ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ʻಸಿಯಾಚಿನ್ ನೀರ್ಗಲ್ಲಿನಲ್ಲಿ ಆಪರೇಷನ್ ಬ್ಲೂ ಫ್ರೀಡಂ- ಲ್ಯಾಂಡ್ ವರ್ಲ್ಡ್ ರೆಕಾರ್ಡ್'ಗೆ ಚಾಲನೆ ನೀಡಲಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರು
ಸಶಸ್ತ್ರ ಪಡೆಗಳ ಅನುಭವಿ ತಂಡದಿಂದ ತರಬೇತಿ ಪಡೆದ ಆಯ್ದ ವಿಕಲಚೇತನರು ʻಕುಮಾರ್ ಪೋಸ್ಟ್ʼವರೆಗೆ ಸಾಹಸಯಾನ ಕೈಗೊಳ್ಳಲಿದ್ದಾರೆ
ವಿಕಲಚೇತನರ ಅತಿದೊಡ್ಡ ತಂಡವು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ತಲುಪಲಿದೆ
ʻಆಪರೇಷನ್ ಬ್ಲೂ ಫ್ರೀಡಂʼ, ದಿವ್ಯಾಂಗರ ಸಬಲೀಕರಣಕ್ಕೆ ಸಂಬಂಧಿಸಿದಂತೆ ವಿಶ್ವ ವೇದಿಕೆಯಲ್ಲಿ ಭಾರತ ನಾಯಕತ್ವ ಸ್ಥಾನವನ್ನು ಸದೃಢವಾಗಿಸಲಿದೆ
Posted On:
13 AUG 2021 1:43PM by PIB Bengaluru
ವಿಶ್ವದ ಅತಿ ಎತ್ತರದ ಯುದ್ಧಭೂಮಿಯನ್ನು ತಲುಪಿದ ವಿಕಲಚೇತನರ ಅತಿದೊಡ್ಡ ತಂಡವಾಗಿ ಹೊಸ ವಿಶ್ವ ದಾಖಲೆ ಸೃಷ್ಟಿಸಲು ದೇಶದ ನಾನಾ ಭಾಗಗಳ ವಿಕಲಚೇತನ ವ್ಯಕ್ತಿಗಳು ಸಿಯಾಚಿನ್ ನೀರ್ಗಲ್ಲಿಗೆ ಸಾಹಸಯಾನ ಕೈಗೊಳ್ಳಲಿದ್ದಾರೆ. ವಿಕಲಚೇತನರ ತಂಡವು ಸಿಯಾಚಿನ್ ನೀರ್ಗಲ್ಲಿನವರೆಗೆ ಆರೋಹಣ ಮಾಡಲು ಇತ್ತೀಚೆಗೆ ಭಾರತ ಸರಕಾರವು ಅನುಮತಿ ನೀಡಿದೆ. ವಿಕಲಚೇತನರ ತಂಡವು, ಸಶಸ್ತ್ರ ಪಡೆಗಳ ಪರಿಣತರ ತಂಡವಾದ ʻಟೀಮ್ ಕ್ಲಾʼ(Team CLAW’)ದಿಂದ ತರಬೇತಿ ಪಡೆದಿದೆ. ದೇಶಾದ್ಯಂತ ಆಯ್ಕೆಯಾದ ವಿಕಲಚೇತನರು ʻಕುಮಾರ್ ಪೋಸ್ಟ್ʼ (ಸಿಯಾಚಿನ್ ನೀರ್ಗಲ್ಲು)ವರೆಗೆ ಸಾಹಸಯಾತ್ರೆ ಕೈಗೊಳ್ಳಲಿದ್ದಾರೆ. ಆ ಮೂಲಕ ವಿಶ್ವದ ಅತಿ ಎತ್ತರದ ಯುದ್ಧ ಭೂಮಿಯನ್ನು ತಲುಪಿದ ವಿಕಲಾಂಗಚೇತನರ ಅತಿದೊಡ್ಡ ತಂಡವಾಗಿ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಲಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು, ಸಚಿವ ಡಾ. ವೀರೇಂದ್ರ ಕುಮಾರ್ ಅವರು ʻದಿವ್ಯಾಂಗಜನ ಸಿಯಾಚಿನ್ ನೀರ್ಗಲ್ಲಿಗೆ ಸಾಹಸಯಾತ್ರೆʼ ತಂಡವನ್ನು ಕರೆದೊಯ್ಯುವ ವಾಹನಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಹೊಸದಿಲ್ಲಿಯ ಜನಪಥ್ನಲ್ಲಿರುವ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಿಂದ ಈ ಯಾತ್ರೆಗೆ ಚಾಲನೆ ನೀಡಲಾಗುವುದು. ಪ್ರಮುಖ ಸ್ವಾಯತ್ತ ಸಂಶೋಧನಾ ಸಂಸ್ಥೆಯಾದ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವು ದುರ್ಬಲ ಸಮುದಾಯಗಳ ಸಬಲೀಕರಣ ಮತ್ತು ಸಮಾಜದಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಗಾಗಿ ಸಂಶೋಧನೆ ಕೈಗೊಳ್ಳುವುದರ ಜತೆಗೆ ಸರಕಾರದ ನೀತಿಗಳಲ್ಲಿ ಸಲಹೆ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ.
ʻಆಪರೇಷನ್ ಬ್ಲೂ ಫ್ರೀಡಂʼ ಹೆಸರಿನ ಈ ಮುಂಚೂಣಿ ಸಾಹಸಯಾತ್ರೆಯ ಯಶಸ್ವಿಯು ದಿವ್ಯಾಂಗರನ್ನು ಸಶಕ್ತಗೊಳಿಸುವ ವಿಚಾರದಲ್ಲಿ ವಿಶ್ವ ವೇದಿಕೆಯಲ್ಲಿ ಭಾರತದ ನಾಯಕ ಸ್ಥಾನವನ್ನು ಸದೃಢಗೊಳಿಸುತ್ತದೆ. ಜೊತೆಗೆ ಈ ವಿಚಾರದಲ್ಲಿ ಇತರ ದೇಶಗಳ ಅನುಕರಣೆಗೆ ಮಾನದಂಡವನ್ನು ಇದು ಸೃಷ್ಟಿಸುತ್ತದೆ. ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ದಿವ್ಯಾಂಗರ ದೃಷ್ಟಿಕೋನ ಮತ್ತು ವಿಕಲಾಂಗ ಜನರ ಅಪಾರ ಉತ್ಪಾದಕ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಹತ್ವಾಕಾಂಕ್ಷೆಗೆ ನೀರೆರೆಯುತ್ತದೆ. ಇದೇ ವೇಳೆ, ಭಾರತದ ಸಶಸ್ತ್ರ ಪಡೆಗಳ ಕೌಶಲ್ಯ ಮತ್ತು ಹೃದಯವಂತಿಕೆಯನ್ನು ಯುದ್ಧಭೂಮಿಯಲ್ಲಿ ಮಾತ್ರವಲ್ಲದೆ ಅದರಿಂದ ಆಚೆಗೂ ಸಶಕ್ತವಾಗಿ ಇದು ಚಿತ್ರಿಸುತ್ತದೆ.
***
(Release ID: 1745828)
Visitor Counter : 240