ಕಲ್ಲಿದ್ದಲು ಸಚಿವಾಲಯ

ಸಾಧ್ಯವಾದಷ್ಟು ಸಸಿಗಳನ್ನು ನೆಡುವುದಕ್ಕಿಂತ ಪ್ರಕೃತಿ ಮತ್ತು ಮಾನವತೆಗೆ ಸಲ್ಲಿಸುವ ಬಹುದೊಡ್ಡ ಸೇವೆ ಮತ್ತೊಂದಿಲ್ಲ: ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಶ್ರೀ ಪ್ರಹ್ಲಾದ್ ಜೋಷಿ


ವೃಕ್ಷಾರೋಪನ್ ಅಭಿಯಾನ - 2021ರ ಯಶಸ್ವೀ ಆಯೋಜನೆ

ಕಲ್ಲಿದ್ದಲು ಸಚಿವಾಲಯದಿಂದ ಹಸೀಕರಣ ಪ್ರೋತ್ಸಾಹ ಆಂದೋಲನಕ್ಕೆ ಚಾಲನೆ

ಕಲ್ಲಿದ್ದಲು ವಲಯದ ಆಜಾ಼ದಿ ಕಾ ಅಮೃತ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳ ಭಾಗವಾಗಿ ದೇಶದ 12 ರಾಜ್ಯಗಳಲ್ಲಿ ಸಸಿ ನೆಡುವ ಆಂದೋಲನ

2 ಪರಿಸರ ಉದ್ಯಾನ(ಇಕೋ ಪಾರ್ಕ್)ಗಳ ಉದ್ಘಾಟನೆ; ಮತ್ತೆರಡು ಇಕೋ ಪಾರ್ಕ್|ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

Posted On: 19 AUG 2021 6:15PM by PIB Bengaluru

ನಮ್ಮ ನೆಲದಲ್ಲಿ ಸಾಧ್ಯವಾದಷ್ಟು ಸಸಿಗಳನ್ನು ನೆಡುವ ಕೆಲಸಕ್ಕಿಂತ ಬಹುದೊಡ್ಡ ಸೇವೆ ಮತ್ತೊಂದಿಲ್ಲ. ಪ್ರಕೃತಿ ಮತ್ತು ಮಾನವತೆಗೆ ನಾವೆಲ್ಲಾ ಸಲ್ಲಿಸುವ ಬಹುದೊಡ್ಡ ಸೇವೆಯೇ ಅದಾಗಿದೆ ಎಂದು ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರೀ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

ರಾಷ್ಟ್ರವ್ಯಾಪಿ ವೃಕ್ಷಾರೋಪನ್ ಅಭಿಯಾನ -2021ಕ್ಕೆ ಇಂದು ವಿಧ್ಯುಕ್ತ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ನೀಡಿರುವ ಸಂದೇಶದಲ್ಲಿ, ಸಸಿಗಳನ್ನು ನೆಡುವ ಆಂದೋಲನದ ಮಹತ್ವಕ್ಕೆ ಒತ್ತು ನೀಡಿದ್ದಾರೆ. ಇಂದು ನಾವು ಮಾಡುವ ಸಸಿ ನೆಡುವ ಕಾರ್ಯದಿಂದ ಹಲವು ಪೀಳಿಗೆಗಳು ಇದರ ಪ್ರಯೋಜನ ಪಡೆಯುತ್ತವೆ ಎಂದರು.

ವೃಕ್ಷಾರೋಪನ್ ಅಭಿಯಾನವು ಉದ್ಯೋಗಿಗಳು, ಸಮಾಜದ ಪಾಲುದಾರರು ಸೇರಿದಂತೆ ಸಮುದಾಯದ ಪ್ರತಿಯೊಬ್ಬರನ್ನು ಸಸಿ ನೆಡಲು ಜಾಗೃತಿ ಮೂಡಿಸುವ ಜತೆಗೆ, ತಾವಿರುವ ಸುತ್ತಮುತ್ತ ಸಸಿ ನೆಡಲು ಅವರೆಲ್ಲರಿಗೂ ಪ್ರೇರಣೆ ನೀಡುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ, ನಮ್ಮ ಪೃಥ್ವಿಯನ್ನು ಮತ್ತಷ್ಟು ಸುಂದರವಾಗಿಸುತ್ತದೆ. ದೇಶದ ಪ್ರತಿ ಪ್ರಜೆ ಕನಿಷ್ಠ ವರ್ಷಕ್ಕೆ ಒಂದಾದರೂ ಸಸಿ ನೆಡಬೇಕು ಎಂದು ಸಚಿವರು ಮನವಿ ಮಾಡಿದರು. ನಮ್ಮ ಕಣ್ಣ ಮುಂದೆ ಒಂದೊಂದು ಸಸಿಯೂ ಬೆಳೆಯುವುದನ್ನು ನಾವೆಲ್ಲಾ ಕಣ್ತುಂಬಿಕೊಂಡರೆ, ಜೀವನವನ್ನು ಹೆಚ್ಚಿಸುವ ಸಂತೋಷ ಮತ್ತು ಆನಂದ ನೀಡುತ್ತದೆ. ಪ್ರತಿಯಾಗಿ ಹಲವಾರು ಮಾನವ ಜೀವಗಳನ್ನು ಉಳಿಸುತ್ತದೆ ಎಂದರು.

ಕಲ್ಲಿದ್ದಲು ಸಚಿವಾಲಯದ ವೃಕ್ಷರೋಪ ಅಭಿಯಾನದಲ್ಲಿ ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ಪಟೇಲ್ ದನ್ವೆ, ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿ ಮತ್ತು ಇತರೆ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರೀ ಪ್ರಹ್ಲಾದ್ ಜೋಷಿ ಅವರು ಸಸಿಗಳನ್ನು ನೆಡುವ ವೀಡಿಯೊ ಚಿತ್ರಣಗಳು ಮತ್ತು ಅವರು ಓದಿರುವ ಸಂದೇಶ ಒಳಗೊಂಡ ಧ್ವನಿಯನ್ನು ಈ ಅಭಿಯಾನಕ್ಕೆ ಬಳಸಲಾಗಿದೆ.  ಕಲ್ಲಿದ್ದಲು ಮತ್ತು ಕಂದು ಬಣ್ಣದ ಕಲ್ಲಿದ್ದಲು(ಲಿಗ್ನೈಟ್) ವಲಯದ ಸಾರ್ವಜನಿಕ ಸ್ವಾಮ್ಯದ ಘಟಕಗಳ ಅಧಿಕಾರಿಗಳು ಮತ್ತು ಉದ್ಯೋಗಿಗಳು ಹಾಗೂ ವಿವಿಧ ಕಲ್ಲಿದ್ದಲು ಕ್ಷೇತ್ರಗಳ ಪ್ರಮುಖ ಸಾರ್ವಜನಿಕ ವ್ಯಕ್ತಿಗಳು ಮತ್ತು ಸ್ಥಳೀಯ ನಿವಾಸಿಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೀಡಿಯೊ ಕಾನ್ಫರೆನ್ಸಿಂಗ್ ಅಭಿಯಾನದಲ್ಲಿ 250ಕ್ಕಿಂತ ಹೆಚ್ಚಿನ ಕಲ್ಲಿದ್ದಲು ಗಣಿ ಸ್ಥಳಗಳಲ್ಲಿ ನಡೆಯುವ ಸಸಿ ನೆಡುವ ಆಂದೋಲನವನ್ನು ಕಾರ್ಯಕ್ರಮದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ದೇಶಾದ್ಯಂತ ಸುಮಾರು 6 ಲಕ್ಷ ಸಸಿಗಳನ್ನು ನೆಡಲಾಗಿದೆ ಹಾಗೂ ಸ್ಥಳೀಯ ನಿವಾಸಿಗಳು ಮತ್ತು ಸಂಘ ಸಂಸ್ಥೆಗಳಿಗೆ 3.2 ಲಕ್ಷಕ್ಕಿಂತ ಹೆಚ್ಚಿನ ಸಸಿಗಳನ್ನು ವಿತರಿಸಲಾಗಿದೆ, ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕಲ್ಲಿದ್ದಲು ವಲಯವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಣೆಯ ಪ್ರಮುಖ ಕಾರ್ಯಕ್ರಮಗಳ ಭಾಗವಾಗಿ ವೃಕ್ಷಾರೋಪನ್ ಅಭಿಯಾನ-2021 ಅನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಸುಮಾರು 30 ಸಾವಿರ ಜನರು ಇದರಲ್ಲಿ ಭಾಗವಹಿಸಿದ್ದರು. ಆರು ಸಂಸದರು, 18 ಶಾಕರು ಸೇರಿದಂತೆ 300ಕ್ಕಿಂತ ಹೆಚ್ಚಿನ ಪ್ರಮುಖ ಸಾರ್ವಜನಿಕ ವ್ಯಕ್ತಿಗಳು ಈ ವಾರ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ 2 ಇಕೋ-ಪಾರ್ಕ್|ಗಳಿಗೆ ಉದ್ಘಾಟನೆ ನೆರವೇರಿಸಲಾಗಿದೆ. ಅವೆಂದರೆ, ಮಧ್ಯ ಪ್ರದೇಶದ ಸಿಂಗ್ರಾಲಿಯಲ್ಲಿರುವ ನಾರ್ತರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್|ನಲ್ಲಿ ಮುದ್ವಾನಿ ಡ್ಯಾಂ ಇಕೋ-ಪಾರ್ಕ್ ಮತ್ತು ತಮಿಳುನಾಡಿನ ನೆಯ್ವೇಲಿಯಲ್ಲಿರುವ ಎನ್ಎಲ್|ಸಿ ಇಂಡಿಯಾ ಲಿಮಿಟೆಡ್|ನಲ್ಲಿ ಮೈನ್ – 2 ಇಕೋ-ಪಾರ್ಕ್|ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೆ, ಪಶ್ಚಿಮ ಬಂಗಾಳದ ಪಚಿಮ್ ಬರ್ಧಮಾನ್|ನಲ್ಲಿರುವ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್|ನಲ್ಲಿ ಝಾಂಜ್ರಾ ಇಕೋ-ಪಾರ್ಕ್ ಮತ್ತು ಒಡಿಶಾದ ಝಾರ್|ಸುಗದದಲ್ಲಿರುವ ಮಹಾನದಿ ಕೋಲ್ ಫೀಲ್ಡ್ಸ್|ನಲ್ಲಿ ಚಂದ್ರಶೇಖರ್ ಆಜಾದ್ ಓರಿಯಂಟ್ ಯುಜಿ ನಂ.4 ಇಕೋ-ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಪರಿಸರ ಉದ್ಯಾನಗಳು/ಪ್ರವಾಸಿ ತಾಣಗಳು ಸಮೀಪದಲ್ಲಿ ನೆಲೆಸಿರುವ ಜನರಿಗೆ ಮನರಂಜನೆ, ಸಾಹಸ, ಜಲಕ್ರೀಡೆ, ಪಕ್ಷಿಗಳ ವೀಕ್ಷಣೆ ಇತ್ಯಾದಿಗಳಿಗೆ ಆಕರ್ಷಕ ತಾಣಗಳಾಗಲಿವೆ. ಅಲ್ಲದೆ, ಸ್ಥಳೀಯ ಪ್ರವಾಸೋದ್ಯಮ ತಾಣಗಳಿಗೆ ಇವು ಸಂಯೋಜನೆಗೊಂಡು, ಪ್ರವಾಸಿಗರ ನೆಚ್ಚಿನ ತಾಣಗಳಾಗಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಿದ್ದಲು, ಗಣಿ ಮತ್ತು ರೈಲು ಖಾತೆ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ಪಟೇಲ್ ದನ್ವೆ, ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೆ ಸಸಿ ನೆಡುವುದು ಅತ್ಯಗತ್ಯ, ಇದೊಂದು ನಿರಂತರ ನಡೆಯಬೇಕಾದ ಮಹತ್ವದ ಕೆಲಸ. ಕಲ್ಲಿದ್ದಲು ವಲಯದ ಸಾರ್ವಜನಿಕ ಸ್ವಾಮ್ಯದ ಘಟಕಗಳು ನಡೆಸುತ್ತಿರುವ  ಪ್ರಯತ್ನಗಳು ಶ್ಲಾಘನೀಯ. 2013-14ರಲ್ಲಿದ್ದ 565.77 ಮೆಟ್ರಿಕ್ ಟನ್ ಕಚ್ಚಾ ಕಲ್ಲಿದ್ದಲು ಉತ್ಪಾದನೆಯನ್ನು 2020-21ರಲ್ಲಿ 716.08 ಮೆಟ್ರಿಕ್ ಟನ್|ಗೆ ಹೆಚ್ಚಿಸಿದ್ದಾರೆ. ಕೋವಿಡ್-19 ಪ್ರತಿಕೂಲ ಪರಿಸ್ಥಿತಿಯಲ್ಲೂ ದೇಶದ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಸಾರ್ವಜನಿಕ ವಲಯದ ಕಲ್ಲಿದ್ದಲು ಘಟಕಗಳು ಭವಿಷ್ಯದಲ್ಲಿ ಹೆಚ್ಚಲಿರುವ ಕಲ್ಲಿದ್ದಲು ಬೇಡಿಕೆ ಮತ್ತು ಪೂರೈಕೆ ಅಂತರವನ್ನು ಸರಿದೂಗಿಸಲಿವೆ ಮತ್ತು ಕಲ್ಲಿದ್ದಲು ಆಮದನ್ನು ಸಂಪೂರ್ಣ ನಿಯಂತ್ರಿಸುತ್ತವೆ ಎಂಬ ನಿರೀಕ್ಷೆ ಇದೆ. ಆತ್ಮನಿರ್ಭರ್ ಭಾರತ ನಿರ್ಮಾಣದ ಜತೆಗೆ, ಇಂಧನ ಸುಭದ್ರ ರಾಷ್ಟ್ರವಾಗಿ ಪರಿವರ್ತಿಸಲಿವೆ ಎಂದರು.

ಕಲ್ಲಿದ್ದಲು ಮತ್ತು ಲಿಗ್ನೈಟ್ ವಲಯದ ಹಸಿರೀಕರಣ ಉಪಕ್ರಮಕ್ಕೆ ಮಚ್ಚುಗೆ ವ್ಯಕ್ತಪಡಿಸಿದ ಅವರು, ಈ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ 60 ಲಕ್ಷ ಸಸಿಗಳನ್ನು ನೆಡುವ ಗುರಿಗೆ ವೃಕ್ಷಾರೋಪನ್ ಅಭಿಯಾನವು ಅನುವು ಮಾಡಿಕೊಡಲಿದೆ ಎಂದು ಅವರು ಆಶಾವಾದ ಹೊರಹಾಕಿದರು. ನೆಟ್ಟಿರುವ ಸಸಿಗಳು ಬೆಳೆದು ನಿಲ್ಲುವ ತನಕ ಅವುಗಳಿಗೆ ನೀರುಣಿಸಿ, ಸಂರಕ್ಷಿಸಬೇಕು ಎಂದು ಅವರು ಸಲಹೆ ನೀಡಿದರು.

ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಮಾತನಾಡಿ, ಕಲ್ಲಿದ್ದಲು ಸಚಿವಾಲಯದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಮುಖ ಕಾರ್ಯಕ್ರಮವಾಗಿ ವೃಕ್ಷಾರೋಪನ್ ಅಭಿಯಾನ ನಡೆಸಲಾಗುತ್ತಿದೆ. ಇದು ಪರಿಸರ ಸುಸ್ಥಿರತೆ ತರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು, ಬೆಳೆಯುವ ತನಕ ಅವುಗಳನ್ನು ಸಂರಕ್ಷಿಸಬೇಕು. ಸಾರ್ವಜನಿಕ ವಲಯದ ಕಲ್ಲಿದ್ದಲು ಘಟಕಗಳು ತಮ್ಮ ಸುತ್ತಮುತ್ತಲ ಜನರಿಗೆ ಸಸಿ ನೆಡುವ ಬಗ್ಗೆ ಅರಿವು ಮೂಡಿಸಲು ಮತ್ತು ಉತ್ತೇಜಿಸಲು ತಮ್ಮದೇ ಆದ ನರ್ಸರಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು. ಕಲ್ಲಿದ್ದಲು ಸಚಿವಾಲಯ ಮತ್ತು ಕಲ್ಲಿದ್ದಲು ವಲಯದ ಸಾರ್ವಜನಿಕ ಘಟಕಗಳು ಸಸಿ ನೆಡುವ ಉದಾತ್ತ ಉಪಕ್ರಮಗಳನ್ನು ನಡೆಸಿರುವುದಕ್ಕೆ ಅಭಿನಂದನೆಗಳು. ಇದು ಮುಂದಿನ ಹಸಿರೀಕರಣ ಚಿಂತನೆಗಳಿಗೆ ಪುಷ್ಟಿ ನೀಡಲಿದೆ ಎಂದರು.

ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ವಿ.ಕೆ. ತಿವಾರಿ, ಹೆಚ್ಚುವರಿ ಕಾರ್ಯದರ್ಶಿ ಶ್ರೀ ಎಂ. ನಾಗರಾಜು, ಜಂಟಿ ಕಾರ್ಯದರ್ಶಿ ಶ್ರೀ ಶ್ಯಾಂ ಭಗತ್ ನೇಗಿ, ಜಂಟಿ ಕಾರ್ಯದರ್ಶಿ ಶ್ರೀಮತಿ ವಿಸ್ಮಿತಾ ತೇಜ್, ಜಂಟಿ ಕಾರ್ಯದರ್ಶಿ ಶ್ರೀ ಬಿ.ಪಿ. ಪತಿ ಸೇರಿದಂತೆ ಹಲವು ಉನ್ನತಾಧಿಕಾರಿಗಳು, ಕೋಲ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಮೋದ್ ಅಗರ್|ವಾಲ್, ಎನ್|ಎಲ್|ಸಿಐಎಲ್ ಸಿಎಂಡಿ ಶ್ರೀ ರಾಕೇಶ್ ಕುಮಾರ್, ಎಸ್|ಸಿಸಿಎಲ್ ಸಿಎಂಡಿ ಶ್ರೀ ಎನ್ ಶ್ರೀಧರ್ ಸೇರಿದಂತೆ ಹಲವು ಮುಖ್ಯಸ್ಥರು ವೀಡಿಯೊ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಲ್ಲಿದ್ದಲು ವಲಯದ ಮುಖ್ಯಸ್ಥರು ಮತ್ತು ಉನ್ನತಾಧಿಕಾರಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು

ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ಸಹಾಯಕ ಸಚಿವರ ಭಾಷಣ   

ಮಧ್ಯಪ್ರದೇಶದ ಸಿಂಗ್ರಾಲಿಯಲ್ಲಿರುವ ಎನ್|ಸಿಎಲ್ ಕಲ್ಲಿದ್ದಲು ಘಟಕದಲ್ಲಿ ನಿರ್ಮಿಸಿರುವ ಮುದ್ವಾನಿ ಇಕೋ-ಪಾರ್ಕ್ ಉದ್ಘಾಟನೆ ನೆರವೇರಿಸಲಾಯಿತು

ಗೆವ್ರಾ ಎಸ್ಇಸಿಎಲ್ ಘಟಕದಲ್ಲಿ ಸಸಿ ನೆಡಲಾಗಿದೆ

 



(Release ID: 1747598) Visitor Counter : 223