ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಪಶುಸಂಗೋಪನೆ ಮತ್ತು ಹೈನುಗಾರಿಕೆ ಯೋಜನೆಗಳ ವಿವಿಧ ಘಟಕಗಳ ಪರಿಷ್ಕರಣೆ ಮತ್ತು ಮರುಜೋಡಣೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ & ಪಶುಸಂಗೋಪನಾ ವಲಯಕ್ಕೆ 54,618 ಕೋಟಿ ರೂ.ಹೂಡಿಕೆ ಸೆಳೆಯುವ ವಿಶೇಷ ಜಾನುವಾರು ಪ್ಯಾಕೇಜ್ ಗೆ ಸಂಪುಟದ ಒಪ್ಪಿಗೆ

Posted On: 14 JUL 2021 4:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪಶುಸಂಗೋಪನಾ ವಲಯಕ್ಕೆ ವಿಶೇಷ ಪ್ಯಾಕೇಜ್ ಜಾರಿ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. 2021-22ರಿಂದ ಮುಂದಿನ 5 ವರ್ಷಗಳ ಅವಧಿಗೆ ಅನ್ವಯವಾಗುವಂತೆ, ಭಾರತದ ಸರ್ಕಾರದ ಜಾನುವಾರು ವಲಯದ ಯೋಜನೆಗಳ ವಿವಿಧ ಘಟಕಗಳನ್ನು ಪರಿಷ್ಕರಿಸುವ ಮತ್ತು ಮರುಜೋಡಣೆ ಮಾಡುವ ನಾನಾ ಚಟುವಟಿಕೆಗಳು ಈ ವಿಶೇಷ ಪ್ಯಾಕೇಜ್|ನಲ್ಲಿ ಒಳಗೊಂಡಿದ್ದು, ಹಂತ ಹಂತವಾಗಿ ಜಾರಿಯಾಗಲಿವೆ. ಜಾನುವಾರು ಕ್ಷೇತ್ರದ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಆ ಮೂಲಕ ಪಶುಸಂಗೋಪನೆ ಕ್ಷೇತ್ರದಲ್ಲಿ ತೊಡಗಿರುವ 10 ಕೋಟಿ ರೈತರಿಗೆ ಹೆಚ್ಚು ಆದಾಯ ಸಿಗುವಂತೆ ಮಾಡುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ವಿಶೇಷ ಪ್ಯಾಕೇಜ್ ಗೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ 9,800 ಕೋಟಿ ರೂ. ಆರ್ಥಿಕ ನೆರವಿನ ಬೆಂಬಲ ಒದಗಿಸಲಿದೆ. ಇದರೊಂದಿಗೆ ಪಶುಸಂಗೋಪನಾ ವಲಯಕ್ಕೆ ಐದು ವರ್ಷಗಳ ಅವಧಿಯಲ್ಲಿ 54,618 ಕೋಟಿ ರೂ. ಹೂಡಿಕೆ ಹರಿದುಬರಲಿದೆ.

ಹಣಕಾಸು ಹೊಂದಾಣಿಕೆ ಹೇಗೆ?

ವಿಶೇಷ ಜಾನುವಾರು ಪ್ಯಾಕೇಜ್|ಗೆ ಕೇಂದ್ರ ಸರ್ಕಾರ 2021-22ರಿಂದ ಅನ್ವಯವಾಗುವಂತೆ ಮುಂದಿನ ಐದು ವರ್ಷಗಳ ಕಾಲದವರೆಗೆ 9,800 ಕೋಟಿ ರೂ. ಹಣಕಾಸು ನೆರವು ನೀಡಲಿದೆ. ರಾಜ್ಯ ಸರ್ಕಾರಗಳ ಪಾಲು, ಸಹಕಾರಿ ಸಂಸ್ಥೆಗಳ ಪಾಲು, ಹಣಕಾಸು ಸಂಸ್ಥೆಗಳ ಪಾಲು, ಬಾಹ್ಯ ಧನಸಹಾಯ ಸಂಸ್ಥೆಗಳು ಮತ್ತು ಇತರೆ ಪಾಲುದಾರರ ನೆರವು ಸೇರಿದಂತೆ ಒಟ್ಟು 54,618 ಕೋಟಿ ಹೂಡಿಕೆ ಹರಿದುಬರಲಿದೆ.

ಯೋಜನೆಯ ವಿವರ:

ಪಶುಸಂಗೋಪನಾ ಇಲಾಖೆಯಲ್ಲಿರುವ ಎಲ್ಲಾ ಯೋಜನೆಗಳನ್ನು ಪ್ರಮುಖ 3 ವಿಸ್ತೃತ ಅಭಿವೃದ್ಧಿ ಕಾರ್ಯಕ್ರಮಗಳಾಗಿ ವಿಲೀನಗೊಳಿಸಲಾಗಿದೆ. ಅವೆಂದರೆ, ರಾಷ್ಟ್ರೀಯ ಗೋಕುಲ್ ಮಿಷನ್, ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ(ಎನ್ ಪಿಡಿಡಿ), ರಾಷ್ಟ್ರೀಯ ಜಾನುವಾರು ಮಿಷನ್(ಎನ್ಎಲ್ಎಂ) ಹಾಗೂ ಜಾನುವಾರು ಜನಗಣತಿ ಮತ್ತು ಸಂಯೋಜಿತ ಮಾದರಿ ಪರೀಕ್ಷೆ (ಎಲ್ ಸಿ ಅಂಡ್ ಐಎಸ್ಎಸ್) ಎಂಬ ಹೆಸರಿನಲ್ಲಿ ಉಪ-ಯೋಜನೆಗಳಾಗಿ ಪರಿವರ್ತಿಸಲಾಗಿದೆ. ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಎಂದು ಮರುನಾಮಕರಣ ಮಾಡಲಾಗಿದೆ. ಈಗಿರುವ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಮತ್ತು ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎನ್‌ಎಡಿಸಿಪಿ) ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆಯನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಮತ್ತು ಡೇರಿ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆಗಳನ್ನು ವಿಲೀನಗೊಳಿಸಲಾಗಿದೆ. ಈಗಾಗಲೇ ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಾಲಿ ಡೇರಿ ಸಹಕಾರಿ ಸಂಸ್ಥೆಗಳು ಮತ್ತು ಹೈನು ಉತ್ಪಾದಕರ ಸಹಕಾರಿ ಸಂಸ್ಥೆಗಳನ್ನು ಮೂರನೇ ವಿಭಾಗದ ರಾಷ್ಟ್ರೀಯ ಜಾನುವಾರು ಮಿಷನ್(ಎನ್ಎಲ್ಎಂ) ಹಾಗೂ ಜಾನುವಾರು ಜನಗಣತಿ ಮತ್ತು ಸಂಯೋಜಿತ ಮಾದರಿ ಪರೀಕ್ಷೆ (ಎಲ್ ಸಿ ಅಂಡ್ ಐಎಸ್ಎಸ್) ಯೋಜನೆಗೆ ಒಳಪಡಿಸಲಾಗಿದೆ.

ಪರಿಣಾಮ:

ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯು ದೇಶೀಯ ಗೋತಳಿಗಳನ್ನು ಅಭಿವೃದ್ಧಿಪಡಿಸಿ, ಸಂರಕ್ಷಿಸಲಿದೆ. ಗ್ರಾಮೀಣ ಬಡ ಹೈನುಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಇದು ಅಪಾರ ಕೊಡುಗೆ ನೀಡಲಿದೆ. ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ ಅಥವಾ ಯೋಜನೆಯು ದೇಶಾದ್ಯಂತ ಒಟ್ಟು 8,900 ಬೃಹತ್ ಹಾಲಿನ ಕೂಲರ್|ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ದೇಶದ ಸುಮಾರು 8 ಲಕ್ಷಕ್ಕಿಂತ ಹೆಚ್ಚಿನ ಹಾಲು ಉತ್ಪಾದಕರಿಗೆ ಪ್ರಯೋಜನ ಒದಗಿಸುವುದು ಇದರ ಉದ್ದೇಶವಾಗಿದೆ. ಎಲ್ಲಕ್ಕಿಂತ ದಿನನಿತ್ಯ ಹೆಚ್ಚುವರಿಯಾಗಿ 20 ಲಕ್ಷ ಲೀಟರ್ ಹಾಲು ಖರೀದಿಸಿ, ತಣ್ಣಗಿಡಲು ಸಾಧ್ಯವಾಗಲಿದೆ. ರಾಷ್ಟ್ರೀಯ ಡೇರಿ ಅಭಿವೃದ್ಧಿ ಯೋಜನೆ ಅಡಿ, ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯಿಂದ ಹಣಕಾಸು ನೆರವು ಸಿಗಲಿದ್ದು, ಅದನ್ನು ಬಳಸಿ ದೇಶದ 4,500 ಗ್ರಾಮಗಳಲ್ಲಿ ಹೈನುಗಾರಿಕೆಯ ಹೊಸ ಮೂಲಸೌಕರ್ಯ ಅಭಿವೃದ್ಧಿಪಡಿಸಲು, ಬಲಪಡಿಸಲು  ಬಳಸಲಾಗುತ್ತದೆ.

 

****

 



(Release ID: 1735726) Visitor Counter : 387