ಇಂಧನ ಸಚಿವಾಲಯ

ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಮತ್ತು ಹವಾಮಾನ ಕುರಿತಾದ ಅಮೆರಿಕದ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಶ್ರೀ ಜಾನ್ ಕೆರಿ ನಡುವೆ ದೂರವಾಣಿ ಮಾತುಕತೆ


ರಸಗೊಬ್ಬರ ಮತ್ತು ಸಂಸ್ಕರಣೆಯಲ್ಲಿ ಹಸಿರು  ಜಲಜನಕ ಬಳಕೆಯನ್ನು ಕಡ್ಡಾಯಗೊಳಿಸಲು ಪ್ರಸ್ತಾಪಿಸಿದ ಭಾರತ

4000 ಮೆ.ವ್ಯಾ. ಸಾಮರ್ಥ್ಯದ ಎಲೆಕ್ಟ್ರೋಲೈಸರ್‌ಗಳು ಮತ್ತು 4000 ಎಂಡಬ್ಲ್ಯೂಹೆಚ್‌ ಸಾಮರ್ಥ್ಯದ ಬ್ಯಾಟರಿ ವಿದ್ಯುತ್‌ ಸಂಗ್ರಹ ವ್ಯವಸ್ಥೆಯ ಬಿಡ್‌ಗಾಗಿ ಭಾರತ ಯೋಜಿಸುತ್ತಿದೆ

Posted On: 27 AUG 2021 1:16PM by PIB Bengaluru

ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಉನ್ನತ ಸಾಧನೆಗಾಗಿ ಶ್ರೀ ಜಾನ್ ಕೆರಿ ಅವರು ಭಾರತವನ್ನು ಅಭಿನಂದಿಸಿದ್ದಾರೆ. ಭಾರತ 146 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸಿದ್ದು, ಇನ್ನೂ 63 ಗಿ.ವ್ಯಾ. ನಿರ್ಮಾಣ ಹಂತದಲ್ಲಿಮತ್ತು 25 ಗೆ.ವ್ಯಾ. ಬಿಡ್ ಹಂತದಲ್ಲಿದೆ. ಹಸಿರು ಜಲಜನಕದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಭಾರತದ ಉದ್ದೇಶಿತ ಯೋಜನೆಯ ಬಗ್ಗೆ ಕೇಂದ್ರ ಸಚಿವ ಆರ್.ಕೆ.ಸಿಂಗ್ ಅವರು ಶ್ರೀ ಕೆರಿಗೆ ಮಾಹಿತಿ ನೀಡಿದರು.

ರಸಗೊಬ್ಬರ ಮತ್ತು ಸಂಸ್ಕರಣೆಯಲ್ಲಿ ಹಸಿರು ಜಲಜನಕ ಬಳಕೆಯನ್ನು ಕಡ್ಡಾಯಗೊಳಿಸಲು ಭಾರತ ಪ್ರಸ್ತಾಪಿಸಿದೆ. ಇದು ಪಳಿಯುಳಿಕೆ ಇಂಧನಗಳಿಂದ ತಯಾರಿಸಲಾಗುವ ಜಲಜನಕದ (ಗ್ರೇ ಹೈಡ್ರೋಜನ್‌) ಸ್ಥಾನದಲ್ಲಿ ಹಸಿರು ಜಲಜನಕ ಬಳಕೆಗೆ ಸರಕಾರ ಹೊಂದಿರುವ ಬದ್ಧತೆಯ ಭಾಗವಾಗಿದೆ. ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ನಿನ್ನೆ ಸಂಜೆ ಇಲ್ಲಿ ಹವಾಮಾನ ಕುರಿತಾದ ಅಮೆರಿಕದ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ (ಎಸ್‌ಪಿಇಸಿ) ಶ್ರೀ ಜಾನ್ ಕೆರಿ ಅವರೊಂದಿಗೆ ದೂರವಾಣಿ ಸಂಭಾಷಣೆ ವೇಳೆ ವಿಷಯ ತಿಳಿಸಿದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರಿಸರಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದು ಶ್ರೀ ಸಿಂಗ್ ಅವರು ಅಮೆರಿಕದ ಅಧ್ಯಕ್ಷೀಯ ಪ್ರತಿನಿಧಿಗೆ ಒತ್ತಿ ಹೇಳಿದರುನವೀಕರಿಸಬಹುದಾದ ವಿದ್ಯುತ್ ಸಂಗ್ರಹಣೆಯ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯದ ಬಗ್ಗೆ ಸೂಚಿಸಿದ ಸಿಂಗ್‌ ಅವರು ವಿದ್ಯುತ್ ಮತ್ತು ತಂತ್ರಜ್ಞಾನದ ಆವಿಷ್ಕಾರಗಳ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು. ಭಾರತವು 4000 ಮೆಗಾವ್ಯಾಟ್ ಗಂಟೆಗಳ(ಎಂಡಬ್ಲ್ಯೂಎಚ್‌) ಬ್ಯಾಟರಿ ಸಂಗ್ರಹಣೆಗೆ ಬಿಡ್ಗಳನ್ನು ಆಹ್ವಾನಿಸುವ ಪ್ರಕ್ರಿಯೆಯಲ್ಲಿದೆ.

ಸ್ಥಾಪಿತ ಸೌರ ಮತ್ತು ಪವನ ಸಾಮರ್ಥ್ಯದಲ್ಲಿ 100 ಗಿ.ವ್ಯಾ. ಸಾಮರ್ಥ್ಯವನ್ನು ದಾಟುವ ಮೂಲಕ ಭಾರತವು ಇತ್ತೀಚೆಗೆ ಸಾಧಿಸಿದ ಮೈಲಿಗಲ್ಲಿನ ಬಗ್ಗೆ ಸಚಿವರು ಶ್ರೀ ಕೆರಿ ಅವರಿಗೆ ಮಾಹಿತಿ ನೀಡಿದರು. ನಾವು ಜಲ ವಿದ್ಯುತ್‌ ಸಾಮರ್ಥ್ಯವನ್ನು ಸೇರಿಸಿದ್ದಾದರೆ, ಒಟ್ಟು ಸ್ಥಾಪಿತ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವು 147 ಮೆಗಾವ್ಯಾಟ್ ಆಗುತ್ತದೆ. ಇದಲ್ಲದೆ, 63 ಗಿ.ವ್ಯಾ. ನವೀಕರಿಸಬಹುದಾದ ಸಾಮರ್ಥ್ಯದ ಘಟಕಗಳು ನಿರ್ಮಾಣ ಹಂತದಲ್ಲಿವೆ. ಇದು ನವೀಕರಿಸಬಹುದಾದ ಸಾಮರ್ಥ್ಯ ಹೆಚ್ಚಳದ ವಿಚಾರದಲ್ಲಿ ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ  ಒಂದಾಗಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ವೆಚ್ಚದ ಹಸಿರು ಜಲಜನಕ ಉತ್ಪಾದನೆಯನ್ನು ಸಕ್ರಿಯಗೊಳಿಸಲು ʻರಾಷ್ಟ್ರೀಯ ಜಲಜನಕ ಇಂಧನ ಯೋಜನೆʼಯನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಸಿಂಗ್ ಅವರು ಶ್ರೀ ಕೆರಿ ಅವರಿಗೆ ಮಾಹಿತಿ ನೀಡಿದರು. ಜಲಜನಕವನ್ನು ಕಾರ್ಯಸಾಧ್ಯ  ಇಂಧನವಾಗಿ ಬಳಸಲು ದಾರಿ ಮಾಡಿಕೊಡಲು ಭಾರತವು ಮುಂದಿನ 3-4 ತಿಂಗಳಲ್ಲಿ ಹಸಿರು ಜಲಜನಕಕ್ಕಾಗಿ ಸ್ಪರ್ಧಾತ್ಮಕ ಬಿಡ್‌ಗಳನ್ನು ಕರೆಯಲಿದೆ ಎಂದು ಅವರು ಹೇಳಿದರು. ಭಾರತವು 4000 ಮೆಗಾವ್ಯಾಟ್ ಎಲೆಕ್ಟ್ರೋಲಿಸ್ಟರ್‌ ಸಾಮರ್ಥ್ಯಕ್ಕಾಗಿ ಬಿಡ್‌ಗಳನ್ನು ಕರೆಯುತ್ತಿದೆ.   ವೆಚ್ಚಗಳನ್ನು ಕಡಿಮೆ ಮಾಡಲು ಇತರ ದೇಶಗಳು ಹೆಚ್ಚಿನ ಎಲೆಕ್ಟ್ರೋಲೈಸರ್‌ ಘಟಕಗಳನ್ನು ಸ್ಥಾಪಿಸಬೇಕಿದೆ ಎಂದರು.

ಬ್ಯಾಟರಿ ವಿದ್ಯುತ್‌ ಸಂಗ್ರಹಕ್ಕಾಗಿ ಬಳಸುವ ಕಚ್ಚಾ ವಸ್ತುವನ್ನು ಸುರಕ್ಷಿತವಾಗಿಡಲು ಭಾರತ ಮತ್ತು ಅಮೆರಿಕ ಲಿಥಿಯಂಗೆ ಪರ್ಯಾಯ ಪೂರೈಕೆ ಸರಪಳಿಯನ್ನು ಸ್ಥಾಪಿಸುವತ್ತ ಕೆಲಸ ಮಾಡಬೇಕೆಂದು ಸೂಚಿಸಲಾಯಿತು. ಶ್ರೀ ಸಿಂಗ್ ಮತ್ತು ಶ್ರೀ ಕೆರಿ ಅವರು ಇಂಧನ ಪರಿವರ್ತನೆಯ ಬಗ್ಗೆ ಚರ್ಚೆಗಳನ್ನು ಮುಂದುವರಿಸಲು ಶೀಘ್ರದಲ್ಲೇ ಪರಸ್ಪರ ಭೇಟಿಯಾಗುವ ನಿರೀಕ್ಷೆಯಿದೆ.

***



(Release ID: 1749599) Visitor Counter : 257