ಆಯುಷ್
ಆಯುಷ್ ಕಾಲೇಜುಗಳನ್ನು ಆರಂಭಿಸಲು ನೀಡುತ್ತಿದ್ದ ಆರ್ಥಿಕ ನೆರವನ್ನು 9 ಕೋಟಿ ರೂ.ಗಳಿಂದ 70 ಕೋಟಿ ರೂ. ಗೆ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ
ಈಶಾನ್ಯ ರಾಜ್ಯಗಳಲ್ಲಿ ಹೊಸ ಆಯುಷ್ ಕಾಲೇಜುಗಳ ಆರಂಭಕ್ಕೆ ನೆರವು ನೀಡಲು ಕೇಂದ್ರದ ಬಯಕೆ: ಶ್ರೀ ಸರ್ಬಾನಂದ ಸೋನೋವಾಲ್
ಇತ್ತೀಚಿನ ವರ್ಷಗಳಲ್ಲಿ ಆಯುಷ್ ವಲಯದಲ್ಲಿ ವೃತ್ತಿಪರರಿಗೆ ವೃತ್ತಿ ಅವಕಾಶಗಳು ಹೆಚ್ಚಾಗುತ್ತಿವೆ: ಶ್ರೀ ಸೋನೋವಾಲ್
ಆಯುಷ್ ಸಚಿವಾಲಯದಿಂದ ಗುವಾಹಟಿಯಲ್ಲಿ “ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣ, ಉದ್ಯಮಶೀಲತೆ ಮತ್ತು ಉದ್ಯೋಗಕ್ಕೆ ಒತ್ತು: ಆಯುಷ್ ಪದ್ದತಿಗಳಲ್ಲಿ ವೈವಿಧ್ಯಯಮ ಮತ್ತು ವೃತ್ತಿ ಪೂರ್ಣಗೊಳಿಸುವ ಮಾರ್ಗಗಳು’ ಕುರಿತ ಸಮಾವೇಶ ಆಯೋಜನೆ
Posted On:
11 SEP 2021 6:10PM by PIB Bengaluru
ದೇಶಾದ್ಯಂತ ಹೆಚ್ಚು ಹೆಚ್ಚು ಆಯುಷ್ ಕಾಲೇಜುಗಳನ್ನು ತೆರೆಯುವುದನ್ನು ಖಾತ್ರಿಪಡಿಸಲು ಆಯುಷ್ ಕಾಲೇಜುಗಳಿಗೆ ನೀಡುತ್ತಿದ್ದ 9 ಕೋಟಿ ರೂ. ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ 70 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿದೆ ಎಂದು ಕೇಂದ್ರ ಆಯುಷ್ ಮತ್ತು ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಶನಿವಾರ ಹೇಳಿದ್ದಾರೆ. ಅವರು ಗುವಾಹಟಿಯಲ್ಲಿ “ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣ, ಉದ್ಯಮಶೀಲತೆ ಮತ್ತು ಉದ್ಯೋಗಕ್ಕೆ ಒತ್ತು: ಆಯುಷ್ ಪದ್ದತಿಗಳಲ್ಲಿ ವೈವಿಧ್ಯಯಮ ಮತ್ತು ವೃತ್ತಿ ಪೂರ್ಣಗೊಳಿಸುವ ಮಾರ್ಗಗಳು’’ ಕುರಿತ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಈಶಾನ್ಯ ರಾಜ್ಯಗಳಲ್ಲಿ ಕೆಲವೇ ಕೆಲವು ಆಯುಷ್ ಕಾಲೇಜುಗಳಿವೆ ಎಂದ ಅವರು, ಹೆಚ್ಚಿನ ಅರ್ಹ ವೃತ್ತಿಪರರ ಲಭ್ಯವಾಗುವಂತೆ ಮಾಡುವ ಮೂಲಕ ಭಾರತೀಯ ಸಂಪ್ರದಾಯಿಕ ವೈದ್ಯ ಪದ್ದತಿಗಳನ್ನು ಜನಪ್ರಿಯಗೊಳಿಸಬಹುದಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
“ಆ ಉದ್ದೇಶಕ್ಕಾಗಿ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಹೆಚ್ಚು ಆಯುಷ್ ತರಬೇತಿ ಕಾಲೇಜುಗಳ ಅಗತ್ಯವಿದೆ. ಮೊದಲು ಕೇಂದ್ರದ ಪ್ರಾಯೋಜಿತ ಯೋಜನೆ ರಾಷ್ಟ್ರೀಯ ಆಯುಷ್ ಮಿಷನ್ ಅಡಿ ರಾಜ್ಯ ಸರ್ಕಾರಗಳಿಗೆ ಹೊಸ ಆಯುಷ್ ಕಾಲೇಜುಗಳನ್ನು ಆರಂಭಿಸಲು 9 ಕೋಟಿ ರೂ. ಆರ್ಥಿಕ ನೆರವು ನೀಡಲಾಗುತ್ತಿತ್ತು. ಇದೀಗ ಭಾರತ ಸರ್ಕಾರ ಆ ಮೊತ್ತವನ್ನು 70 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿದೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಗಳು ಭೂಮಿ ಮತ್ತು ಸಂಪನ್ಮೂಲವನ್ನು ಗುರುತಿಸಬಹುದಾಗಿದೆ ಮತ್ತು ಎನ್ ಎಎಂ ಮಾರ್ಗಸೂಚಿಯನ್ವಯ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ’’ಎಂದು ಸೋನೋವಾಲ್ ಹೇಳಿದರು.
ಆಯುಷ್ ಸಚಿವಾಲಯ ಅಸ್ಸಾಂನ ಜಲುಕ್ ಬರಿಯಲ್ಲಿರುವ ಸರ್ಕಾರಿ ಆಯುರ್ವೇದಿಕ್ ಕಾಲೇಜನ್ನು 10 ಕೋಟಿ ರೂ.ಗಳ ಆರ್ಥಿಕ ನೆರವಿನೊಂದಿಗೆ ಶ್ರೇಷ್ಠತಾ ಕೇಂದ್ರವನ್ನಾಗಿ ಉನ್ನತೀಕರಿಸಲು ತಾತ್ವಿಕ ನೀಡಿದೆ ಎಂದು ಸೋನೋವಾಲ್ ಹೇಳಿದರು. ತಮ್ಮ ಸಚಿವಾಲಯ ಪದವಿ ಪೂರ್ವ ಕಾಲೇಜುಗಳ ಬೋಧನೆ ಉನ್ನತೀಕರಿಸಲು 5 ಕೋಟಿ ರೂ. ಮತ್ತು ಸ್ನಾತಕೋತ್ತರ ಕೇಂದ್ರಗಳಿಗೆ ಮೂಲಸೌಕರ್ಯ ವೃದ್ಧಿಗೆ 6 ಕೋಟಿ ರೂ. ನೆರವು ನೀಡುತ್ತಿದೆ ಎಂದು ಅವರು ತಿಳಿಸಿದರು.
ಗುವಾಹಟಿಯ ಕೇಂದ್ರೀಯ ಆಯುರ್ವೇದ ಸಂಶೋಧನಾ ಕೇಂದ್ರ(ಸಿಎಆರ್ ಐ) ನಲ್ಲಿ ಆರೋಗ್ಯ ವಲಯದ ಕೌಶಲ್ಯ ಮಂಡಳಿ- ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದಿಂದ ಮಾನ್ಯತೆ ಪಡೆದ ಪಂಚಕರ್ಮ ತಾಂತ್ರಿಕ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದೆ ಎಂದು ಸಚಿವರು ಪ್ರಕಟಿಸಿದರು. 10+2 ವಿದ್ಯಾರ್ಥಿಗಳಿಗಾಗಿ 10 ಸೀಟುಗಳು ಇರಲಿದ್ದು, ಇದರಿಂದ ಈಶಾನ್ಯ ರಾಜ್ಯಗಳಿಗೆ ಪಂಚಕರ್ಮ ಥೆರಪಿಗೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಲಭ್ಯವಾಗಲಿದೆ ಮತ್ತು ದೇಶದ ಇತರೆ ಭಾಗಗಳಲ್ಲಿ ಅವರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದರು.
“ಇತ್ತೀಚಿನ ವರ್ಷಗಳಲ್ಲಿ ಆಯುಷ್ ವಲಯದ ಎಲ್ಲ ವಿಭಾಗಗಳಲ್ಲೂ ಎಲ್ಲ ವೃತ್ತಿಪರರಿಗೆ ಉದ್ಯೋಗವಕಾಶಗಳು ಗಣನೀಯವಾಗಿ ಹೆಚ್ಚಳವಾಗಿವೆ. ಅಲ್ಲದೆ, ಈ ನಿರಂತರ ಪ್ರಯತ್ನಗಳ ಫಲವಾಗಿ, ಜಗತ್ತಿನಾದ್ಯಂತ ಸುಮುದಾಯಗಳಲ್ಲಿ ಆಯುಷ್ ಪೂರಕ ವ್ಯವಸ್ಥೆಗಳ ಬಗ್ಗೆ ವಿಶ್ವಾಸ ಮರುಸ್ಥಾಪನೆಯಾಗಿದೆ’’ಎಂದು ಸೋನೋವಾಲ್ ಹೇಳಿದರು. ಆಯುಷ್ ಹೆಚ್ಚಿನ ಜನರ ಆರೋಗ್ಯ ಅಗತ್ಯತೆಗಳನ್ನು ಪೂರೈಸಲು ಮತ್ತು ಈ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಅಸ್ಸಾಂ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ವಾರ್ತಾ ಹಾಗೂ ಪ್ರಸಾರ ಸಚಿವ ಕೇಶಬ್ ಮಹಂತ ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಆಯುಷ್ ಸಚಿವಾಲಯ ಈ ತಿಂಗಳ ಆರಂಭದಲ್ಲಿ ಎಲ್ಲ ಈಶಾನ್ಯ ರಾಜ್ಯಗಳ ಆಯುಷ್ ಸಚಿವರ ಮಹತ್ವದ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿತ್ತು ಮತ್ತು ಆ ಭಾಗದಲ್ಲಿ ಆಯುಷ್ ಪದ್ದತಿಯನ್ನು ಜನಪ್ರಿಯಗೊಳಿಸಲು ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು.
ಇಂದಿನ ಸಮಾವೇಶ ಅದರ ಮುಂದುವರಿದ ಭಾಗವಾಗಿ, ಆಯುಷ್ ನಲ್ಲಿ ಶಿಕ್ಷಣ ಮತ್ತು ಉದ್ಯೋಗವಕಾಶಗಳ ಮಾರ್ಗೋಪಾಯಗಳ ಬಗ್ಗೆ ತಜ್ಞರ ಜೊತೆ ಚರ್ಚಿಸುವುದಾಗಿದೆ.
ಭಾರತೀಯ ವೈದ್ಯಕೀಯ ಪದ್ದತಿಗಳ ರಾಷ್ಟ್ರೀಯ ಆಯೋಗ (ಎನ್ ಸಿಐಎಸ್ ಎಂ) ನ ಅಧ್ಯಕ್ಷರಾದ ವೈದ್ಯ ಜಯಂತ್ ಯಶವಂತ್ ದಿಯೋಪುಜಾರಿ ಅವರು “ಆಯುರ್ವೇದದ ಶಿಕ್ಷಣದಲ್ಲಿ ಉದ್ಯೋಗಾವಕಾಶಗಳು’’ ಕುರಿತಂತೆ ಪ್ರಾತ್ಯಕ್ಷಿಕೆಯನ್ನು ನೀಡಿದರು. ನಂತರ ಈಶಾನ್ಯ ರಾಜ್ಯಗಳಲ್ಲಿ ಆಯುಷ್ ನಲ್ಲಿ ವೃತ್ತಿ ಅವಕಾಶಗಳು ಮತ್ತು ಸಾಮರ್ಥ್ಯದ ಅನುಶೋಧನೆಯ ಗೋಷ್ಠಿ ನಡೆಯಿತು. ಈ ಗೋಷ್ಠಿಯಲ್ಲಿ ಜೈಪುರದ ರಾಷ್ಟ್ರೀಯ ಆಯುರ್ವೇದ ಕೇಂದ್ರದ ನಿರ್ದೇಶಕರಾದ ಪ್ರೊ.ಸಂಜೀವ್ ಶರ್ಮ ಅವರು ಈಶಾನ್ಯ ರಾಜ್ಯಗಳಲ್ಲಿ ಆಯುರ್ವೇದ ಶಿಕ್ಷಣ ಮತ್ತು ಉದ್ಯೋಗವಕಾಶಗಳ ಕುರಿತು ಉಪನ್ಯಾಸ ನೀಡಿದರು. ನವದೆಹಲಿಯ ಸಿಸಿಆರ್ ಎಎಸ್ ನ ಮಹಾನಿರ್ದೇಶಕರಾದ ಡಾ. ಎನ್. ಶ್ರೀಕಾಂತ್ , ‘ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ’ ಕುರಿತಂತೆ ಮಾತನಾಡಿದರು.
ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಸ್ಟಾರ್ಟ್ ಅಪ್ ಇಂಡಿಯಾದ ವ್ಯವಸ್ಥಾಪಕರಾದ ಶ್ರೀಮತಿ ಇಂದ್ರಾಣಿ ಮಹ್ತೋ ಅವರು, ಆಯುಷ್ ವಲಯದ ನವೋದ್ಯಮದಲ್ಲಿ ಉದ್ಯಮಶೀಲತೆ ಕುರಿತು ವಿಶೇಷ ಭಾಷಣ ಮಾಡಿದರು. ಕೋಲ್ಕತ್ತಾದ ಎನ್ ಐಎಚ್ ನ ನಿರ್ದೇಶಕ ಡಾ.ಸುಭಾಷ್ ಸಿಂಗ್ ಅವರು “ಈಶಾನ್ಯ ರಾಜ್ಯಗಳಲ್ಲಿ ಕೈಗಾರಿಕೆಗಳ ಭವಿಷ್ಯ: ಹೋಮಿಯೋಪಥಿಯಲ್ಲಿ ವೃತ್ತಿ ಅವಕಾಶಗಳು’’ ಕುರಿತಂತೆ ಉಪನ್ಯಾಸ ನೀಡಿದರೆ, ನವದೆಹಲಿಯ ಎನ್ ಸಿಎಚ್ ನ ಕಾರ್ಯದರ್ಶಿ ಡಾ.ತಾರಕೇಶ್ವರ್ ಜೈನ್ ಈಶಾನ್ಯ ರಾಜ್ಯಗಳಲ್ಲಿ ಹೋಮಿಯೋಪಥಿ ಶಿಕ್ಷಣದಲ್ಲಿ ಉದ್ಯೋಗವಕಾಶಗಳು ಕುರಿತು ಹಾಗೂ ಕೋಲ್ಕತ್ತಾದ ಎನ್ ಐಎಚ್ ನ ಡಾ.ಸುಭಾಷ್ ಚೌಧರಿ “ಈಶಾನ್ಯ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸಂಶೋಧನೆ ಮತ್ತು ಅಭಿವೃದ್ಧಿ’ ಕುರಿತು ಉಪನ್ಯಾಸ ನೀಡಿದರು.
ಅಂತೆಯೇ, ನವದೆಹಲಿಯ ಸಿಸಿಆರ್ ಯುಎಂನ ಮಹಾನಿರ್ದೇಶಕರಾದ ಪ್ರೊ.ಅಸಿಂ ಆಲಿ ಖಾನ್ ಅವರು “ಯುನಾನಿಯಲ್ಲಿ ಸಂಶೋಧನಾ ಶಿಕ್ಷಣ ಮತ್ತು ವೃತ್ತಿ ಅವಕಾಶಗಳು’ ಕುರಿತು: ಚೆನ್ನೈನ ಸಿಸಿಆರ್ ಎಸ್ ನ ಮಹಾನಿರ್ದೇಶಕರಾದ ಪ್ರೊ.ಡಾ.ಕೆ. ಕನಕವಲ್ಲಿ “ಸಿದ್ಧಾದಲ್ಲಿ ಸಂಶೋಧನಾ ಶಿಕ್ಷಣ ಮತ್ತು ಉದ್ಯೋಗವಕಾಶಗಳ’’ ಕುರಿತು; ಲೇಹ್ ನ ಎನ್ ಆರ್ ಐಎಸ್ ನ ನಿರ್ದೇಶಕರಾದ ಡಾ.ಪದ್ಮ ಗುರ್ ಮೀತ್ “ಸೋವಾ-ರಿಗ್ಪಾ ದಲ್ಲಿ ಸಂಶೋಧನಾ ಶಿಕ್ಷಣ ಮತ್ತು ಉದ್ಯೋಗವಕಾಶಗಳು’ : ನವದೆಹಲಿಯ ಯೋಗ ಮತ್ತು ನ್ಯಾಚುರೋಪಥಿಯ ಕೇಂದ್ರೀಯ ಸಂಶೋಧನಾ ಮಂಡಳಿಯ ನಿರ್ದೇಶಕರಾದ ಡಾ.ರಾಘವೇಂದ್ರ ರಾವ್ ಅವರು “ಯೋಗ ಮತ್ತು ನ್ಯಾಚುರೋಪಥಿಯಲ್ಲಿ ಶಿಕ್ಷಣ ಸಂಶೋಧನೆ ಮತ್ತು ವೃತ್ತಿ ಅವಕಾಶಗಳ’ ಕುರಿತು ಉಪನ್ಯಾಸ ನೀಡಿದರು.
ಈ ಗೋಷ್ಠಿಯ ನಂತರ ಆಯುಷ್ ಕೈಗಾರಿಕೆಗಳನ್ನು ಪ್ರತಿನಿಧಿಸುವವರು “ವೃತ್ತಿ ಅವಕಾಶಗಳು ಮತ್ತು ಉದ್ಯಮಶೀಲತೆ: ಕೈಗಾರಿಕೆಗಳ ದೃಷ್ಟಿಕೋನ’ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಬಳಿಕ ಈಶಾನ್ಯ ರಾಜ್ಯಗಳ ನಾನಾ ಭಾಗಗಳಿಂದ ಬಂದ ಆಯುಷ್ ವಿದ್ಯಾರ್ಥಿಗಳು ಮತ್ತು ವಿದ್ವಾಂಸರ ನಡುವೆ ಸಂವಾದ ಗೋಷ್ಠಿ ನಡೆಯಿತು.
ಆಯುಷ್ ಸಚಿವಾಲಯದ ಅಧಿಕಾರಿಗಳು, ಈಶಾನ್ಯ ರಾಜ್ಯಗಳ ಆಯುಷ್ ಕೇಂದ್ರಗಳು ಮತ್ತು ಸಂಶೋಧನಾ ಮಂಡಳಿಗಳು ಹಾಗೂ ಆಯುಷ್ ಕಾಲೇಜುಗಳ ಸುಮಾರು 250ಕ್ಕೂ ಅಧಿಕ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
***
(Release ID: 1754206)
Visitor Counter : 216