ಪ್ರಧಾನ ಮಂತ್ರಿಯವರ ಕಛೇರಿ

ಉಪರಾಷ್ಟ್ರಪತಿ, ಪ್ರಧಾನಿ ಮತ್ತು ಲೋಕಸಭಾಧ್ಯಕ್ಷರಿಂದ ಸಂಸದ್ ಟಿವಿಗೆ ಚಾಲನೆ


ಭಾರತದಲ್ಲಿ ಪ್ರಜಾಪ್ರಭುತ್ವವು ಕೇವಲ ಸಂವಿಧಾನದ ಹರಿವುಗಳ ಸಂಗ್ರಹವಲ್ಲ, ಅದು ನಮ್ಮ ಜೀವನದ ಹರಿವು: ಪ್ರಧಾನಿ

ಸಂಸದ್ ಟಿವಿ ರಾಷ್ಟ್ರದ ಪ್ರಜಾಪ್ರಭುತ್ವಮತ್ತು ಜನಪ್ರತಿನಿಧಿಗಳಿಗೆ ಹೊಸ ಧ್ವನಿಯಾಗಲಿದೆ: ಪ್ರಧಾನಿ

ಕಂಟೆಂಟ್ ಈಸ್ ಕನೆಕ್ಟ್ ಎನ್ನುವುದು ಸಂಸದೀಯ ವ್ಯವಸ್ಥೆಗೂ ಅನ್ವಯಿಸುತ್ತದೆ: ಪ್ರಧಾನಿ

Posted On: 15 SEP 2021 7:10PM by PIB Bengaluru

ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಶ್ರೀ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಲೋಕಸಭಾಧ್ಯಕ್ಷ  ಶ್ರೀ ಓಂ ಬಿರ್ಲಾ ಅವರು ಜಂಟಿಯಾಗಿ ಪ್ರಜಾಪ್ರಭುತ್ವದ ದಿನಾಚರಣೆಯ ಸಂದರ್ಭದಲ್ಲಿ ಇಂದು ಸಂಸದ್ ಟಿವಿಗೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 21 ನೇ ಶತಮಾನವು ಸಂವಾದ ಮತ್ತು ಸಂವಹನದ ಮೂಲಕ ಕ್ರಾಂತಿಯನ್ನು ಮಾಡುತ್ತಿರುವಾಗ, ವೇಗವಾಗಿ ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಸಂಸತ್ತಿಗೆ ಸಂಬಂಧಿಸಿದ ಚಾನೆಲ್‌ನ ರೂಪಾಂತರವಾಗಿರುವುದನ್ನು ಶ್ಲಾಘಿಸಿದರು. ಸಂಸದ್ ಟಿವಿಯ ಆರಂಭವು ಭಾರತದ ಪ್ರಜಾಪ್ರಭುತ್ವದ ಹೊಸ ಅಧ್ಯಾಯವಾಗಿದೆ, ಏಕೆಂದರೆ ಸಂಸದ್ ಟಿವಿಯ ರೂಪದಲ್ಲಿ, ದೇಶವು ಸಂವಹನ ಮತ್ತು ಸಂವಾದದ ಮಾಧ್ಯಮವನ್ನು ಪಡೆಯುತ್ತಿದೆ, ಇದು ರಾಷ್ಟ್ರದ ಪ್ರಜಾಪ್ರಭುತ್ವ ಮತ್ತು ಜನಪ್ರತಿನಿಧಿಗಳಿಗೆ ಹೊಸ ಧ್ವನಿಯಾಗಲಿದೆ ಎಂದು ಪ್ರಧಾನಿ ಹೇಳಿದರು. ದೂರದರ್ಶನವು 62 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಶುಭಾಶಯ ಕೋರಿದರು. ಅವರು ಎಂಜಿನಿಯರ್‌ಗಳ ದಿನದ ಅಂಗವಾಗಿ ಎಲ್ಲಾ ಇಂಜಿನಿಯರ್‌ಗಳಿಗೂ ಶುಭಾಶಯ ಕೋರಿದರು.

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವೂ ಆಗಿದೆ ಎಂದು ಹೇಳಿದ ಪ್ರಧಾನಿ, ಪ್ರಜಾಪ್ರಭುತ್ವದ ವಿಷಯಕ್ಕೆ ಬಂದಾಗ, ಭಾರತದ ಜವಾಬ್ದಾರಿ ಹೆಚ್ಚು. ಏಕೆಂದರೆ ಭಾರತವು ಪ್ರಜಾಪ್ರಭುತ್ವಕ್ಕೆ ತಾಯಿ ಇದ್ದಂತೆ. ಭಾರತಕ್ಕೆ ಪ್ರಜಾಪ್ರಭುತ್ವ ಕೇವಲ ಒಂದು ವ್ಯವಸ್ಥೆಯಲ್ಲ, ಅದೊಂದು ಸಿದ್ಧಾಂತ. ಭಾರತದಲ್ಲಿ ಪ್ರಜಾಪ್ರಭುತ್ವವು ಕೇವಲ ಸಾಂವಿಧಾನಿಕ ರಚನೆಯಲ್ಲ, ಅದೊಂದು ಚೈತನ್ಯವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಕೇವಲ ಸಂವಿಧಾನದ ಹರಿವುಗಳ ಸಂಗ್ರಹವಲ್ಲ, ಅದು ನಮ್ಮ ಜೀವನದ ಹರಿವಾಗಿದೆ ಎಂದು ಅವರು ಹೇಳಿದರು.

75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ ಗತವೈಭವ ಮತ್ತು ಭವಿಷ್ಯದ ಭರವಸೆ ಎರಡೂ ನಮ್ಮ ಮುಂದಿರುವಾಗ ಮಾಧ್ಯಮದ ಪಾತ್ರ ಪ್ರಮುಖವಾದುದು ಎಂದು ಪ್ರಧಾನಿ ಹೇಳಿದರು. ಮಾಧ್ಯಮಗಳು ಸ್ವಚ್ಛ ಭಾರತ್ ಅಭಿಯಾನದಂತಹ ವಿಷಯಗಳನ್ನು ಕೈಗೆತ್ತಿಕೊಂಡಾಗ ಅದು ಜನರನ್ನು ಅತ್ಯಂತ ವೇಗದಲ್ಲಿ ತಲುಪಿತು ಎಂದು ಅವರು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ 75 ಸಂಚಿಕೆಗಳನ್ನು ಯೋಜಿಸುವ ಮೂಲಕ ಅಥವಾ ಈ ಸಂದರ್ಭವನ್ನು ಗುರುತಿಸಲು ವಿಶೇಷ ಪುರವಣಿಗಳನ್ನು ಹೊರತರುವ ಮೂಲಕ ಜನರ ಪ್ರಯತ್ನಗಳನ್ನು ಪ್ರಸಾರ ಮಾಡುವಲ್ಲಿ ಮಾಧ್ಯಮಗಳು ಪಾತ್ರವಹಿಸಬಹುದು ಎಂದು ಅವರು ಸಲಹೆ ನೀಡಿದರು.

ವಿಷಯದ ಕೇಂದ್ರೀಯತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 'ವಿಷಯವೇ ಸಾಮ್ರಾಟ (ಕಂಟೆಂಟ್ ಈಸ್ ಕಿಂಗ್) ಎನ್ನುತ್ತಾರೆ. ಆದರೆ ನನ್ನ ಅನುಭವದಲ್ಲಿ "ಕಂಟೆಂಟ್ ಈಸ್ ಕನೆಕ್ಟ್” ಎಂದರು.  ಒಬ್ಬ ವ್ಯಕ್ತಿಯು ಉತ್ತಮ ವಿಷಯವನ್ನು ಹೊಂದಿದ್ದಾಗ, ಜನರು ಸ್ವಯಂಪ್ರೀರಿತವಾಗಿ ಅದರೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದು ಅವರು ವಿವರಿಸಿದರು. ಇದು ಮಾಧ್ಯಮಗಳಿಗೆ ಅನ್ವಯಿಸುವಂತೆಯೇ, ನಮ್ಮ ಸಂಸತ್ತಿನಲ್ಲಿ ರಾಜಕೀಯ ಮಾತ್ರವಲ್ಲದೇ, ನೀತಿಯೂ ಇರುವುದರಿಂದ ನಮ್ಮ ಸಂಸದೀಯ ವ್ಯವಸ್ಥೆಗೂ ಸಮಾನವಾಗಿ ಅನ್ವಯಿಸುತ್ತದೆ. ಜನಸಾಮಾನ್ಯರು ಸಂಸತ್ತಿನ ನಡಾವಳಿಯೊಂದಿಗೆ ಸಂಪರ್ಕವನ್ನು ಅನುಭವಿಸಬೇಕು. ಆ ದಿಕ್ಕಿನಲ್ಲಿ ಕೆಲಸ ಮಾಡುವಂತೆ ಅವರು ಹೊಸ ಚಾನೆಲ್ ಗೆ ಸಲಹೆ ಮಾಡಿದರು.

ಸಂಸತ್ತಿನ ಅಧಿವೇಶನದಲ್ಲಿ ವೈವಿಧ್ಯಮಯ ವಿಷಯಗಳ ಮೇಲೆ ಚರ್ಚೆಗಳು ನಡೆಯುತ್ತವೆ, ಅವುಗಳಿಂದ ಯುವಕರು ಕಲಿಯಲು ತುಂಬಾ ಇರುತ್ತದೆ ಎಂದು ಪ್ರಧಾನಿ ಹೇಳಿದರು. ದೇಶವು ತಮ್ಮನ್ನು ನೋಡುತ್ತಿದೆ ಎಂಬ ಭಾವನೆಯಿಂದ ಸಂಸದರು ಸಂಸತ್ತಿನ ಒಳಗೆ ಉತ್ತಮ ನಡವಳಿಕೆ, ಉತ್ತಮ ಚರ್ಚೆಗೆ ಸ್ಫೂರ್ತಿ ಪಡೆಯುತ್ತಾರೆ. ನಾಗರಿಕರ ತಮ್ಮ ಕರ್ತವ್ಯಗಳ ಬಗ್ಗೆ ಗಮನ ಹರಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಈ ಕುರಿತು ಜಾಗೃತಿ ಮೂಡಿಸಲು ಮಾಧ್ಯಮಗಳು ಪರಿಣಾಮಕಾರಿ ಮಾಧ್ಯಮವಾಗಿವೆ ಎಂದರು. ಮಾದ್ಯಮಗಳ ಕಾರ್ಯಕ್ರಮಗಳಿಂದ ನಮ್ಮ ಯುವಕರು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳು, ಅವುಗಳ ಕಾರ್ಯವೈಖರಿ ಹಾಗೂ ನಾಗರಿಕರ ಕರ್ತವ್ಯಗಳ ಬಗ್ಗೆ ಸಾಕಷ್ಟು ಕಲಿಯುತ್ತಾರೆ ಎಂದು ಪ್ರಧಾನಿ ಹೇಳಿದರು. ಅಂತೆಯೇ, ಕಾರ್ಯಕಾರಿ ಸಮಿತಿಗಳು, ಶಾಸಕಾಂಗದ ಕೆಲಸಗಳ ಮಹತ್ವ ಮತ್ತು ಶಾಸಕಾಂಗಗಳ ಕೆಲಸಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿರುತ್ತವೆ, ಇದು ಭಾರತದ ಪ್ರಜಾಪ್ರಭುತ್ವವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಪಾರ್ಲಿಮೆಂಟ್ ಟಿವಿಯಲ್ಲಿ ತಳಮಟ್ಟದ ಪ್ರಜಾಪ್ರಭುತ್ವವಾಗಿ ಕೆಲಸ ಮಾಡುವ ಪಂಚಾಯತ್‌ಗಳ ಮೇಲೆ ಕಾರ್ಯಕ್ರಮಗಳನ್ನು ಮಾಡಬೇಕೆಂದು ಅವರು ತಿಳಿಸಿದರು.  ಈ ಕಾರ್ಯಕ್ರಮಗಳು ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ಶಕ್ತಿಯನ್ನು, ಹೊಸ ಪ್ರಜ್ಞೆಯನ್ನು ನೀಡುತ್ತವೆ ಎಂದರು.

***



(Release ID: 1755267) Visitor Counter : 453