ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ವೈದ್ಯರ ದಿನದಂದು ವೈದ್ಯರನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಸಾಂಕ್ರಾಮಿಕದ ಸಂದರ್ಭದಲ್ಲಿ ಸೇವೆ ಮತ್ತು ಬಲಿದಾನ ಮಾಡಿದ ವೈದ್ಯರಿಗೆ ನಮನ ಸಲ್ಲಿಸಿದ ಪ್ರಧಾನಿ

ಆರೋಗ್ಯ ಕ್ಷೇತ್ರದ ಆಯವ್ಯಯ ದುಪ್ಪಟ್ಟಾಗಿದ್ದು, 2 ಲಕ್ಷ ಕೋಟಿ ರೂಪಾಯಿ ಮೀರಿದೆ: ಪ್ರಧಾನಮಂತ್ರಿ

ನಮ್ಮ ವೈದ್ಯರು ತಮ್ಮ ಅನುಭವ ಮತ್ತು ಕೌಶಲದಿಂದ ಹೊಸ ಮತ್ತು ತ್ವರಿತವಾಗಿ ರೂಪಾಂತರವಾಗುತ್ತಿರುವ ಈ ವೈರಾಣುವಿನ್ನು ಎದುರಿಸುತ್ತಿದ್ದಾರೆ : ಪ್ರಧಾನಮಂತ್ರಿ

ಸರ್ಕಾರ ವೈದ್ಯರ ಸುರಕ್ಷತೆಗೆ ಬದ್ಧವಾಗಿದೆ: ಪ್ರಧಾನಮಂತ್ರಿ

ಯೋಗದ ಪ್ರಯೋಜನಗಳ ಕುರಿತಂತೆ ಸಾಕ್ಷಾಧಾರಿತ ಅಧ್ಯಯನಕ್ಕೆ ಕರೆ

ದಾಖಲೀಕರಣ ಪ್ರಾಮುಖ್ಯತೆಯ ಪ್ರತಿಪಾದನೆ, ವಿವರವಾದ ದಾಖಲಾತಿಗಾಗಿ ಕೋವಿಡ್ ಸಾಂಕ್ರಾಮಿಕವು ಉತ್ತಮ ಆರಂಭದ ಹಂತವಾಗಿದೆ ಎಂದು ಹೇಳಿಕೆ

Posted On: 01 JUL 2021 3:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವೈದ್ಯರ ದಿನವಾದ ಇಂದು ವೈದ್ಯಕೀಯ ಸಮುದಾಯಕ್ಕೆ ಶುಭ ಕೋರಿದ್ದಾರೆ. ನಮ್ಮ ವೈದ್ಯಕೀಯ ಸಮುದಾಯದ ಅತ್ಯುನ್ನತ ಆದರ್ಶಗಳ ಸಂಕೇತವಾದ ಡಾಕ್ಟರ್ ಬಿ.ಸಿ. ರಾಯ್ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು. ಸಾಂಕ್ರಾಮಿಕದ ಒಂದೂವರೆ ವರ್ಷಗಳ ಸಂಕಷ್ಟದ ಅವಧಿಯಲ್ಲಿ ಸೇವೆ ಸಲ್ಲಿಸಿದ ವೈದ್ಯರಿಗೆ 130 ಕೋಟಿ ಭಾರತೀಯರ ಪರವಾಗಿ  ಅವರು ಧನ್ಯವಾದ ಅರ್ಪಿಸಿದರು. ಭಾರತೀಯ ವೈದ್ಯಕೀಯ ಸಂಸ್ಥೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

ವೈದ್ಯರ ಕೊಡುಗೆಯನ್ನು ಗುರುತಿಸಿದ ಪ್ರಧಾನಮಂತ್ರಿ, ಸಾಂಕ್ರಾಮಿಕದ ಸಮಯದಲ್ಲಿ ಅವರ ಮಹಾನ್ ಕಾರ್ಯವನ್ನು ಸ್ಮರಿಸಿದರು ಮತ್ತು ಮಾನವಕುಲದ ಸೇವೆ ಮಾಡುತ್ತಾ ಬಲಿದಾನ ಮಾಡಿದ ವೈದ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕೊರೊನಾ ಒಡ್ಡಿದ ಎಲ್ಲ ಸವಾಲುಗಳಿಗೂ ನಮ್ಮ ವಿಜ್ಞಾನಿಗಳು ಮತ್ತು ವೈದ್ಯರು ಪರಿಹಾರ ಹುಡುಕಿದರು ಎಂದು ಪ್ರಧಾನಮಂತ್ರಿ ತಿಳಿಸಿದರು. ನಮ್ಮ ವೈದ್ಯರು ಹೊಸ ಮತ್ತು ತ್ವರಿತವಾಗಿ ರೂಪಾಂತರವಾಗುವ ಈ ವೈರಾಣುವಿನ ವಿರುದ್ಧ ತಮ್ಮ ಅನುಭವ ಮತ್ತು ಕೌಶಲದಿಂದ ಹೋರಾಡುತ್ತಿದ್ದಾರೆ ಎಂದರು.  ದೀರ್ಘ-ನಿರ್ಲಕ್ಷಿತ ವೈದ್ಯಕೀಯ ಮೂಲಸೌಕರ್ಯ ಮತ್ತು ಹೆಚ್ಚು ಜನಸಂಖ್ಯೆಯ ಒತ್ತಡದ ಮಿತಿಗಳ ಹೊರತಾಗಿಯೂ, ಭಾರತದ ಪ್ರತಿ ಲಕ್ಷ ಜನಸಂಖ್ಯೆಯ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಇನ್ನೂ ನಿರ್ವಹಣಾರ್ಹವಾಗಿದೆ. ಜೀವಹಾನಿ ಸದಾ ನೋವಿನಿಂದ ಕೂಡಿರುತ್ತದೆ ಆದರೆ ಅನೇಕ ಜೀವಗಳನ್ನು ಸಹ ಉಳಿಸಲಾಗಿದೆ. ಅನೇಕ ಜೀವಗಳನ್ನು ಉಳಿಸಿದ ಶ್ರೇಯ ಕಷ್ಟಪಟ್ಟು ಶ್ರಮಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಆರೋಗ್ಯ ಆರೈಕೆ ಮೂಲಸೌಕರ್ಯ ವರ್ಧನೆಯ ಮೇಲೆ ಸರ್ಕಾರದ ಗಮನದ ಬಗ್ಗೆ ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಮೊದಲ ಅಲೆಯ ವೇಳೆ ಸುಮಾರು 15 ಸಾವಿರ ಕೋಟಿ  ರೂ.ಗಳನ್ನು ಆರೋಗ್ಯ ಆರೈಕೆಗೆ ಹಂಚಿಕೆ ಮಾಡಲಾಗಿತ್ತು. ಆದರೆ ಈ ವರ್ಷ ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ದುಪ್ಪುಟ್ಟು ಹಂಚಿಕೆ ಮಾಡಲಾಗಿದ್ದು, ಅದು 2 ಲಕ್ಷ ಕೋಟಿ ರೂ. ಆಗಿದೆ ಎಂದರು. ಹೆಚ್ಚು ಸೇವೆ ಪಡೆಯದ ವಲಯಗಳ ಅಡಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ 50 ಸಾವಿರ ಕೋಟಿ ರೂ. ಸಾಲ ಖಾತ್ರಿ ಯೋಜನೆ ಒದಗಿಸಲಾಗಿದೆ. ಹೊಸ ಏಮ್ಸ್, ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. 2014ರಲ್ಲಿ ಕೇವಲ ಆರು ಏಮ್ಸ್ ಅಸ್ತಿತ್ವದಲ್ಲಿತ್ತು. ಈಗ  15 ಏಮ್ಸ್ ಕಾಮಗಾರಿ ನಡೆಯುತ್ತಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಳವಾಗಿದೆ. ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆಯನ್ನು ಒಂದೂವರೆ ಪಟ್ಟು ಮತ್ತು ಪಿಜಿ ಸೀಟುಗಳ ಸಂಖ್ಯೆಯನ್ನು ಶೇ.80ರಷ್ಟು ಹೆಚ್ಚಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ಶ್ರೀ ಮೋದಿ ಅವರು, ವೈದ್ಯರ ಸುರಕ್ಷತೆಯ ಬದ್ಧತೆಯನ್ನು ಪುನರುಚ್ಚರಿಸಿದರು. ವೈದ್ಯರ ವಿರುದ್ಧದ ಹಿಂಸಾಚಾರ ತಡೆಗೆ ಕಠಿಣ ಕಾನೂನು ತರಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಉಚಿತ ವಿಮಾ ವ್ಯಾಪ್ತಿಯನ್ನು ಕೋವಿಡ್ ಯೋಧರಿಗಾಗಿ ತರಲಾಗಿದೆ ಎಂದರು.

ಜನರು ಲಸಿಕೆ ಪಡೆಯುವಂತೆ ಪ್ರೇರೇಪಿಸುವುದನ್ನು ಮತ್ತು ಕೋವಿಡ್ ಸೂಕ್ತ ನಡೆವಳಿಕೆ ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದನ್ನು ವೈದ್ಯರು ಮುಂದುವರಿಸುವಂತೆ ಕರೆ ನೀಡಿದರು. ಯೋಗದ ಬಗ್ಗೆ ಅರಿವು ಮೂಡಿಸುತ್ತಿರುವ ವೈದ್ಯಕೀಯ ಸಮುದಾಯವನ್ನು ಅವರು ಶ್ಲಾಘಿಸಿದರು. ಸ್ವಾತಂತ್ರ್ಯದ ನಂತರ ಕಳೆದ ಶತಮಾನದಲ್ಲಿ ಯೋಗದ ಪ್ರಚಾರ ಮಾಡುವ ಕೆಲಸ ಆಗಬೇಕಿತ್ತು, ಆದರೆ ಅದು ಈಗ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೋವಿಡ್ ನಂತರದ ತೊಡಕುಗಳನ್ನು ನಿಭಾಯಿಸಲು ಯೋಗದ ಪ್ರಯೋಜನಗಳ ಕುರಿತು ಸಾಕ್ಷ್ಯ ಆಧಾರಿತ ಅಧ್ಯಯನಗಳಿಗೆ ವೈದ್ಯರು ತಮ್ಮ ಸಮಯವನ್ನು ನೀಡಿದ್ದಕ್ಕಾಗಿ ಅವರು ಶ್ಲಾಘಿಸಿದರು. ಐಎಂಎ ಯೋಗದ ಬಗ್ಗೆ ಪುರಾವೆ ಆಧಾರಿತ ಅಧ್ಯಯನಗಳನ್ನು ಅಭಿಯಾನದೋಪಾದಿಯಲ್ಲಿ ತೆಗೆದುಕೊಳ್ಳಬಹುದೇ ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು. ಯೋಗದ ಕುರಿತಾದ ಅಧ್ಯಯನಗಳನ್ನು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಬಹುದು ಎಂದು ಅವರು ಸಲಹೆ ನೀಡಿದರು.

ವೈದ್ಯರು ತಮ್ಮ ಅನುಭವಗಳನ್ನು ದಾಖಲು ಮಾಡುವುದರ ಮಹತ್ವವನ್ನು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ತಮ್ಮ ಅನುಭವದ ಜೊತೆಗೆ, ರೋಗಿಯಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳನ್ನು ದಾಖಲಿಸಿಡುವುದು ದೊಡ್ಡ ಕೊಡುಗೆ ಆಗುತ್ತದೆ. ಇದನ್ನು ಒಂದು ಸಂಶೋಧನಾ ಅಧ್ಯಯನವಾಗಿ ತೆಗೆದುಕೊಳ್ಳಬಹುದು, ಅದರಲ್ಲಿ ವಿವಿಧ ಔಷಧಗಳ ಮತ್ತು ಚಿಕಿತ್ಸೆಯ ಪರಿಣಾಮಗಳನ್ನು ಉಲ್ಲೇಖಿಸಬಹುದು ಎಂದರು. ನಮ್ಮ ವೈದ್ಯರು ಸೇವೆ ಒದಗಿಸುತ್ತಿರುವ ರೋಗಿಗಳ ಸಂಖ್ಯೆಯು ಪ್ರಪಂಚದ ಸಂಖ್ಯೆಗಿಂತ ಮುಂದಿದೆ ಎಂದು ಶ್ರೀ ಮೋದಿ ಹೇಳಿದರು. ಜಗತ್ತು ಅರಿವನ್ನು ಪಡೆದು, ಈ ವೈಜ್ಞಾನಿಕ ಅಧ್ಯಯನಗಳಿಂದ ಲಾಭ ಪಡೆಯುವ ಸಮಯ ಈಗ ಬಂದಿದೆ. ಕೋವಿಡ್ ಸಾಂಕ್ರಾಮಿಕವು ಇದಕ್ಕೆ ಉತ್ತಮ ಆರಂಭದ ಹಂತವಾಗಿದೆ ಎಂದರು. ಲಸಿಕೆಗಳು ನಮಗೆ ಹೇಗೆ ಸಹಾಯ ಮಾಡುತ್ತವೆ, ಆರಂಭಿಕ ರೋಗಪತ್ತೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವು ಹೆಚ್ಚು ಆಳವಾಗಿ ಅಧ್ಯಯನ ಮಾಡಬಹುದು ಎಂದು ಪ್ರಧಾನಿ ಹೇಳಿದರು. ಕಳೆದ ಶತಮಾನದ ಸಾಂಕ್ರಾಮಿಕ ರೋಗದ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ ಆದರೆ ಈಗ ನಮ್ಮಲ್ಲಿ ತಂತ್ರಜ್ಞಾನವಿದೆ ಮತ್ತು ನಾವು ಕೋವಿಡ್ ಅನ್ನು ಹೇಗೆ ಎದುರಿಸಿದ್ದೇವೆ ಎಂಬುದರ ಕುರಿತು ದಾಖಲಿಸಿದರೆ, ಮಾನವೀಯತೆಗೆ ಸಹಾಯ ಮಾಡಿದಂತಾಗುತ್ತದೆ ಎಂದು ಪ್ರಧಾನಮಂತ್ರಿ ತಮ್ಮ ಭಾಷಣ ಪರಿಸಮಾಪ್ತಿಗೊಳಿಸಿದರು.

 

***(Release ID: 1732025) Visitor Counter : 495