ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಜುಲೈ 12 ರಂದು ಸಿ.ಪಿ.ಡಬ್ಲ್ಯು.ಡಿ.ಯಿಂದ 167 ನೇ ಸ್ಥಾಪನಾ ದಿನ ಆಚರಣೆ
Posted On:
10 JUL 2021 6:27PM by PIB Bengaluru
ವಸತಿ ಮತ್ತು ನಗರ ವ್ಯವಹಾರಗಳ (ಎಂ.ಒ.ಎಚ್.ಯು.ಎ.) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿ.ಪಿ.ಡಬ್ಲ್ಯು.ಡಿ.) ಯು 2021ರ ಜುಲೈ 12 ರಂದು ರಾಷ್ಟ್ರಕ್ಕೆ ತನ್ನ ಸೇವೆಯ 167ನೇ ವರ್ಷವನ್ನು ಆಚರಿಸಲಿದೆ. ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಡಿಜಿಟಲ್ ವ್ಯವಸ್ಥೆ ಮೂಲಕ ನಡೆಯಲಿದೆ.
ಸಿ.ಪಿ.ಡಬ್ಲ್ಯು.ಡಿ.ಯು ಲೋಕೋಪಯೋಗಿ ಕಾರ್ಯಗಳ ಅನುಷ್ಠಾನಕ್ಕಾಗಿ ಕೇಂದ್ರೀಯ ಏಜೆನ್ಸಿಯಾಗಿ 1854 ರ ಜುಲೈ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅದೀಗ ಸಮಗ್ರ ನಿರ್ಮಾಣ ನಿರ್ವಹಣಾ ಇಲಾಖೆಯಾಗಿ ಬೆಳೆದು ಬಂದಿದೆ, ಮತ್ತು ಅದು ಯೋಜನಾ ರೂಪಿಸುವಿಕೆಯಿಂದ ಹಿಡಿದು ಅದನ್ನು ಪೂರ್ಣಗೊಳಿಸುವವರೆಗೆ ತನ್ನ ಸೇವೆಯನ್ನು ಒದಗಿಸುತ್ತದೆ ಮಾತ್ರವಲ್ಲದೆ ನಿರ್ವಹಣಾ ಆಡಳಿತವನ್ನೂ ನೋಡಿಕೊಳ್ಳುತ್ತದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಕೌಶಲ್ ಕಿಶೋರ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು
ಉದ್ಘಾಟನಾ ಸಮಾರಂಭದಲ್ಲಿ ನಾಲ್ಕು ತಾಂತ್ರಿಕ ಪ್ರಕಟಣೆಗಳಾದ ಸಿ.ಪಿ.ಡಬ್ಲ್ಯು.ಡಿ. ಫ್ಲೋರಲ್ ಟ್ಯಾಬ್ಲೋ: ಎ ಟ್ರೆಶರ್ ಕಲೆಕ್ಷನ್, ಇ.ಆರ್.ಪಿ. ಇ-ಮಾದರಿಗಳು, ಸಿ.ಪಿ.ಡಬ್ಲ್ಯು.ಡಿ.ಯ ಆಂತರಿಕ ಪ್ರಸಾರದ ಪ್ರಕಟಣೆ-ನಿರ್ಮಾಣಭಾರತಿ, ಮತ್ತು ಸಿ.ಪಿ.ಡಬ್ಲ್ಯು.ಡಿ. ದೂರವಾಣಿ ಡೈರೆಕ್ಟರಿ 2021-ಇವುಗಳನ್ನು ಗಣ್ಯರು ಬಿಡುಗಡೆ ಮಾಡಲಿದ್ದಾರೆ. ಸಿ.ಪಿ.ಡಬ್ಲ್ಯು.ಡಿ.ಯನ್ನು ಕುರಿತ ಅದರ ಕಾರ್ಯಚಟುವಟಿಕೆ ಮತ್ತು ಸಾಧನೆಗಳನ್ನು ಬಿಂಬಿಸುವ ಕಿರು ಚಲನಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು.
ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿದ ಅಧಿಕಾರಿಗಳನ್ನು ಈ ಸಮಾರಂಭದಲ್ಲಿ ಸಿ.ಪಿ.ಡಬ್ಲ್ಯು.ಡಿ. ಪದಕಗಳನ್ನು ನೀಡಿ ಗೌರವಿಸಲಾಗುವುದು. ಸಿ.ಪಿ.ಡಬ್ಲ್ಯು.ಡಿ ಅಧಿಕಾರಿಗಳು ಹಾಗು ಇತರ ತಜ್ಞರು ತಾಂತ್ರಿಕ ಪ್ರದರ್ಶಿಕೆಯನ್ನು ಪ್ರದರ್ಶಿಸುವರು.
***
(Release ID: 1734513)
Visitor Counter : 172