ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ನವದೆಹಲಿಯಲ್ಲಿ ನಡೆದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ನೇರ ವೀಕ್ಷಣೆ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್, ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಮತ್ತು ಒಲಿಂಪಿಕ್ ದಿಗ್ಗಜರಿಂದ ಭಾರತದ ತಂಡಕ್ಕಾಗಿ ಹರ್ಷೋದ್ಗಾರ
Posted On:
23 JUL 2021 6:45PM by PIB Bengaluru
ಪ್ರಮುಖಾಂಶಗಳು:
ಇಂದು ದೇಶದ ಸಣ್ಣ ಪಟ್ಟಣಗಳಿಂದ ಹೊರಹೊಮ್ಮುತ್ತಿರುವ ಪ್ರತಿಭೆಗಳೂ ಸಹ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಗತ್ಯ ಬೆಂಬಲ, ಪೋಷಣೆಯನ್ನು ಪಡೆಯುತ್ತಿದ್ದಾರೆ. ಏಕೆಂದರೆ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಲು ಅತ್ಯುತ್ತಮ ಸೌಲಭ್ಯಗಳು ಹಾಗೂ ವೃತ್ತಿಪರ ತರಬೇತಿಯನ್ನು ಅವರು ಪಡೆಯುತ್ತಿದ್ದಾರೆ: ಶ್ರೀ ಅನುರಾಗ್ ಠಾಕೂರ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವಾಗಿಸಲು ಅಡಿಪಾಯ ಹಾಕಲಾಗಿದೆ: ಶ್ರೀ ಅನುರಾಗ್ ಠಾಕೂರ್
ನಾಲ್ಕು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್ ಮತ್ತು ಭಾರತದ ಮೊದಲ ಮಹಿಳಾ ಪದಕ ವಿಜೇತೆ ಶ್ರೀಮತಿ ಕರ್ಣಂ ಮಲ್ಲೇಶ್ವರಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಹಾಗೂ ಒಲಿಂಪಿಕ್ ದಿಗ್ಗಜರು ಇಂದು ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿದ್ದ ಒಲಿಂಪಿಕ್ ಉದ್ಘಾಟನಾ ಸಮಾರಂಭದ ನೇರ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾರತದ ಪರ ಹರ್ಷೋದ್ಗಾರ ಮೊಳಗಿಸಿದರು.
ರೈಲ್ವೆ ಖಾತೆ ಸಹಾಯಕ ಸಚಿವರಾದ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಮತ್ತು ಶ್ರೀಮತಿ ದರ್ಶನಾ ಜಾರ್ದೋಶ್; ನಾಲ್ಕು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್, ಭಾರತದ ಮೊದಲ ಮಹಿಳಾ ಒಲಿಂಪಿಕ್ ಪದಕ ವಿಜೇತೆ ಶ್ರೀಮತಿ ಕರ್ಣಂ ಮಲ್ಲೇಶ್ವರಿ; ಬಾಕ್ಸರ್ ಅಖಿಲ್ ಕುಮಾರ್ ಮತ್ತು ಕಾರ್ಯದರ್ಶಿ (ಕ್ರೀಡಾ) ಶ್ರೀ ರವಿ ಮಿತ್ತಲ್ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರೂಪಿಸಿದ ʻಚೀರ್‌ಫಾರ್‌ಇಂಡಿಯಾʼ (#Cheer4India) ಅಭಿಯಾನದ ಭಾಗವಾಗಿ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಾರತೀಯ ತಂಡಕ್ಕೆ ಸ್ಫೂರ್ತಿ ನೀಡಲು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಮತ್ತು ಕ್ರೀಡಾಪಟುಗಳು ದೇಶದ ವಿವಿಧ ಭಾಗಗಳಿಂದ ವರ್ಚ್ಯುಯಲ್ ಆಗಿ ಪಾಲ್ಗೊಂಡರು. ಮಧ್ಯಪ್ರದೇಶದ ಕ್ರೀಡಾ ಸಚಿವರಾದ ಶ್ರೀಮತಿ ಯಶೋಧರಾ ರಾಜೆ ಸಿಂಧಿಯಾ; ಹಾಕಿ ಒಲಿಂಪಿಯನ್ ಹಾಗೂ ಹರಿಯಾಣದ ಕ್ರೀಡಾ ಸಚಿವ ಶ್ರೀ ಸಂದೀಪ್ ಸಿಂಗ್ (ಹರಿಯಾಣ) ಮತ್ತು ಒಡಿಶಾದ ಕ್ರೀಡಾ ಸಚಿವ ಶ್ರೀ ತುಷಾರ್ ಕಾಂತಿ ಬೆಹೆರಾ ಅವರು ಸಹ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, “ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಹಾದಿಯು ಕ್ರೀಡಾಪಟುಗಳು ಮತ್ತು ಸಂಘಟಕರ ಪಾಲಿಗೆ ಥೇಟ್ ಒಲಿಂಪಿಕ್ ಕ್ರೀಡಾಕೂಟಗಳಂತೆಯೇ ಹಲವು ರೀತಿಯ ಪರೀಕ್ಷೆಗಳು ಹಾಗೂ ಜಯಗಳಿಂದ ಕೂಡಿದ ಪ್ರಯಾಣವಾಗಿತ್ತು,ʼʼ ಎಂದು ಹೇಳಿದರು!
“ನಾವು ಕ್ರೀಡಾಪಟುಗಳು ಮತ್ತು ಅವರ ಹಿತಾಸಕ್ತಿಗಳನ್ನು ನೀತಿ ಯೋಜನೆಯ ಕೇಂದ್ರಬಿಂದುವಾಗಿ ಇರಿಸಿದ್ದೇವೆ. ಕಳೆದ ಏಳು ವರ್ಷಗಳಲ್ಲಿ ನಾವು ಭಾರತದ ಕ್ರೀಡಾ ಮೂಲಸೌಕರ್ಯವನ್ನು ನವೀಕರಿಸಿದ್ದೇವೆ ಮತ್ತು ವಿಸ್ತರಿಸಿದ್ದೇವೆ. ಇಂದು ಸಣ್ಣ ಪಟ್ಟಣಗಳಿಂದ ಹೊರಹೊಮ್ಮುತ್ತಿರುವ ಪ್ರತಿಭೆಗಳು ಎಲ್ಲರ ಗಮನ ಸೆಳೆಯುತ್ತಿದಾರೆ ಮತ್ತು ಪೋಷಣೆ ಪಡೆಯುತ್ತಿದ್ದಾರೆ. ಏಕೆಂದರೆ ಅವರು ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಲು ಉತ್ತಮ ಸೌಲಭ್ಯಗಳು ಮತ್ತು ವೃತ್ತಿಪರ ತರಬೇತಿಯನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವು ಹೊಸ ದೃಷ್ಟಿಕೋನವನ್ನು ಹೊರ ತಂದಿದ್ದೇವೆ. ಭಾರತವನ್ನು ಕ್ರೀಡಾ ಶಕ್ತಿಕೇಂದ್ರವಾಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ಅಡಿಪಾಯ ಹಾಕಲಾಗಿದೆ,ʼʼ ಎಂದು ಶ್ರೀ ಠಾಕೂರ್ ಅವರು ಹೇಳಿದರು.
ಮುಂದುವರಿದು, “130 ಕೋಟಿ ಭಾರತೀಯರ ಆಶಯಗಳು 127 ಒಲಿಂಪಿಕ್ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುತ್ತವೆ. ಕ್ರೀಡೆಯ ಶ್ರೇಷ್ಠ ವೇದಿಕೆಯಲ್ಲಿ ಅವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ. ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ತಂಡವನ್ನು ನಾವು ಇಂದು ಹೀಗೆ ಹುರಿದುಂಬಿಸುತ್ತಿರುವುದು ಬಹಳ ಬಹಳ ಹೆಮ್ಮೆಯ ಕ್ಷಣವಾಗಿದೆ,ʼʼ ಎಂದರು.
ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಅವರು ಮಾತನಾಡಿ, ಒರಿಸ್ಸಾ, ಬಂಗಾಳ ಅಥವಾ ಮಣಿಪುರ ಹೀಗೆ ದೇಶದ ಪೂರ್ವ ಭಾಗವು ಮೇರಿ ಕೋಮ್ ಮತ್ತು ಹಿಮಾ ದಾಸ್ ಅವರಂತಹ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಹೇಳಿದರು.
ಸಮಾಲೋಚನೆಯ ವೇಳೆ, ನಾಲ್ಕು ಬಾರಿ ಒಲಿಂಪಿಕ್ಸ್ ಪದಕ ವಿಜೇತರಾದ ಯೋಗೇಶ್ವರ್ ದತ್ ಅವರು ಮಾತನಾಡಿ ಕ್ರೀಡಾಪಟುಗಳಲ್ಲಿರುವ ಪದಕಗಳ ಹಂಬಲವು ಭಾರತವನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು. ಒಲಿಂಪಿಕ್ಸ್‌ನಲ್ಲಿ ತಮ್ಮ ಗೆಲುವಿನ ಯಾನವನ್ನು ಸ್ಮರಿಸಿದ ಭಾರತದ ಚೊಚ್ಚಲ ಮಹಿಳಾ ಪದಕ ವಿಜೇತೆ ಶ್ರೀಮತಿ ಕರ್ಣಂ ಮಲ್ಲೇಶ್ವರಿ ಅವರು ತಮ್ಮನ್ನು ಅಂದಿನ ಪ್ರಧಾನಿ "ಡಾಟರ್ ಆಫ್ ಇಂಡಿಯಾ" ಎಂದು ಕರೆದಾಗ ಅವರ ಕಣ್ಣುಗಳಲ್ಲಿ ನೀರು ತುಂಬಿದ ಭಾವುಕ ಕ್ಷಣವನ್ನು ಹಂಚಿಕೊಂಡರು. ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪುಲ್ಲೆಲ ಗೋಪಿಚಂದ್ ಅವರು ಮಾತನಾಡಿ, “ದೇಶದ ಕ್ರೀಡಾ ಪರಿಸರ ವ್ಯವಸ್ಥೆ ಮತ್ತು ಕ್ರೀಡೆಯ ಅಭಿವೃದ್ಧಿ ನನ್ನಲ್ಲಿ ನಿಜವಾಗಿಯೂ ಹುರುಪು ತುಂಬಿದೆ. ನಾನು ಕ್ರೀಡೆಯಲ್ಲಿ ವಿಶಿಷ್ಟ ಪರಿವರ್ತನೆ ಮತ್ತು ಜನರ ಬೆಂಬಲವನ್ನು ಕಂಡಿದ್ದೇನೆ,ʼʼ ಎಂದು ಹೇಳಿದರು.
ರೈಲ್ವೆ ಖಾತೆಯ ಸಹಾಯಕ ಸಚಿವರಾದ ಶ್ರೀ ದರ್ಶನಾ ಜರ್ದೋಶ್ ಅವರು ಮಾತನಾಡಿ “ರೈಲ್ವೆಯ 25 ಪ್ರತಿನಿಧಿಗಳಲ್ಲಿ 21 ಮಂದಿ ಮಹಿಳೆಯರಿದ್ದಾರೆ ಎಂಬ ಅಂಶವನ್ನು ಎತ್ತಿ ಹೇಳಿದರು. ಭಾರತ ಪದಕಗಳನ್ನು ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. “ಕ್ರೀಡಾಪಟುಗಳ ತರಬೇತಿಗಾಗಿ ಭಾರತೀಯ ರೈಲ್ವೆ ಉತ್ತಮ ತರಬೇತುದಾರರನ್ನು ಹೊಂದಿದೆ,” ಎಂದು ರೈಲ್ವೆ ಖಾತೆಯ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ದಾನ್ವೆ ಹೇಳಿದರು. “ಮುಂದಿನ ದಿನಗಳಲ್ಲಿ ʻರೈಲ್ವೆಯ ಉತ್ಕೃಷ್ಟತೆಯ ಕೇಂದ್ರʼಗಳನ್ನು ಅಭಿವೃದ್ಧಿಪಡಿಸಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಇದು ಆಟಗಾರರಿಗೆ ವಿಶ್ವದರ್ಜೆಯ ತರಬೇತಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತದೆ,ʼʼ ಎಂದರು. “ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಹರಿಯಾಣ ರಾಜ್ಯದವರು ಮತ್ತು ಅವರು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತರುತ್ತಾರೆ,ʼʼ ಎಂದು ಹರಿಯಾಣ ಕ್ರೀಡಾ ಸಚಿವ ಶ್ರೀ ಸಂದೀಪ್ ಸಿಂಗ್ ಹೇಳಿದರು. “ನಾವು ನಮ್ಮ ಕ್ರೀಡಾಪಟುಗಳಿಗೆ ಸರಿಯಾದ ತರಬೇತಿ, ಸೌಲಭ್ಯಗಳು ಮತ್ತು ತರಬೇತಿಯನ್ನು ಒದಗಿಸಿದರೆ, ಅವರ ಪದಕಗಳನ್ನು ಗೆಲ್ಲುವ ಸಾಧ್ಯತೆಗಳು ತುಂಬಾ ಉಜ್ವಲವಾಗುತ್ತವೆ,ʼʼ ಎಂದು ಮಧ್ಯ ಪ್ರದೇಶದ ಕ್ರೀಡಾ ಸಚಿವೆ ಶ್ರೀಮತಿ ಯಶೋಧಾ ರಾಜೆ ಸಿಂಧಿಯಾ ಹೇಳಿದರು.
ʻಸೋನಿ ಸ್ಟುಡಿಯೋʼ ಜೊತೆಗಿನ ಸಂವಾದದ ವೇಳೆ ಶ್ರೀ ಅನುರಾಗ್ ಠಾಕೂರ್ ಅವರು, “ನಾವು ಮೂಲಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ಮತ್ತು ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ, ʻಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ʼ ಮತ್ತು ʻಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ʼನಂತಹ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ರೀಡೆಯ ಅಭಿವೃದ್ಧಿಗೆ ಗಮನ ಹರಿಸಲು ಪ್ರಯತ್ನಿಸುತ್ತಿದ್ದೇವೆ,ʼʼ ಎಂದು ಹೇಳಿದರು. “ನಾವು ದೇಶದಲ್ಲಿ ದೊಡ್ಡ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ಪ್ರಯತ್ನಿಸುತ್ತೇವೆ. ಉತ್ತಮ ಗುಣಮಟ್ಟದ ತರಬೇತಿದಾರರನ್ನು ಸಿದ್ಧಪಡಿಸುವ ಕಡೆಯೂ ಗಮನ ಹರಿಸಲಾಗುವುದು. ಅಂತಿಮವಾಗಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶಗಳನ್ನು ನೀಡುವುದರಿಂದ ಕ್ರೀಡೆಗಳನ್ನು ವೃತ್ತಿಯಾಗಿ ಅಳವಡಿಸಿಕೊಳ್ಳಲು ವರಿಗೆ ಪ್ರೋತ್ಸಾಹ ದೊರೆಯುತ್ತದೆ,ʼʼ ಎಂದರು.
ನಂತರ ಗಣ್ಯರು ಕಾರ್ಯಕ್ರಮದ ಸ್ಥಳದಲ್ಲಿ ಒಲಿಂಪಿಕ್ ಉದ್ಘಾಟನಾ ಸಮಾರಂಭದ ನೇರ ಪ್ರದರ್ಶನವನ್ನು ವೀಕ್ಷಿಸಿದರು, ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಥಸಂಚಲನದ ವೇಳೆ ಭಾರತೀಯ ಪಡೆಗೆ ದೊಡ್ಡ ಹರ್ಷೋದ್ಗಾರ ಮೊಳಗಿಸಲಾಯಿತು.
ಈ ಬಾರಿಯ ಒಲಿಂಪಿಕ್ಸ್‌ಗೆ ಭಾರತವು 18 ವಿಭಾಗಗಳಲ್ಲಿ 127 ಕ್ರೀಡಾಪಟುಗಳ ಅತಿದೊಡ್ಡ ತಂಡವನ್ನು ಕಳುಹಿಸಿದೆ. ಇದರಲ್ಲಿ 56 ಮಹಿಳೆಯರಾಗಿದ್ದು, ಮಹಿಳಾ ಕ್ರೀಡಾಪಟುಗಳಿಗೆ ಅತ್ಯುನ್ನತ ಪ್ರಾತಿನಿಧ್ಯವೂ ಈ ಬಾರಿ ಸಿಕ್ಕಿದೆ.
***
(Release ID: 1738548)
Visitor Counter : 200