ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಶಿಕ್ಷಣ ಸಮುದಾಯ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


ಈ ಕಾರ್ಯಕ್ರಮದ ಅಂಗವಾಗಿ ಬಹು ಪ್ರಮುಖ ಉಪಕ್ರಮಗಳಿಗೆ ಚಾಲನೆ

ರಾಷ್ಟ್ರೀಯ ಅಭಿವೃದ್ಧಿಯ “ಮಹಾಯಜ್ಞ’ದಲ್ಲಿ ಎನ್.ಇ.ಪಿ. ದೊಡ್ಡ ಅಂಶವಾಗಿದೆ:ಪ್ರಧಾನಮಂತ್ರಿ

ನೂತನ ಶಿಕ್ಷಣ ನೀತಿಯು ನಮ್ಮ ಯುವಜನರಿಗೆ ದೇಶವು ಅವರೊಂದಿಗೆ ಮತ್ತು ಅವರ ಆಶೋತ್ತರಗಳೊಂದಿಗೆ ಸಂಪೂರ್ಣವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ: ಪ್ರಧಾನಮಂತ್ರಿ

ಮುಕ್ತ ಮತ್ತು ಒತ್ತಡ ರಹಿತತೆ ನೂತನ ಶಿಕ್ಷಣ ನೀತಿಯ ಪ್ರಮುಖ ಅಂಶವಾಗಿದೆ : ಪ್ರಧಾನಮಂತ್ರಿ

8 ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳು 5 ಭಾರತೀಯ ಭಾಷೆಯಲ್ಲಿ ಶಿಕ್ಷಣ ಕಲಿಸಲು ಆರಂಭಿಸಿವೆ: ಪ್ರಧಾನಮಂತ್ರಿ

ಮಾತೃಭಾಷೆ ಮಾಧ್ಯಮವಾಗಿ ಬಡ, ಗ್ರಾಮೀಣ ಮತ್ತು ಬುಡಕಟ್ಟು ಹಿನ್ನೆಲೆಯ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲಿದೆ: ಪ್ರಧಾನಮಂತ್ರಿ

Posted On: 29 JUL 2021 6:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನೂತನ ಶಿಕ್ಷಣ ನೀತಿ 2020ಕ್ಕೆ ಒಂದು ವರ್ಷದ ತುಂಬಿದ ಸಂದರ್ಭದಲ್ಲಿ, ದೇಶಾದ್ಯಂತದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ಬೋಧಕರುಗಳನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಬಹು ಉಪಕ್ರಮಗಳಿಗೂ ಚಾಲನೆ ನೀಡಿದರು.  

ನೂತನ ಶಿಕ್ಷಣ ನೀತಿ ಒಂದು ವರ್ಷ ಪೂರೈಸಿರುವುದಕ್ಕಾಗಿ ದೇಶವಾಸಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಕೋವಿಡ್-19ರ ಸಂಕಷ್ಟದ ಕಾಲದಲ್ಲೂ ನೂತನ ಶಿಕ್ಷಣ ನೀತಿ ವಾಸ್ತವವಾಗಿ ಸಾಕಾರಗೊಳ್ಳಲು ಶಿಕ್ಷಕರು, ಪ್ರಾಧ್ಯಾಪಕರು, ನೀತಿ ನಿರೂಪಕರನ್ನು ಶ್ಲಾಘಿಸಿದರು. ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ವರ್ಷದ ಮಹತ್ವ ತಿಳಿಸಿದ ಪ್ರಧಾನಮಂತ್ರಿಯವರು, ಈ ಮಹತ್ವದ ಕಾಲಘಟ್ಟದಲ್ಲಿ ನೂತನ ಶಿಕ್ಷಣ ನೀತಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು. ನಮ್ಮ ಭವಿಷ್ಯದ ಪ್ರಗತಿ ಮತ್ತು ವೃದ್ಧಿ ಶಿಕ್ಷಣದ ಮಟ್ಟ ಮತ್ತು ಯುವಜನರಿಗೆ ನೀಡುವ ಮಾರ್ಗದರ್ಶನದ ಮೇಲೆ ಅವಲಂಬಿತವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. “ರಾಷ್ಟ್ರೀಯ ಅಭಿವೃದ್ಧಿ ‘ಮಹಾಯಜ್ಞ’ದಲ್ಲಿ ಇದು ಒಂದು ಪ್ರಮುಖ ಅಂಶವಾಗುತ್ತದೆ ಎಂದು ನಾನು ಭಾವಿಸುತ್ತೇನೆ, ಎಂದು ಪ್ರಧಾನಮಂತ್ರಿ ತಿಳಿಸಿದರು.

ಸಾಂಕ್ರಾಮಿಕದಿಂದ ಹೇಗೆ ಬದಲಾವಣೆ ಆಯಿತು, ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಎಷ್ಟು ಸಹಜವಾಯಿತು ಎಂಬುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. 2300 ಕೋಟಿ ಹಿಟ್ಸ್ ದೀಕ್ಷಾ ಪೋರ್ಟಲ್ ಗೆ ಬಂದಿರುವುದು ದೀಕ್ಷಾ ಮತ್ತು ಸ್ವಯಂನಂತಹ ಪೋರ್ಟಲ್ ಗಳ ಉಪಯುಕ್ತತೆಗೆ ಸಾಕ್ಷಿಯಾಗಿದೆ ಎಂದರು. 

ಪ್ರಧಾನಮಂತ್ರಿಯವರು ಸಣ್ಣ ಪಟ್ಟಣಗಳ ಯುವಜನರ ಪ್ರಯತ್ನವನ್ನು ಉಲ್ಲೇಖಿಸಿದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅಂತಹ ಸಣ್ಣ ಪಟ್ಟಣಗಳ ಯುವಜನರು ತೋರಿದ ಶ್ರೇಷ್ಠ ಪ್ರದರ್ಶನವನ್ನು ಉಲ್ಲೇಖಿಸಿದರು. ರೋಬೋಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ನವೋದ್ಯಮ ಮತ್ತು ಕೈಗಾರಿಕೆಗಳು 4.0ರಲ್ಲಿ ಯುವ ಜನರ ನಾಯಕತ್ವವನ್ನು ಶ್ಲಾಘಿಸಿದರು. ತಮ್ಮ ಕನಸುಗಳಿಗೆ ಸೂಕ್ತವಾದ ಪರಿಸರ ದೊರೆತರೆ ಯುವ ಪೀಳಿಗೆ ಅವರ ಪ್ರಗತಿಗೆ ಮಿತಿ ಎಂಬುದೇ ಇರುವುದಿಲ್ಲ ಎಂದರು. ಇಂದಿನ ಯುವಜನರು ತಮ್ಮದೇ ರೀತಿಯಲ್ಲಿ ಅವರ ವಿಶ್ವವನ್ನು ಮತ್ತು ವ್ಯವಸ್ಥೆಯನ್ನು ನಿರ್ಧರಿಸಲು ಬಯಸುತ್ತಾರೆ ಎಂದು ಅವರು ಪ್ರತಿಪಾದಿಸಿದರು. ಅವರಿಗೆ ನಿರ್ಬಂಧಗಳು ಮತ್ತು ಸಂಕೋಲೆಗಳಿಂದ ಮುಕ್ತವಾದ ಅವಕಾಶ ಮತ್ತು ಸ್ವಾತಂತ್ರ್ಯ ಬೇಕು ಎಂದರು. ನೂತನ ಶಿಕ್ಷಣ ನೀತಿ, ನಮ್ಮ ಯುವಜನರೊಂದಿಗೆ ಮತ್ತು ಅವರ ಆಶೋತ್ತರಗಳೊಂದಿಗೆ ದೇಶವು ಸಂಪೂರ್ಣವಾಗಿರುತ್ತದೆ ಎಂಬ ಭರವಸೆಯನ್ನು ನೀಡುತ್ತದೆ. ಇಂದು ಉದ್ಘಾಟಿಸಲಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಾರ್ಯಕ್ರಮಗಳು, ವಿದ್ಯಾರ್ಥಿಗಳನ್ನು ಭವಿಷ್ಯ ಕೇಂದ್ರಿತವಾಗಿಸಿ, ಆರ್ಟಿಫಿಷಿಯಲ್ ಇಂಟಲಿಜನ್ಸ್ ಚಾಲಿತ ಆರ್ಥಿಕತೆಗೆ ದಾರಿ ಮಾಡಿಕೊಡುತ್ತದೆ ಎಂದರು. ಅದೇ ರೀತಿ, ಇಡೀ ದೇಶಕ್ಕೆ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪ (ಎನ್.ಡಿ.ಇ.ಎ.ಆರ್.) ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ (ಎನ್.ಇ.ಟಿ.ಎಫ್.) ಡಿಜಿಟಲ್ ಮತ್ತು ತಂತ್ರಜ್ಞಾನದ ಚೌಕಟ್ಟು ಒದಗಿಸುವಲ್ಲಿ ಬಹು ದೂರ ಸಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ನೂತನ ಶಿಕ್ಷಣ ನೀತಿಯಲ್ಲಿ ಒತ್ತಡವಿಲ್ಲ ಮತ್ತು ಮುಕ್ತತೆ ಇದೆ ಎಂದು ಒತ್ತಿ ಹೇಳಿದರು. ನೀತಿಯ ಮಟ್ಟದಲ್ಲಿ ಮುಕ್ತತೆ ಇದ್ದರೆ, ಮುಕ್ತತೆ ಸದಾ ವಿದ್ಯಾರ್ಥಿಗಳಿಗೆ ಲಭ್ಯವಿರುವ ಆಯ್ಕೆಗಳಲ್ಲಿ ಗೋಚರಿಸುತ್ತದೆ ಎಂದರು. ಬಹು ಪ್ರವೇಶ ಮತ್ತು ನಿರ್ಗಮನವು ವಿದ್ಯಾರ್ಥಿಗಳಿಗೆ ಒಂದು ಕೋರ್ಸ್ ಮತ್ತು ಒಂದು ತರಗತಿಯಲ್ಲೇ ಇರುವ ನಿರ್ಬಂಧದಿಂದ ಮುಕ್ತಗೊಳಿಸುತ್ತದೆ. ಅದೇ ರೀತಿ, ಆಧುನಿಕ ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ಬ್ಯಾಂಕ್ ಕ್ರೆಡಿಟ್ ವ್ಯವಸ್ಥೆ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದರು. ಇದು ವಿದ್ಯಾರ್ಥಿಗಳಿಗೆ ಶಾಖೆ ಮತ್ತು ವಿಷಯ ಆಯ್ಕೆಯಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಸಫಲ್ – ವಿನ್ಯಾಸಿತ ಮೌಲ್ಯಮಾಪನ ಮತ್ತು ಕಲಿಕೆಯ ಮಟ್ಟದ ವಿಶ್ಲೇಷಣೆ ಪರೀಕ್ಷೆಯ ಭಯವನ್ನು ಹೋಗಲಾಡಿಸುತ್ತದೆ ಎಂದ ಪ್ರಧಾನಮಂತ್ರಿಯವರು, ಈ ಹೊಸ ಕಾರ್ಯಕ್ರಮಗಳಿಗೆ ಭಾರತದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯವಿದೆ ಎಂದರು. 

ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸ್ಥಳೀಯ ಭಾಷಾ ಮಾಧ್ಯಮದ ಮಹತ್ವ ಪ್ರತಿಪಾದಿಸಿದರು. 8 ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳು 5 ಭಾರತೀಯ ಭಾಷೆಗಳಲ್ಲಿ ಅಂದರೆ ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬಾಂಗ್ಲಾದಲ್ಲಿ ಶಿಕ್ಷಣ ನೀಡಲು ಆರಂಭಿಸಿವೆ ಎಂದರು. 

11 ಭಾಷೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳನ್ನು ಭಾಷಾಂತರಿಸಲು ಒಂದು ಸಾಧನ ಅಭಿವೃದ್ಧಿಪಡಿಸಲಾಗಿದೆ. ಇದು ಮಾತೃಭಾಷಾ ಮಾಧ್ಯಮದಲ್ಲಿ ಕಲಿಯಲು ಒತ್ತು ನೀಡಿ, ಬಡವರು, ಗ್ರಾಮೀಣ ಮತ್ತು ಬುಡಕಟ್ಟು ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬಲಿದೆ ಎಂದರು. ಪ್ರಾಥಮಿಕ ಶಿಕ್ಷಣದಲ್ಲೂ ಮಾತೃಭಾಷೆಯನ್ನು ಉತ್ತೇಜಿಸಲಾಗುತ್ತಿದೆ ಮತ್ತು ಇಂದು ಪ್ರಾರಂಭಿಸಲಾದ ವಿದ್ಯಾ ಪ್ರವೇಶೇ ಕಾರ್ಯಕ್ರಮ ಇದರಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ಭಾರತೀಯ ಸಂಜ್ಞಾ ಭಾಷೆಗೆ ಮೊದಲ ಬಾರಿಗೆ ಭಾಷಾ ವಿಷಯದ ಸ್ಥಾನಮಾನ ನೀಡಲಾಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಇದನ್ನು ಭಾಷೆಯಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಅವರ ಶಿಕ್ಷಣಕ್ಕೆ ಸಂಜ್ಞಾ ಭಾಷೆ ಅಗತ್ಯವಿರುವ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದು ಭಾರತೀಯ ಸಂಜ್ಞಾ ಭಾಷೆಗೆ ಉತ್ತೇಜನ ನೀಡಲಿದ್ದು, ವಿಕಲಾಂಗಚೇತನರಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಶಿಕ್ಷಕರ ಮಹತ್ವದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸೂತ್ರೀಕರಣ ಹಂತದಿಂದ ಅನುಷ್ಠಾನದವರೆಗೆ ಶಿಕ್ಷಕರು ಹೊಸ ಶಿಕ್ಷಣ ನೀತಿಯ ಸಕ್ರಿಯ ಭಾಗವಾಗಿದ್ದಾರೆ ಎಂದು ತಿಳಿಸಿದರು. ಇಂದು ಬಿಡುಗಡೆಯಾದ ನಿಷ್ಠಾ 2.0, ಶಿಕ್ಷಕರಿಗೆ ಅವರ ಅಗತ್ಯಗಳಿಗೆ ತಕ್ಕಂತೆ ತರಬೇತಿಯನ್ನು ನೀಡುತ್ತದೆ ಮತ್ತು ಅವರು ತಮ್ಮ ಸಲಹೆಗಳನ್ನು ಇಲಾಖೆಗೆ ನೀಡಲು ಸಾಧ್ಯವಾಗುತ್ತದೆ ಎಂದರು.

ಪ್ರಧಾನಮಂತ್ರಿಯವರು ಪಠ್ಯ ಚಟುವಟಿಕೆಯ ಬ್ಯಾಂಕ್ ಕ್ರೆಡಿಟ್ ಗೆ ಚಾಲನೆ ನೀಡಿದರು. ಇದು ಉನ್ನತ ಶಿಕ್ಷಣದಲ್ಲಿ ಬಹು ಪ್ರವೇಶ ಮತ್ತು ನಿರ್ಗಮನದ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ; ಪ್ರಥಮ ವರ್ಷದ ಎಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭಾಷೆಗಳು ಮತ್ತು ಮಾರ್ಗಸೂಚಿಗಳು ಉನ್ನತ ಶಿಕ್ಷಣದಲ್ಲಿ ಅಂತರರಾಷ್ಟ್ರೀಕರಣ ಮಾಡಲಿವೆ. ಇಂದು ಚಾಲನೆ ನೀಡಲಾದ ಉಪಕ್ರಮಗಳಲ್ಲಿ ವಿದ್ಯಾ ಪ್ರವೇಶ, 1ನೇ ಶ್ರೇಣಿ ವಿದ್ಯಾರ್ಥಿಗಳಿಗೆ, ಮೂರು ತಿಂಗಳ ಆಟ ಆಧಾರಿತ ಶಾಲಾ ಸಿದ್ಧತಾ ವಿಧಾನ; ಪ್ರೌಢ ಹಂತದಲ್ಲಿ ಒಂದು ವಿಷಯವಾಗಿ ಭಾರತೀಯ ಸಂಜ್ಞಾ ಭಾಷೆ; ನಿಷ್ಠಾ 2.0, ಶಿಕ್ಷಕರ ತರಬೇತಿಗೆ ವಿನ್ಯಾಸಿತ ಎನ್.ಸಿ.ಇ.ಆರ್.ಟಿ.ಯ ಸಮಗ್ರ ಕಾರ್ಯಕ್ರಮ; ಸಫಲ್ (ವಿನ್ಯಾಸಿತ ಮೌಲ್ಯಮಾಪನ ಮತ್ತು ಶಿಕ್ಷಣ ಮಟ್ಟದ ವಿಶ್ಲೇಷಣೆ), ಸಿ.ಬಿ.ಎಸ್.ಇ. ಶಾಲೆಗಳ ಗ್ರೇಡ್ 3,5 ಮತ್ತು 8ರಲ್ಲಿ ಸ್ಪರ್ಧಾತ್ಮಕತೆ ಆಧಾರಿತ ಮೌಲ್ಯಮಾಪನ ಚೌಕಟ್ಟು, ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಗೆ ಸಮರ್ಪಿತವಾದ ಅಂತರ್ಜಾಲ ತಾಣವೂ ಸೇರಿದೆ. ಈ ಕಾರ್ಯಕ್ರಮವು ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪ (ಎನ್.ಡಿ.ಇ.ಎ.ಆರ್.) ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ (ಎನ್.ಇ.ಟಿ.ಎಫ್)ಗಳ ಆರಂಭಕ್ಕೂ ಸಾಕ್ಷಿಯಾಯಿತು. 

***


(Release ID: 1740508) Visitor Counter : 790