ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಜಿ 20 ಸಂಶೋಧನಾ ಸಚಿವರುಗಳ ವರ್ಚುವಲ್ ಸಭೆ ಉದ್ದೇಶಿಸಿ ಶ್ರೀ ಸುಭಾಷ್ ಸರ್ಕಾರ್ ಭಾಷಣ


ಸಂಶೋಧನಾ ಸಹಯೋಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀ ಸುಭಾಷ್ ಸರ್ಕಾರ್

Posted On: 06 AUG 2021 5:14PM by PIB Bengaluru

ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸುಭಾಷ್ ಸರ್ಕಾರ ಅವರು ಜಿ 20 ಸಂಶೋಧನಾ ಸಚಿವರುಗಳ ಸಭೆಯಲ್ಲಿಂದು ಪಾಲ್ಗೊಂಡಿದ್ದರು. ಸಭೆಯನ್ನು ಇಟಲಿಯು ಸಂಯೋಜಿತ ರೀತಿಯಲ್ಲಿ ಆಯೋಜಿಸಿತ್ತು. ಜಿ.20 ಶಿಕ್ಷಣ ಸಚಿವರುಗಳು ಸಂಶೋಧನಾ ಸಹಯೋಗವನ್ನು ಹೆಚ್ಚಿಸುವ ಮತ್ತು ಸದೃಢ, ಸುಸ್ಥಿರ, ತಾಳಿಕೊಳ್ಳುವ ಮತ್ತು ಅಂತರ್ಗತ ಚೇತರಿಕೆಗಾಗಿ ಜಿ 20 ರಾಷ್ಟ್ರಗಳ ನಡುವೆ ಡಿಜಿಟಲ್ ಪ್ರದೇಶ ಹಂಚಿಕೊಳ್ಳುವ ಕುರಿತಂತೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಶಿಕ್ಷಣ ಖಾತೆ ರಾಜ್ಯ ಸಚಿವರುಗಳಾದ ಶ್ರೀಮತಿ ಅನ್ನಪೂರ್ಣಾ ದೇವಿ; ಡಾ. ರಾಜ್ ಕುಮಾರ್ ರಂಜನ್ ಸಿಂಗ್, ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಹ ಈ ಸಭೆಯ ವೇಳೆ ಉಪಸ್ಥಿತರಿದ್ದರು. 

ಭಾರತವನ್ನು ಪ್ರತಿನಿಧಿಸಿದ್ದ ಶ್ರೀ ಸುಭಾಶ್ ಸರ್ಕಾರ್, ಈ ಉದ್ದೇಶದ ಈಡೇರಿಕೆಗಾಗಿ ಸಂಶೋಧನೆಯನ್ನು ಉತ್ತೇಜಿಸುವ ಮತ್ತು ಯುವಜನರಿಗೆ ಕೌಶಲ, ಮರು ಕೌಶಲ ಮತ್ತು ಉನ್ನತ ಕೌಶಲ ನೀಡುವ ಮತ್ತು ಇತರ ಜಿ-20 ರಾಷ್ಟ್ರಗಳೊಂದಿಗೆ ಸಹಯೋಗ ಹೊಂದುವ ಬದ್ಧತೆಯನ್ನು ಪುನರುಚ್ಚರಿಸಿದರು. ಜಿ 20 ಪಾಲುದಾರರೊಂದಿಗೆ ಕಾರ್ಯ ನಿರ್ವಹಿಸುವ ಮತ್ತು ಸಮಾನ ಸಮಸ್ಯೆಗಳಿಗೆ ಸಾಕ್ಷಾಧಾರಿತವಾದ ಪರಿಹಾರ ಹುಡುಕಲು ಭಾರತ ಮಹತ್ವ ನೀಡಿದೆ ಎಂದು ತಿಳಿಸಿದರು. 

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತಂತೆ ಮಾತನಾಡಿದ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ 2020ರಲ್ಲಿ ಆರಂಭಿಸಲಾದ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ದೇಶದ ಸಂಶೋಧನಾ ಪರಿಸರವನ್ನು ಬಲಪಡಿಸುವುದನ್ನು ಬಯಸುತ್ತದೆ ಎಂದರು. 

6ನೇ ತರಗತಿಯಿಂದ ಭಾರತವು ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಪರಿಚಯಿಸಿದೆ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ ಗಳನ್ನು ಆರಂಭಿಸಿದೆ ಎಂದು ಸಚಿವರು ಮಾಹಿತಿ ನೀಡಿದರು. ಭಾರತ ಮತ್ತು ಇತರ ದೇಶಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವನ್ನು ಉತ್ತೇಜಿಸಲು ಭಾರತ ಸರ್ಕಾರವು ಎಸ್.ಪಿ.ಎ.ಆರ್.ಸಿ. ಮತ್ತು ಜಿ.ಐ.ಎ.ಎನ್ ನಂತಹ ವೈವಿಧ್ಯಮಯ ಯೋಜನೆಗಳನ್ನು ಬೆಂಬಲಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಭಾರತೀಯ ಸಂಸ್ಥೆಗಳು ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ಅವಳಿ ವ್ಯವಸ್ಥೆಯನ್ನು ಮಾಡುತ್ತಿವೆ. ನಾವು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅನ್ನು ಸ್ಥಾಪಿಸಿದ್ದೇವೆ, ಅದು ಅಂತಹ ವ್ಯವಸ್ಥೆಗಳನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕದ ವೇಳೆ, ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಸಂಶೋಧನಾ ಯೋಜನೆಗಳ ಬಗ್ಗೆ ಕಾರ್ಯ ನಿರ್ವಹಿಸಿದವು ಮತ್ತು ಕೋವಿಡ್ 19ರ ನಿಗ್ರಹಕ್ಕೆ ಲಸಿಕೆ, ಅಗ್ಗದ ದರದ ವೆಂಟಿಲೇಟರ್ ಗಳು ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಅಭಿವೃದ್ಧಿಪಡಿಸಿದವು ಎಂದು ಒತ್ತಿ ಹೇಳಿದರು.

ಶಿಕ್ಷಣ ವಲಯದಲ್ಲಿ ಗರಿಷ್ಠ ಲಾಭಕ್ಕಾಗಿ ಸಂಬಂಧಿತ ತಂತ್ರಜ್ಞಾನಗಳನ್ನು ಹತೋಟಿಗೆ ತರಲು ಭಾರತ ಒತ್ತು ನೀಡುತ್ತದೆ, ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯನ್ನು ಒಂದು ಅಂಬ್ರೆಲಾ ಸಂಸ್ಥೆಯಾಗಿ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

ಸಾಂಕ್ರಾಮಿಕದ ಪರಿಣಾಮಗಳನ್ನು ತಗ್ಗಿಸಲು ಮತ್ತು ಹೆಚ್ಚು ಹೊಂದಿಕೊಳ್ಳುವ ಶಿಕ್ಷಣ ವ್ಯವಸ್ಥೆಯನ್ನು ಮರಳಿ ನಿರ್ಮಿಸಲು ದೇಶಗಳು ನಡೆಸುತ್ತಿರುವ ಸಂಘಟಿತ ಪ್ರಯತ್ನಗಳನ್ನು ಭಾರತವು ಮನ್ನಿಸಿದೆ.

ಸಾಂಕ್ರಾಮಿಕ ಸಮಯದಲ್ಲಿ ಶೈಕ್ಷಣಿಕ ನಿರಂತರತೆಯನ್ನು ಖಾತರಿಪಡಿಸುವ ಕುರಿತಂತೆ ವಿಚಾರ ಹಂಚಿಕೊಂಡ ಸಚಿವರು, ಭಾರತವು ಸಂಯೋಜಿತ ಕಲಿಕೆಯನ್ನು ವ್ಯಾಪಕವಾಗಿ ಉತ್ತೇಜಿಸಿದೆ ಎಂದರು. ಭಾರತವು ಪ್ರಧಾನಮಂತ್ರಿ ಇ-ವಿದ್ಯಾ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದರ ಅಡಿಯಲ್ಲಿ ನಾವು ನಮ್ಮ ಉಪಕ್ರಮಗಳಾದ ಸ್ವಯಂ, ದೀಕ್ಷಾ, ಸ್ವಯಂ ಪ್ರಭಾ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ಆನ್‌ ಲೈನ್, ಟೆಲಿವಿಷನ್ ಮತ್ತು ರೇಡಿಯೋ ವಿಧಾನಗಳ ಮಿಶ್ರಣದೊಂದಿಗೆ ದೇಶಾದ್ಯಂತ ಶಿಕ್ಷಣದ ನಿರಂತರತೆಯನ್ನು ಖಾತ್ರಿಪಡಿಸಿದ್ದೇವೆ ಎಂದರು.

ಜಿ -20 ದೇಶಗಳ ಸಾಮೂಹಿಕ ಪ್ರಯತ್ನಗಳಿಗೆ ಹೊಂದಿಕೊಳ್ಳುವ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ಭಾರತ ಸರ್ಕಾರದ ಬೆಂಬಲವನ್ನು ಸಚಿವರು ಪುನರುಚ್ಚರಿಸಿದರು ಮತ್ತು ಈ ಪ್ರದೇಶದಲ್ಲಿ ಹಂಚಿಕೆಯ ಆದ್ಯತೆಗಳನ್ನು ಪೂರೈಸಲು ಪಾಲುದಾರ ರಾಷ್ಟ್ರಗಳೊಂದಿಗೆ ಶ್ರಮಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ತರುವಾಯ ಸಭೆಯ ಕೊನೆಯಲ್ಲಿ, ಸದೃಢ, ಸುಸ್ಥಿರ, ತಾಳಿಕೊಳ್ಳುವ ಮತ್ತು ಅಂತರ್ಗತ ಚೇತರಿಕೆಗಾಗಿ ಸಂಶೋಧನಾ ಕಾರ್ಯಗಳು, ಉನ್ನತ ಶಿಕ್ಷಣ ಮತ್ತು ಡಿಜಿಟಲೀಕರಣಕ್ಕಾಗಿ ಜಿ 20 ಸಚಿವರುಗಳ ಘೋಷಣೆಯನ್ನು ಅಂಗೀಕರಿಸಲಾಯಿತು.

***



(Release ID: 1743384) Visitor Counter : 114