ಸಂಪುಟ
ನ್ಯಾಯಾಂಗದ ಮೂಲಸೌಕರ್ಯ ಅಭಿವೃದ್ಧಿ ಸೌಲಭ್ಯಗಳ ಕುರಿತ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.)ಯನ್ನು ಮತ್ತೆ 5 ವರ್ಷ ಮುಂದುವರಿಸಲು ಸಂಪುಟದ ಅನುಮೋದನೆ
ಒಟ್ಟು ವೆಚ್ಚ 9000 ಕೋಟಿ ರೂ., ಈ ಪೈಕಿ ಕೇಂದ್ರದ ಪಾಲು 5357 ಕೋಟಿ ರೂ.
ನ್ಯಾಯಾಂಗ ಸುಧಾರಣೆ ಮತ್ತು ನ್ಯಾಯ ದಾನ ಕುರಿತ ರಾಷ್ಟ್ರೀಯ ಅಭಿಯಾನದ ಮೂಲಕ ಅಭಿಯಾನದೋಪಾದಿಯಲ್ಲಿ ಗ್ರಾಮ ನ್ಯಾಯಾಲಯಗಳ ಯೋಜನೆ ಅನುಷ್ಠಾನ
Posted On:
14 JUL 2021 4:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನ್ಯಾಯಾಂಗದ ಮೂಲಸೌಕರ್ಯ ಅಭಿವೃದ್ಧಿ ಕುರಿತ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.)ಯನ್ನು ಮತ್ತೆ ಐದು ವರ್ಷಗಳ ಕಾಲ 01.04.2021 ರಿಂದ 31.03.2026ರವರೆಗೆ ಮುಂದುವರಿಸಲು ಸಮ್ಮತಿಸಿದ್ದು, ಇದರ ಒಟ್ಟು ವೆಚ್ಚ 9 ಸಾವಿರ ಕೋಟಿ ರೂ.ಗಳಾಗಿದೆ, ಈ ಪೈಕಿ ಗ್ರಾಮ ನ್ಯಾಯಾಲಯಗಳ ಯೋಜನೆ ಮತ್ತು ನ್ಯಾಯ ದಾನ ಮತ್ತು ನ್ಯಾಯಾಂಗ ಸುಧಾರಣೆ ಕುರಿತ ರಾಷ್ಟ್ರೀಯ ಅಭಿಯಾನದ ಮೂಲಕ ಅಭಿಯಾನದೋಪಾದಿಯಲ್ಲಿ ಅವುಗಳ ಅನುಷ್ಠಾನಕ್ಕೆ 50 ಕೋಟಿ ರೂ. ಸೇರಿದಂತೆ ಕೇಂದ್ರದ ಪಾಲು 5357 ಕೋಟಿ ರೂ.ಗಳಾಗಿವೆ.
ಹಲವು ನ್ಯಾಯಾಲಯಗಳು ಇನ್ನೂ ಸಾಕಷ್ಟು ಸ್ಥಳಾವಕಾಶ ಮತ್ತು ಮೂಲಭೂತ ಸೌಕರ್ಯವಿಲ್ಲದ ಶಿಥಿಲಾವಸ್ಥೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ನ್ಯಾಯಾಂಗ ಅಧಿಕಾರಿಗಳಿಗೆ ವಸತಿ ಸೌಕರ್ಯಗಳ ಕೊರತೆಯು ಅವರ ಕಾರ್ಯ ಮತ್ತು ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಎಲ್ಲರಿಗೂ ಸಕಾಲದಲ್ಲಿ ನ್ಯಾಯದಾನಕ್ಕೆ ಅನುವಾಗುವಂತೆ ಅಧೀನ ನ್ಯಾಯಾಲಯಗಳಿಗೆ ಸುಸಜ್ಜಿತ ನ್ಯಾಯಾಂಗ ಮೂಲಸೌಕರ್ಯಗಳನ್ನು ಒದಗಿಸುವ ಅಗತ್ಯಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸರ್ಕಾರವು ಸೂಕ್ಷ್ಮ ಸಂವೇದಿಯಾಗಿದೆ. ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳು ಮತ್ತು ಬ್ಯಾಕ್ ಲಾಗ್ ಅನ್ನು ಕಡಿಮೆ ಮಾಡಲು ನ್ಯಾಯಾಂಗ ಮೂಲಸೌಕರ್ಯಗಳ ಸಮರ್ಪಕತೆಯು ನಿರ್ಣಾಯಕವಾಗಿದೆ.
ಈ ಪ್ರಸ್ತಾಪವು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ 3800 ನ್ಯಾಯಾಲಯ ಸಭಾಂಗಣಗಳು ಮತ್ತು 4000 ವಸತಿ ಘಟಕಗಳನ್ನು (ಹೊಸ ಮತ್ತು ಪ್ರಗತಿಯಲ್ಲಿರುವ ಎರಡೂ ಯೋಜನೆಗಳು), 1450 ವಕೀಲರ ಕೋಣೆಗಳು, 1450 ಶೌಚಾಲಯ ಸಂಕೀರ್ಣಗಳು ಮತ್ತು 3800 ಡಿಜಿಟಲ್ ಕಂಪ್ಯೂಟರ್ ಕೊಠಡಿಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಇದು ದೇಶದ ನ್ಯಾಯಾಂಗದ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ನವ ಭಾರತಕ್ಕಾಗಿ ಉತ್ತಮ ನ್ಯಾಯಾಲಯಗಳನ್ನು ನಿರ್ಮಿಸುವ ಹೊಸ ಹೆಜ್ಜೆಯಾಗಿದೆ.
ಒಟ್ಟು 50 ಕೋಟಿ ರೂ.ಗಳ ಹಂಚಿಕೆಯೊಂದಿಗೆ 5 ವರ್ಷಗಳ ಅವಧಿಗೆ ಮರುಕಳಿಸುವ ಮತ್ತು ಮರು ಕಳಿಸದಿರುವ ಅನುದಾನ ಒದಗಿಸುವ ಮೂಲಕ ಗ್ರಾಮ ನ್ಯಾಯಾಲಯವನ್ನು ಬೆಂಬಲಿಸುವ ನಿರ್ಧಾರಕ್ಕೂ ಸಂಪುಟ ಅನುಮೋದನೆ ನೀಡಿದೆ. ಆದಾಗ್ಯೂ, ಅಧಿಸೂಚಿತ ಗ್ರಾಮ ನ್ಯಾಯಾಲಯಗಳು ಕಾರ್ಯಾರಂಭವಾದ ಮತ್ತು ನ್ಯಾಯಾಂಗ ಅಧಿಕಾರಿ ನೇಮಕವಾದ ಹಾಗೂ ನ್ಯಾಯಾಂಗ ಇಲಾಖೆಯ ಗ್ರಾಮ ನ್ಯಾಯಾಲಯ ಪೋರ್ಟಲ್ ನಲ್ಲಿ ವರದಿಯಾದ ಬಳಿಕ ಹಣವನ್ನು ರಾಜ್ಯಗಳಿಗೆ ಮಾತ್ರವೇ ಬಿಡುಗಡೆ ಮಾಡಲಾಗುತ್ತದೆ. ಗ್ರಾಮೀಣ ದುರ್ಬಲರಿಗೆ ತ್ವರಿತ ಮತ್ತು ಕೈಗೆಟುಕುವಂತೆ ನ್ಯಾಯವನ್ನು ಒದಗಿಸುವ ಉದ್ದೇಶವನ್ನು ಗ್ರಾಮ ನ್ಯಾಯಾಲಯ ಯೋಜನೆ ಯಶಸ್ವಿಯಾಗಿ ಸಾಧಿಸಿದೆಯೇ ಎಂಬುದನ್ನು ನಿರ್ಣಯಿಸಲು ಒಂದು ವರ್ಷದ ನಂತರ ಪರಿಶೀಲನೆ ನಡೆಸಲಾಗುವುದು.
ಯೋಜನೆಯ ಪ್ರಮುಖ ಚಟುವಟಿಕೆಗಳು:
ನ್ಯಾಯಾಂಗದ ಮೂಲಸೌಕರ್ಯ ಅಭಿವೃದ್ಧಿಯ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.) 1993-94ರಿಂದ ಕಾರ್ಯಾಚರಣೆಯಲ್ಲಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಮತ್ತು ಬ್ಯಾಕ್ ಲಾಗ್ ಪ್ರಕರಣಗಳನ್ನು ತಗ್ಗಿಸಲು ನ್ಯಾಯಾಂಗ ಮೂಲಸೌಕರ್ಯ ಅತ್ಯಂತ ನಿರ್ಣಾಯಕವಾಗಿದೆ. ಅಧೀನ ನ್ಯಾಯಾಂಗದ ಮೂಲಸೌಕರ್ಯ ಅಭಿವೃದ್ಧಿಯ ಪ್ರಾಥಮಿಕ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದ್ದರೂ, ಸಿ.ಎಸ್.ಎಸ್. ಮೂಲಕ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ನ್ಯಾಯಾಲಯದ ಕಟ್ಟಡಗಳು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ (ಜೆಒ) ವಸತಿ ನಿಲಯಗಳನ್ನು ನಿರ್ಮಿಸಲು ರಾಜ್ಯ ಸರ್ಕಾರಗಳ ಸಂಪನ್ಮೂಲಗಳನ್ನು ಹೆಚ್ಚಿಸುತ್ತಿದೆ. ಪ್ರಸಕ್ತ ಪ್ರಸ್ತಾಪವು ವಕೀಲರ ಸಭಾಂಗಣಗಳು, ಶೌಚಾಲಯ ಸಂಕೀರ್ಣಗಳು ಮತ್ತು ಡಿಜಿಟಲ್ ಕಂಪ್ಯೂಟರ್ ಕೊಠಡಿಗಳ ನಿರ್ಮಾಣದಂತಹ ಹೆಚ್ಚುವರಿ ಚಟುವಟಿಕೆಗಳನ್ನು ಒದಗಿಸುತ್ತದೆ. ಇದು ಡಿಜಿಟಲ್ ಕಂದಕವನ್ನು ಕಡಿಮೆ ಮಾಡುವುದರ ಜೊತೆಗೆ ವಕೀಲರು ಮತ್ತು ದಾವೆ ಹೂಡುವವರಿಗೆ ಅನುಕೂಲ ಕಲ್ಪಿಸುತ್ತದೆ.
ಯೋಜನೆ ಆರಂಭವಾದಾಗಿನಿಂದ 2014ರವರೆಗೆ, ಕೇಂದ್ರ ಸರ್ಕಾರ 20 ವರ್ಷಗಳ ಅವಧಿಯಲ್ಲಿ ಕೇವಲ 3444 ಕೋಟಿ ರೂ. ಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಪ್ರಸಕ್ತ ಸರ್ಕಾರ ಕಳೆದ ಏಳು ವರ್ಷಗಳ ಅವಧಿಯಲ್ಲಿ ಈ ದಿನಾಂಕದವರೆಗೆ 5200 ಕೋಟಿ ರೂ. ಮಂಜೂರು ಮಾಡಿದ್ದು, ಇದು ಮಂಜೂರಾದ ಹಣದಲ್ಲಿ ಸುಮಾರು ಶೇ.60ರಷ್ಟಾಗುತ್ತದೆ.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ತ್ವರಿತ ನ್ಯಾಯದಾನ ಮತ್ತು ಅಗ್ಗದ ದರದಲ್ಲಿ ಅದು ದೊರಕುವಂತೆ ಮಾಡಲು ಗ್ರಾಮೀಣ ನ್ಯಾಯಾಲಯಗಳನ್ನು ಸ್ಥಾಪಿಸುವ ಸಲುವಾಗಿ ಗ್ರಾಮ ನ್ಯಾಯಾಲಯಗಳ ಕಾಯಿದೆ 2008, 2009ರ ಅಕ್ಟೋಬರ್ 2ರಿಂದ ಜಾರಿಗೆ ಬಂದಿದೆ. ಈ ನ್ಯಾಯಾಲಯಗಳ ಸ್ಥಾಪನೆಗೆ ಆರಂಭದಲ್ಲಿ ಮರುಕಳಿಸದ ವೆಚ್ಚಕ್ಕೆ ಪ್ರತಿ ನ್ಯಾಯಾಲಯಕ್ಕೆ 18.00 ಲಕ್ಷ ರೂ.ಗಳ ಒಂದು ಬಾರಿಯ ಕ್ರಮವಾಗಿ ಹಣ ಒದಗಿಸಲು, ಕೇಂದ್ರ ನೆರವಿನ ಯೋಜನೆಯನ್ನೂ ಜೊತೆ ಜೊತೆಗೇ ರೂಪಿಸಲಾಗಿದೆ. ಕೇಂದ್ರ ಸರ್ಕಾರ, ಪ್ರತಿ ನ್ಯಾಯಾಲಯಕ್ಕೆ ಅವು ಕಾರ್ಯಾರಂಭ ಮಾಡಿದ ಮೂರು ವರ್ಷಗಳ ಕಾಲ ವಾರ್ಷಿಕ 3.2ಲಕ್ಷ ರೂ. ಮಿತಿಯೊಂದಿಗೆ ಈ ನ್ಯಾಯಾಲಯಗಳ ಮರುಕಳಿಸುವ ವೆಚ್ಚದ ಶೇ.50ರಷ್ಟು ಭರಿಸಲು ನಿರ್ಧರಿಸಿದೆ. 13 ರಾಜ್ಯಗಳು 455 ಗ್ರಾಮ ನ್ಯಾಯಾಲಯಗಳನ್ನು ಅಧಿಸೂಚಿಸುವ ಮೂಲಕ ಯೋಜನೆಯನ್ನು ಜಾರಿ ಮಾಡಿವೆ. ಈ ಪೈಕಿ 226 ಕಾರ್ಯಾಚರಣೆಯಲ್ಲಿವೆ. 81.53 ಕೋಟಿ ರೂ.ಗಳನ್ನು ಸಿ.ಎಸ್.ಎಸ್. ಯೋಜನೆ ಆರಂಭದ ದಿನದಿಂದ ಮಂಜೂರು ಮಾಡಲಾಗಿದೆ.
2021ರಿಂದ 2016ರವರೆಗೆ ಯೋಜನೆಯ ಅನುಷ್ಠಾನ
ಒಟ್ಟು 9000 ಕೋಟಿ ರೂ. ವೆಚ್ಚದಲ್ಲಿ 01.04.2021 ರಿಂದ 31.03.2026ರವರೆಗೆ ಐದು ವರ್ಷಗಳವರೆಗೆ ಈ ಕೆಳಗಿನ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಪೈಕಿ ಗ್ರಾಮ ನ್ಯಾಯಾಲಯ ಯೋಜನೆಗೆ 50 ಕೋಟಿ ರೂ. ಹಂಚಿಕೆಯೂ ಸೇರಿದಂತೆ ಕೇಂದ್ರದ ಪಾಲು 5357 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ.
- ಎಲ್ಲಾ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 3800 ನ್ಯಾಯಾಲಯ ಸಭಾಂಗಣಗಳು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ (ಜೆಒ) 4000 ವಸತಿ ಘಟಕಗಳನ್ನು ರೂ .4500 ಕೋಟಿ ವೆಚ್ಚದಲ್ಲಿ ನಿರ್ಮಾಣ.
- ಎಲ್ಲಾ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 700 ಕೋಟಿ ರೂ. ವೆಚ್ಚದಲ್ಲಿ 1450 ವಕೀಲರ ಕೋಣೆಗಳ ನಿರ್ಮಾಣ.
- ಎಲ್ಲಾ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 47 ಕೋಟಿ ರೂ. ವೆಚ್ಚದಲ್ಲಿ 1450 ಶೌಚಾಲಯ ಸಮುಚ್ಛಯಗಳ ನಿರ್ಮಾಣ.
- ಎಲ್ಲಾ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 60 ಕೋಟಿ ರೂ. ವೆಚ್ಚದಲ್ಲಿ 3800 ಡಿಜಿಟಲ್ ಕಂಪ್ಯೂಟರ್ ಕೊಠಡಿಗಳ ನಿರ್ಮಾಣ.
- ಎಲ್ಲಾ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯಗಳ ಕಾರ್ಯಾಚರಣೆ.
ಯೋಜನೆಯ ನಿಗಾ
- ನ್ಯಾಯಾಂಗ ಇಲಾಖೆಯು ಆನ್-ಲೈನ್ ನಿಗಾ ವ್ಯವಸ್ಥೆಯನ್ನು ರೂಪಿಸಿದೆ, ಪ್ರಗತಿಯ ಬಗ್ಗೆ ಮಾಹಿತಿ ಸಂಗ್ರಹಣೆ, ನ್ಯಾಯಾಲಯದ ಸಭಾಂಗಣಗಳು ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಘಟಕಗಳ ಪೂರ್ಣಗೊಳಿಸುವಿಕೆ ಮತ್ತು ಉತ್ತಮ ಆಸ್ತಿ ನಿರ್ವಹಣೆಗೆ ಇದು ಅನುವು ಮಾಡಿಕೊಡುತ್ತದೆ.
- ನ್ಯಾಯಾಂಗ ಇಲಾಖೆ ಇಸ್ರೋದಿಂದ ತಾಂತ್ರಿಕ ನೆರವಿನೊಂದಿಗೆ ಆನ್ ಲೈನ್ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ನವೀಕರಿಸಿದ “ನ್ಯಾಯ ವಿಕಾಸ್ -2.0” ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಸಿ.ಎಸ್.ಎಸ್ ನ್ಯಾಯಾಂಗ ಮೂಲಸೌಕರ್ಯ ಯೋಜನೆಗಳ ಜಿಯೋ-ಟ್ಯಾಗಿಂಗ್ ಅನ್ನು ಪೂರ್ಣಗೊಂಡ ಮತ್ತು ಪ್ರಗತಿಯಲ್ಲಿರುವ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಮೇಲ್ವಿಚಾರಣೆಗಾಗಿ ಬಳಸಲಾಗುತ್ತದೆ. ಯೋಜನೆಗಳ ಅನುಷ್ಠಾನದ ಸ್ಥಿತಿಯನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಹೈಕೋರ್ಟ್ ಗಳ ಪ್ರತಿನಿಧಿಗಳೊಂದಿಗೆ ತ್ರೈಮಾಸಿಕ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತದೆ.
- ತ್ವರಿತ ಮತ್ತು ಉತ್ತಮ ನಿರ್ಮಾಣಕ್ಕಾಗಿ ಮೇಲ್ವಿಚಾರಣಾ ಸಮಿತಿಯ ನಿಯಮಿತ ರಾಜ್ಯಮಟ್ಟದ ಸಭೆಗಳನ್ನು ವಿವಿಧ ರಾಜ್ಯಗಳ ಹೈಕೋರ್ಟ್ ಗಳಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ನಡೆಸಲಾಗುತ್ತದೆ,
- ಗ್ರಾಮ ನ್ಯಾಯಾಲಯ ಪೋರ್ಟಲ್ ಅನುಷ್ಠಾನ ರಾಜ್ಯಗಳ ಗ್ರಾಮ ನ್ಯಾಯಾಲಯಗಳ ಕಾರ್ಯದ ಆನ್ ಲೈನ್ ಮೇಲ್ವಿಚಾರಣೆಗೆ ನೆರವಾಗುತ್ತದೆ.
ಯೋಜನೆಯ ಪ್ರಯೋಜನಗಳು
ಸಿಎಸ್ಎಸ್. ಯೋಜನೆಯು ದೇಶದಾದ್ಯಂತ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಸುಸಜ್ಜಿತ ನ್ಯಾಯಾಲಯ ಸಭಾಂಗಣಗಳು ಮತ್ತು ನ್ಯಾಯಾಧೀಶರು/ನ್ಯಾಯಾಂಗ ಅಧಿಕಾರಿಗಳಿಗೆ ವಸತಿ ಸೌಲಭ್ಯದ ಲಭ್ಯತೆಯನ್ನು ಹೆಚ್ಚಿಸುತ್ತದೆ. ನ್ಯಾಯಾಲಯಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿ, ನ್ಯಾಯಾಂಗಕ್ಕೆ ಮತ್ತು ವಕೀಲರಿಬ್ಬರಿಗೂ ವಿನ್ – ವಿನ್ ಸನ್ನಿವೇಶ ರೂಪಿಸಲಾಗುವುದು ಮತ್ತು ಇದು ಶ್ರೀಸಾಮಾನ್ಯ ಜೀವನ ಸುಗಮಗೊಳಿಸುತ್ತದೆ. ಡಿಜಿಟಲ್ ಕಂಪ್ಯೂಟರ್ ಕೊಠಡಿಗಳು ಡಿಜಿಟಲ್ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಭಾರತದ ಡಿಜಿಟಲ್ ಇಂಡಿಯಾ ದೃಷ್ಟಿಕೋನದ ಭಾಗವಾಗಿ ಡಿಜಿಟಲೀಕರಣ ಪ್ರಾರಂಭಕ್ಕೆ ಉತ್ತೇಜನ ನೀಡುತ್ತದೆ. ಇದು ನ್ಯಾಯಾಂಗದ ಒಟ್ಟಾರೆ ಕಾರ್ಯ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗ್ರಾಮ ನ್ಯಾಯಾಲಯಗಳಿಗೆ ನಿರಂತರ ಸಹಾಯವು ಸಾಮಾನ್ಯ ಜನರಿಗೆ ತನ್ನ ಮನೆ ಬಳಿಯೇ ತ್ವರಿತ, ಗಣನೀಯ ಮತ್ತು ಕೈಗೆಟುಕುವ ರೀತಿಯಲ್ಲಿ ನ್ಯಾಯವನ್ನು ಒದಗಿಸಲು ಇಂಬು ನೀಡುತ್ತದೆ.
*****
(Release ID: 1735627)
Visitor Counter : 718
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam