ಉಪರಾಷ್ಟ್ರಪತಿಗಳ ಕಾರ್ಯಾಲಯ
ಒಲಿಂಪಿಕ್ ವಿಜೇತ ಸಾಧಕರುಗಳಿಂದ ಸ್ಫೂರ್ತಿ ಪಡೆಯಲು ಶ್ರಮಿಸಬೇಕು ಮತ್ತು ಅವರಂತೆ ಗುರಿಗಳನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಉಪರಾಷ್ಟ್ರಪತಿ ಅವರು ಯುವಜನತೆಗೆ ಕರೆ ನೀಡಿದ್ದಾರೆ
ಕಠಿಣ ಪರಿಶ್ರಮಕ್ಕೆ ಸದಾ ಪ್ರತಿಫಲ ಸಿಗುತ್ತದೆ ಮತ್ತು ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ: ಉಪರಾಷ್ಟ್ರಪತಿ
ಬಿಕ್ಕಟ್ಟಿನ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ನಮ್ಮ ಸಂಸ್ಕೃತಿಯ ಮೂಲತತ್ವ: ಉಪರಾಷ್ಟ್ರಪತಿ
ಕಲಿಕೆಯು ಒಂದು ಅಂತ್ಯವಿಲ್ಲದ, ಫಲಪ್ರದ ಪ್ರಯಾಣವಾಗಿದೆ.
ಇದರಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಾಗಿ ಮುನ್ನಡೆಯುತ್ತಾರೆ: ಉಪರಾಷ್ಟ್ರಪತಿ
ವಿದ್ಯಾರ್ಥಿಗಳು ಎದುರಿಸುತ್ತಿರುವ ಭಾವನಾತ್ಮಕ ಒತ್ತಡಕ್ಕೆ ಶಿಕ್ಷಣ ಸಂಸ್ಥೆಗಳು ವಿಶೇಷ ಗಮನ ನೀಡಬೇಕು: ಉಪರಾಷ್ಟ್ರಪತಿ
ನಾವು ಪುಸ್ತಕಗಳನ್ನು ಮೀರಿ ಮತ್ತು ಪ್ರಾಯೋಗಿಕ ಅನುಭವದ ಕಲಿಕೆಯ ವಿಧಾನವನ್ನು ಅನ್ವೇಷಿಸಬೇಕು: ಉಪರಾಷ್ಟ್ರಪತಿ
ಶಿವಾಜಿ ಕಾಲೇಜಿನ ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಭಿಕರನ್ನುದ್ದೇಶಿಸಿ ಘನತೆವೆತ್ತ ಉಪರಾಷ್ಟ್ರಪತಿ ಅವರು ಭಾಷಣ ಮಾಡಿದರು
Posted On:
25 AUG 2021 3:11PM by PIB Bengaluru
ಒಲಿಂಪಿಯನ್ ವಿಜೇತ ಸಾಧಕರುಗಳಿಂದ ಇಂದಿನ ಯುವಕರು ಸ್ಫೂರ್ತಿ ಪಡೆಯುವಂತೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. "ಅವರು ರಾಷ್ಟ್ರವನ್ನು ತಮ್ಮ ಸಾಧನೆಗಳಿಂದ ಹೆಮ್ಮೆಗೊಳಿಸಿದ್ದಲ್ಲದೆ, ಜನತೆಯಲ್ಲಿ ವಿವಿಧ ಕ್ರೀಡೆಗಳ ಬಗ್ಗೆ ವ್ಯಾಪಕ ಆಸಕ್ತಿಯನ್ನು ಮೂಡಿಸಿದ್ದಾರೆ" ಎಂದು ಹೇಳಿದರು
ಯುವಕರು ತಮ್ಮ ಗುರಿಗಳನ್ನು ಸಾಧಿಸಲು ಕಷ್ಟಪಟ್ಟು ಕೆಲಸ ಮಾಡುವಂತೆ ಪ್ರೇರೇಪಿಸಿದ ಶ್ರೀ ವೆಂಕಯ್ಯ ನಾಯ್ಡು ಅವರು, "ಕಠಿಣ ಪರಿಶ್ರಮಕ್ಕೆ ಸದಾ ಪ್ರತಿಫಲ ಸಿಗುತ್ತದೆ ಮತ್ತು ಅದು ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ" ಎಂದು ಹೇಳಿದರು. "ಆದ್ದರಿಂದ, ಎಂದೂ ಬಿಟ್ಟುಕೊಡಬೇಡಿ, ನಿಮ್ಮ ಕನಸುಗಳಿಗಾಗಿ ಹೋರಾಡಿ ಮತ್ತು ಜಗತ್ತಿಗೆ ಬದಲಾವಣೆ ತನ್ನಿ" ಎಂದು ಅವರು ಹಿತ ನುಡಿದರು.
ಶಿವಾಜಿ ಕಾಲೇಜಿನ ವಜ್ರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಅವರು, “ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗಳಲ್ಲಿ ಮತ್ತು ಮನರಂಜನಾ ಮೈದಾನಗಳಲ್ಲಿ ಸಮಾನ ಸಮಯವನ್ನು ಕಳೆಯಲು ಅವಕಾಶ ನೀಡಬೇಕು” ಎಂದು ಶಿಕ್ಷಕರಿಗೆ ತಿಳಿಸಿದರು. "ಕ್ರೀಡೆಯಲ್ಲಿ ಭಾಗವಹಿಸುವಿಕೆಯು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ತಂಡದ ಮನೋಭಾವವನ್ನು ಹೆಚ್ಚಿಸುತ್ತದೆ ಮತ್ತು ದೈಹಿಕ ಸಾಮರ್ಥ್ಯ ಸುಧಾರಿಸುತ್ತದೆ" ಎಂದು ಅವರು ಹೇಳಿದರು.
"ಇದು ಹೆಚ್ಚುತ್ತಿರುವ ಜೀವನಶೈಲಿ ಆಧಾರಿತ ರೋಗಗಳನ್ನು ಎದುರಿಸಲು ಮುಖ್ಯವಾಗಿದೆ. ಕ್ರೀಡೆಯನ್ನು ಪಠ್ಯಕ್ರಮದ ಭಾಗವಾಗಿಸಬೇಕು ಮತ್ತು ವಿದ್ಯಾರ್ಥಿಗಳು ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳಿಗೆ ಸಮಾನ ಮಹತ್ವ ನೀಡುವಂತೆ ಪ್ರೋತ್ಸಾಹಿಸಬೇಕು" ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಜೀವನವನ್ನು ಬದಲಾಯಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಅವರ ಶಿಕ್ಷಕರು ವಹಿಸುವ ಪಾತ್ರವನ್ನು ಎತ್ತಿ ತೋರಿಸಿದ ಉಪರಾಷ್ಟ್ರಪತಿ ಅವರು, ಒಬ್ಬ " ವ್ಯಕ್ತಿಯು ಎಷ್ಟೇ ಯಶಸ್ವಿಯಾದರೂ, ತಮ್ಮ ಜೀವನವನ್ನು ರೂಪಿಸುವಲ್ಲಿ ಇರುವ ತಮ್ಮ ಶಿಕ್ಷಕರ ಪಾತ್ರವನ್ನು ಎಂದಿಗೂ ಮರೆಯಬಾರದು" ಎಂದು ಹೇಳಿದರು.
"ಶಿಕ್ಷಕರು ನೀಡುವ ಮೌಲ್ಯಗಳು ಮತ್ತು ಬೋಧನೆಗಳು ವ್ಯಕ್ತಿತ್ವ ಮತ್ತು ಸಮಾಜದ ಜೀವನವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. "ಕಲಿಕೆಯು ಒಂದು ಅಂತ್ಯವಿಲ್ಲದ, ಆದರೆ ಫಲಪ್ರದವಾದ ಪ್ರಯಾಣವಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರೂ ಒಟ್ಟಾಗಿ ಮುನ್ನಡೆಯುತ್ತಾರೆ" ಎಂದು ಅವರು ಹೇಳಿದರು.
"ಗುಣಮಟ್ಟದ ಶಿಕ್ಷಣ ನೀಡುವುದರ ಹೊರತಾಗಿ, ನಮ್ಮ ಶಿಕ್ಷಕರು ಕಷ್ಟಕರ ಸನ್ನಿವೇಶಗಳನ್ನು ಧೈರ್ಯ ಮತ್ತು ಸಮಚಿತ್ತದಿಂದ ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು" ಎಂದು ಉಪರಾಷ್ಟ್ರಪತಿ ಅವರು ಹೇಳಿದರು. "ವಿಶೇಷವಾಗಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಭಾವನಾತ್ಮಕ ಒತ್ತಡಕ್ಕೆ ಶಿಕ್ಷಣ ಸಂಸ್ಥೆಗಳು ವಿಶೇಷ ಗಮನ ನೀಡಬೇಕು" ಎಂದು ಹೇಳಿದರು.
"ಪ್ರತಿಭಾವಂತರ ವಿಪುಲ ಜನಸಂಖ್ಯಾ ಅನುಕೂಲತೆ ಮತ್ತು ದೇಶದಲ್ಲಿ ಅತ್ಯಂತ ಪ್ರತಿಭಾವಂತ ಯುವಕರ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶ್ವ ನಾಯಕನಾಗಲು ಭಾರತಕ್ಕೆ ಒಂದು ದೊಡ್ಡ ಸಾಮರ್ಥ್ಯವಿದೆ" ಎಂಬುದನ್ನು ಗಮನಿಸಿದ ಉಪರಾಷ್ಟ್ರಪತಿ ಅವರು, "ನಾವು ಪುಸ್ತಕಗಳನ್ನು ಮೀರಿ ಮತ್ತು ಕಲಿಕೆಯ ಪ್ರಾಯೋಗಿಕ ವಿಧಾನವನ್ನು ಅನ್ವೇಷಿಸಬೇಕಾಗಿದೆ" ಎಂದು ಅವರು ಹೇಳಿದರು. "ಪ್ರಾಯೋಗಿಕ ಕಲಿಕಾ ವಿಧಾನವನ್ನು 'ಗುರುಕುಲ'ಗಳಲ್ಲಿ ಅನುಸರಿಸಲಾಗಿದೆ, ಅಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಗುರುಗಳು ಮುಕ್ತ ವಾತಾವರಣದಲ್ಲಿ ಪ್ರಾಯೋಗಿಕ ಅನುಭವವನ್ನು ನೀಡುವ ಮೂಲಕ ಕಲಿಸಿದರು " ಎಂದು ಉಲ್ಲೇಖಿಸಿ ಮಾತನಾಡಿದರು.
"ಕಲಿಕೆಯ ಅನುಭವದ ವಿಧಾನ ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕವಾಗಿ ಮತ್ತು ಸೃಜನಾತ್ಮಕವಾಗಿ ಯೋಚಿಸಲು ಸಹಾಯ ಮಾಡುತ್ತದೆ, ಇದು ಮುಂದಿನ ಜೀವನ ಮಾರ್ಗವಾಗಿದೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅದನ್ನು ಅಳವಡಿಸಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಆರೋಗ್ಯ ತುರ್ತು ಸಹಾಯ ಪೂರೈಕೆದಾರರನ್ನು ಪೀಡಿತ ವ್ಯಕ್ತಿಗಳು ಮತ್ತು ಅವರ ಕುಟುಂಬಗಳೊಂದಿಗೆ ಸಂಪರ್ಕಿಸಲು ಉಪಕ್ರಮಗಳನ್ನು ತೆಗೆದುಕೊಂಡ ಶಿವಾಜಿ ಕಾಲೇಜು ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉಪರಾಷ್ಟ್ರಪತಿ ಅವರು ಶ್ಲಾಘಿಸಿದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಜನರು ತೋರಿಸಿದ ಏಕತೆಯನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಅವರು, "ವ್ಯಕ್ತಿಗಳಿಂದ ಸಮುದಾಯಗಳಿಗೆ, ಸ್ವಯಂಸೇವಾ ಸಂಸ್ಥೆಗಳಿಂದ ರಾಜ್ಯದ ಆಡಳಿತ ಸಂಸ್ಥೆಗಳವರೆಗೆ, ಭಾರತದಲ್ಲಿ ಪ್ರತಿಯೊಬ್ಬರೂ ಇತ್ತೀಚಿನ ದಿನಗಳಲ್ಲಿ ಮಾನವಕುಲವು ಎದುರಿಸಿರುವ ಅತ್ಯಂತ ಕಠಿಣ ಸವಾಲನ್ನು ಒಟ್ಟಾಗಿ ಜಯಿಸಲು ಮುಂದೆ ಬಂದಿರುವುದನ್ನು ನಾವು ಕಾಣಬಹುದು." ಬಿಕ್ಕಟ್ಟಿನ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ನಮ್ಮ ಸಂಸ್ಕೃತಿಯ ಮೂಲತತ್ವ ಎಂದು ಪ್ರತಿಪಾದಿಸಿದ ಶ್ರೀ ವೆಂಕಯ್ಯ ನಾಯ್ಡು ಅವರು, "ಒಂದು ಸಮುದಾಯವಾಗಿ ನಾವು ನಮ್ಮ ಪ್ರಾಚೀನ ತತ್ತ್ವಶಾಸ್ತ್ರದ - ಹಂಚಿಕೆ ಮತ್ತು ಕಾಳಜಿ ಜೊತೆಗೆ ಜೀವಿಸಿದ್ದಕ್ಕೆ ನನಗೆ ಸಂತೋಷವಾಗಿದೆ" ಎಂದು ಹೇಳಿದರು.
ಶಿವಾಜಿ ಕಾಲೇಜು ವಿದ್ಯಾರ್ಥಿಗಳು ಸಮುದಾಯ ಸೇವೆ ಮತ್ತು ಪರಿಸರ ಸೂಕ್ಷ್ಮ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಕ್ಕೆ ಉಪರಾಷ್ಟ್ರಪತಿಯವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. “ ವಿದ್ಯಾರ್ಥಿಗಳ ನಾಗರಿಕ ಸಂವೇದನೆಗಳನ್ನು ರೂಪಿಸಲು ಮತ್ತು ಅವರಲ್ಲಿ ಸಹಾನುಭೂತಿಯನ್ನು ಮೂಡಿಸಲು ಸಹಾಯ ಮಾಡುವ ಕಾರಣ ಇಂತಹ ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ” ಎಂದು ಉಪರಾಷ್ಟ್ರಪತಿ ಅವರು ಹೇಳಿದರು. "ಭಾವೋದ್ರೇಕ ಮತ್ತು ಸಹಾನುಭೂತಿ ಪರಸ್ಪರ ಕೈಜೋಡಿಸಬೇಕು" ಎಂದು ಅವರು ಹೇಳಿದರು.
ದೆಹಲಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಸಿ. ಜೋಶಿ, ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾಲೇಜುಗಳ ಡೀನ್ ಪ್ರೊ. ಬಲರಾಮ್ ಪಾನಿ, ಮತ್ತು ದೆಹಲಿ ವಿಶ್ವವಿದ್ಯಾನಿಲಯದ ದಕ್ಷಿಣ ಕ್ಯಾಂಪಸ್‌ನ ನಿರ್ದೇಶಕರಾದ ಪ್ರೊ. ಸುಮನ್ ಕುಂದು, ಶಿವಾಜಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಕುಮಾರ ಸಹದೇವ್ ಮತ್ತು ಇತರರು ವಿಡಿಯೊ ಸಮಾವೇಶ ಮೂಲಕ ಜರುಗಿದ ಸಭೆಯಲ್ಲಿ ಹಾಜರಿದ್ದರು.
***
(Release ID: 1749151)
Visitor Counter : 250