವಂತೆ ಜಿಲ್ಲಾ ವಿದ್ಯುತ್ ಸಮಿತಿಗಳ ರಚನೆಗೆ ಅಧಿಸೂಚನೆ ಹೊರಡಿಸಿ ಇಂಧನ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಸಮಿತಿಯ ರಚನೆಯನ್ನು ಖಾತರಿಪಡಿಸುವಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶದಲ್ಲಿ ಕೋರಲಾಗಿದೆ. ನಿಯಮಿತವಾಗಿ ಸಭೆಗಳನ್ನು ನಡೆಸುವುದು ಮತ್ತು ಸಮಯೋಚಿತವಾಗಿ ನಡಾವಳಿಗಳನ್ನು ಹೊರಡಿಸುವುದು  ಸಮನ್ವಯಕಾರರು ಮತ್ತು ಸದಸ್ಯ ಕಾರ್ಯದರ್ಶಿಯ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ವಿತರಣಾ ವ್ಯವಸ್ಥೆಗಳನ್ನು ಬಲಪಡಿಸಲು ಕೇಂದ್ರ ಸರಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ಹಣವನ್ನು ಒದಗಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ʻದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ  ಯೋಜನೆʼ(ಡಿಡಿಯುಜಿಜೆವೈ), ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ(ಐಪಿಡಿಎಸ್), ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್  ಘರ್  ಯೋಜನೆ(ಸೌಭಾಗ್ಯ) ಮುಂತಾದ ಯೋಜನೆಗಳ ಅಡಿಯಲ್ಲಿ ಸುಮಾರು 2 ಲಕ್ಷ ಕೋಟಿ ರೂ. ಒದಗಿಸಲಾಗಿದೆ. ಪ್ರತಿಯೊಂದು ಗ್ರಾಮ, ಕುಗ್ರಾಮ ಮತ್ತು ಪ್ರತಿ ಕುಟುಂಬಗಳನ್ನು ವಿದ್ಯುದ್ದೀಕರಣಗೊಳಿಸುವ ಮೂಲಕ ಸಾರ್ವತ್ರಿಕವಾಗಿ ವಿದ್ಯುತ್‌ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದು; ಹೆಚ್ಚಿನ ಉಪಕೇಂದ್ರಗಳನ್ನು ಸ್ಥಾಪಿಸುವುದು, ಅಸ್ತಿತ್ವದಲ್ಲಿರುವ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಹೈಟೆನ್ಷನ್ /ಲೋ ಟೆನ್ಷನ್  ಲೈನ್‌ಗಳು,  ಟ್ರಾನ್ಸ್‌ಫಾರ್ಮರ್‌ಗಳ ಸ್ಥಾಪನೆ ಮುಂತಾದ ಕ್ರಮಗಳ ಮೂಲಕ ವಿತರಣಾ ವ್ಯವಸ್ಥೆಗಳನ್ನು ಬಲಪಡಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಇತ್ತೀಚೆಗೆ, ಅಗತ್ಯವಿರುವಲ್ಲಿ ವಿತರಣಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಹೊಸ ಸವಾಲುಗಳನ್ನು ಎದುರಿಸುವ ಸಲುವಾಗಿ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಲು 3 ಲಕ್ಷ ಕೋಟಿ ಗಳ ಹೊಸ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ.



(Release ID: 1755775) Visitor Counter : 247