ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ಪರಿಷ್ಕೃತ ವರದಿ


ಖಾಸಗಿ ಕೋವಿಡ್ ಲಸಿಕೆ ಕೇಂದ್ರ(ಪಿಸಿವಿಸಿ)ಗಳಿಂದ ಲಸಿಕೆ ಖರೀದಿಯ ಸ್ಥಿತಿಗತಿ ಮತ್ತು ಪ್ರಗತಿ ಪರಾಮರ್ಶೆ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯ

ಕೆಲವು ರಾಜ್ಯಗಳಲ್ಲಿ ಪಿಸಿವಿಸಿಯಿಂದ ಲಸಿಕೆ ಖರೀದಿ ಮತ್ತು ನಿರ್ವಹಣೆ ಮಂದಗತಿ ಹಿಡಿದಿರುವುದು ‘ಗಂಭೀರ ಆತಂಕ’ಕ್ಕೆ ಕಾರಣವಾಗಿದೆ

ಪಿಸಿವಿಸಿಗಳಿಂದ ಲಸಿಕೆ ಖರೀದಿ ಮತ್ತು ನಿರ್ವಹಣೆ ಆಡಳಿತವನ್ನು ಚುರುಕುಗೊಳಿಸಲು ಅನುವಾಗುವಂತೆ ದೈನಂದಿನ ಪರಾಮರ್ಶೆ ನಡೆಸುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ

Posted On: 14 JUL 2021 2:05PM by PIB Bengaluru

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ಇಂದು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ರೋಗ ಪ್ರತಿಬಂಧಕ ಅಧಿಕಾರಿಗಳ ಜತೆ ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಸಿದರು. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ತೆಲಂಗಾಣ, ಅರುಣಾಚಲ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಉನ್ನತಾಧಿಕಾರಿಗಳ ಜತೆ ವೀಡಿಯೊ ಕಾನ್ಫರೆನ್ಸ್ ಸಭೆ ಜರುಗಿತು. ಲಸಿಕಾ ಉತ್ಪಾದನೆ ಕಂಪನಿಗಳಾದ ಭಾರತ್ ಬಯೋಟೆಕ್ ಮತ್ತು ಸೆರಮ್ ಇನ್|ಸ್ಟಿಟ್ಯೂಟ್ ಆಫ್ ಇಂಡಿಯಾದ ಇಬ್ಬರು ನೋಡಲ್ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ದೇಶವ್ಯಾಪಿ ಬೃಹತ್ ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣ ಹೊಸ ಹಂತದ ಭಾಗವಾಗಿ, ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿ ಮತ್ತು ಇತ್ತೀಚಿನ ಸಲಹಾಸೂಚಿ ಹಿನ್ನೆಲೆಯಲ್ಲಿ, ಲಸಿಕೆ ಖರೀದಿಯ ಪ್ರಗತಿ ಮತ್ತು ನಿರ್ವಹಣೆ ಕುರಿತು ಪರಾಮರ್ಶೆ ನಡೆಸಲಾಯಿತು. ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳಿಂದ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡುತ್ತಿರುವ ಲಸಿಕೆ ಖರೀದಿಯ ಸ್ಥಿತಿಗತಿ ಮತ್ತು ಪ್ರಗತಿ ಕುರಿತು ಅವರು ರಾಜೇಶ್ ಭೂಷಣ್ ಅವರು ಮಾಹಿತಿ ಪಡೆದರು. ಲಸಿಕೆ ಖರೀದಿ ಪ್ರಕ್ರಿಯೆಗೆ ಬ್ಯಾಕ್ಎಂಡ್ ನಿರ್ವಹಣಾ ಸಾಧನವಾಗಿ ಕೊ-ವಿನ್ ಜಾಲತಾಣವನ್ನು ವ್ಯಾಪಕವಾಗಿ ಬಳಸುವಂತೆ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಸೂಚಿಸಿದರು.

ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಖರೀದಿ ಪ್ರಕ್ರಿಯೆ ಮತ್ತು ನಿರ್ವಹಣೆ ಮಂದಗತಿ ಹಿಡಿದಿರುವುದು ತೀವ್ರ ಆತಂಕಕಾರಿ ವಿಷಯವಾಗಿದೆ. ಈ ಕೆಳಗಿನ ವಿಷಯಗಳು ಕಳವಳಕ್ಕೆ ಕಾರಣವಾಗಿದ್ದು, ಅವುಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚನೆ ನೀಡಿದರು.

1. ಹಲವಾರು ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳು (ಪಿಸಿವಿಸಿಗಳು) ನಿಗದಿಪಡಿಸಿದ ಪ್ರಮಾಣದ ಲಸಿಕೆ ಖರೀದಿಗೆ ಯಾವುದೇ ಬೇಡಿಕೆ ಪತ್ರ(ಇಂಡೆಂಟ್) ಇರಿಸಿಲ್ಲ. ಹಲವು ರಾಜ್ಯ ಸರ್ಕಾರಗಳು ಲಸಿಕೆ ಖರೀದಿಯನ್ನು ಪಿಸಿವಿಸಿಗಳ ಮೂಲಕವೇ ಮಾಡುವ ಅಗತ್ಯವಿದೆ. ದೈನಂದಿನ ಆಧಾರದಲ್ಲಿ ರಾಜ್ಯಗಳು ಲಸಿಕೆ ಖರೀದಿ ಪ್ರಕ್ರಿಯೆಯ ಪರಾಮರ್ಶೆ ನಡೆಸಬೇಕು.  ಗೊತ್ತುಪಡಿಸಿದ ಪ್ರಮಾಣದ ಲಸಿಕೆ ಖರೀದಿಸಲು ಖಾಸಗಿ ಕೋವಿಡ್ ಲಸಿಕಾ ಉತ್ಪಾದನಾ ಕಂಪನಿಗಳಿಗೆ  ತ್ವರಿತವಾಗಿ ಬೇಡಿಕೆ ಪತ್ರಗಳನ್ನು (ಇಂಡೆಂಟ್) ಸಲ್ಲಿಸುವುದನ್ನು ಖಾತ್ರಿಪಡಿಸಬೇಕು.

2. ಮತ್ತೆ ಕೆಲವು ರಾಜ್ಯಗಳು ಲಸಿಕೆ ಖರೀದಿಗೆ ಕಂಪನಿಗಳಿಗೆ ಬೇಡಿಕೆ ಪತ್ರ ಸಲ್ಲಿಸಿವೆ. ಆದರೆ ಗೊತ್ತುಪಡಿಸಿದ ಲಸಿಕೆ ಪ್ರಮಾಣಕ್ಕೆ ತಗುಲುವ ಸಂಪೂರ್ಣ ಮೊತ್ತವನ್ನೇ ಪಾವತಿಸಿಲ್ಲ. ಇನ್ನು ಕೆಲವು ರಾಜ್ಯಗಳು ಇಂಡೆಂಟ್ ಪ್ರಮಾಣದ ಲಸಿಕೆಗೆ ಹಣವನ್ನೇ ಪಾವತಿಸಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮತ್ತು ಲಸಿಕೆ ತಯಾರಿಕಾ ಕಂಪನಿಗಳು ಬೇಡಿಕೆ ಪತ್ರದಲ್ಲಿ ನಮೂದಿಸುವ ಲಸಿಕೆ ಪ್ರಮಾಣಕ್ಕೆ ತಗುಲುವ ಸಂಪೂರ್ಣ ಮೊತ್ತ ಪಾವತಿಗೆ ಗಮನ ನೀಡಬೇಕು. ಲಸಿಕೆ ಖರೀದಿ ಪ್ರಮಾಣಕ್ಕೆ ತಗಲುವ ಒಟ್ಟು ಮೊತ್ತವನ್ನು ಪಾವತಿಸಿ, ಶೂನ್ಯ ಬಾಕಿ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.

3. ಇನ್ನೂ ಕೆಲವು ರಾಜ್ಯಗಳು ಇಂಡೆಂಟ್ ಸಲ್ಲಿಸಿದ ಪ್ರಮಾಣದ ಲಸಿಕೆಗೆ ಹಣ ಪಾವತಿಸಿವೆ. ಆದರೆ ಅಷ್ಟೂ ಪ್ರಮಾಣದ ಲಸಿಕೆಯನ್ನು ಅವು ಕೊಂಡೊಯ್ದಿಲ್ಲ. ಖರೀದಿಸಿದ ಎಲ್ಲಾ ಲಸಿಕೆಯನ್ನು ತರಿಸಿಕೊಳ್ಳಲು, ವಿತರಿಸಲು ರಾಜ್ಯ ಸರ್ಕಾರಗಳು ಮತ್ತು ಕಂಪೆನಿಗಳು ಆದ್ಯತೆಯ ಗಮನ ನೀಡಬೇಕು ಎಂದು ಸೂಚನೆ ನೀಡಿದರು.

4. ಮತ್ತೆ ಕೆಲವು ರಾಜ್ಯಗಳು ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳಿಂದ ತರಿಸಿಕೊಂಡ ಲಸಿಕೆಯ ಪೂರ್ಣ ಪ್ರಮಾಣವನ್ನು  ಸಂಪೂರ್ಣ ಬಳಸದೆ ಬಾಕಿ ಉಳಿಸಿಕೊಂಡಿವೆ. ಈ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳು ಒಟ್ಟಾಗಿ ಬಳಕೆಯಾಗದೆ ಉಳಿದಿರುವ ಲಸಿಕೆಯನ್ನು ತ್ವರಿತವಾಗಿ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

 

ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಿಸಿವಿಸಿಗಳ ಮೂಲಕ ಮಾಡುತತಿರುವ ಲಸಿಕೆ ಖರೀದಿ ಪ್ರಕ್ರಿಯೆಯ ಸ್ಥಿತಿಗತಿ ಮತ್ತು ಪ್ರಗತಿ ಮಂದಗತಿ ಹಿಡಿದಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ದೈನಂದಿನ ಆಧಾರದಲ್ಲಿ ಲಸಿಕೆ ಖರೀದಿ ಪ್ರಕ್ರಿಯೆಯ ಪರಾಮರ್ಶೆ ನಡೆಸುವಂತೆ ಸಲಹೆ ನೀಡಿದರು.

 ಲಸಿಕೆ ಪೂರೈಕೆಗೆ ಎದುರಾಗಿರುವ ಅಡಚಣೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳು ಮತ್ತು ಉತ್ಪಾದನಾ ಕಂಪನಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಲಸಿಕೆ ಲಭ್ಯತೆಯನ್ನು ಖಾತ್ರಿಪಡಿಸಬೇಕು ಎಂದರು. ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಕೋವಿಡ್ ಲಸಿಕೆ ಲಭ್ಯತೆಯ ಮುಂಗಡ ಗೋಚರತೆಯನ್ನು ಖಾತ್ರಿಪಡಿಸುತ್ತಿದೆ ಎಂಬುದನ್ನು ರಾಜ್ಯಗಳ ಜನತೆಗೆ ಮುಟ್ಟಿಸಬೇಕು ಎಂದು ಅವರು  ಸೂಚಿಸಿದರು.

ಕೊ-ವಿನ್ ವೆಬ್|ಸೈಟ್|ನಲ್ಲಿ ಲಸಿಕೆ ಅಗತ್ಯದ ಬೇಡಿಕೆ ಪತ್ರ (ಇಂಡೆಂಟ್) ಇರಿಸುವ ಮತ್ತು ಲಸಿಕೆ ಖರೀದಿಗೆ ಪಾವತಿ ವಿಧಿವಿಧಾನ ಇತ್ಯಾದಿ ವಿಷಯಗಳನ್ನು ಅರ್ಥೈಸಲು ಕೇಂದ್ರ ಆರೋಗ್ಯ ಸಚಿವಾಲಯವು ಐದು ಪ್ರಾದೇಶಿಕ ಕಾರ್ಯಾಗಾರಗಳನ್ನು ಆಯೋಜಿಸಿದೆ. ರಾಜ್ಯಗಳ ನೋಡಲ್ ಅಧಿಕಾರಿಗಳು ಮತ್ತು ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳ ನೋಡಲ್ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ಹೆಚ್ಚಿನ ತರಬೇತಿಗಳು ಬೇಕಿದ್ದರೆ ಸಲಹೆ ಸೂಚನೆ ನೀಡುವಂತೆ ಅವರು ರಾಜ್ಯಗಳಿಗೆ ಸೂಚನೆ ನೀಡಿದರು. ರಾಜ್ಯಗಳ ಅಗತ್ಯಕ್ಕೆ ತಕ್ಕಂತೆ ತರಬೇತಿ ಕಾರ್ಯಾಗಾರ ರೂಪಿಸಲಾಗುವುದು ಎಂದು ಅವರು ತಿಳಿಸಿದರು. ಪರಾಮರ್ಶೆ ಸಭೆಯಲ್ಲಿ ಲಸಿಕೆ ಬೇಡಿಕೆ ಒಟ್ಟುಗೂಡಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾತ್ರ, ಲಸಿಕೆ ತ್ವರಿತ ರವಾನೆಯಲ್ಲಿ ಲಸಿಕೆ ಉತ್ಪಾದನಾ ಕಂಪನಿಗಳು ಮತ್ತು ಪಿಸಿವಿಸಿಗಳ ಪಾತ್ರ ಕುರಿತು ಚರ್ಚೆ ನಡೆಯಿತು.

***



(Release ID: 1735394) Visitor Counter : 259