ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav g20-india-2023

ಭಾರತದ ಶ್ರೇಯಾಂಕ 2021ನ್ನು ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಸಚಿವರು


ಜಾಗತಿಕ ಕಲಿಕಾ ಭೂರಮೆಗೆ ಕೊಡುಗೆ ನೀಡಲಿರುವ ಭಾರತೀಯ ಶ್ರೇಯಾಂಕ ಚೌಕಟ್ಟು – ಶ್ರೀ ಧರ್ಮೇಂದ್ರ ಪ್ರಧಾನ್

ಪ್ರಾದೇಶಿಕ ಶ್ರೇಯಾಂಕ ಚೌಕಟ್ಟಿಗೆ ಕರೆ ನೀಡಿದ ಶ್ರೀ ಧರ್ಮೇಂದ್ರ ಪ್ರಧಾನ್

Posted On: 09 SEP 2021 4:13PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ರೂಪಿಸಿರುವ ಭಾರತದ ಶ್ರೇಯಾಂಕ 2021ನ್ನು ಬಿಡುಗಡೆ ಮಾಡಿದರು. ಶಿಕ್ಷಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣಾದೇವಿ; ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ಸುಭಾಷ್ ಸರ್ಕಾರ್; ರಾಜ್ಯ ಸಚಿವ ಡಾ. ರಾಜ್ ಕುಮಾರ್ ರಂಜನ್ ಸಿಂಗ್; ಶ್ರೀ ಅಮಿತ್ ಖರೆ, ಕಾರ್ಯದರ್ಶಿ (ಎಚ್.ಇ.); ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್;  ಎ.ಐ.ಸಿ.ಟಿಇ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ; ಎನ್.ಬಿ.ಎ. ಅಧ್ಯಕ್ಷ ಪ್ರೊ. ಕೆ.ಕೆ. ಅಗರ್ವಾಲ್; ಮತ್ತು ಎನ್.ಬಿ.ಎ.ಯ ಸದಸ್ಯ ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ನಸ್ಸಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್,  ಒಂದು ದೃಢವಾದ ಮತ್ತು ಆದರ್ಶಪ್ರಾಯವಾದ ಶ್ರೇಯಾಂಕದ ಚೌಕಟ್ಟು ಜಾಗತಿಕ ಕಲಿಕಾ ಭೂರಮೆಗೆ ಭಾರತದ ಕೊಡುಗೆಯಾಗಿ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ, ನಮ್ಮ ಶ್ರೇಯಾಂಕ ಚೌಕಟ್ಟನ್ನು ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ, ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ರಾಷ್ಟ್ರಗಳಿಗೆ ಒಂದು ಮಾನದಂಡವಾಗಿ ಹೊರಹೊಮ್ಮುವಂತೆ ನಾವು ಖಾತ್ರಿಪಡಿಸಿಕೊಳ್ಳಬೇಕು ಎಂದರು. ಪ್ರಾದೇಶಿಕ ಶ್ರೇಯಾಂಕ ಚೌಕಟ್ಟುಗಳನ್ನು ಅಭಿವೃದ್ಧಿಪಡಿಸಲೂ ಅವರು ಆಗ್ರಹಿಸಿದರು.

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಂತಾರಾಷ್ಟ್ರೀಕರಣಗೊಳಿಸಲು ಎನ್.ಇ.ಪಿ. ನಮಗೆ ಅವಕಾಶ ಒದಗಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ನಾವು ಹೆಚ್ಚು ಹೆಚ್ಚು ಸಂಸ್ಥೆಗಳನ್ನು ನಮ್ಮ ಶ್ರೇಯಾಂಕದ ಚೌಕಟ್ಟಿನ ಅಡಿಯಲ್ಲಿ ತರಲು ಒಗ್ಗೂಡಿ ಶ್ರಮಿಸಬೇಕು ಮತ್ತು ಭಾರತವನ್ನು ಆದ್ಯತೆಯ ಜಾಗತಿಕ ಅಧ್ಯಯನ ತಾಣವಾಗಿ ರೂಪಿಸಬೇಕು. ಒಟ್ಟಾರೆ, ವಿಶ್ವವಿದ್ಯಾನಿಲಯಗಳು, ಎಂಜಿನಿಯರಿಂಗ್, ನಿರ್ವಹಣೆ, ಕಾಲೇಜು, ಔಷಧ ಶಿಕ್ಷಣ, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು, ದಂತವೈದ್ಯ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ತಮ್ಮ ಪ್ರವರ್ಗದ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದ ಭಾರತದಾದ್ಯಂತದ ಎಲ್ಲ ಸಂಸ್ಥೆಗಳನ್ನು ಅವರು ಅಭಿನಂದಿಸಿದರು.

ಇದು ಭಾರತದಲ್ಲಿ ಎಚ್.ಇ.ಐ.ನ ಭಾರತದ ಶ್ರೇಯಾಂಕದ ಸತತ ಆರನೇ ಆವೃತ್ತಿಯಾಗಿದೆ. 2016 ರ ಮೊದಲ ವರ್ಷದಲ್ಲಿ, ವಿಶ್ವವಿದ್ಯಾನಿಲಯ ಪ್ರವರ್ಗಕ್ಕೆ ಹಾಗೂ ಮೂರು ನಿರ್ದಿಷ್ಟ ಕ್ಷೇತ್ರಗಳಿಗೆ, ಅಂದರೆ ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಮತ್ತು ಔಷಧ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕಗಳನ್ನು ಘೋಷಿಸಲಾಗಿತ್ತು. ಆರು ವರ್ಷಗಳ ಅವಧಿಯಲ್ಲಿ, ಮೂರು ಹೊಸ ಪ್ರವರ್ಗಗಳು ಮತ್ತು ಐದು ಹೊಸ ವಿಷಯಗಳನ್ನು ಸೇರಿಸಲಾಗಿದ್ದು, 2021ರಲ್ಲಿ ಒಟ್ಟು ಸಂಖ್ಯೆ 4 ಪ್ರವರ್ಗಗಳು ಅಂದರೆ ಒಟ್ಟಾರೆ, ವಿಶ್ವವಿದ್ಯಾಲಯ, ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳು ಮತ್ತು 7 ವಿಷಯಗಳು ಅಂದರೆ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಔಷಧ ಶಿಕ್ಷಣ, ವಾಸ್ತುಶಿಲ್ಪ, ವೈದ್ಯಕೀಯ ಕಾನೂನು ಮತ್ತು ದಂತವೈದ್ಯಕೀಯ. ಸಂಶೋಧನಾ ಸಂಸ್ಥೆಗಳು ಭಾರತ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿವೆ.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್.ಐ.ಆರ್.ಎಫ್.), ಅನ್ನು ಶಿಕ್ಷಣ ಸಚಿವಾಲಯದಿಂದ 2015ರ ನವೆಂಬರ್ ನಲ್ಲಿ ಆರಂಭಿಸಲಾಗಿದ್ದು, ಈ ಆವೃತ್ತಿ ಹಾಗೂ 2016 ರಿಂದ 2021 ರವರೆಗಿನ ಬಿಡುಗಡೆ ಮಾಡಿದ ಭಾರತದ ಶ್ರೇಯಾಂಕದ ಐದು ಆವೃತ್ತಿಗಳಿಗೆ ಬಳಸಲಾಗಿದೆ.

ಕ್ರ.ಸಂ

ಮಾನದಂಡ

ಅಂಕ

ವೈಟೇಜ್

1

ಬೋಧನೆ, ಕಲಿಕೆ ಮತ್ತು ಸಂಪನ್ಮೂಲ

100

0.30

2

ಸಂಶೋಧನೆ ಮತ್ತು ವೃತ್ತಿಪರ ರೂಢಿಗಳು

100

0.30

3

ಪದವಿಯ ಫಲಶ್ರುತಿ

100

0.20

4

ಜನಸಂಪರ್ಕ ಮತ್ತು ಅಂತರ್ಗತತೆ

100

0.10

5

ಗ್ರಹಿಕೆ

100

0.10

ಮಾನದಂಡ ಮತ್ತು ವೈಟೇಜ್ ನ ಐದು ವಿಸ್ತೃತ ಪ್ರವರ್ಗಗಳು

ಈ ಐದು ಮಾನದಂಡಗಳ ಪೈಕಿ ಪ್ರತಿಯೊಂದೂ 3ರಿಂದ 5 ಮಾನದಂಡಗಳನ್ನು ಒಳಗೊಂಡಿವೆ. ಒಟ್ಟು 16ರಿಂದ 18 ಉಪ ಮಾನದಂಡಗಳನ್ನು ವಿವಿಧ ಪ್ರವರ್ಗಗಳಲ್ಲಿ ಮತ್ತು ವಿಷಯಗಳಲ್ಲಿ ಎಚ್.ಇ.ಐ. ಶ್ರೇಣೀಕರಣಕ್ಕೆ ಬಳಸಲಾಗಿದೆ. ಈ ಐದು ವಿಶಾಲ ಗುಂಪುಗಳ ನಿಯತಾಂಕಗಳಿಗೆ ನಿಗದಿಪಡಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಶ್ರೇಣಿಗಳನ್ನು ನಿಗದಿಪಡಿಸಲಾಗಿದೆ. ಒಟ್ಟಾರೆ ಪ್ರವರ್ಗಕ್ಕೆ ಬಳಸುವ ಮಾನದಂಡಗಳ ಜೊತೆಗೆ, ಕೆಳಗಿನ ಎರಡು ಹೆಚ್ಚುವರಿ ಉಪ-ಮಾನದಂಡಗಳನ್ನು "ಸಂಶೋಧನಾ ಸಂಸ್ಥೆಗಳ" ಅಡಿಯಲ್ಲಿ ಶ್ರೇಯಾಂಕ ಸಂಸ್ಥೆಗಳಿಗೆ ಹೊಸದಾಗಿ ಅಭಿವೃದ್ಧಿಪಡಿಸಿದ ವಿಧಾನದಲ್ಲಿ ಸೇರಿಸಲಾಗಿದೆ: i) ಮೊದಲ ತ್ರೈಮಾಸಿಕದ ನಿಯತಕಾಲಿಕಗಳಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧಗಳ ಉಲ್ಲೇಖ (ಜೆಸಿಆರ್.ಕ್ಯು.1) ; ಮತ್ತು ii) ಎಚ್. ಸೂಚ್ಯಂಕ.

ಜೊತೆಗೆ, ಅರ್ಜಿದಾರ ಸಂಸ್ಥೆಗಳಿಂದ ವಿವಿಧ ಮಾನದಂಡಗಳ ಮೇಲೆ ದತ್ತಾಂಶವನ್ನು ಪಡೆಯುವುದು, ಮೂರನೇ ಪಕ್ಷಕಾರರ ಮೂಲಗಳನ್ನು ಸಹ ಸಾಧ್ಯವಿರುವಲ್ಲಿ ಬಳಸಲಾಗಿದೆ. ಸ್ಕೋಪಸ್ (ಎಲ್ಸೆವಿಯರ್ ಸೈನ್ಸ್) ಮತ್ತು ವೆಬ್ ಆಫ್ ಸೈನ್ಸ್ (ಕ್ಲಾರಿವೇಟ್ ಅನಾಲಿಟಿಕ್ಸ್) ಅನ್ನು ಪ್ರಕಟಣೆಗಳು ಮತ್ತು ಉಲ್ಲೇಖಗಳ ದತ್ತಾಂಶವನ್ನು ಹಿಂಪಡೆಯಲು ಬಳಸಲಾಗುತ್ತಿತ್ತು. ಪೇಟೆಂಟ್‌ ಗಳ ದತ್ತಾಂಶವನ್ನು ಹಿಂಪಡೆಯಲು ಡೆರ್ವೆಂಟ್ ಇನ್ನೋವೇಶನ್ ಅನ್ನು ಬಳಸಲಾಯಿತು. ಈ ಮೂಲಗಳಿಂದ ಪಡೆಯಲಾದ ದತ್ತಾಂಶವನ್ನು ಸಂಸ್ಥೆಗಳೊಂದಿಗೆ ಪಾರದರ್ಶಕತೆಗಾಗಿ ಅವುಗಳ ಒಳಹರಿವಿಗೆ ಅವಕಾಶವನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆ 4030 ವಿಶಿಷ್ಟ ಸಂಸ್ಥೆಗಳು "ಒಟ್ಟಾರೆ", ಪ್ರವರ್ಗ-ನಿರ್ದಿಷ್ಟ ಮತ್ತು / ಅಥವಾ ಡೊಮೇನ್-ನಿರ್ದಿಷ್ಟ ಶ್ರೇಯಾಂಕಗಳಿಗಾಗಿ ಭಾರತ ಶ್ರೇಯಾಂಕ 2021ರ ಶ್ರೇಯಾಂಕಕ್ಕಾಗಿ ತಮ್ಮನ್ನು ಒಡ್ಡಿಕೊಂಡಿದ್ದವು. ಒಟ್ಟಾರೆಯಾಗಿ, ವಿವಿಧ ವರ್ಗಗಳ ಅಡಿಯಲ್ಲಿ ಈ 4030 ವಿಶಿಷ್ಟ ಅರ್ಜಿದಾರ ಸಂಸ್ಥೆಗಳಿಂದ 6272 ಅರ್ಜಿಗಳನ್ನು ಶ್ರೇಣೀಕರಣಕ್ಕೆ ಮಾಡಲಾಗಿತ್ತು, ಒಟ್ಟಾರೆ ವಿಭಾಗದಲ್ಲಿ 1657, ಎಂಜನಿಯರಿಂಗ್ ನಲ್ಲಿ  1143,  ಮ್ಯಾನೇಜ್ಮೆಂಟ್ ನಲ್ಲಿ 659, ಔಷಧ ಶಿಕ್ಷಣದಲ್ಲಿ 351, ಕಾನೂನಿನಲ್ಲಿ 120, ವೈದ್ಯಕೀಯದಲ್ಲಿ  111, ವಾಸ್ತು ಶಿಲ್ಪದಲ್ಲಿ 78 ಮತ್ತು ಸಾಮಾನ್ಯ ಪದವಿ ಕಾಲೇಜುಗಳಲ್ಲಿ 1802 ಸೇರಿವೆ. ಈ ವರ್ಷ ಶ್ರೇಯಾಂಕದ ಪ್ರಕ್ರಿಯೆಯಲ್ಲಿ ಸಾಂಸ್ಥಿಕ ಭಾಗವಹಿಸುವಿಕೆಯಲ್ಲಿ ಗಮನಾರ್ಹ ಹೆಚ್ಚಳವು ನ್ಯಾಯಯುತ ಮತ್ತು ಪಾರದರ್ಶಕ ಶ್ರೇಯಾಂಕದ ಕಸರತ್ತಾಗಿ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಅದರ ಮಾನ್ಯತೆಯನ್ನು ಸೂಚಿಸುತ್ತದೆ. ಭಾರತ ಶ್ರೇಯಾಂಕಕ್ಕೆ ವಿಶಿಷ್ಟ ಅರ್ಜಿದಾರರ ಸಂಖ್ಯೆ 2016 ರಲ್ಲಿದ್ದ 2426 ರಿಂದ 2021 ರಲ್ಲಿ 4030 ಕ್ಕೆ ಏರಿಕೆಯಾಗಿದೆ, ಆದರೆ ವಿವಿಧ ಪ್ರವರ್ಗಗಳ ಶ್ರೇಯಾಂಕಕ್ಕಾಗಿ ಒಟ್ಟು ಅರ್ಜಿಗಳ ಸಂಖ್ಯೆ 2016 ರಲ್ಲಿ 3565 ಇದ್ದದ್ದು, 2021ರಲ್ಲಿ 6272 ಕ್ಕೆ ಹೆಚ್ಚಾಗಿದೆ. ವಿಶಿಷ್ಟ ಸಂಸ್ಥೆಗಳಲ್ಲಿ ಒಟ್ಟು 1604 (ಶೇ.66 ಹೆಚ್ಚಳ) ಮತ್ತು ಒಟ್ಟು ಅರ್ಜಿದಾರರಲ್ಲಿ 2707 (ಶೇ.76) ಹೆಚ್ಚಳವಾಗಿದೆ.

2016ರಿಂದ 2021ರ ನಡುವೆ ಭಾರತೀಯ ಶ್ರೇಣೀಕರಣಕ್ಕೆ  ಅರ್ಜಿದಾರರ ಸಂಖ್ಯೆಯಲ್ಲಿ ಹೆಚ್ಚಳ

ರೂಢಿಯ ಪ್ರಕಾರ, 200 ಸಂಸ್ಥೆಗಳು ಎಂಜಿನಿಯರಿಂಗ್ ಪ್ರವರ್ಗದಲ್ಲಿ, ಒಟ್ಟಾರೆ , ವಿಶ್ವವಿದ್ಯಾಲಯ ಮತ್ತು ಕಾಲೇಜು ಪ್ರವರ್ಗಗಳಲ್ಲಿ ತಲಾ 100, ಮ್ಯಾನೇಜ್ಮೆಂಟ್ ಮತ್ತು ಔಷಧ ಶಿಕ್ಷಣದಲ್ಲಿ ತಲಾ 75, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ತಲಾ 50, ದಂತ ವೈದ್ಯಕೀಯದಲ್ಲಿ 40, ಕಾನೂನಿನಲ್ಲಿ 30 ಮತ್ತು  ವಾಸ್ತುಶಿಲ್ಪದಲ್ಲಿ 25 ಶ್ರೇಣೀಕರಣ ಪಡೆದಿವೆ. ಒಟ್ಟಾರೆ, ವಿಶ್ವವಿದ್ಯಾನಿಲಯ ಮತ್ತು ಕಾಲೇಜಿಗೆ ಸಂಬಂಧಿಸಿದಂತೆ 101-150 ಮತ್ತು 151-200ರ ಗುಚ್ಛ ಶ್ರೇಣಿಯ ಬ್ರ್ಯಾಂಡ್‌ ಗಳಲ್ಲಿ ಹೆಚ್ಚುವರಿ ಶ್ರೇಯಾಂಕಗಳನ್ನು ಸೂಕ್ತವಾಗಿ ಜೋಡಿಸಲಾಗುತ್ತದೆ ಮತ್ತು ಎಂಜಿನಿಯರಿಂಗ್‌ ಗೆ ಸಂಬಂಧಿಸಿದಂತೆ ಈ ಗುಚ್ಛ 201-250 ಮತ್ತು 251-300 ಆಗಿರುತ್ತದೆ.

ಭಾರತ ಶ್ರೇಣೀಕರಣ 2021ರ ಪ್ರಮುಖ ಮುಖ್ಯಾಂಶಗಳು:

  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಒಟ್ಟಾರೆ ವಿಭಾಗದಲ್ಲಿ ಮತ್ತು ಇಂಜಿನಿಯರಿಂಗ್‌ ನಲ್ಲಿ ಸತತ ಮೂರನೇ ವರ್ಷ 1 ನೇ ಸ್ಥಾನವನ್ನು ಉಳಿಸಿಕೊಂಡಿದೆ.
  • ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪ್ರವರ್ಗದಲ್ಲಿ ಅಗ್ರಸ್ಥಾನದಲ್ಲಿದೆ ಹಾಗೂ ಭಾರತ ಶ್ರೇಣೀಕರಣ 2021ರಲ್ಲಿ ಮೊದಲ ಬಾರಿಗೆ ಸಂಶೋಧನಾ ಸಂಸ್ಥೆ ಪ್ರವರ್ಗ ಪರಿಚಯಿಸಲಾಗಿದೆ.
  • ಐಐಎಂ ಅಹಮದಾಬಾದ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಮ್ಸ್), ನವದೆಹಲಿ ಸತತ ನಾಲ್ಕನೇ ವರ್ಷ ವೈದ್ಯಕೀಯ ಪ್ರವರ್ಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
  • ಜಾಮಿಯಾ ಹಮ್ ದರ್ದ್ ಸತತ ಮೂರನೇ ವರ್ಷ ಔಷಧ ಶಿಕ್ಷಣ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ.
  • ಮಿರಾಂಡಾ ಕಾಲೇಜು ಸತತ ಐದನೇ ವರ್ಷ ಕಾಲೇಜುಗಳ ಪ್ರವರ್ಗದಲ್ಲಿ 1ನೇ ಸ್ಥಾನವನ್ನು ಉಳಿಸಿಕೊಂಡಿದೆ.
  • ಐಐಟಿ ರೂರ್ಕಿ ಕೃಷಿ ವಿಷಯದಲ್ಲಿ ಐಐಟಿ ಖರಗ್ಪುರವನ್ನು ಹಿಂದಿಕ್ಕಿ ಪ್ರಥಮ ಬಾರಿಗೆ ಅಗ್ರಸ್ಥಾನ ಪಡೆದುಕೊಂಡಿದೆ.
  • ರಾಷ್ಟ್ರೀಯ ಕೂನೂನು ಶಾಲೆ ಇಂಡಿಯಾ ವಿಶ್ವವಿದ್ಯಾಲಯ, ಬೆಂಗಳೂರು ಸತತ ನಾಲ್ಕನೇ ವರ್ಷ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.
  • ಕಾಲೇಜುಗಳ ಪ್ರವರ್ಗದ ಪೈಕಿ ದೆಹಲಿಯ ಕಾಲೇಜುಗಳು ಪಾರಮ್ಯ ಮೆರೆದಿವೆ. ಮೊದಲ 10 ಸ್ಥಾನಗಳಲ್ಲಿ ಐದು ಕಾಲೇಜುಗಳು ದೆಹಲಿಯದ್ದಾಗಿವೆ.
  • ಮಣಿಪಾಲದ ಮಣಿಪಾಲ ದಂತವೈದ್ಯಕೀಯ ಕಾಲೇಜು, "ದಂತವೈದ್ಯಕೀಯ" ವಿಭಾಗದಲ್ಲಿ 1 ನೇ ಸ್ಥಾನವನ್ನು ಪಡೆದುಕೊಂಡಿದೆ.

ಭಾರತ ಶ್ರೇಣೀಕರಣ 2021 ನೋಡಲು ಲಿಂಕ್ ಕ್ಲಿಕ್ ಮಾಡಿ: https://www.nirfindia.org/2021/Ranking.html

***(Release ID: 1753674) Visitor Counter : 156