ನೀತಿ ಆಯೋಗ

ಭಾರತದಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಪೋಷಿಸಲು ʻಸಿಸ್ಕೋʼ ಜೊತೆ ನೀತಿ ಆಯೋಗದ ಪಾಲುದಾರಿಕೆ


ನೀತಿ ಆಯೋಗದ ʻಮಹಿಳಾ ಉದ್ಯಮಶೀಲತೆ ವೇದಿಕೆಯʼ (ಡಬ್ಲ್ಯುಇಪಿ) ಮುಂದಿನ ಹಂತವು ಸಿಸ್ಕೋದ ತಂತ್ರಜ್ಞಾನ ಮತ್ತು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯೊಂದಿಗೆ ಕೆಲಸ ಮಾಡುವಲ್ಲಿ ದೊರೆತ ಅನುಭವವನ್ನು ಬಳಸಿಕೊಳ್ಳುತ್ತದೆ, ಆ ಮೂಲಕ ದೇಶಾದ್ಯಂತ ಮಹಿಳಾ ಮಾಲೀಕತ್ವದ ಹೆಚ್ಚಿನ ವ್ಯವಹಾರಗಳನ್ನು ಸಕ್ರಿಯಗೊಳಿಸುತ್ತದೆ

Posted On: 26 AUG 2021 1:55PM by PIB Bengaluru

ಭಾರತದಾದ್ಯಂತ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ತಮ್ಮ ಸಂಯೋಜಿತ ಬದ್ಧತೆಯ ಭಾಗವಾಗಿ ಸರಕಾರದ ಸಾರ್ವಜನಿಕ ನೀತಿ ಕುರಿತಾದ ಚಿಂತಕರ ಚಾವಡಿ ʻನೀತಿ ಆಯೋಗʼ ಮತ್ತು ಸಿಸ್ಕೋ ಇಂದು ಮಹಿಳಾ ಉದ್ಯಮಶೀಲತಾ ವೇದಿಕೆಯ (ಡಬ್ಲ್ಯುಇಪಿ) ಮುಂದಿನ ಹಂತಕ್ಕೆ ಚಾಲನೆ ನೀಡಿದವು. "ಡಬ್ಲ್ಯುಇಪಿ ನೆಕ್ಸ್ಟ್" ಎಂಬ ಹೆಸರಿನ ನೀತಿ ಆಯೋಗದ ಈ ಪ್ರಮುಖ ವೇದಿಕೆಯ ಮುಂದಿನ ಹಂತವು ಸಿಸ್ಕೋದ ತಂತ್ರಜ್ಞಾನ ಮತ್ತು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯೊಂದಿಗೆ ಕೆಲಸ ಮಾಡಿದ ಅನುಭವವನ್ನು ಬಳಸಿಕೊಳ್ಳಲಿದೆ ಮತ್ತು ಆ ಮೂಲಕ ದೇಶಾದ್ಯಂತ ಮತ್ತಷ್ಟು ಮಹಿಳಾ ಮಾಲೀಕತ್ವದ ವ್ಯವಹಾರಗಳನ್ನು ಸಕ್ರಿಯಗೊಳಿಸುತ್ತದೆ. ಅಮಿತಾಭ್ ಕಾಂತ್ (ನೀತಿ ಆಯೋಗದ ಸಿಇಒ), ಅನ್ನಾ ರಾಯ್ (ನೀತಿ ಆಯೋಗದ ಹಿರಿಯ ಸಲಹೆಗಾರ), ಮಾರಿಯಾ ಮಾರ್ಟಿನೆಜ್ (ಇವಿಪಿ & ಸಿಒಒ, ಸಿಸ್ಕೋ), ಡೈಸಿ ಚಿಟ್ಟಿಲಪಿಲ್ಲಿ (ಸಿಸ್ಕೋ ಇಂಡಿಯಾ & ಸಾರ್ಕ್ ಅಧ್ಯಕ್ಷ) ಮತ್ತು ಹರೀಶ್ ಕೃಷ್ಣನ್, (ಸಾರ್ವಜನಿಕ ವ್ಯವಹಾರಗಳು ಮತ್ತು ವ್ಯೂಹಾತ್ಮಕ ಕಾರ್ಯಕ್ರಮಗಳ ವ್ಯವಸ್ಥಾಪಕ ನಿರ್ದೇಶಕ, ಸಿಸ್ಕೋ ಇಂಡಿಯಾ ಮತ್ತು ಸಾರ್ಕ್) ಕಾರ್ಯಕ್ರಮದಲ್ಲಿ ಹಾಜರಿದ್ದರು.

2017ರಲ್ಲಿ ನೀತಿ ಆಯೋಗದಿಂದ ಆರಂಭಿಸಲ್ಪಟ್ಟ ʻಡಬ್ಲ್ಯುಇಪಿʼ ವೈವಿಧ್ಯಮಯ ಹಿನ್ನೆಲೆಯ ಮಹಿಳೆಯರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಹಲವಾರು ಸಂಪನ್ಮೂಲಗಳು, ಬೆಂಬಲ ಮತ್ತು ಕಲಿಕೆಗೆ ಅವಕಾಶಗಳನ್ನು ನೀಡುವ ಚೊಚ್ಚಲ ಹಾಗೂ ಏಕೀಕೃತ ಪೋರ್ಟಲ್ ಆಗಿದೆ. ಈ ಪ್ರಯತ್ನಗಳನ್ನು ಮತ್ತಷ್ಟು ವೃದ್ಧಿಗೊಳಿಸುವ ನಿಟ್ಟಿನಲ್ಲಿ ʻಡಬ್ಲ್ಯುಇಪಿ ನೆಕ್ಸ್ಟ್ʼ ಮಹತ್ವದ ಹೆಜ್ಜೆಯಾಗಿದೆ. ಭಾರತೀಯ ಮಹಿಳಾ ಉದ್ಯಮಿಗಳ ಕುರಿತು ಕೇಂದ್ರೀಕೃತ ಅಧ್ಯಯನ ಮತ್ತು ಆರು ಪ್ರಮುಖ ವಿಭಾಗಗಳಲ್ಲಿ  - ಸಮುದಾಯ ಮತ್ತು ನೆಟ್ವರ್ಕಿಂಗ್, ಕೌಶಲ್ಯ ಮತ್ತು ಮಾರ್ಗದರ್ಶನ, ತರಬೇತಿ ಮತ್ತು ವೇಗೋತ್ಕರ್ಷ ಕಾರ್ಯಕ್ರಮಗಳು, ಹಣಕಾಸು, ಅನುಸರಣೆ ಮತ್ತು ಮಾರ್ಕೆಟಿಂಗ್ ನೆರವು –ಅತ್ಯಂತ ತುರ್ತು ಅಗತ್ಯಗಳ ಆಧಾರದ ಮೇಲೆ ಪುರಾವೆ ಆಧರಿತ ನಿರ್ಧಾರ ಕೈಗೊಳ್ಳುವ ಮೂಲಕ ʻಡಬ್ಲ್ಯುಇಪಿ ನೆಕ್ಸ್ಟ್ʼ ಕಾರ್ಯನಿರ್ವಹಿಸುತ್ತದೆ. ಪರಿಸರ ವ್ಯವಸ್ಥೆಯ ಪ್ರಯೋಜನದ ಉದ್ದೇಶಕ್ಕಾಗಿ, ಈ ಪರಿವರ್ತನೆಗೆ ನೀರೆರೆಯುವ ಕೇಂದ್ರೀಕೃತ ಅಧ್ಯಯನವನ್ನೂ ಲಭ್ಯವಾಗುವಂತೆ ಮಾಡಲಾಗುತ್ತದೆ.

ಇದಲ್ಲದೆ, ಈ ಉಪಕ್ರಮದ ಭಾಗವಾಗಿ, ʻಸಿಸ್ಕೋʼ, ʻನಾಸ್ಕಾಮ್ ಫೌಂಡೇಶನ್ʼ, ʻಸತ್ವ ಕನ್ಸಲ್ಟಿಂಗ್ʼ ಮತ್ತು ʻಡಿಯಾಸ್ರಾ ಫೌಂಡೇಶನ್ʼ ಸಹಯೋಗದೊಂದಿಗೆ, ವೈಯಕ್ತಿಕ ಹಾಗೂ ಉದ್ಯಮ ಮಟ್ಟದಲ್ಲಿ ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ತಂತ್ರಜ್ಞಾನ ಚಾಲಿತ ಕಾರ್ಯಕ್ರಮಗಳನ್ನು ಸಕ್ರಿಯಗೊಳಿಸುತ್ತದೆ.
"ಆರನೇ ಆರ್ಥಿಕ ಜನಗಣತಿಯ ಪ್ರಕಾರ, ಒಟ್ಟು ಉದ್ಯಮಿಗಳಲ್ಲಿ ಮಹಿಳೆಯರು ಕೇವಲ 13.76% ರಷ್ಟಿದ್ದಾರೆ, ಅಂದರೆ ದೇಶದ 58.5 ದಶಲಕ್ಷ ಉದ್ಯಮಿಗಳಲ್ಲಿ 8.05 ದಶಲಕ್ಷ ಮಾತ್ರ. ಇದು ಈ ಹಿಂದೆ ಕೈತಪ್ಪಿದ ಅವಕಾಶವಾಗಿರಬಹುದು. ಆದರೆ ಭಾರತ ಸರಕಾರ ಮತ್ತು ಖಾಸಗಿ ವಲಯಗಳು ʻಡಬ್ಲ್ಯುಇಪಿʼನಂತಹ ಉಪಕ್ರಮಗಳ ಮೂಲಕ ಪರಸ್ಪರ ಕೈ ಜೋಡಿಸಿರುವುದರಿಂದ – ಉಜ್ವಲ ಸಾಧನೆಯನ್ನು ಮಾಡಲು ಮತ್ತು ಸಾಧನೆಗಳನ್ನು ಹಂಚಿಕೊಳ್ಳಲು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡುವಂತಹ ಹೊಸ ಭಾರತದ ದೃಷ್ಟಿಕೋನವನ್ನು ನಾವು ಸಾಕಾರಗೊಳಿಸುತ್ತೇವೆ ಎಂಬ ವಿಶ್ವಾಸವಿದೆ ನನಗೆ," ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದರು. "ಡಬ್ಲ್ಯೂಇಪಿ ನೆಕ್ಸ್ಟ್ʼ ಈ ಚಳವಳಿಗೆ  ಮತ್ತಷ್ಟು ವೇಗ ನೀಡುತ್ತದೆ ಮತ್ತು ಸಿಸ್ಕೋ ನಮ್ಮ ಪಾಲುದಾರನಾಗಿರುವುದರಿಂದ ಈ ತಂತ್ರಜ್ಞಾನ ವೇದಿಕೆಯು ಶೀಘ್ರದಲ್ಲೇ ದೇಶದ ಪ್ರತಿಯೊಬ್ಬ ಮಹಿಳಾ ಉದ್ಯಮಿಗೆ ತನ್ನ ಕನಸುಗಳನ್ನು ಸಾಕಾರಗೊಳಿಸಲು ವೈಯಕ್ತೀಕರಿಸಿದ ಮಾರ್ಗದರ್ಶಿಯಾಗಲಿದೆ ಎಂಬ ನನಗೆ ವಿಶ್ವಾಸವಿದೆ," ಎಂದರು.

"ನಾವು ಚೇತರಿಕೆಯ ಹೊಸ ಹಂತವನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ವೈವಿಧ್ಯಮಯ, ಸಮಗ್ರ ಮತ್ತು ಡಿಜಿಟಲ್-ಸಕ್ರಿಯ ಜಗತ್ತು ಹಿಂದಿಗಿಂತಲೂ ಈಗ ಹೆಚ್ಚು ಸಮೃದ್ಧವಾಗಿದೆ ಎಂಬುದನ್ನು ನಾವು ಸಾಮೂಹಿಕವಾಗಿ ಒಪ್ಪಿಕೊಳ್ಳುತ್ತೇವೆ,ʼʼ ಎಂದು ಸಿಸ್ಕೋ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮಾರಿಯಾ ಮಾರ್ಟಿನೆಜ್ ಹೇಳಿದರು. "ಅಸಮಾನತೆಯ ಸವಾಲುಗಳನ್ನು ಎದುರಿಸುವುದು ಮತ್ತು ಆರ್ಥಿಕ ಸಮೃದ್ಧಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದು ಜನರು ಮತ್ತು ಸಮುದಾಯಗಳು, ವಿಶೇಷವಾಗಿ ಮಹಿಳೆಯರು ಅಡೆತಡೆಗಳನ್ನು ಭೇದಿಸಲು, ಹೊಸ ಆಲೋಚನೆಗಳನ್ನು ಹುಟ್ಟಿಹಾಕಲು ಮತ್ತು ನಾವಿನ್ಯತೆಯನ್ನು ತೋರಲು ಅನುವು ಮಾಡಿಕೊಡುತ್ತದೆ. ನೀತಿ ಆಯೋಗದೊಂದಿಗಿನ ನಮ್ಮ ಪಾಲುದಾರಿಕೆಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಪ್ರಯೋಜನಗಳನ್ನು ಹೆಚ್ಚಿನ ಮಹಿಳಾ ಮಾಲೀಕತ್ವದ ಉದ್ಯಮಗಳಿಗೆ ತಲುಪಿಸುವ ಭರವಸೆ ಹೊಂದಿದ್ದೇವೆ,ʼʼ ಎಂದರು.

"ಡಬ್ಲ್ಯೂಇಪಿ ಕೇಂದ್ರಿತ ಅಧ್ಯಯನದ ಪ್ರಕಾರ, ಹೆಚ್ಚಿನ ಮಹಿಳೆಯರು ಉದ್ಯಮಶೀಲತೆಯ ಹಾದಿ ಹಿಡಿದರೆ ನಾವಿನ್ಯತೆಯ ಹೆಚ್ಚುವುದರ ಜೊತೆಗೆ, 2030ರ ವೇಳೆಗೆ 170 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ನಮ್ಮ ವಾರ್ಷಿಕ ಜಿಡಿಪಿ 1.5%ನಷ್ಟು ಏರಿಕೆಯಾಗಬಹುದು. ಒಂದು ವೇಳೆ ನಾವು ಮಹಿಳಾ ಮಾಲೀಕತ್ವದ ವ್ಯವಹಾರಗಳನ್ನು ಮೇಲೆತ್ತಲು ಕ್ರಮಗಳನ್ನಯ ಕೈಗೊಳ್ಳುವಲ್ಲಿ ವಿಳಂಬಮಾಡಿದರೆ ಈ ಒಂದು ಬೃಹತ್ ಅವಕಾಶವನ್ನು ಕಳೆದುಕೊಳ್ಳಬಹುದು," ಎಂದು ಸಿಸ್ಕೋ ಇಂಡಿಯಾ ಮತ್ತು ಸಾರ್ಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ನೀತಿ ಅಧಿಕಾರಿ ಹರೀಶ್ ಕೃಷ್ಣನ್ ಹೇಳಿದರು. "ಡಬ್ಲ್ಯುಇಪಿ ನೆಕ್ಸ್ಟ್ ಭಾರತದಲ್ಲಿ ಇರುವ ಅಂತರಗಳನ್ನು ಕಡಿಮೆ ಮಾಡುವ ಮತ್ತು ಮಹಿಳೆಯರಿಗೆ ಹೊಸ ಸಾಧ್ಯತೆಗಳನ್ನು ತೆರೆದಿಡುವ ಗುರಿಯನ್ನು ಹೊಂದಿದೆ. ಎಲ್ಲರಿಗೂ ಸರ್ವರನ್ನೂ ಒಳಗೊಂಡ ಮತ್ತು ನ್ಯಾಯಸಮ್ಮತ ಭವಿಷ್ಯದ ನಮ್ಮ ದೃಷ್ಟಿಕೋನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ನೀತಿ ಆಯೋಗದೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆ ಪಡುತ್ತೇವೆ," ಎಂದರು.

ಸಿಸ್ಕೋ ಕುರಿತು:
ಅಂತರ್ಜಾಲಕ್ಕೆ ಶಕ್ತಿ ತುಂಬುವ ತಂತ್ರಜ್ಞಾನದಲ್ಲಿ ಸಿಸ್ಕೋ (ನಾಸ್ಡಾಕ್: ಸಿಎಸ್ಸಿಒ) ಜಾಗತಿಕವಾಗಿ ಮುಂಚೂಣಿಯಲ್ಲಿದೆ. ನಿಮ್ಮ ತಂತ್ರಾಂಶಗಳನ್ನು ಮರುಕಲ್ಪಿಸಿಕೊಳ್ಳುವ ಮೂಲಕ, ನಿಮ್ಮ ದತ್ತಾಂಶವನ್ನು ಸುರಕ್ಷಿತಗೊಳಿಸುವ ಮೂಲಕ, ನಿಮ್ಮ ಮೂಲಸೌಕರ್ಯವನ್ನು ಪರಿವರ್ತಿಸುವ ಮೂಲಕ ಮತ್ತು ಜಾಗತಿಕ ಮತ್ತು ಎಲ್ಲರನ್ನೂ ಒಳಗೊಂಡ ಭವಿಷ್ಯಕ್ಕಾಗಿ ನಿಮ್ಮ ತಂಡಗಳನ್ನು ಸಶಕ್ತಗೊಳಿಸುವ ಮೂಲಕ ಹೊಸ ಸಾಧ್ಯತೆಗಳನ್ನು ಸಿಸ್ಕೋ ಪ್ರೇರೇಪಿಸುತ್ತದೆ. ಸಂಸ್ಥೆಯ ಬಗ್ಗೆ ಇನ್ನಷ್ಟು ತಿಳಿಯಲು Cisco.com ಭೇಟಿ ನೀಡಿ ಮತ್ತು ಟ್ವಿಟರ್ನಲ್ಲಿ @Cisco ಮುಖಾಂತರ ನಮ್ಮನ್ನು ಅನುಸರಿಸಿ.

ನೀತಿ ಆಯೋಗದ ʻಮಹಿಳಾ ಉದ್ಯಮಶೀಲತೆ ವೇದಿಕೆʼ ಕುರಿತು
ಮಹಿಳಾ ಉದ್ಯಮಶೀಲತೆ ವೇದಿಕೆ (ಡಬ್ಲ್ಯುಇಪಿ) ನೀತಿ ಆಯೋಗದ ಪ್ರಮುಖ ಉಪಕ್ರಮವಾಗಿದೆ - ಮಹಿಳಾ ಉದ್ಯಮಿಗಳಿಗೆ ವಿನೂತನ, ಏಕೀಕೃತ ಮಾಹಿತಿ ಪೋರ್ಟಲ್ ಇದಾಗಿದೆ. ಇದು ಉದ್ಯಮದ ಸಂಪರ್ಕಗಳನ್ನು ಸುಧಾರಿಸಲು ಮತ್ತು ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳು ಹಾಗೂ ಸೇವೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ಸಮಾನ ಮನಸ್ಕರ ಸಂಪರ್ಕಕ್ಕೆ ಬೆಂಬಲ, ಕಲಿಕಾ ಸಂಪನ್ಮೂಲಗಳು, ನಿಧಿ ಸಂಗ್ರಹಣೆ ಅವಕಾಶಗಳು ಮತ್ತು ಮಾರ್ಗದರ್ಶಕ ಸೌಲಭ್ಯವನ್ನು ಒದಗಿಸುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಮಾಹಿತಿ ಅಸಮತೋಲನವನ್ನು ಪರಿಹರಿಸುವ ಮತ್ತು ಮಾಹಿತಿ ಭಂಡಾರದ ವೇದಿಕೆಯಾಗುವ ವ್ಯಾಪಕ ಉದ್ದೇಶದೊಂದಿಗೆ, ಮಹಿಳಾ ಉದ್ಯಮಿಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೇವೆಗಳಿಗೆ ಒಂದು ಸಮಗ್ರ ತಾಣವಾಗಿ ʻಡಬ್ಲ್ಯುಇಪಿʼ ಕಾರ್ಯನಿರ್ವಹಿಸುತ್ತದೆ. ಈ ವೇದಿಕೆ ಪ್ರಸ್ತುತ 16,000ಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರು ಮತ್ತು 30 ಪಾಲುದಾರರನ್ನು ಹೊಂದಿದೆ. ಜೊತೆಗೆ ಕ್ಷೇತ್ರಗಳತ್ತ ಗಮನ ಹರಿಸುತ್ತದೆ, ಅವೆಂದರೆ: ಹಣಕಾಸು ನೆರವು ಮತ್ತು ಹಣಕಾಸು ನಿರ್ವಹಣೆ; ತರಬೇತಿ ಮತ್ತು ಪೋಷಣೆ; ತೆರಿಗೆ ಮತ್ತು ಅನುಸರಣಾ ಬೆಂಬಲ; ಉದ್ಯಮಿ ಕೌಶಲ್ಯ ಮತ್ತು ಮಾರ್ಗದರ್ಶನ;  ಸಮುದಾಯ ಮತ್ತು ನೆಟ್ವರ್ಕಿಂಗ್ ಹಾಗೂ ಮಾರ್ಕೆಟಿಂಗ್ ನೆರವು.


*************



(Release ID: 1749388) Visitor Counter : 961