ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತಿನಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ ಫಲಾನುಭವಿಗಳ ಜೊತೆಗಿನ  ಪ್ರಧಾನ  ಮಂತ್ರಿ ಅವರ ಸಂವಾದ

Posted On: 03 AUG 2021 3:39PM by PIB Bengaluru

ನಮಸ್ಕಾರ! ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಜೀ, ಉಪ ಮುಖ್ಯ ಮಂತ್ರಿ ಶ್ರೀ ನಿತಿನ್ ಭಾಯಿ ಪಟೇಲ್ ಜೀ, ಸಂಸತ್ತಿನಲ್ಲಿಯ ನನ್ನ ಸಹೋದ್ಯೋಗಿಗಳೇ ಮತ್ತು ಗುಜರಾತ್ ಬಿ.ಜೆ.ಪಿ.ಅಧ್ಯಕ್ಷ ಶ್ರೀ ಸಿ.ಆರ್.ಪಾಟೀಲ್ ಜೀ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾದ ಎಲ್ಲಾ ಫಲಾನುಭವಿಗಳೇ, ಸಹೋದರರೇ ಮತ್ತು ಸಹೋದರಿಯರೇ!.

ಸುಸ್ಥಿರ ಅಭಿವೃದ್ಧಿಯ ಚಟುವಟಿಕೆ ಮತ್ತು ನಂಬಿಕೆ ಕಳೆದ ಕೆಲವು ವರ್ಷಗಳಿಂದ ಗುಜರಾತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಗುಜರಾತ್ ಸರಕಾರ ಪ್ರತೀ ಯೋಜನೆಯನ್ನೂ ನಮ್ಮ ಸಹೋದರಿಯರು, ರೈತರು, ಮತ್ತು ಬಡ ಕುಟುಂಬಗಳ ಹಿತಾಸಕ್ತಿಗಾಗಿ ಸೇವಾ ಮನೋಭಾವದಿಂದ ಅನುಷ್ಟಾನ ಮಾಡಿದೆಇಂದು ಉಚಿತ ಪಡಿತರವನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ಅಡಿಯಲ್ಲಿ ಗುಜರಾತಿನ ಲಕ್ಷಾಂತರ ಕುಟುಂಬಗಳಿಗೆ ವಿತರಿಸಲಾಗುತ್ತಿದೆ. ಉಚಿತ ಪಡಿತರ ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಬಡವರ ಕಳವಳಗಳನ್ನು ಕಡಿಮೆ ಮಾಡುತ್ತದೆ ಮತ್ತು ಅವರಿಗೆ ವಿಶ್ವಾಸವನ್ನು ತರುತ್ತದೆ. ಯೋಜನೆ ಇಂದು ಆರಂಭವಾಗುತ್ತಿರುವುದಲ್ಲ, ಅದು ಸುಮಾರು ಒಂದು ವರ್ಷದಿಂದ ಅನುಷ್ಟಾನದಲ್ಲಿದೆ, ಇದರಿಂದಾಗಿ ದೇಶದ ಯಾವುದೇ ಬಡವ ಹಸಿವೆಯಿಂದ ನಿದ್ದೆ ಮಾಡುವಂತಹ ಸ್ಥಿತಿ ಇಲ್ಲದಂತಾಗಿದೆ.

ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ

ಇದರ ಪರಿಣಾಮವಾಗಿ ಬಡವರಲ್ಲಿ ಆತ್ಮವಿಶ್ವಾಸ ಬಂದಿದೆ, ಯಾಕೆಂದರೆ ಸವಾಲು ಎಷ್ಟೇ ದೊಡ್ಡದಿರಲಿ, ದೇಶವು ಅವರೊಂದಿಗೆ ಇರುತ್ತದೆ ಎಂಬ ಭಾವನೆ ಅವರಲ್ಲಿದೆ.ಸ್ವಲ್ಪ ಸಮಯದ ಹಿಂದೆ ಕೆಲವು ಫಲಾನುಭವಿಗಳ ಜೊತೆ ಸಂವಾದ ನಡೆಸುವ ಅವಕಾಶ ನನಗೆ ಲಭಿಸಿತ್ತು, ಮತ್ತು ನನಗೆ ಗೊತ್ತಾಗಿದೆ ಅವರು ಹೊಸ ಆತ್ಮವಿಶ್ವಾಸವನ್ನು ತುಂಬಿಕೊಂಡಿದ್ದಾರೆ ಎಂಬುದಾಗಿ.

ಸ್ನೇಹಿತರೇ,

ಸ್ವಾತಂತ್ರ್ಯದ ಬಳಿಕ ಸರಿಸುಮಾರು ಪ್ರತೀ ಸರಕಾರಗಳೂ ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಬಗ್ಗೆ ಮಾತನಾಡಿದವು. ಕಡಿಮೆ ದರದಲ್ಲಿ ಪಡಿತರ ಯೋಜನೆಗಳ ವ್ಯಾಪ್ತಿ ಮತ್ತು ಬಜೆಟ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಯಿತು, ಆದರೆ ಅದು ಬೀರಬೇಕಾದ  ಪರಿಣಾಮ  ಮಿತಿಯಲ್ಲಿಯೇ ಉಳಿಯಿತು. ದೇಶದ ಆಹಾರ ಮೀಸಲು ಬೆಳೆಯಿತು, ಆದರೆ ಹಸಿವು ಮತ್ತು ನ್ಯೂನ ಪೋಷಣೆ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ. ಇದಕ್ಕೆ ಬಹಳ ದೊಡ್ಡ ಕಾರಣ ಅಲ್ಲಿ ಸಮರ್ಪಕ ಪೂರೈಕೆ ವ್ಯವಸ್ಥೆ ಇರಲಿಲ್ಲ. ಮತ್ತು ಸ್ವಾರ್ಥಿ ಜನರ ಜೊತೆ ಕೆಲವು ಅವ್ಯವಹಾರಗಳು ವ್ಯವಸ್ಥೆಯಲ್ಲಿ ಬೆಳೆದು ಬಂದವು. ಪ್ರಕ್ರಿಯೆಗೆ 2014 ಬಳಿಕ ಪರಿಸ್ಥಿತಿ ಬದಲಾಯಿಸಲು ಕ್ರಮಗಳನ್ನು ಕೈಗೊಳ್ಳಲಾಯಿತು. ಬದಲಾವಣೆಗೆ ಹೊಸ ತಂತ್ರಜ್ಞಾನವನ್ನು ಮಾಧ್ಯಮವಾಗಿ ಬಳಸಲಾಯಿತು. ಕೋಟ್ಯಾಂತರ ನಕಲಿ ಫಲಾನುಭವಿಗಳನ್ನು ವ್ಯವಸ್ಥೆಯಿಂದ ತೆಗೆದು ಹಾಕಲಾಯಿತು. ಪಡಿತರ ಕಾರ್ಡುಗಳನ್ನು ಆಧಾರ್ ಜೊತೆ ಜೋಡಿಸಲಾಯಿತು. ಮತ್ತು ಸರಕಾರದ ಪಡಿತರ ಅಂಗಡಿಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಉತ್ತೇಜಿಸಲಾಯಿತು. ಇಂದು ಫಲಿತಾಂಶ ನಿಮ್ಮ ಮುಂದೆ ಇದೆ.

ಸಹೋದರರೇ ಮತ್ತು ಸಹೋದರಿಯರೇ,

ಶತಮಾನದ ದೊಡ್ಡ ವಿಪತ್ತು ಭಾರತವನ್ನು ಮಾತ್ರ ಬಾಧಿಸುತ್ತಿರುವುದಲ್ಲ, ಅದು ಇಡೀ ವಿಶ್ವವನ್ನೇ ಕಾಡುತ್ತಿದೆ. ಮತ್ತು ಇಡೀ ಮಾನವ ಕುಲವನ್ನು ಬಾಧಿಸುತ್ತಿದೆ. ಜನರ ಜೀವನೋಪಾಯದಲ್ಲಿ ಸಂಕಷ್ಟಗಳು ತಲೆದೋರಿವೆ. ಕೊರೊನಾ ಲಾಕ್ಡೌನ್ ನಿಂದಾಗಿ ವ್ಯಾಪಾರ, ಉದ್ಯಮ ಸ್ಥಗಿತಗೊಂಡಿದೆ. ಆದರೆ ದೇಶವು ತನ್ನ ನಾಗರಿಕರನ್ನು ಹಸಿವೆಯಿಂದ ಮಲಗುವಂತೆ ಮಾಡಿಲ್ಲ. ದುರದೃಷ್ಟವಶಾತ್ ಸೋಂಕಿನ ಜೊತೆ, ಜಗತ್ತಿನಲ್ಲಿಯ ಅನೇಕ  ದೇಶಗಳ ಜನರು ಹಸಿವೆಯಿಂದ ಬಳಲುತ್ತಿದ್ದಾರೆ. ಆದರೆ ಭಾರತವು ಸಂಕಷ್ಟವನ್ನು ಮೊದಲೇ ಮನಗಂಡು ಸೋಂಕಿನ ಮೊದಲ ದಿನದಿಂದಲೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತು. ಅದರಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾವನ್ನು ಈಗ ಜಗತ್ತಿನಾದ್ಯಂತ ಕೊಂಡಾಡಲಾಗುತ್ತಿದೆ. ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಆಹಾರಧಾನ್ಯ ನೀಡುತ್ತಿರುವುದಕ್ಕೆ ಪ್ರಮುಖ ತಜ್ಞರು ಭಾರತವನ್ನು ಶ್ಲಾಘಿಸುತ್ತಿದ್ದಾರೆ. ದೇಶವು ಯೋಜನೆಯ ಮೇಲೆ 2 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು  ವ್ಯಯಿಸುತ್ತಿದೆ. ಇದರ ಹಿಂದೆ ಇರುವ ಉದ್ದೇಶ ಒಂದೇ, ಯಾವುದೇ ಒಬ್ಬ ಭಾರತೀಯರೂ ಹಸಿವಿನಿಂದಿರಬಾರದು. ಕೆ.ಜಿ.ಗೆ ರೂಪಾಯಿ 2 ದರದಲ್ಲಿ ಗೋಧಿ, ಕಿಲೋಗೆ 3 ರೂಪಾಯಿ ದರದಲ್ಲಿ ಅಕ್ಕಿ ಕೋಟಾದ ಜೊತೆಗೆ ಪ್ರತೀ ಫಲಾನುಭವಿಗೂ 5 ಕಿಲೋ ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ಕೊಡಲಾಗುತ್ತಿದೆ. ಇದರಿಂದಾಗಿ ಪಡಿತರ ಕಾರ್ಡುದಾರರಿಗೆ ಯೋಜನೆ ಕಾರ್ಯಾರಂಭ ಮಾಡುವುದಕ್ಕೆ ಮೊದಲು ನೀಡಲಾಗುತ್ತಿದ್ದ ಪ್ರಮಾಣಕ್ಕೆ ಹೋಲಿಸಿದಾಗ ಸುಮಾರು ದುಪ್ಪಟ್ಟು  ಪ್ರಮಾಣದ ಪಡಿತರ ಲಭಿಸುತ್ತದೆ. ಯೋಜನೆ ದೀಪಾವಳಿಯವರೆಗೆ ಚಾಲ್ತಿಯಲ್ಲಿರುತ್ತದೆ. ಮತ್ತು ಯಾವೊಬ್ಬ ಬಡವರೂ ಪಡಿತರಕ್ಕಾಗಿ ತನ್ನ ಕಿಸೆಯನ್ನು ಬರಿದು ಮಾಡಿಕೊಳ್ಳಬೇಕಾಗಿಲ್ಲ.ಗುಜರಾತಿನಲ್ಲಿ ಕೂಡ ಸುಮಾರು 3.5 ಕೋಟಿ  ಫಲಾನುಭವಿಗಳು ಉಚಿತ ಪಡಿತರದ ಪ್ರಯೋಜನ ಪಡೆಯುತ್ತಿದ್ದಾರೆ.ದೇಶದ ಇತರ ಭಾಗಗಳಿಂದ ಬಂದು ದುಡಿಯುತ್ತಿರುವ ಕಾರ್ಮಿಕರಿಗೆ ಆದ್ಯತೆ ನೀಡುತ್ತಿರುವುದಕ್ಕಾಗಿ  ನಾನು ಗುಜರಾತ್ ಸರಕಾರವನ್ನು ಶ್ಲಾಘಿಸುತ್ತೇನೆ. ಕೊರೊನಾ ಲಾಕ್ ಡೌನ್ ನಿಂದ ಸಂತ್ರಸ್ಥರಾದ ಲಕ್ಷಾಂತರ ಕಾರ್ಮಿಕರು ಇದರಿಂದ ಪ್ರಯೋಜನಗಳನ್ನು ಪಡೆದಿದ್ದಾರೆ. ಪಡಿತರ ಕಾರ್ಡ್ ಗಳಿಲ್ಲದ ಅನೇಕ ಸಹಚರರಿದ್ದಾರೆ, ಇನ್ನು ಕೆಲವರ ಪಡಿತರ ಕಾರ್ಡ್ ಗಳು ಇತರ ರಾಜ್ಯಗಳಲ್ಲಿರಬಹುದು. ಗುಜರಾತ್ ಸರಕಾರ ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಸೇರಿದೆ ಗುಜರಾತಿನ ಲಕ್ಷಾಂತರ ಕಾರ್ಮಿಕರು ಒಂದು ರಾಷ್ಟ್ರ , ಒಂದು ಪಡಿತರ ಕಾರ್ಡ್ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ದೇಶದಲ್ಲಿ ಅಭಿವೃದ್ಧಿ ಎನ್ನುವುದು ನಗರಗಳಿಗೆ ಮಾತ್ರ ಸೀಮಿತ ಎಂದಾಗಿದ್ದ ಕಾಲವೊಂದಿತ್ತು. ಅಲ್ಲೂ ಅಭಿವೃದ್ಧಿ ಎಂದರೆ ದೊಡ್ಡ ಮೇಲ್ ಸೇತುವೆಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ನಿರ್ದಿಷ್ಟ ಪ್ರದೇಶಗಳಲ್ಲಿ ಮೆಟ್ರೋ , ಮತ್ತು ಇವೆಲ್ಲ ಗ್ರಾಮಗಳು ಹಾಗು ಪಟ್ಟಣಗಳಿಂದ ದೂರವಿರುತ್ತಿತ್ತು. ಅಭಿವೃದ್ಧಿಗೂ ಸಾಮಾನ್ಯ ಮನುಷ್ಯರಿಗೂ ಏನೂ ಸಂಬಂಧ ಇರಲಿಲ್ಲ. ಕೆಲವು ವರ್ಷಗಳಿಂದ ದೇಶವು ಧೋರಣೆಯಲ್ಲಿ ಬದಲಾವಣೆಗಳನ್ನು ತಂದಿತು. ಇಂದು ದೇಶವು ಉಭಯ ದಿಕ್ಕುಗಳಲ್ಲಿ ಕಾರ್ಯಾಚರಿಸಲು ಇಚ್ಛಿಸುತ್ತದೆ. ಮತ್ತು ಉಭಯ ಹಳಿಗಳಲ್ಲಿ ಮುಂದೆ ಹೋಗುವುದನ್ನು ಬಯಸುತ್ತದೆ. ದೇಶಕ್ಕೆ ಹೊಸ ಮೂಲಸೌಕರ್ಯ ಬೇಕಾಗಿದೆ. ಮೂಲಸೌಕರ್ಯದ ಮೇಲೆ ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಜನರಿಗೂ ಉದ್ಯೋಗ ದೊರೆಯುತ್ತಿದೆ. ಇದೇ ವೇಳೆ ಹೊಸ ಮಾನದಂಡಗಳನ್ನು  ಜೀವನವನ್ನು ಅನುಕೂಲಕರಗೊಳಿಸುವುದಕ್ಕಾಗಿ, ಸುಲಭಗೊಳಿಸುವುದಕ್ಕಾಗಿ ರೂಪಿಸಲಾಗಿದೆ. ಇದರಿಂದ ಸಾಮಾನ್ಯ ಮನುಷ್ಯರ ಜೀವನ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತಿದೆಬಡ ಜನರ ಸಶಕ್ತೀಕರಣಕ್ಕೆ ಗರಿಷ್ಟ ಆದ್ಯತೆಯನ್ನು ಕೊಡಲಾಗಿದೆ. ಎರಡು ಕೋಟಿ ಬಡ ಕುಟುಂಬಗಳಿಗೆ ಮನೆಗಳನ್ನು ನೀಡಿರುವಾಗ ಅದರ ಅರ್ಥ ಅವರು ಈಗ ಶೀತ, ಬಿಸಿಲು ಮತ್ತು ಮಳೆಯ ಭಯದಿಂದ ಪಾರಾಗಿ ಸುರಕ್ಷಿತವಾಗಿ ಜೀವಿಸಲು ಸಮರ್ಥರಾಗಿದ್ದಾರೆ ಎಂಬುದಾಗಿದೆ.ಇದಕ್ಕಿಂತ ಹೆಚ್ಚಾಗಿ ವ್ಯಕ್ತಿಯೋರ್ವ ತನ್ನದೇ ಮನೆ ಹೊಂದಿದ್ದಾನೆ ಎಂದಾದರೆ ಅದು ಆತ್ಮ ಗೌರವವನ್ನು ಹೆಚ್ಚಿಸುತ್ತದೆ. ಅವರು ಹೊಸ ದೃಢ ಸಂಕಲ್ಪಗಳನ್ನು ಮಾಡುತ್ತಾರೆ ಮತ್ತು ಅದನ್ನು ನನಸು ಮಾಡಲು ಕುಟುಂಬದ ಜೊತೆ  ಕಠಿಣ ಪರಿಶ್ರಮ ಮಾಡುತ್ತಾರೆ. 10 ಕೋಟಿ ಜನರು ಬಯಲು ಶೌಚಕ್ಕೆ ಹೋಗುವುದರಿಂದ ಮುಕ್ತರಾಗಿದ್ದಾರೆ ಎಂದಾದರೆ ಅದರರ್ಥ ಅವರ ಜೀವನದ ಮಟ್ಟ ಸುಧಾರಿಸಿದೆ. ಮೊದಲು ಬಡವರು ಬರೇ ಶ್ರೀಮಂತರ ಮನೆಯಲ್ಲಿ ಮಾತ್ರವೇ ಶೌಚಾಲಯ ಇರುತ್ತದೆ ಎಂದು ಭಾವಿಸಿದ್ದರು. ಬಡವರು ಬಯಲು ಬಹಿರ್ದೆಸೆಗೆ ಹೋಗಲು ಕತ್ತಲಾಗುವುದನ್ನೇ ಕಾಯಬೇಕಾಗುತ್ತಿತ್ತು. ಆದರೆ ಯಾವಾಗ ಬಡವರು ಶೌಚಾಲಯಗಳನ್ನು ಹೊಂದಿದರೋ, ಆಗ ಅವರು ತಮ್ಮನ್ನು ತಾವು ಶ್ರೀಮಂತರ ಜೊತೆ ಸಮೀಕರಿಸಿಕೊಂಡರು ಮತ್ತು ಹೊಸ ಆತ್ಮವಿಶ್ವಾಸ ಮೂಡಲಾರಂಭಿಸಿತು. ಅದೇ ರೀತಿ, ದೇಶದ ಬಡವರು ಜನ್ ಧನ್ ಖಾತೆಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಲ್ಪಟ್ಟರೋ ಮತ್ತು ಮೊಬೈಲ್ ಬ್ಯಾಂಕಿಂಗ್ ಗೆ ಸಂಪರ್ಕಿಸಲ್ಪಟ್ಟರೋ, ಅವರು ಸಶಕ್ತೀಕರಣದ ಭಾವನೆಯನ್ನು ತಳೆದರು ಮತ್ತು ಅವರಿಗೆ  ಹೊಸ ಅವಕಾಶಗಳು ತೆರೆಯಲ್ಪಟ್ಟವು.ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತದೆ:

सामर्थ्य मूलम्

सुखमेव लोके!

ಅದು ನಮ್ಮ ಸಾಮರ್ಥ್ಯದ ತಳಹದಿ, ಅದು ನಮ್ಮ ಜೀವನದ ಸಂತೋಷ. ನಾವು ಸಂತೋಷದ ಹಿಂದೆ ಓಡುವುದರಿಂದ ಸಂತೋಷವನ್ನು ಗಳಿಸಲಾರೆವು. ಇದನ್ನು ಪಡೆಯಲು ನಾವು ನಿರ್ದಿಷ್ಟ ಸೂಚಿತ ಕೆಲಸವನ್ನು ಮಾಡಬೇಕು. ನಾವು ಏನನ್ನಾದರೂ ಸಾಧಿಸಬೇಕು. ಅದೇ ರೀತಿ ಸಶಕ್ತೀಕರಣ ಕೂಡಾ ಉತ್ತಮ ಆರೋಗ್ಯ, ಶಿಕ್ಷಣ, ಅನುಕೂಲತೆ ಮತ್ತು ಘನತೆಗಳಿಂದ ಬರುತ್ತದೆ. ಕೋಟ್ಯಾಂತರ ಬಡವರಿಗೆ ಆಯುಷ್ಮಾನ್ ಯೋಜನಾ ಮೂಲಕ ಉಚಿತ ಚಿಕಿತ್ಸೆ ದೊರೆಯುವಾಗ ಅವರು ಆರೋಗ್ಯದ ವಿಷಯದಲ್ಲಿ ಸಶಕ್ತೀಕರಣಗೊಂಡಿರುತ್ತಾರೆ. ದುರ್ಬಲ ವರ್ಗದವರಿಗೆ ಮೀಸಲಾತಿ ಸೌಲಭ್ಯವನ್ನು ಖಾತ್ರಿಗೊಳಿಸಿದಾಗ ವರ್ಗದವರು ಶಿಕ್ಷಣದಲ್ಲಿ ಸಶಕ್ತೀಕರಣಗೊಳ್ಳುತ್ತಾರೆ. ರಸ್ತೆಗಳು ಹಳ್ಳಿಗಳನ್ನು ನಗರಗಳ ಜೊತೆ ಬೆಸೆದಾಗ, ಬಡ ಕುಟುಂಬಗಳು ಉಚಿತ ಅನಿಲ ಮತ್ತು ವಿದ್ಯುತ್ ಸಂಪರ್ಕಗಳನ್ನು ಪಡೆದಾಗ ಸೌಲಭ್ಯಗಳು ಅವರನ್ನು ಸಶಕ್ತೀಕರಣಗೊಳಿಸುತ್ತವೆ. ಯಾವುದೇ ವ್ಯಕ್ತಿ ಆರೋಗ್ಯ, ಶಿಕ್ಷಣ, ಮತ್ತು ಇತರ ಸೌಲಭ್ಯಗಳನ್ನು ಪಡೆದಾಗ ಆಗ ಆತ ತನ್ನ ಪ್ರಗತಿಯ ಬಗ್ಗೆ ಮತ್ತು ದೇಶದ ಪ್ರಗತಿಯ ಬಗ್ಗೆ ಚಿಂತಿಸುತ್ತಾನೆ. ಈಗ ಅಲ್ಲಿ ಮುದ್ರಾ, ಸ್ವ ನಿಧಿ, ಯಂತಹ ಯೋಜನೆಗಳು ಕನಸನ್ನು ನನಸು ಮಾಡುವುದಕ್ಕಾಗಿ ಇವೆ. ಭಾರತದಲ್ಲಿ ಬಡವರಿಗೆ ಘನತೆಯ ಬದುಕನ್ನು ಕೊಡುವ, ಗೌರವನ್ನು ತಂದುಕೊಡುವ ಸಶಕ್ತೀಕರಣದ ಮಾದ್ಯಮವಾಗಿರುವ ಅನೇಕ ಯೋಜನೆಗಳಿವೆ.

ಸಹೋದರರೇ ಮತ್ತು ಸಹೋದರಿಯರೇ,

ಸಾಮಾನ್ಯ ಮಾನವನ ಕನಸುಗಳಿಗೆ ಅವಕಾಶ ದೊರೆತರೆ ಜೀವನ ಹೇಗೆ ಬದಲಾಗುತ್ತದೆ ಎಂಬುದನ್ನು ಗುಜರಾತ್ ಬಹಳ ಚೆನ್ನಾಗಿ ತಿಳಿದುಕೊಂಡಿದೆ. ಯೋಜನೆಗಳು ಅವರ ಮನೆಗಳನ್ನು ತಲುಪಿದಾಗ ಬದಲಾವಣೆಗಳಾಗುತ್ತವೆ. ಒಂದೊಮ್ಮೆ ಗುಜರಾತಿನ ಬಹಳ ದೊಡ್ಡ ಭಾಗದಲ್ಲಿ ತಾಯಂದಿರು, ಮತ್ತು ಸಹೋದರಿಯರು ನೀರಿಗಾಗಿ ಕಿಲೋ ಮೀಟರುಗಟ್ಟಲೆ ನಡೆಯಬೇಕಾಗಿತ್ತು. ನಮ್ಮೆಲ್ಲ ತಾಯಂದಿರು ಮತ್ತು ಸಹೋದರಿಯರು ಇದಕ್ಕೆ ಸಾಕ್ಷಿಗಳಾಗಿದ್ದಾರೆ. ರಾಜ್ ಕೋಟ್ ಗೆ ನೀರಿಗಾಗಿ ರೈಲನ್ನು ಕಳುಹಿಸಬೇಕಾಗಿತ್ತು. ಮನೆಯ ಹೊರಗೆ ಹೊಂಡವನ್ನು ತೆಗೆದು ಭೂಗತ ಪೈಪಿನಿಂದ ಸಣ್ಣ ಚೆಂಬಿನ ಮೂಲಕ ಬಕೆಟಿಗೆ ನೀರು ತುಂಬಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಇಂದು, ನರ್ಮದಾ ಮಾತೆಯ ನೀರು ಸರ್ದಾರ್ ಸರೋವರ ಅಣೆಕಟ್ಟಿನಿಂದ ಸೌನಿ ಯೋಜನಾ ಮತ್ತು ವ್ಯಾಪಕವಾದ ಕಾಲುವೆಗಳ ಜಾಲದ ಮೂಲಕ ಯಾರೊಬ್ಬರೂ ಕಲ್ಪಿಸಿಕೊಳ್ಳಲಾರದ ಕಚ್ ಪ್ರದೇಶಕ್ಕೆ ತಲುಪುತ್ತಿದೆ. ನರ್ಮದಾ ಮಾತೆಯನ್ನು ಸ್ಮರಿಸಿಕೊಂಡರೆ ಅದರಿಂದ ಒಳಿತಾಗುತ್ತದೆ ಎಂಬ ಭಾವನೆ ಇದೆ. ಇಂದು ನರ್ಮದಾ ಮಾತೆ ತಾನೇ ಗುಜರಾತಿನ ಗ್ರಾಮಗಳಿಗೆ, ಮನೆಗಳಿಗೆ ಹೋಗುತ್ತಿದ್ದಾಳೆ. ನರ್ಮದಾ ಮಾತೆ ತಾನೇ ನಿಮ್ಮ ಮನೆ ಬಾಗಿಲಿಗೆ ಬಂದು ಹರಸುತ್ತಿದ್ದಾಳೆ. ಎಲ್ಲಾ ಪ್ರಯತ್ನಗಳ ಫಲಶ್ರುತಿಯಾಗಿ ಇಂದು ಗುಜರಾತ್ 100% ಕೊಳವೆ ನೀರು ಪೂರೈಸುವ ಗುರಿಯನ್ನು ಸಾಧಿಸುವಲ್ಲಿ  ಬಹಳ ಹತ್ತಿರದಲ್ಲಿದೆ. ನಿಧಾನವಾಗಿ ಇಡೀ ದೇಶ ವೇಗವನ್ನು ಕಂಡುಕೊಳ್ಳುತ್ತಿದೆ, ಸಾಮಾನ್ಯ ಜನರ ಬದುಕಿನಲ್ಲಾದ ಪರಿವರ್ತನೆಯನ್ನು ಗಮನಿಸುತ್ತಿದೆ. ಸ್ವಾತಂತ್ರ್ಯದ ದಶಕಗಳ ಬಳಿಕವೂ ದೇಶದಲ್ಲಿಯು ಬರೇ 30 ಮಿಲಿಯನ್ ಮನೆಗಳಿಗೆ ಕೊಳವೆ ಮೂಲಕ ನೀರು ಪೂರೈಕೆಯಾಗುತ್ತಿತ್ತು.ಈಗ ಜಲ್ ಜೀವನ್ ಅಭಿಯಾನದ ಮೂಲಕ ದೇಶಾದ್ಯಂತ ಬರೇ ಎರಡು ವರ್ಶಗಳಲ್ಲಿ 4.5 ಕೋಟಿ ಕುಟುಂಬಗಳು ಕೊಳವೆ ನೀರಿನ ವ್ಯವಸ್ಥೆಯನ್ನು ಹೊಂದಿವೆ. ಮತ್ತು ಅದರಿಂದಾಗಿ ನನ್ನ ತಾಯಂದಿರು ಹಾಗು ಸಹೋದರಿಯರು ನನ್ನನ್ನು ಆಶೀರ್ವದಿಸುತ್ತಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ಗುಜರಾತ್ ಕೂಡಾ ಎರಡು ಇಂಜಿನ್ಗಳ ಸರಕಾರದ  ಲಾಭವನ್ನು ಸಾಕ್ಷೀಕರಿಸುತ್ತಿದೆ. ಇಂದು ಹೊಸ ಹರಿವಿನ ಅಭಿವೃದ್ಧಿ ಸರ್ದಾರ್ ಸರೋವರ ಅಣೆಕಟ್ಟೆಯಿಂದ ಹರಿಯುತ್ತಿರುವುದು ಮಾತ್ರವಲ್ಲ ಏಕತಾ ಪ್ರತಿಮೆಯ ಮೂಲಕ ಇಡೀ ವಿಶ್ವದ ಅತ್ಯಂತ ದೊಡ್ಡ ಆಕರ್ಷಣೆಯನ್ನು ಗುಜರಾತ್ ಗಳಿಸಿದೆ. ಕಚ್ ನಲ್ಲಿ ರೂಪುಗೊಳ್ಳಲಿರುವ ಮರುನವೀಕೃತ ಇಂಧನ ಪಾರ್ಕ್ ಗುಜರಾತನ್ನು ಜಗತ್ತಿನ ಮರುನವೀಕೃತ ಇಂಧನ ನಕ್ಷೆಯಲ್ಲಿ ಕಾಣಿಸಲಿದೆ. ರೈಲು ಮತ್ತು ವಾಯು ಸಂಪರ್ಕದ ಆಧುನಿಕ ಮತ್ತು ಭವ್ಯ ಮೂಲಸೌಕರ್ಯಗಳ ಯೋಜನೆಗಳನ್ನು ಗುಜರಾತಿನಲ್ಲಿ ಅನುಷ್ಟಾನಿಸಲಾಗುತ್ತಿದೆ. ಗುಜರಾತಿನ ನಗರಗಳಾದ ಅಹ್ಮದಾಬಾದ್ ಮತ್ತು ಸೂರತ್ ಗಳಂತಹ ನಗರಗಳಲ್ಲಿ ಮೆಟ್ರೋ ಸಂಪರ್ಕವನ್ನು ತ್ವರಿತವಾಗಿ ವಿಸ್ತರಿಸಲಾಗುತ್ತಿದೆ. ಆರೋಗ್ಯ ರಕ್ಷಣಾ ವಲಯದಲ್ಲಿ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಗುಜರಾತ್ ಶ್ಲಾಘನೀಯ ಕೆಲಸ ಮಾಡುತ್ತಿದೆ. ಗುಜರಾತಿನಲ್ಲಿ ಸಿದ್ಧ ಮಾಡಲಾದ  ಉತ್ತಮ ವೈದ್ಯಕೀಯ ಮೂಲಸೌಕರ್ಯಗಳು 100 ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ವೈದ್ಯಕೀಯ ತುರ್ತುಸ್ಥಿತಿಯನ್ನು ನಿಭಾಯಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ.

ಸ್ನೇಹಿತರೇ,

ಗುಜರಾತ್ ಸಹಿತ ಇಡೀ ದೇಶದಲ್ಲಿ ಇಂತಹ ಹಲವು ಉಪಕ್ರಮಗಳು ಪ್ರತೀ ವಲಯದ ಮತ್ತು ಪ್ರತೀ ದೇಶವಾಸಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಕಾರಣವಾಗಿವೆ. ಪ್ರತೀ ಸವಾಲನ್ನು ಎದುರಿಸಲು ಮತ್ತು ಪ್ರತೀ ಕನಸನ್ನು ನನಸು ಮಾಡಲು ಆತ್ಮ ವಿಶ್ವಾಸವೇ ಬಹಳ ದೊಡ್ಡ ಸೂತ್ರ. ಇತ್ತೀಚಿನ ಉದಾಹರಣೆ ಎಂದರೆ ಒಲಿಂಪಿಕ್ಸ್ ನಲ್ಲಿ ನಮ್ಮ ಅಥ್ಲೀಟ್ ಗಳ ಸಾಧನೆ. ಬಾರಿ ಭಾರತದಿಂದ ಗರಿಷ್ಟ ಸಂಖ್ಯೆಯಲ್ಲಿ ಆಟಗಾರರು ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ನೆನಪಿಸಿಕೊಳ್ಳಿ, ನಾವಿದನ್ನು ನೂರು ವರ್ಷಗಳಲ್ಲಿಯೇ ದೊಡ್ಡದಾದ ವಿಪತ್ತಿನ ವಿರುದ್ಧ ಹೋರಾಟವನ್ನು ಮಾಡುತ್ತಲೇ ಸಾಧಿಸಿದ್ದೇವೆ. ಅನೇಕ ವಿಭಾಗಗಳಲ್ಲಿ ನಾವು ಇದೇ ಮೊದಲ ಬಾರಿಗೆ ಅರ್ಹತೆ ಗಳಿಸಿದ್ದೇವೆ. ಅವರು ಅರ್ಹತೆ ಗಳಿಸಿರುವುದು ಮಾತ್ರವಲ್ಲ. ಅವರು ಕಠಿಣ ಸ್ಪರ್ಧೆಯನ್ನೂ ನೀಡುತ್ತಿದ್ದಾರೆ. ನಮ್ಮ ಆಟಗಾರರು ಪ್ರತೀ ಆಟದಲ್ಲಿಯೂ ಉತ್ತಮವಾದುದನ್ನು ಸಾಧಿಸುತ್ತಿದ್ದಾರೆ. ನವಭಾರತದ ನವೀಕೃತ ವಿಶ್ವಾಸ, ಭರವಸೆ ಒಲಿಂಪಿಕ್ಸ್ ಪ್ರತೀ ಆಟದಲ್ಲಿಯೂ ಕಾಣುತ್ತಿದೆ. ನಮ್ಮ ಆಟಗಾರರು ಅವರಿಗಿಂತ ಹೆಚ್ಚಿನ ಶ್ರೇಣಿಯಲ್ಲಿರುವ, ಉನ್ನತ ಮಟ್ಟದಲ್ಲಿರುವ  ಆಟಗಾರರನ್ನು, ತಂಡಗಳ  ಸವಾಲುಗಳನ್ನು ಎದುರಿಸಿದ್ದಾರೆ. ಭಾರತೀಯ ಆಟಗಾರರ ಹಟ, ಹವ್ಯಾಸ ಮತ್ತು ಸ್ಪೂರ್ತಿ ಇಂದು ಉನ್ನತ ಮಟ್ಟದಲ್ಲಿದೆ. ಸರಿಯಾದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ವಿಶ್ವಾಸ ಬರುತ್ತದೆ. ವ್ಯವಸ್ಥೆ ಬದಲಾದಾಗ ಮತ್ತು ಪಾರದರ್ಶಕತೆ ಇದ್ದಾಗ ಹೊಸ ಭರವಸೆ ಉದಿಸುತ್ತದೆ. ಹೊಸ ವಿಶ್ವಾಸ, ಭರವಸೆ ನವಭಾರತದ ಗುರುತಿಸುವಿಕೆಯಾಗುತ್ತಿದೆ. ಇಂದು ವಿಶ್ವಾಸ ಪ್ರತೀ ಸಣ್ಣ ಮತ್ತು ದೊಡ್ಡ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ಬಡ ಮತ್ತು ಮಧ್ಯಮವರ್ಗದ ಯುವಜನತೆಯಲ್ಲಿ, ಭಾರತದ ಎಲ್ಲಾ ಮೂಲೆಗಳಲ್ಲಿ ಕಂಡು ಬರುತ್ತಿದೆ.

ಸ್ನೇಹಿತರೇ,

ಕೊರೊನಾ ವಿರುದ್ಧದ ಯುದ್ದದಲ್ಲಿ ನಾವು ನಂಬಿಕೆಯ ಜೊತೆ ಹೋರಾಟವನ್ನು ಮುಂದುವರೆಸಬೇಕು. ಮತ್ತು ನಮ್ಮ ಲಸಿಕಾಕರಣದ ಆಂದೋಲನವನ್ನು ಮುನ್ನಡೆಸಬೇಕು. ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ, ಕಾಲಘಟ್ಟದಲ್ಲಿ ನಾವು ನಮ್ಮ ಜಾಗೃತಿಯನ್ನು ನಿರಂತರವಾಗಿ ಕಾಪಾಡಿಕೊಂಡು ಬರಬೇಕು. ಇಂದು ದೇಶವು 50 ಕೋಟಿ ಲಸಿಕಾಕರಣದತ್ತ ತ್ವರಿತವಾಗಿ ಸಾಗುತ್ತಿದ್ದರೆ, ಗುಜರಾತ್ 30 ಮಿಲಿಯನ್ ಲಸಿಕಾ ಡೋಸ್ ಗಳ ಮೈಲಿಗಲ್ಲಿನತ್ತ ಸಾಗುತ್ತಿದೆ. ನಮ್ಮನ್ನು ನಾವು ಲಸಿಕಾಕರಣಕ್ಕೆ ಒಳಪಡಿಸಿಕೊಳ್ಳಬೇಕು. ಮುಖಗವಸುಗಳನ್ನು ಧರಿಸಬೇಕು ಮತ್ತು ಸಾಧ್ಯ ಇರುವಷ್ಟು ಜನಜಂಗುಳಿಯಿಂದ ದೂರವಿರಿಮುಖಗವಸು ಧರಿಸುವುದನ್ನು ಕೈಬಿಟ್ಟಿದ್ದ ರಾಷ್ಟ್ರಗಳು ಮತ್ತೆ ಜನರಿಗೆ ಮುಖಗವಸುಗಳನ್ನು ಧರಿಸುವಂತೆ ಮನವಿ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಾವು ಜಾಗ್ರತೆಯಿಂದ ಮತ್ತು ಸುರಕ್ಷತೆಯಿಂದ ಮುಂದುವರಿಯಬೇಕಾಗಿದೆ.

ಸ್ನೇಹಿತರೇ,

ಇಂದು ನಾವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾದಂತಹ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವಾಗ, ನಾನು ದೇಶವಾಸಿಗಳು ಇನ್ನೊಂದು ದೃಢ ಸಂಕಲ್ಪವನ್ನು ಕೈಗೊಳ್ಳಬೇಕು ಎಂದು ಬಯಸುತ್ತೇನೆ. ದೃಢ ಸಂಕಲ್ಪ ಎಂದರೆ ರಾಷ್ಟ್ರ ನಿರ್ಮಾಣಕ್ಕೆ ಹೊಸ ಪ್ರೇರಣೆಯ ಉದ್ದೀಪನ. ನಾವು ಪವಿತ್ರ ನಿರ್ಧಾರವನ್ನು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಕೈಗೊಳ್ಳಬೇಕು. ಅಂದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ. ದೃಢ ಸಂಕಲ್ಪಗಳಲ್ಲಿ ಬಡವರು-ಶ್ರೀಮಂತರು, ಮಹಿಳೆಯರು-ಪುರುಷರು, ದಲಿತರು-ಅವಕಾಶವಂಚಿತರು ಸಹಿತ ಎಲ್ಲರೂ ಸಮಾನ ಪಾಲುದಾರರು. ಬರಲಿರುವ ವರ್ಷಗಳಲ್ಲಿ ಗುಜರಾತ್ ಅದರ ಎಲ್ಲಾ ದೃಢ ಸಂಕಲ್ಪಗಳನ್ನು ಈಡೇರಿಸಲಿ ಮತ್ತು ವಿಶ್ವದಲ್ಲಿ ಅದರ ಭವ್ಯವಾದ ಗುರುತಿಸುವಿಕೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳಲಿ. ಹಾರೈಕೆಯೊಂದಿಗೆ, ನಾನು ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ. ಮತ್ತೊಮ್ಮೆ ಅನ್ನ ಯೋಜನಾದ ಎಲ್ಲಾ ಫಲಾನುಭವಿಗಳಿಗೆ ಬಹಳ ಅಭಿನಂದನೆಗಳು!! ನಿಮ್ಮೆಲ್ಲರಿಗೂ ಬಹಳ ಬಹಳ ಧನ್ಯವಾದಗಳು!!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1744667) Visitor Counter : 228