ರೈಲ್ವೇ ಸಚಿವಾಲಯ

"ಭವಿಷ್ಯಕ್ಕೆ ಸನ್ನದ್ಧ” ಆಗಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ರೈಲ್ವೆಯು, 115000 ಕೋಟಿ ರೂ.ಗಳಿಗಿಂತಲೂ ಅಧಿಕ ಮೌಲ್ಯದ 58 ಅತ್ಯಂತ ನಿರ್ಣಾಯಕ ಮತ್ತು 68 ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸುವ ಹಾದಿಯಲ್ಲಿದೆ


ಸಂಚಾರ, ಸುರಕ್ಷತೆಗೆ ಹೆಚ್ಚಿನ ಉತ್ತೇಜನ ಮತ್ತು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರ ಹಾಗೂ ಸರಕು ಸಾಗಣೆ ರೈಲುಗಳನ್ನು ಓಡಿಸಲು ಹೆಚ್ಚುವರಿ ಸಾಮರ್ಥ್ಯ ಸೃಷ್ಟಿ

ಕೋವಿಡ್ ಸವಾಲುಗಳ ಹೊರತಾಗಿಯೂ 11,588 ಕೋಟಿ ರೂ. ವೆಚ್ಚದ, 1,044 ಕಿ.ಮೀ ಉದ್ದದ 29 ಅತ್ಯಂತ ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ

ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ

3750 ಕಿ.ಮೀ. ಉದ್ದದ 58 ಅತ್ಯಂತ ನಿರ್ಣಾಯಕ ಯೋಜನೆಗಳ ಒಟ್ಟು ವೆಚ್ಚ 39663 ಕೋಟಿ ರೂ.

6913 ಕಿ.ಮೀ. ಉದ್ದದ 68 ನಿರ್ಣಾಯಕ ಯೋಜನೆಗಳ ಒಟ್ಟು ವೆಚ್ಚ 75736 ಕೋಟಿ ರೂ.

ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಬಹು-ಹಳಿ ಅಂದರೆ ಜೋಡಿ ಹಳಿ/ 3ನೇ ಮಾರ್ಗ/4ನೇ ಮಾರ್ಗದ ಅಳವಡಿಕೆ ಕಾಮಗಾರಿಗಳನ್ನು ಈ ಯೋಜನೆಗಳು ಒಳಗೊಂಡಿವೆ

Posted On: 29 JUN 2021 1:47PM by PIB Bengaluru

"ಭವಿಷ್ಯ ಸನ್ನದ್ಧ" ಆಗಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈಲ್ವೆ ಇಲಾಖೆಯು ಮುಂದಿನ ಕೆಲವು ವರ್ಷಗಳಲ್ಲಿ 115000 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ 58 ಅತ್ಯಂತ ನಿರ್ಣಾಯಕ ಮತ್ತು 68 ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸುವ ಹಾದಿಯಲ್ಲಿದೆ.

ಹಳಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಗತ್ಯವಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕೋವಿಡ್ ಸವಾಲುಗಳ ಹೊರತಾಗಿಯೂ  ಭಾರತೀಯ ರೈಲ್ವೆಯು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. 

ಕಳೆದ ಒಂದು ವರ್ಷದಲ್ಲಿ 11,588 ಕೋಟಿ ರೂ. ವೆಚ್ಚದ,  ಒಟ್ಟು 1,044 ಕಿ.ಮೀ. ಉದ್ದದ 29 ಅತ್ಯಂತ ನಿರ್ಣಾಯಕ ಯೋಜನೆಗಳನ್ನು ಕಾರ್ಯಾರಂಭ ಮಾಡಲಾಗಿದೆ. 

ಭಾರತೀಯ ರೈಲ್ವೆಯು ಒಟ್ಟು 39663 ಕೋಟಿ ರೂ. ವೆಚ್ಚದ 3750 ಕಿ.ಮೀ ಉದ್ದದ ಒಟ್ಟು 58 ಅತ್ಯಂತ ನಿರ್ಣಾಯಕ ಯೋಜನೆಗಳನ್ನು ಗುರುತಿಸಿದೆ. ಈ ಒಟ್ಟು 58 ಅತ್ಯಂತ ನಿರ್ಣಾಯಕ ಯೋಜನೆಗಳಲ್ಲಿ 27 ಯೋಜನೆಗಳು 2021ರ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳಲಿದ್ದು, ಉಳಿದ 02 ಯೋಜನೆಗಳನ್ನು 2022ರ ಮಾರ್ಚ್ ವೇಳೆಗೆ ಹಸ್ತಾಂತರಿಸಲಾಗುವುದು.
ಭಾರತೀಯ ರೈಲುಗಳ ಹೆಚ್ಚಿನ ಸಂಚಾರವು ʻಗೋಲ್ಡನ್ ಕ್ವಾಡ್ರಿಲ್ಯಾಟರಲ್ʼ, ʻಅತ್ಯಧಿಕ ದಟ್ಟಣೆಯುಳ್ಳ ಮಾರ್ಗಗಳ ಜಾಲʼ ಮತ್ತು ʻಅತ್ಯಧಿಕ ಬಳಕೆಯ ಮಾರ್ಗಗಳ ಜಾಲʼದಲ್ಲೇ ನಡೆಯುತ್ತದೆ ಎಂಬುದು ಗಮನಾರ್ಹ. ಭಾರತೀಯ ರೈಲ್ವೆ ಜಾಲದ ಒಟ್ಟು ಉದ್ದದಲ್ಲಿ ಈ ʻಅತ್ಯಧಿಕ ದಟ್ಟಣೆಯ ಮಾರ್ಗದ ಜಾಲʼ ಮತ್ತು ʻಅತ್ಯಧಿಕ ಬಳಕೆಯ ಮಾರ್ಗದ ಜಾಲʼದ ಪಾಲು ಶೇ. 51%ರಷ್ಟಿದೆ. ಆದರೆ, ಶೇ. 96ರಷ್ಟು ಸಂಚಾರ ಈ ಮಾರ್ಗಗಳಲ್ಲೇ ನಡೆಯುತ್ತದೆ. 

ಸಂಚಾರ ದಟ್ಟಣೆ, ಸರಕಿನ ವಿಧ, ವ್ಯೂಹಾತ್ಮಕ ದೃಷ್ಟಿಯಿಂದ ಮಾರ್ಗದ ಪ್ರಾಮುಖ್ಯತೆ ಇತ್ಯಾದಿಗಳ ಆಧಾರದ ಮೇಲೆ, ಈಗಾಗಲೇ ಉತ್ತಮವಾಗಿ ಪ್ರಗತಿ ಹೊಂದುತ್ತಿರುವ (ಈಗಾಗಲೇ 60% ಕ್ಕಿಂತ ಹೆಚ್ಚಿನ ವೆಚ್ಚ) ಯೋಜನೆಗಳು ಸೇರಿದಂತೆ ತುರ್ತು ವಿಸ್ತರಣೆಯ ಅಗತ್ಯವಿರುವ ಯೋಜನೆಗಳನ್ನು ಅತ್ಯಂತ ನಿರ್ಣಾಯಕ ಯೋಜನೆಗಳು (58) ಎಂದು ವರ್ಗೀಕರಿಸಲಾಗಿದೆ.  ಅದೇ ರೀತಿ, ಮುಂದಿನ ಹಂತದಲ್ಲಿ ಪೂರ್ಣಗೊಳಿಸಬೇಕಾದ ಯೋಜನೆಗಳನ್ನು ʻನಿರ್ಣಾಯಕ ಯೋಜನೆಗಳುʼ (68) ಎಂದು ವ್ಯಾಖ್ಯಾನಿಸಲಾಗಿದೆ. ಎಲ್ಲವೂ ನಾಗರಿಕ ಯೋಜನೆಗಳು (ಎಲ್ಲಾ ಸಂಬಂಧಿತ ವಿದ್ಯುದೀಕರಣ ಮತ್ತು ಸಿಗ್ನಲಿಂಗ್ ಕಾರ್ಯಗಳೂ ಸೇರಿದಂತೆ)

ಈ ಯೋಜನೆಗಳ ಮೇಲಿನ ಹೂಡಿಕೆಯ ಪ್ರಯೋಜನಗಳನ್ನು ತ್ವರಿತವಾಗಿ ಪಡೆಯುವ ದೃಷ್ಟಿಯಿಂದ ಕೇಂದ್ರೀಕೃತ ಧನಸಹಾಯ ಹಾಗೂ ನಿರಂತರ ಮೇಲ್ವಿಚಾರಣೆಯ ಮೂಲಕ ಇವುಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗಳು ಪೂರ್ಣಗೊಂಡ ನಂತರ ಸಂಚಾರ ಮತ್ತು ಸುರಕ್ಷತೆ ಸುಧಾರಿಸಲಿದೆ. ಜೊತೆಗೆ, ಈಗಾಗಲೇ ಗರಿಷ್ಠ ಸಂಖ್ಯಾ ಮಿತಿ ತಲುಪಿರುವ ಮತ್ತು ಅತ್ಯಧಿಕ ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಹಾಗೂ ಸರಕು ಸಾಗಣೆ ರೈಲುಗಳನ್ನು ಓಡಿಸಲು ಹೆಚ್ಚುವರಿ ಸಾಮರ್ಥ್ಯವನ್ನು ಈ ಯೋಜನೆಗಳು ಸೃಷ್ಟಿಸುತ್ತವೆ. ಈ ನಿರ್ದಿಷ್ಟ ಯೋಜನೆಗಳಿಗೆ ಬಜೆಟ್ ಹಂಚಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಅತ್ಯಂತ ನಿರ್ಣಾಯಕ ಯೋಜನೆಗಳು:

39663 ಕೋಟಿ ರೂ. ವೆಚ್ಚದ ಒಟ್ಟು 3750 ಕಿ.ಮೀ ಉದ್ದದ 58 ಅತ್ಯಂತ ನಿರ್ಣಾಯಕ ಯೋಜನೆಗಳನ್ನು ಗುರುತಿಸಲಾಗಿದೆ. ಈ ಅತ್ಯಂತ ನಿರ್ಣಾಯಕ ಯೋಜನೆಗಳು ಬಹು-ಹಳಿ ಅಂದರೆ ಹೆಚ್ಚಿನ ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಜೋಡಿಹಳಿ/3ನೇ ಲೈನ್/4ನೇ ಹಳಿ ಅಳವಡಿಸುವ ಯೋಜನೆಗಳಾಗಿವೆ. ಈ ಯೋಜನೆಗಳು ಪೂರ್ಣಗೊಂಡನಂತರ, ರೈಲ್ವೆಯು ಈ ಅಧಿಕ ದಟ್ಟಣೆಯ/ಗರಿಷ್ಠ ಮಿತಿ ತಲುಪಿದ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆ ರೈಲುಗಳನ್ನು ಮತ್ತಷ್ಟು ವೇಗವಾಗಿ ಹಾಗೂ ಸುರಕ್ಷತೆಯೊಂದಿಗೆ ಓಡಿಸಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, 11,588 ಕೋಟಿ ರೂ. ವೆಚ್ಚದ ಒಟ್ಟು 1,044 ಕಿ.ಮೀ ಉದ್ದದ 29 ಯೋಜನೆಗಳನ್ನು ಕಾರ್ಯಾರಂಭ ಮಾಡಲಾಗಿದೆ. 27 ಯೋಜನೆಗಳು ಡಿಸೆಂಬರ್ 2021ರೊಳಗೆ ಪೂರ್ಣಗೊಳ್ಳಲಿವೆ ಮತ್ತು ಉಳಿದ 02 ಯೋಜನೆಗಳನ್ನು ಮಾರ್ಚ್ 2022ರೊಳಗೆ ಪೂರ್ಣಗೊಳಿಸಲಾಗುವುದು.

ನಿರ್ಣಾಯಕ ಯೋಜನೆಗಳು:
75736 ಕೋಟಿ ರೂ. ವೆಚ್ಚದ 6913 ಕಿ.ಮೀ. ಉದ್ದದ 68 ನಿರ್ಣಾಯಕ ಯೋಜನೆಗಳನ್ನು ಗುರುತಿಸಲಾಗಿದೆ. ಈ ಪೈಕಿ 1408 ಕೋಟಿ ರೂ. ವೆಚ್ಚದ 108 ಕಿ.ಮೀ ಉದ್ದದ 04 ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ ಯೋಜನೆಗಳನ್ನು 2024ರ ಮಾರ್ಚ್ ವೇಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
68 ನಿರ್ಣಾಯಕ ಯೋಜನೆಗಳ - ನಿರೀಕ್ಷಿತ ವೆಚ್ಚ ರೂ 75736 ಕೋಟಿ (ಸುಮಾರು 76,000 ಕೋಟಿ). ಈ ಪೈಕಿ 37734 (ಸುಮಾರು ರೂ 38000 ಕೋಟಿ) ರೂ.ಗಳನ್ನು 2021ರ ಮಾರ್ಚ್‌ವರೆಗೆ  ಖರ್ಚು ಮಾಡಲಾಗಿದೆ. ಇದಕ್ಕಾಗಿ ಈ ವರ್ಷದಲ್ಲಿ 14466 ಕೋಟಿ ರೂ. (ಸುಮಾರು 15000 ಕೋಟಿ) ತೆಗೆದಿರಿಸಲಾಗಿದ್ದು ಇಲ್ಲಿಯವರೆಗೆ 4 ಯೋಜನೆಗಳು ಪೂರ್ಣಗೊಂಡಿವೆ.
ಕೋವಿಡ್-19 ಸಾಂಕ್ರಾಮಿಕದ ಹೊರತಾಗಿಯೂ ಭಾರತೀಯ ರೈಲ್ವೆಯು 2020-21ನೇ ಹಣಕಾಸು ವರ್ಷದಲ್ಲಿ 1614 ಕಿ.ಮೀ. ಉದ್ದದ ಹಳಿಗಳ ಡಬ್ಲಿಂಗ್‌/ 3ನೇ/ 4ನೇ ಹಳಿಯ ಅಳವಡಿಕೆಯನ್ನು ಪೂರ್ಣಗೊಳಿಸಿದೆ. ಸಾಂಕ್ರಾಮಿಕ ಪರಿಸ್ಥಿತಿ ಪುನರಾವರ್ತಿಸಿದರೂ ಭಾರತೀಯ ರೈಲ್ವೆ 2021-22ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 133 ಕಿ.ಮೀ ಡಬ್ಲಿಂಗ್‌/ 3ನೇ ಹಳಿ ಅಳವಡಿಕೆಯನ್ನು ಮುಗಿಸಿದೆ. 

ಭಾರತೀಯ ರೈಲ್ವೆಯು ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರಾಖಂಡ್ ನಂತಹ ರಾಜ್ಯಗಳಿಗೆ ಕೆಲವು ಪ್ರಮುಖ ಸಾಮರ್ಥ್ಯ ವರ್ಧನೆ ಯೋಜನೆಗಳನ್ನು ಒದಗಿಸಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:-

1) ಅಸ್ಸಾಂ -
ʻನ್ಯೂ ಬೊಂಗೈಗಾಂವ್-ಗುವಾಹಟಿʼ ವಿಭಾಗದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ  ʻನರನಾರಾಯಣ ಸೇತುʼವಿನ ಮೇಲೆ  ಎರಡನೇ ಸಾಲಿನ ಹಳಿಯ ಆರಂಭ. ಇದು ಈ ವಿಭಾಗಕ್ಕೆ ನಿರಾಳತೆ ಒದಗಿಸಿದೆ. 

2) ಪಶ್ಚಿಮ ಬಂಗಾಳ -

ಎ) 2021ರ ಮೇ ತಿಂಗಳಲ್ಲಿ, ಭಾರತೀಯ ರೈಲ್ವೆಯು ಕೋವಿಡ್-19 ಸಾಂಕ್ರಾಮಿಕ ಮತ್ತು ರಾಜ್ಯ ಚುನಾವಣೆಯ ಹೊರತಾಗಿಯೂ ಎರಡು ಡಬ್ಲಿಂಗ್‌ ಯೋಜನೆಗಳ ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಅವುಗಳೆಂದರೆ ಪಶ್ಚಿಮ ಬಂಗಾಳದ ಕತ್ವಾ- ಬಜಾರ್ ಸೌ ಮತ್ತು ಅಜೀಂಗಂಜ್-ಬಜಾರ್ ಸೌ.  

ಬಿ) ಕತ್ವಾ- ಬಜಾರ್ ಸೌ ಮತ್ತು ಅಜೀಂಗಂಜ್-ಬಜಾರ್ ಸೌ: ʻಎನ್‌ಟಿಪಿಸಿʼಗೆ ಸೇರಿದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಿಗೆ ಅಂದರೆ ʻಫರಕ್ಕಾ ಸೂಪರ್ ಥರ್ಮಲ್ ಪವರ್ ಸ್ಟೇಷನ್ʼ ಮತ್ತು ʻಕತ್ವಾ ಸೂಪರ್ ಥರ್ಮಲ್ ಪವರ್ ಸ್ಟೇಷನ್ʼಗಳಿಗೆ (ನಿರ್ಮಾಣ ಹಂತದಲ್ಲಿದೆ) ಕಲ್ಲಿದ್ದಲನ್ನು ಸಾಗಿಸುವ ನಿಟ್ಟಿನಲ್ಲಿ ಬರ್ಧಮಾನ್‌ನಿಂದ ಸಾಹಿಬ್ ಗಂಜ್‌ಗೆ/ ಅಲ್ಲಿಂದ ಬರ್ಧಮಾನ್‌ಗೆ ಸಂಚಾರದ ದೃಷ್ಟಿಯಿಂದ ಈ ಮಾರ್ಗವನ್ನು ಡಬ್ಲಿಂಗ್‌ ಮಾಡುವುದು ಬಹಳ ಮುಖ್ಯವಾಗಿದೆ.

3) ಮಹಾರಾಷ್ಟ್ರ -
2021ರ ಜೂನ್‌ನಲ್ಲಿ, ಭಾರತೀಯ ರೈಲ್ವೆಯು ಮಹಾರಾಷ್ಟ್ರದಲ್ಲಿ ಭೂಸಾವಲ್-ಜಲಗಾಂವ್ ನಡುವೆ 3ನೇ ಹಳಿಯನ್ನು ಸಂಚಾರ ಮುಕ್ತಗೊಳಿಸಿದೆ. ಈ ಅತ್ಯಂತ ನಿರ್ಣಾಯಕ ಯೋಜನೆಯು ಈ ವಿಭಾಗದ ಅಡಚಣೆಯನ್ನು ನಿವಾರಿಸುವುದಲ್ಲದೆ, ಮನ್ಮದ್-ಖಾಂಡ್ವಾ ಮತ್ತು ಭೂಸಾವಲ್-ಉದ್ನಾ ವಿಭಾಗದಲ್ಲಿ ರೈಲು ಸೇವೆಯ ಕಾರ್ಯಾಚರಣೆಗೆ ಹೆಚ್ಚಿನ ನಿರಾಳತೆ ಒದಗಿಸಿದೆ. 

4) ಉತ್ತರಾಖಂಡ -
ಹರಿದ್ವಾರ-ಲಕ್ಸರ್‌ ಡಬ್ಲಿಂಗ್: ಈ ವಿಭಾಗದ ಕಾರ್ಯಾರಂಭದ ನಂತರ (21ರ ಜನವರಿಯಲ್ಲಿ) ರಾಷ್ಟ್ರೀಯ ರಾಜಧಾನಿ ನವದೆಹಲಿಯಿಂದ ಮೀರತ್ ಮೂಲಕ ಹರಿದ್ವಾರಕ್ಕೆ ಹೋಗುವ ಸಂಪೂರ್ಣ ಮಾರ್ಗ, ಮುಜಾಫರ್ ನಗರ ಮತ್ತು ರೂರ್ಕಿ ಜೋಡಿ ಮಾರ್ಗವಾಗಿದೆ. ಇದು ಈ ಸಂಚಾರ ದಟ್ಟಣೆಯ ಮಾರ್ಗದಲ್ಲಿ ರೈಲುಗಳ ಸಮಯ ಪಾಲನೆಯನ್ನು ಸುಧಾರಿಸುತ್ತದೆ.

ಮೇಲಿನ ಅತ್ಯಂತ ನಿರ್ಣಾಯಕ ಮತ್ತು ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ, ಕಿಕ್ಕಿರಿದ ಮಾರ್ಗಗಳಲ್ಲಿ ಪ್ರಯಾಣಿಕರ ಮತ್ತು ಸರಕು ಸಾಗಣೆ ರೈಲುಗಳ ಸುಗಮ ಸಂಚಾರಕ್ಕೆ  ಮಾರ್ಗಗಳ ಸಾಮರ್ಥ್ಯ ಹೆಚ್ಚಾಗಲಿದೆ. ಇದರಿಂದ ರೈಲುಗಳ ವೇಗವನ್ನು ಹೆಚ್ಚಿಸಲು, ಹೊಸ ರೈಲು ಸೇವೆ ಆರಂಭಕ್ಕೆ ನೆರವಾಗಲಿದೆ. ಜೊತೆಗೆ, ಈ ಅಧಿಕ ಸಂಚಾರ ದಟ್ಟಣೆ ಮಾರ್ಗಗಳಲ್ಲಿ ಹಳಿಗಳ ನಿರ್ವಹಣೆಗೆ ಅವಕಾಶ ದೊರೆಯುವುದರಿಂದ ಸುರಕ್ಷತೆ ಹೆಚ್ಚಿಸಲೂ ಸಹಾಯಕವಾಗಲಿದೆ.

****


(Release ID: 1731156) Visitor Counter : 318