ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತ್ವ ಸಚಿವರಾಗಿ ಶ್ರೀ ಧರ್ಮೇಂದ್ರ ಪ್ರಧಾನ್ ಅಧಿಕಾರ ಸ್ವೀಕಾರ; ಸಹಾಯಕ ಸಚಿವರಾಗಿ ಶ್ರೀ ರಾಜೀವ್ ಚಂದ್ರಶೇಖರ್ ಕಚೇರಿಗೆ ಸೇರ್ಪಡೆ
ಪ್ರಕಟಣಾ ದಿನಾಂಕ:
08 JUL 2021 5:13PM by PIB Bengaluru
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆ ಸಚಿವಾಲಯದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಮತ್ತು ಕರ್ನಾಟಕದ ರಾಜ್ಯ ಸಭಾ ಸದಸ್ಯರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರು ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿ (ಎಂ.ಒ.ಎಸ್.) ಅಧಿಕಾರ ಸ್ವೀಕರಿಸಿದರು. ನಿನ್ನೆ ಸಂಪುಟ ಪುನಾರಚನೆಗೆ ಮೊದಲು ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತ್ವ ಸಚಿವರಾಗಿದ್ದ ಡಾ. ಮಹೇಂದ್ರ ನಾಥ್ ಪಾಂಡೇ ಈ ಸಂದರ್ಭದಲ್ಲಿ ಹಾಜರಿದ್ದು ಉಭಯ ಸಚಿವರಿಗೂ ಅಧಿಕಾರ ಸ್ವೀಕಾರಕ್ಕಾಗಿ ತಮ್ಮ ಶುಭಾಶಯಗಳನ್ನು ಕೋರಿದರು.
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಮಾತನಾಡಿ ಕೌಶಲ್ಯ ಅಭಿವೃದ್ಧಿಯ ಪ್ರಯತ್ನಗಳನ್ನು ಬಲಪಡಿಸಲು ಬದ್ಧವಾಗಿರುವುದಾಗಿ ಹೇಳಿದರು. ಭವಿಷ್ಯದ ಕೆಲಸಗಳಿಗಾಗಿ ಯುವ ಪೀಳಿಗೆಯನ್ನು ತಯಾರು ಮಾಡಲು ಅವಶ್ಯ ಕೌಶಲ್ಯಗಳನ್ನು ಒದಗಿಸಿಕೊಡಲು, ಕೌಶಲ್ಯ ಮತ್ತು ಉದ್ಯೋಗಗಳ ನಡುವೆ ಸಂಪರ್ಕ ಬೆಸೆಯಲು ತಾವು ಬದ್ಧವಾಗಿರುವುದಾಗಿಯೂ ಅವರು ಹೇಳಿದರು.ರಾಜ್ಯ
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರಾಜೀವ್ ಚಂದ್ರಶೇಖರ್ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ ಅವರು ಉದ್ಯಮಶೀಲತೆಗೆ ಹೆಚ್ಚಿನ ಉತ್ತೇಜನ ನೀಡಲು ಒಗ್ಗೂಡಿ ಕೆಲಸ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರಲ್ಲದೆ ಭಾರತವನ್ನು ಜಗತ್ತಿನ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಚಿಂತನೆಯನ್ನು ಈಡೇರಿಸಲು ಕಟಿಬದ್ಧವಾಗಿರುವುದಾಗಿಯೂ ತಿಳಿಸಿದರು.
ಶ್ರೀ ರಾಜೀವ ಚಂದ್ರಶೇಖರ್ ಅವರು ಮಾತನಾಡಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಲು ತಮಗೆ ದೊರೆತಿರುವ ಅವಕಾಶ ಹೆಮ್ಮೆಯ ಮತ್ತು ಗೌರವದ ಅವಕಾಶ ಎಂದರು. ಪ್ರಧಾನ ಮಂತ್ರಿ ಅವರ ಡಿಜಿಟಲ್, ಕೌಶಲ್ಯಯುಕ್ತ ಮತ್ತು ನವಭಾರತ ನಿರ್ಮಾಣ ಮಾಡುವ ಚಿಂತನೆಯನ್ನು ಸಾಕಾರಗೊಳಿಸಲು ತಾವು ಶ್ರಮಿಸುವುದಾಗಿ ಹೇಳಿದರು.

***
(ಪ್ರಕಟಣೆ ಐ.ಡಿ.: 1734012)
ವಿಸಿಟರ್ ಕೌಂಟರ್ : 207