ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಕೋವಿಡ್ ಸೂಕ್ತ ನಡವಳಿಕೆಗಳು ಬಹಳ ಮುಖ್ಯ: ಕೋವಿಡ್ ಕಾರ್ಯಪಡೆ ಅಧ್ಯಕ್ಷರ ಎಚ್ಚರಿಕೆ

Posted On: 09 SEP 2021 12:44PM by PIB Bengaluru

ಭಾರತದ ಕೋವಿಡ್-19 ಲಸಿಕೆ ಅಭಿಯಾನ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್ಟಿಎಜಿಐ) ಕಾರ್ಯಕಾರಿ ತಂಡದ ಅಧ್ಯಕ್ಷ ಡಾ. ಎನ್.ಕೆ.ಅರೋರಾ ಅವರು ಡಿಡಿ ನ್ಯೂಸ್ ನೊಂದಿಗೆ ಮಾತನಾಡಿದರು.

ಪ್ರಶ್ನೆ: ಭಾರತದಲ್ಲಿ ಕೋವಿಡ್-19 ಮೂರನೇ ಅಲೆ ಇರುತ್ತದೆಯೇ?

ಕಳೆದ ಹಲವಾರು ವಾರಗಳಿಂದ ನಮ್ಮ ದೇಶದಲ್ಲಿ ಸರಾಸರಿ ಸುಮಾರು 30,000 - 45000 ದೈನಂದಿನ ಪ್ರಕರಣಗಳು ವರದಿಯಾಗುತ್ತಿವೆ. ಇವು ಹೆಚ್ಚಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಂದ, ವಿಶೇಷವಾಗಿ ಕೇರಳ, ಹಲವು ಈಶಾನ್ಯ ರಾಜ್ಯಗಳು ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳು ಹಾಗೂ ದಕ್ಷಿಣದ ಕೆಲ ರಾಜ್ಯಗಳಿಂದ ವರದಿಯಾಗುತ್ತಿವೆ. ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ಹರಡಿದ ʻಸಾರ್ಸ್-ಕೋವ್2ʼ ವೈರಸ್ನ ಜೀನೋಮಿಕ್ ವಿಶ್ಲೇಷಣೆಯನ್ನು ನಾವು ಪರಿಶೀಲಿಸಿದ್ದಾದರೆ, ಯಾವುದೇ ಹೊಸ ರೂಪಾಂತರಗಳು ಹೊರಹೊಮ್ಮಿಲ್ಲ. ಅಲ್ಲದೆ, ಜುಲೈ ನಲ್ಲಿ ನಡೆಸಲಾದ ಸೆರೋ-ಸಮೀಕ್ಷೆಯ ಆಧಾರದ ಮೇಲೆ ನೋಡುವುದಾದರೆ, ಪ್ರಸ್ತುತ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳು ಇನ್ನೂ ಲಸಿಕೆ ಪಡೆಯದ ಸೋಂಕು ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಲ್ಲಷ್ಟೇ ಕಂಡು ಬಂದಿವೆ. ಅವರು ಎರಡನೇ ಅಲೆಯ ಕೊನೆಯ ಹಂತದಿಂದ ಬಾಧಿತರಾಗಿದ್ದಾರೆ.

ಜುಲೈನ ಸೆರೋ-ಸಮೀಕ್ಷೆಯಲ್ಲಿ 66%ರಿಂದ 70% ಜನರು ಸೋಂಕಿಗೆ ಒಳಗಾಗಿರುವುದು ಕಂಡು ಬಂದಿತ್ತು; ಇದರರ್ಥ 30% ಜನರು ಇನ್ನೂ ಸೋಂಕಿಗೆ ಒಳಗಾಗುವ ಅಪಾಯದಲ್ಲಿದ್ದಾರೆ; ಅವರು ಇನ್ನೂ ಲಸಿಕೆ ಪಡೆಯದಿದ್ದರೆ ಯಾವುದೇ ಸಮಯದಲ್ಲಿ ಸೋಂಕಿಗೆ ತುತ್ತಾಗಬಹುದು. ಆದ್ದರಿಂದ ದೇಶದಾದ್ಯಂತ ನಮ್ಮಲ್ಲಿ ಯಾರೇ ನಿರ್ಲಕ್ಷ್ಯ ತೋರಿದರೂ ಅದಕ್ಕೆ ದೇಶ ಭಾರಿ ವೆಚ್ಚ ತೆರಬೇಕಾಗುತ್ತದೆ. ಏಕೆಂದರೆ 30% ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಮತ್ತು ಅವರಲ್ಲಿ ಅನೇಕರು ತೀವ್ರ ಅನಾರೋಗ್ಯಕ್ಕೆ ಗುರಿಯಾಗಬಹುದು. ವಿರಳ ಪ್ರಕರಣಗಳಲ್ಲಿ 2021ರ ಏಪ್ರಿಲ್ ಮತ್ತು ಮೇ ಸಮಯದಲ್ಲಿ ನಾವು ಕಂಡಂತೆ ಮಾರಣಾಂತಿಕವೂ ಆಗಬಹುದು.

ಆದ್ದರಿಂದ, ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತ್ಯಗತ್ಯ ಮತ್ತು ವಿಶೇಷವಾಗಿ ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಇದು ನಿರ್ಣಾಯಕ. ಈ ಸಮಯದಲ್ಲಿ ಹೊಸ ರೂಪಾಂತರಿಯ ಉಗಮವು ಮೂರನೇ ಅಲೆಯ ಆರಂಭಕ್ಕೂ ಕಾರಣವಾಗಬಹುದು.

ಪ್ರಶ್ನೆ: ಡೆಲ್ಟಾ ರೂಪಾಂತರಿಯ ವಿರುದ್ಧ ನಮ್ಮ ಕೋವಿಡ್ ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ? ಮೂರನೇ ಅಲೆಯನ್ನು ತಡೆಯಲು ನಾವು ಏನು ಮಾಡಬೇಕು?

ಕೋವಿಡ್ ಲಸಿಕೆಗಳ ಪರಿಣಾಮಕಾರಿತ್ವವನ್ನು ಈ ಕೆಳಗಿನ ರೀತಿಯಲ್ಲಿ ವಿವರಿಸಬಹುದು:

  • ಸೋಂಕು ತಡೆಗಟ್ಟುವಲ್ಲಿ ಪರಿಣಾಮಕಾರಿತ್ವ ಮತ್ತು ಆ ಮೂಲಕ ವೈರಸ್ ಹರಡುವಿಕೆಗೆ ತಡೆ
  • ರೋಗಲಕ್ಷಣವುಳ್ಳ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಅದರ ಪರಿಣಾಮಕಾರಿತ್ವ
  • ತೀವ್ರ ಅನಾರೋಗ್ಯ ಅಥವಾ ಸಾವಿನಿಂದ ರಕ್ಷಿಸಲು ಪರಿಣಾಮಕಾರಿತ್ವ

ನಾವು ಮಾಧ್ಯಮಗಳಲ್ಲಿ ನೋಡುವ ಪರಿಣಾಮಕಾರಿತ್ವದ ಕುರಿತಾದ ವರದಿಗಳು ಹೆಚ್ಚಾಗಿ ರೋಗಲಕ್ಷಣದೊಂದಿಗೆ ಅನಾರೋಗ್ಯದ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವವನ್ನು ಉಲ್ಲೇಖಿಸುತ್ತವೆ; ಇದು ಸಾಮಾನ್ಯವಾಗಿ ವಿವಿಧ ಲಸಿಕೆಗಳಲ್ಲಿ  60%ರಿಂದ 90% ಇರುತ್ತದೆ.

ಹೆಚ್ಚಿನ ಲಸಿಕೆಗಳು ಕೋವಿಡ್ ಸೋಂಕನ್ನು ತಡೆಗಟ್ಟುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಆದ್ದರಿಂದ, ಲಸಿಕೆಯ ನಂತರವೂ, ವ್ಯಕ್ತಿಯು ಕೋವಿಡ್ ಸೋಂಕನ್ನು ಹರಡಬಹುದು. ಹೀಗಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಕಾಯ್ದುಕೊಳ್ಳುವ ಅಗತ್ಯದ ಬಗ್ಗೆ ಪದೇ ಪದೇ ಒತ್ತಿ ಹೇಳಲಾಗುತ್ತದೆ.

ಕೋವಿಡ್-19 ಲಸಿಕೆಗಳ ಅತ್ಯಂತ ಪ್ರಮುಖವಾದ ಮೌಲ್ಯವೆಂದರೆ ತೀವ್ರ ಅನಾರೋಗ್ಯ, ಆಸ್ಪತ್ರೆಗೆ ದಾಖಲಾಗುವ ಅಗತ್ಯ ಮತ್ತು ಮರಣವನ್ನು ತಡೆಗಟ್ಟುವಲ್ಲಿ ಅವುಗಳ ಪರಿಣಾಮಕಾರಿತ್ವ. ಪ್ರಸ್ತುತ ಭಾರತ ಮತ್ತು ಇತರ ಕಡೆಗಳಲ್ಲಿ ಲಭ್ಯವಿರುವ ಎಲ್ಲಾ ಲಸಿಕೆಗಳು ತೀವ್ರ ಅನಾರೋಗ್ಯ ಮತ್ತು ಸಾವಿನಿಂದ ಲಸಿಕೆ ಪಡೆದವರನ್ನು ರಕ್ಷಿಸುವಲ್ಲಿ 90-95% ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಡೆಲ್ಟಾ ವೈರಸ್ ಸೇರಿದಂತೆ ಎಲ್ಲಾ ರೂಪಾಂತರಿಗಳ ವಿಚಾರದಲ್ಲಿ ಇದು ಸತ್ಯವಾಗಿದೆ. ಇಂದು ಭಾರತದಲ್ಲಿ ಉಂಟಾಗುತ್ತಿರುವ ಹೆಚ್ಚಿನ ಸೋಂಕಿಗೆ ಡೆಲ್ಟಾ ವೈರಸ್ ಮೂಲ.

ಪ್ರಶ್ನೆ: ಯಾವುದೇ ವ್ಯಕ್ತಿ ಕೋವಿಡ್-19 ಸೋಂಕಿಗೆ ಒಳಗಾಗಿ ಪ್ರಸ್ತುತ ಅವರ ದೇಹದಲ್ಲಿ ಕೋವಿಡ್-19 ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಿದ್ದರೆ ಅಂಥವರು ಕೋವಿಡ್-19 ಸೋಂಕಿಗೆ ಒಳಗಾದವರಿಗೆ ರಕ್ತ ಅಥವಾ ಪ್ಲಾಸ್ಮಾವನ್ನು ದಾನ ಮಾಡಬಹುದೇ?

ಆಸ್ಪತ್ರೆಗೆ ದಾಖಲಾಗುವುದು ಅತ್ಯಗತ್ಯವೆನ್ನುಷ್ಟು ಮಟ್ಟಿಗೆ ತೀವ್ರ ಕೋವಿಡ್ ಸೋಂಕಿಗೆ ಒಳಗಾದ ಹೆಚ್ಚಿನ ರೋಗಿಗಳಿಗೆ ಪ್ಲಾಸ್ಮಾ ಥೆರಪಿಯಿಂದ ಉಪಯೋಗವಿಲ್ಲ ಎಂಬುದು ʻಐಸಿಎಂಆರ್ʼ ಅಡಿಯಲ್ಲಿ ನಮ್ಮ ದೇಶದಲ್ಲಿ ನಡೆಸಿದ ಉನ್ನತ ಮಟ್ಟದ ಸಂಶೋಧನೆಯಿಂದ ಬಯಲಾಗಿದೆ. ವಿಶ್ವದ ಇತರ ಭಾಗಗಳಲ್ಲಿ ನಡೆದ ಇದೇ ರೀತಿಯ ಅಧ್ಯಯನಗಳೂ ಸಾವು ಅಥವಾ ಆಸ್ಪತ್ರೆಯ ದಾಖಲು ತಪ್ಪಿಸುವಲ್ಲಿ ವಿಫಲವಾಗಿವೆ. ಈ ಕಾರಣಗಳಿಗಾಗಿಯೇ, ತೀವ್ರ ಕೋವಿಡ್-19 ಸೋಂಕಿಗೆ ಚಿಕಿತ್ಸಾ ಮಾರ್ಗಸೂಚಿಗಳ ಪಟ್ಟಿಯಿಂದ ಪ್ಲಾಸ್ಮಾ ಥೆರಪಿಯನ್ನು ʻಐಸಿಎಂಆರ್ʼ ತೆಗೆದುಹಾಕಿದೆ.

ಯಾರಾದರೂ ಸೋಂಕಿಗೆ ಒಳಗಾದರೆ, ಜೀವಕೋಶ ಆಧಾರಿತ ರೋಗನಿರೋಧಕತೆಯ ಜೊತೆಗೆ ಅವನ/ಅವಳ ದೇಹದಲ್ಲಿ ಪ್ರತಿಕಾಯಗಳ ಪೀಳಿಗೆಯೂ ಇರುತ್ತದೆ. ಪ್ರತಿಕಾಯಗಳನ್ನು ಅಳೆಯಬಹುದು, ಅದನ್ನು ಗೋಚರ ರೋಗನಿರೋಧಕತೆ ಎಂದು ಕರೆಯಲಾಗುತ್ತದೆ. ಜೀವಕೋಶ ಆಧಾರಿತ ರೋಗನಿರೋಧಕತೆಯನ್ನು ಅಗೋಚರ ರೋಗನಿರೋಧಕತೆ ಎಂದು ಕರೆಯಲಾಗುತ್ತದೆ. ಆದರೆ ಅಂತಹ ಅಗೋಚರ ರೋಗನಿರೋಧಕತೆಯೂ ಪ್ರತಿಕಾಯಗಳಷ್ಟೇ ಮುಖ್ಯವಾದುದು. ಅಂತಹ ವ್ಯಕ್ತಿಯು ಕೋವಿಡ್-19 ಮರು ಸೋಂಕಿಗೆ ಒಳಗಾದಾಗ ಈ ರೋಗನಿರೋಧಕ ಘಟಕಗಳು ರೋಗ ಮತ್ತು ತೀವ್ರತೆಯನ್ನು ತಡೆಯುತ್ತವೆ.

ಇತ್ತೀಚೆಗೆ ಕಂಪನಿಯೊಂದು ಮಾರುಕಟ್ಟೆಯಲ್ಲಿ ಪ್ರತಿಕಾಯ ಮಿಶ್ರಣವನ್ನು ಪರಿಚಯಿಸಿತು. ಆದರೆ ಅದು ಹೆಚ್ಚಿನ ಪ್ರಯೋಜನವನ್ನು ತೋರಲಿಲ್ಲ. ಈ ಪ್ರತಿಕಾಯ ಮಿಶ್ರಣವು ಪ್ಲಾಸ್ಮಾ ಥೆರಪಿಯ ತತ್ವವನ್ನು ಆಧರಿಸಿತ್ತು. ಪ್ಲಾಸ್ಮಾ ಅಥವಾ ಪ್ರತಿಕಾಯವನ್ನು ಸೋಂಕಿನ ಮೊದಲ ವಾರ ಅಥವಾ ಆರಂಭಿಕ ದಿನಗಳಲ್ಲಿ ರೋಗಿಗೆ ನೀಡಿದರೆ, ಆಗ ಇದರಿಂದ ಸ್ವಲ್ಪ ಪ್ರಯೋಜನವಾಗಬಹುದು ಎಂಬ ವಿಷಯ ಗಮನಕ್ಕೆ ಬಂದಿದೆ.

ಇತ್ತೀಚೆಗೆ ಪ್ರಕಟವಾದ ಒಂದು ಅಧ್ಯಯನ ವರದಿಯ ಪ್ರಕಾರ, ಯಾವುದೇ ವ್ಯಕ್ತಿ ಸ್ವಾಭಾವಿಕವಾಗಿ ಕೋವಿಡ್ ಸೋಂಕಿಗೆ ಒಳಗಾಗದರೆ ಮತ್ತು ಅದರಿಂದ ಚೇತರಿಸಿಕೊಂಡಿದ್ದರೆ, ಆ ವ್ಯಕ್ತಿಯ ರೋಗನಿರೋಧಕತೆಯು ಆತ/ಆಕೆಯನ್ನು ದೀರ್ಘಕಾಲದವರೆಗೆ ರಕ್ಷಿಸುತ್ತದೆ.  ಅಂತಹ ವ್ಯಕ್ತಿಯು ಲಸಿಕೆಯನ್ನು ತೆಗೆದುಕೊಂಡರೆ, ಆಗ ವ್ಯಕ್ತಿಗಳು ಸೋಂಕು ಮತ್ತು ರೋಗದ ವಿರುದ್ಧ ದುಪ್ಪಟ್ಟು ರಕ್ಷಣೆಯನ್ನು ಹೊಂದಿರುತ್ತಾರೆ.

ಪ್ರಶ್ನೆ: ನಮ್ಮ ಜನರಿಗೆ ಬೂಸ್ಟರ್ ಡೋಸ್ ಲಸಿಕೆಯ ಅಗತ್ಯವಿದೆಯೇ?

ನಮ್ಮ ದೇಶದಲ್ಲಿ ಬೂಸ್ಟರ್ ಡೋಸ್ನ ಅಗತ್ಯವನ್ನು ಪರಿಸ್ಥಿತಿಯ ಆಧಾರದ ಮೇಲೆ ಅಥವಾ ಪಾಶ್ಚಿಮಾತ್ಯ ದೇಶಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಆಧಾರದ ಮೇಲೆ ತೀರ್ಮಾನಿಸಲು ಸಾಧ್ಯವಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಮಾಡಿದ ಅಧ್ಯಯನಗಳ ಆಧಾರದ ಮೇಲೆ ಸ್ಥಳೀಯ ಪುರಾವೆಗಳು ನಮ್ಮ ಜನರಿಗೆ ಅಂತಹ ಡೋಸ್ನ ಅಗತ್ಯದ ಬಗ್ಗೆ ಮಾರ್ಗದರ್ಶನ ನೀಡಲಿವೆ. ನಮ್ಮ ದೇಶದ ಜನಸಂಖ್ಯೆಯ 70% ರಿಂದ 80% ಜನರು ಈಗಾಗಲೇ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಇದನ್ನು ಪರಿಗಣಿಸಬಹುದು. ನಮ್ಮ ಜನರಿಗೆ ಸೂಕ್ತ ರಕ್ಷಣೆ ಒದಗಿಸುವ ಸಮಗ್ರ ಉದ್ದೇಶದೊಂದಿಗೆ ಲಭ್ಯವಿರುವ ಅತ್ಯುತ್ತಮ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಈ ಸಂಬಂಧ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು.

ಪ್ರಶ್ನೆ: ಲಸಿಕೆಯ ಪರಿಣಾಮಕಾರಿತ್ವ ಮತ್ತು ವ್ಯಕ್ತಿಯ ದೇಹದ ಮಿತಿಗಳನ್ನು ನಾವು ಜೊತೆ ಜೊತೆಯಾಗಿ ನೋಡಬೇಕೇ ಅಥವಾ ಅವುಗಳನ್ನು ವಿಭಿನ್ನವಾಗಿ ನೋಡಬೇಕೇ? ಸೋಂಕು ವ್ಯಕ್ತಿಯ ದೇಹದ ಮಿತಿಗಳನ್ನು ಅವಲಂಬಿಸಿರುತ್ತದೆಯೇ ಅಥವಾ ಲಸಿಕೆಯ ಪರಿಣಾಮಕಾರಿತ್ವವು ಎಲ್ಲರಿಗೂ ಒಂದೇ ರೀತಿ ಇರುತ್ತದೆಯೇ?

ಈ ಅಂಶಗಳನ್ನು ಸಮಗ್ರ ರೀತಿಯಲ್ಲಿ ಪರಿಶೀಲಿಸಬೇಕು. ಕೋವಿಡ್-19 ಲಸಿಕೆಗಳು ಸೇರಿದಂತೆ ಯಾವುದೇ ಲಸಿಕೆಗೆ ಯುವ ವ್ಯಕ್ತಿಗಳ ಪ್ರತಿಕ್ರಿಯೆ ಅತ್ಯಂತ ದೃಢವಾಗಿರುತ್ತದೆ ಮತ್ತು ಅವರಲ್ಲಿ ಲಸಿಕೆಗಳು ಗರಿಷ್ಠ ಪರಿಣಾಮಕಾರಿತ್ವವನ್ನು ತೋರಿಸುತ್ತವೆ. ಹೆಚ್ಚಿದ ವಯಸ್ಸು ಮತ್ತು ಸಹ-ಅಸ್ವಸ್ಥತೆಗಳ (ಕೋಮಾರ್ಬಿಡ್) ಉಪಸ್ಥಿತಿಯು ಲಸಿಕೆಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು. ಈ ಕಾರಣಕ್ಕಾಗಿ, ಆರಂಭಿಕ ಪ್ರಯೋಗಗಳ ಸಮಯದಲ್ಲಿ, ಹಿರಿಯರನ್ನು ಅಂದರೆ 60ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರನ್ನು ಸೇರಿಸಲಾಗುತ್ತದೆ. ಅದೃಷ್ಟವಶಾತ್ ಕೋವಿಡ್-19 ಲಸಿಕೆಗಳು ಬಹುತೇಕ ಎಲ್ಲರಲ್ಲೂ ಸಮಾನವಾಗಿ ಕೆಲಸ ಮಾಡುತ್ತವೆ. ವಯಸ್ಸಾದವರಲ್ಲಿ ಮತ್ತು ಸಹ-ಅಸ್ವಸ್ಥತೆ ಹೊಂದಿರುವವರಲ್ಲಿ ಕಿರಿಯ ವ್ಯಕ್ತಿಗಳು ಮತ್ತು ಯಾವುದೇ ಸಹ-ಅಸ್ವಸ್ಥತೆಗಳಿಲ್ಲದವರಿಗೆ ಹೋಲಿಸಿದರೆ ರೋಗದ ಗಂಭೀರತೆ ಮತ್ತು ಸಾವಿನ ಅಪಾಯ ಸುಮಾರು 20-25 ಪಟ್ಟು ಹೆಚ್ಚು ಇರುತ್ತದೆ. ಹೀಗಾಗಿ ಇವು ಪ್ರಮುಖ ವಿಷಯಗಳಾಗಿವೆ. ಲಸಿಕೆ ನೀಡಲು ಆದ್ಯತೆಯ ವ್ಯಕ್ತಿಗಳನ್ನು ಗುರುತಿಸಲು ಈ ಅಂಶವನ್ನೇ ಆಧಾರವಾಗಿ ಪರಿಗಣಿಸಲಾಗಿದೆ. ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುವ ಕೆಲವೊಂದು ರೋಗ ಪರಿಸ್ಥಿತಿಗಳಿರುತ್ತವೆ, ಉದಾ: ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು, ಸ್ಟೀರಾಯ್ಡ್ಗಳ ಅಗತ್ಯವಿರುವ ಆರೋಗ್ಯ ಪರಿಸ್ಥಿತಿಗಳು ಇತ್ಯಾದಿ. ಅಂತಹ ವ್ಯಕ್ತಿಗಳಲ್ಲಿ ಲಸಿಕೆಗಳ ರಕ್ಷಣಾತ್ಮಕ ಪ್ರತಿಕ್ರಿಯೆಯು ಅಸಮರ್ಪಕವಾಗಿರಬಹುದು ಹಾಗೂ ಅಂಥವರಿಗೆ ಮತ್ತೊಂದು ಲಸಿಕೆ ಅಥವಾ ಬೂಸ್ಟರ್ ಡೋಸ್ನ ಅಗತ್ಯವಾಗಬಹುದು. ಕೋವಿಡ್ ಲಸಿಕೆಗಳ ಬೂಸ್ಟರ್ ಡೋಸ್ನ ಅಗತ್ಯವನ್ನು ನಿರ್ಧರಿಸುವಾಗ ʻ ಎನ್ಟಿಎಜಿಐʼ ಈ ಸಮಸ್ಯೆಗಳನ್ನು ಪರಿಗಣಿಸಲಿದೆ.

***



(Release ID: 1753659) Visitor Counter : 249