ಪ್ರಧಾನ ಮಂತ್ರಿಯವರ ಕಛೇರಿ

ಅಹ್ಮದಾಬಾದಿನ ಎ.ಎಂ.ಎ.ಯಲ್ಲಿ ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿ ಉದ್ಘಾಟಿಸಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಇಂಗ್ಲೀಷ್ ಅವತರಣಿಕೆ

Posted On: 27 JUN 2021 12:54PM by PIB Bengaluru

ನಮಸ್ಕಾರ!

ನೀವೆಲ್ಲ ಹೇಗಿದ್ದೀರಿ?

ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿಯ ಆರಂಭ ಭಾರತ-ಜಪಾನ್ ಬಾಂಧವ್ಯದ ಆಧುನಿಕತೆ ಮತ್ತು ಸ್ವಾಭಾವಿಕತೆಗೆ ಸಂಕೇತ. ಜಪಾನೀ ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿಯ ಸ್ಥಾಪನೆ ಭಾರತ ಮತ್ತು ಜಪಾನ್ ನಡುವಣ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಮತ್ತು ನಮ್ಮ ನಾಗರಿಕರನ್ನು ಇನ್ನಷ್ಟು ಹತ್ತಿರ ತರುವ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಹ್ಯೋಗೋ ಅಧಿಕಾರಿಗಳು, ನಾಯಕರು ಮತ್ತು ನನ್ನ ಪ್ರಿಯ ಮಿತ್ರರಾದ ಗವರ್ನರ್ ಶ್ರೀ ತೋಷಿಜೋ ಇಡೋ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇಡೋ ಅವರು 2017ರಲ್ಲಿ ಅಹ್ಮದಾಬಾದಿಗೆ ಬಂದಿದ್ದರು. ಅವರು ಮತ್ತು ಹ್ಯೋಗೋ ಅಂತಾರಾಷ್ಟ್ರೀಯ ಸಂಘಟನೆ  ಅಹ್ಮದಾಬಾದಿನಲ್ಲಿ ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ನಾನು ಗುಜರಾತಿನ ಭಾರತದ ಜಪಾನ್ ಮಿತ್ರ ಕೂಟ ಸಂಘಟನೆಯ ಸಹೋದ್ಯೋಗಿಗಳನ್ನು ಅಭಿನಂದಿಸುತ್ತೇನೆ. ಅವರು ಭಾರತ- ಜಪಾನ್ ಸಂಬಂಧಗಳಿಗೆ ಹೊಸ ಶಕ್ತಿ ತರಲು ಸತತವಾಗಿ ಗಮನಾರ್ಹವಾದಂತಹ ಕೆಲಸಗಳನ್ನು ಮಾಡಿದ್ದಾರೆ. ಜಪಾನ್ ಮಾಹಿತಿ ಮತ್ತು ಅಧ್ಯಯನ ಕೇಂದ್ರ ಕೂಡಾ ಒಂದು ಉದಾಹರಣೆ.

ಸ್ನೇಹಿತರೇ,

ಭಾರತ ಮತ್ತು ಜಪಾನ್ ಗಳು ಬಾಹ್ಯ ಪ್ರಗತಿ ಮತ್ತು ಬೆಳವಣಿಗೆಗೆ ಮಾತ್ರವೇ ಬದ್ಧವಾಗಿರುವುದಲ್ಲ, ಅವುಗಳು ಆಂತರಿಕ ಶಾಂತಿ ಮತ್ತು ಪ್ರಗತಿಗೂ ಸಮಾನ ಮಹತ್ವವನ್ನು ಕೊಟ್ಟಿವೆ. ಶಾಂತಿ ಮತ್ತು ಸರಳತೆಯ ಈ ಆಶಯಕ್ಕೆ ಜಪಾನಿನ ಝೆನ್ ಗಾರ್ಡನ್ ಒಂದು ಸುಂದರವಾದ ಅಭಿವ್ಯಕ್ತಿ. ಭಾರತದ ಜನತೆ ಯೋಗ ಮತ್ತು ಆಧ್ಯಾತ್ಮಿಕತೆಯ ಮೂಲಕ ಶತಮಾನಗಳಿಂದ ಅನುಭವಿಸಿರುವ ಶಾಂತಿ, ಸಮತೋಲನ/ಸಮಚಿತ್ತ ಮತ್ತು ಸರಳತೆಯ ಅಂಶಗಳನ್ನು ಇಲ್ಲಿ ಕಾಣಬಲ್ಲರು. ಮತ್ತು ಜಪಾನಿನಲ್ಲಿ “ಝೆನ್” ಎಂದರೆ ಭಾರತದಲ್ಲಿ ಅದು ಧ್ಯಾನ. ಬುದ್ಧ ಈ ಧ್ಯಾನವನ್ನು, ಈ ಬುದ್ಧ ಧರ್ಮವನ್ನು ಜಗತ್ತಿಗೆ ನೀಡಿದ. ಮತ್ತು ಕೈಝೆನ್ ನ ಪರಿಕಲ್ಪನೆಗೆ ಸಂಬಂಧಿಸಿ ಹೇಳುವುದಾದರೆ, ಅದು ನಮ್ಮ ವರ್ತಮಾನದ ಉದ್ದೇಶಗಳ ಮತ್ತು ನಿರಂತರವಾಗಿ ಮುನ್ನಡೆಯುವ ನಮ್ಮ ಬದ್ಧತೆಯ ಶಕ್ತಿಗೆ ಸಾಕ್ಷಿ. 

ನಿಮ್ಮಲ್ಲಿ ಬಹಳಷ್ಟು ಜನರಿಗೆ ಕೈಝೆನ್ ಅರ್ಥ “ಸುಧಾರಣೆ” ಎಂಬುದು ಗೊತ್ತಿದೆ, ಆದರೆ ಅದರ ಒಳಾರ್ಥ ಬಹಳ ವಿಶಾಲವಾದುದು.ಅದು ಬರೇ “ಸುಧಾರಣೆ” ಯನ್ನು ಒತ್ತಿ ಹೇಳುವುದಲ್ಲ ಅದು “ನಿರಂತರ ಸುಧಾರಣೆ”

ಸ್ನೇಹಿತರೇ,

ನಾನು ಮುಖ್ಯಮಂತ್ರಿಯಾದ ಅಲ್ಪ ಕಾಲದಲ್ಲಿಯೇ ಮೊದಲ ಬಾರಿಗೆ ಗುಜರಾತಿನಲ್ಲಿ ಕೈಝೆನ್ ಗಾಗಿ ಗಂಭೀರ ಪ್ರಯತ್ನಗಳನ್ನು ಮಾಡಲಾಯಿತು. ನಾವು ಕೈಝೆನ್ ನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿದೆವು. ಅದನ್ನು ಅನುಷ್ಠಾನ ಮಾಡಿದೆವು. ಮತ್ತು 2004 ರಲ್ಲಿ ಮೊದಲ ಬಾರಿಗೆ ಆಡಳಿತ ತರಬೇತಿಯಲ್ಲಿ ಕೈಝೆನ್ ಗೆ ಬಹಳ ಆದ್ಯತೆಯನ್ನು ನೀಡಲಾಯಿತು. ಮುಂದಿನ ವರ್ಷ 2005ರಲ್ಲಿ ನಾವು ಗುಜರಾತಿನ ಹಿರಿಯ ಅಧಿಕಾರಿಗಳಿಗೆ ಕೈಝೆನ್ ತರಬೇತಿ ನೀಡಿದೆವು. ನಿಧಾನವಾಗಿ ನಾವದನ್ನು ಶಿಕ್ಷಣ ವ್ಯವಸ್ಥೆ ಮತ್ತು ಗುಜರಾತಿನ ಹಲವು ಸರಕಾರಿ ಕಚೇರಿಗಳಲ್ಲಿ ಜಾರಿಗೆ ತಂದೆವು.  ನಾನಿಲ್ಲಿ ಮಾತನಾಡುತ್ತಿರುವ ನಿರಂತರ ಸುಧಾರಣೆ ಕೂಡಾ ಮುಂದುವರಿಯಿತು. ನಾವು ಸರಕಾರಿ ಕಚೇರಿಗಳಿಂದ ಟ್ರಕ್ಕುಗಳಷ್ಟು ಅನಗತ್ಯ ಹೊರೆಯನ್ನು ಹೊರ ಸಾಗಿಸಿದೆವು, ಇಡೀ ಪ್ರಕ್ರಿಯೆಯನ್ನು ಪುನಶ್ಚೇತನ ಗೊಳಿಸಲಾಯಿತು ಮತ್ತು ಅದನ್ನು ಸರಳಗೊಳಿಸಲಾಯಿತು.

ಅದೇ ರೀತಿ, ಕೈಝೆನ್ ನಿಂದ ಪ್ರೇರಣೆ ಪಡೆದು ಆರೋಗ್ಯ ಇಲಾಖೆಯಲ್ಲಿ ಬೃಹತ್ ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಸಾವಿರಾರು ವೈದ್ಯರು, ದಾದಿಯರು, ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಕೈಝೆನ್ ಅಡಿ ತರಬೇತು ಮಾಡಲಾಯಿತು. ನಾವು ವಿವಿಧ ಇಲಾಖೆಗಳಲ್ಲಿ  ಕಾರ್ಯಾಗಾರಗಳನ್ನು ಆಯೋಜಿಸಿದೆವು, ಪ್ರಕ್ರಿಯೆಗಳ ಮೇಲೆ ಕಾರ್ಯನಿರ್ವಹಿಸಿದೆವು, ಜನರು ತೊಡಗುವಂತೆ ಮಾಡಿದೆವು, ಮತ್ತು ಅವರನ್ನು ಅದರೊಂದಿಗೆ ಜೋಡಿಸಿದೆವು. ಇವೆಲ್ಲವೂ ಆಡಳಿತದ ಮೇಲೆ ಭಾರೀ ಧನಾತ್ಮಕ ಪರಿಣಾಮವನ್ನು ಉಂಟು ಮಾಡಿತು.

ಸ್ನೇಹಿತರೇ,

ಪ್ರಗತಿಗೆ ಆಡಳಿತ ಬಹಳ ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದು ವೈಯಕ್ತಿಕ ಆಭಿವೃದ್ಧಿಯಾಗಿರಲಿ, ಸಾಂಸ್ಥಿಕ, ಸಮಾಜದ ಅಥವಾ ದೇಶದ ಅಭಿವೃದ್ಧಿಯಾಗಿರಲಿ ಆಡಳಿತದ ಪಾತ್ರ ಬಹಳ ಮುಖ್ಯವಾದುದು. ನಾನು ಗುಜರಾತಿನಿಂದ ದಿಲ್ಲಿಗೆ ಬಂದಾಗ ನಾನು ಕೈಝೆನ್ ನಿಂದ ಗಳಿಸಿದ ಅನುಭವವನ್ನು ನನ್ನೊಂದಿಗೆ ತಂದಿದ್ದೆ. ನಾವದನ್ನು ಪಿ.ಎಂ.ಒ.ದಲ್ಲಿ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಅನುಷ್ಠಾನಕ್ಕೆ ತಂದೆವು. ಇದು ಪ್ರಕ್ರಿಯೆಗಳನ್ನು ಸರಳಗೊಳಿಸಿತು ಮಾತ್ರವಲ್ಲ ಕಚೇರಿ ಸ್ಥಳಾವಕಾಶದ ಗರಿಷ್ಠ ಬಳಕೆಗೂ ಅವಕಾಶವಾಯಿತು. ಕೈಝೆನ್ ನ್ನು ಹಲವು ಇಲಾಖೆಗಳು, ಸಂಸ್ಥೆಗಳು ಮತ್ತು ಕೇಂದ್ರ ಸರಕಾರದ ಯೋಜನೆಗಳಲ್ಲಿ ಬಳಸಲಾಗುತ್ತಿದೆ.

ಸ್ನೇಹಿತರೇ,

ಈ ಕಾರ್ಯಕ್ರಮದಲ್ಲಿರುವ ಜಪಾನಿನ ಅತಿಥಿಗಳು ಜಪಾನಿನ ಜೊತೆ ನನ್ನ ವೈಯಕ್ತಿಕ ಸಂಪರ್ಕಗಳ ಬಗ್ಗೆ ತಿಳಿದಿದ್ದಾರೆ. ಜಪಾನ್ ಜನತೆಯ ವಿಶ್ವಾಸ, ಅವರ ಕೆಲಸದ ಸಂಸ್ಕೃತಿ, ಕೌಶಲ್ಯ ಮತ್ತು ಶಿಸ್ತು ಎಲ್ಲಾ ಕಾಲದಲ್ಲಿಯೂ ಪ್ರಭಾವ ಬೀರುವಂತಹದು. ಮತ್ತು ಅದರಿಂದಾಗಿ ನಾನು ಗುಜರಾತಿನಲ್ಲಿ ಮಿನಿ ಜಪಾನ್ ನಿರ್ಮಾಣ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿದಾಗೆಲ್ಲ, ಅದರ ಹಿಂದಿದ್ದ ಚಿಂತನೆ, ಜಪಾನಿನ ಜನರು ಗುಜರಾತಿಗೆ ಬಂದಾಗ  ಅವರಿಗೆ ಅದೇ ಬೆಚ್ಚಗಿನ ಪ್ರೀತಿ ಲಭ್ಯವಾಗಬೇಕು  ಮತ್ತು ಪರಸ್ಪರ ಒಂದೇ ಎಂಬ ಭಾವನೆಯನ್ನು ಅನುಭವಿಸುವಂತಾಗಬೇಕು ಎಂಬುದಾಗಿತ್ತು. ನನಗೆ ನೆನಪಿದೆ ರೋಮಾಂಚಕ ಗುಜರಾತ್ ಶೃಂಗದಲ್ಲಿ ಆರಂಭದಲ್ಲೇ ಜಪಾನ್ ಪಾಲುದಾರ ದೇಶವಾಗಿ ಸೇರ್ಪಡೆಗೊಂಡಿತ್ತು. ಇಂದಿಗೂ ಕೂಡಾ ರೋಮಾಂಚಕ ಗುಜರಾತ್ ಶೃಂಗಕ್ಕೆ ಬರುವ ಅತ್ಯಂತ ದೊಡ್ಡ ನಿಯೋಗ ಕೂಡಾ ಜಪಾನಿನದ್ದು. ಜಪಾನ್ ಗುಜರಾತಿನ ಮೇಲಿಟ್ಟಿರುವ ವಿಶ್ವಾಸ ಮತ್ತು ಅದರ ಜನತೆಯ ಸಾಮರ್ಥ್ಯವನ್ನು  ನೋಡುವುದು ಸಂತೋಷಕರ ಸಂಗತಿ.

ಇಂದು ಜಪಾನಿನ ಅತ್ಯುತ್ತಮ ಕಂಪೆನಿಗಳು ಗುಜರಾತಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಸಂಖ್ಯೆ 135 ಕ್ಕೂ ಅಧಿಕ ಎಂದು ನನಗೆ ತಿಳಿಸಲಾಗಿದೆ. ಅಟೋಮೊಬೈಲ್ ನಿಂದ ಹಿಡಿದು ಬ್ಯಾಂಕಿಂಗ್ ಕ್ಷೇತ್ರದವರೆಗೆ, ನಿರ್ಮಾಣ ಕ್ಷೇತ್ರದಿಂದ ಹಿಡಿದು ಔಷಧ ಕ್ಷೇತ್ರದವರೆಗೆ ಜಪಾನಿ ಕಂಪೆನಿಗಳು ಅವುಗಳ ನೆಲೆಯನ್ನು ಗುಜರಾತಿನಲ್ಲಿ ಸ್ಥಾಪಿಸಿವೆ. ಸುಜುಕಿ ಮೋಟಾರ್ಸ್ ಇರಲಿ, ಹೊಂಡಾ ಮೋಟಾರ್ ಸೈಕಲ್, ಮಿಟ್ಸುಬಿಶಿ, ಟೊಯೋಟಾ, ಹಿಟಾಚಿ, ಮತ್ತು ಇಂತಹ ಹಲವು ಕಂಪೆನಿಗಳು ಗುಜರಾತಿನಲ್ಲಿ ಉತ್ಪಾದನೆ ಮಾಡುತ್ತಿವೆ. ಮತ್ತು ಒಂದು ಉತ್ತಮ ಸಂಗತಿ ಎಂದರೆ ಈ ಕಂಪೆನಿಗಳು ಗುಜರಾತಿನ ಯುವಜನತೆಯ ಕೌಶಲಾಭಿವೃದ್ಧಿಯಲ್ಲಿ ಬಹಳ ಸಹಾಯ ಮಾಡುತ್ತಿವೆ. ಮೂರು ಜಪಾನ್ –ಭಾರತ ಉತ್ಪಾದನಾ ಸಂಸ್ಥೆಗಳು ಪ್ರತೀ ವರ್ಷ ಗುಜರಾತಿನ ನೂರಾರು ಯುವಜನರಿಗೆ ಕೌಶಲ್ಯ ತರಬೇತಿ ನೀಡುತ್ತಿವೆ. ಹಲವು ಕಂಪೆನಿಗಳು ಗುಜರಾತಿನ ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ಐ.ಐ.ಟಿ.ಗಳ ಜೊತೆ ಸಹಯೋಗವನ್ನು ಹೊಂದಿವೆ.

ಸ್ನೇಹಿತರೇ

ಜಪಾನ್ ಮತ್ತು ಗುಜರಾತಿನ ಬಾಂಧವ್ಯದ ಬಗ್ಗೆ ಮಾತನಾಡಲು ಬಹಳಷ್ಟಿದೆ, ಆದರೆ ಸಮಯ ಸಾಕಾಗದು. ಈ ಸಂಬಂಧಗಳು ಪರಸ್ಪರ ಭಾವನೆಗಳ ಮತ್ತು ಅವಶ್ಯಕತೆಗಳನ್ನು ಕುರಿತ  ಅನ್ಯೋನ್ಯಮತ್ತು ತಿಳಿವಳಿಕೆಯಿಂದಾಗಿ ಬಲಿಷ್ಠಗೊಂಡಂತಹವು. ಗುಜರಾತ್ ಸದಾ ಜಪಾನ್ ಗೆ ವಿಶೇಷ ಮಹತ್ವವನ್ನು ಕೊಟ್ಟಿದೆ. ಅಹ್ಮದಾಬಾದ್ ಬ್ಯುಸಿನೆಸ್ ಸಪೋರ್ಟ್ ಸೆಂಟರನ್ನು ತೆರೆದಿರುವ ಜೆಟ್ರೋ ಅಲ್ಲಿ ಐದು ಕಂಪೆನಿಗಳಿಗೆ ಏಕಕಾಲಕ್ಕೆ ಕೆಲಸ ಮಾಡುವಂತಹ ಸ್ಥಳಾವಕಾಶದ ಸೌಲಭ್ಯವನ್ನು ಹೊಂದಿದೆ. ಇದರ ಪ್ರಯೋಜನವನ್ನು ಹಲವು ಜಪಾನಿ ಕಂಪೆನಿಗಳು ಪಡೆದುಕೊಂಡಿವೆ. ನಾನು ಹಳೆಯ ದಿನಗಳನ್ನು ನೆನಪಿಸಿಕೊಂಡಾಗ, ಗುಜರಾತಿನ ಜನತೆ ಸಣ್ಣ ಸಣ್ಣ ವಿವರಗಳಿಗೂ ಗಮನ ಕೊಟ್ಟಿರುವುದು ನೆನಪಾಗುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಜಪಾನಿನ ನಿಯೋಗದ ಜೊತೆ ಮಾತುಕತೆ ನಡೆಸುತ್ತಿದಾಗ ಔಪಚಾರಿಕವಾಗಿ ಒಂದು ವಿಷಯ ಪ್ರಸ್ತಾಪವಾದುದು ನನಗೆ ನೆನಪಾಗುತ್ತದೆ. ಆ ವಿಷಯ ಬಹಳ ಆಸಕ್ತಿದಾಯಕವಾದುದು. ಜಪಾನಿನ ಜನತೆ ಗೋಲ್ಫ್ ಆಡುವುದನ್ನು ಇಷ್ಟಪಡುತ್ತಾರೆ. ಆದರೆ ಆಗ ಗುಜರಾತಿನಲ್ಲಿ ಗೋಲ್ಫ್ ಕೋರ್ಟ್ ಗಳು ಅಷ್ಟೊಂದು ವ್ಯಾಪಕವಾಗಿ ಇರಲಿಲ್ಲ. ಸಭೆಯ ಬಳಿಕ ಗುಜರಾತಿನಲ್ಲಿ ಗೋಲ್ಫ್ ಕೋರ್ಟ್ ಗಳ ವಿಸ್ತರಣೆಗೆ ವಿಶೇಷ ಗಮನ ಕೊಡಲಾಯಿತು. ಈಗ ಗುಜರಾತಿನಲ್ಲಿ ಹಲವಾರು ಗೋಲ್ಫ್ ಕೋರ್ಟ್ ಗಳಿರುವುದಕ್ಕೆ ನಾನು ಸಂತೋಷಪಡುತ್ತೇನೆ.ಇಲ್ಲಿರುವ ಅನೇಕ ರೆಸ್ಟೋರೆಂಟ್ ಗಳಲ್ಲಿ ಜಪಾನೀ ಖಾದ್ಯ ಒಂದು ವೈಶಿಷ್ಟ್ಯವಾಗಿದೆ. ಜಪಾನ್ ಜನತೆ ಗುಜರಾತಿನಲ್ಲಿರುವಾಗ ಅವರ ಮನೆಯಲ್ಲಿದ್ದಾರೆ ಎಂಬ ಭಾವನೆ ಬರುವಂತೆ ಮಾಡಲು  ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಗುಜರಾತಿನಲ್ಲಿ ಜಪಾನಿ ಮಾತನಾಡುವವರ ಸಂಖ್ಯೆಯನ್ನು ಹೆಚ್ಚಿಸಲೂ ನಾವು ಬಹಳ ಪ್ರಯತ್ನಪಟ್ಟಿದ್ದೇವೆ. ಇಂದು ಗುಜರಾತಿನ ವೃತ್ತಿಪರ ಜಗತ್ತಿನಲ್ಲಿ ಹಲವಾರು ಮಂದಿ ಜಪಾನ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ರಾಜ್ಯದಲ್ಲಿಯ ವಿಶ್ವವಿದ್ಯಾಲಯವೊಂದು ಜಪಾನ್ ಭಾಷೆ ಕಲಿಯಲು ಕೋರ್ಸ್ ಆರಂಭಿಸುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಇದು ಉತ್ತಮ ಶುಭಾರಂಭ. ಗುಜರಾತಿನಲ್ಲಿ ಜಪಾನಿ ಮಾದರಿಯ ಶಾಲಾ ವ್ಯವಸ್ಥೆಯೂ ಇರಬೇಕು ಎಂಬುದು ನನ್ನ ಆಶಯವಾಗಿದೆ.

ನಾನು ಜಪಾನ್ ಶಾಲಾ ವ್ಯವಸ್ಥೆಯ ಬಹಳ ದೊಡ್ಡ ಅಭಿಮಾನಿ, ಅದು ಆಧುನಿಕತೆ ಮತ್ತು ನೈತಿಕ ಮೌಲ್ಯಗಳಿಗೆ  ಏಕಕಾಲದಲ್ಲಿ ಆದ್ಯತೆ ನೀಡುತ್ತದೆ. ನನಗೆ ಜಪಾನಿನ ಥೈಮೇ ಶಾಲೆಗೆ ಭೇಟಿ ನೀಡುವ ಅವಕಾಶ ಲಭಿಸಿತ್ತು. ಮತ್ತು ಆ ಕ್ಷಣಗಳು ಬಹಳ ಸ್ಮರಣೀಯವಾದಂತಹವು. ಆ ಶಾಲೆಯ ಮಕ್ಕಳೊಂದಿಗೆ ಮಾತನಾಡಿದ್ದು ಬಹಳ ಅಮೂಲ್ಯ ಅವಕಾಶ ಎಂದು ನಾನು ಹೇಳುತ್ತೇನೆ. 

ಸ್ನೇಹಿತರೇ,

ನಾವು ಶತಮಾನಗಳಷ್ಟು ಹಳೆಯ ಬಲಿಷ್ಠ ಸಾಂಸ್ಕೃತಿಕ ಬಾಂಧವ್ಯದಲ್ಲಿ ನಂಬಿಕೆಯನ್ನು  ಮತ್ತು ಭವಿಷ್ಯಕ್ಕೆ ಸಮಾನ ದೂರದೃಷ್ಟಿಯ ಚಿಂತನೆಯನ್ನು ಹೊಂದಿದ್ದೇವೆ!. ಇದರ ಆಧಾರದ ಮೇಲೆ ನಾವು ನಿರಂತರವಾಗಿ ನಮ್ಮ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವವನ್ನು ಹಲವಾರು ವರ್ಷಗಳಿಂದ ಹೊಂದಿದ್ದೇವೆ. ಇದಕ್ಕಾಗಿ, ನಾವು ಪಿ.ಎಂ.ಒ.ದಲ್ಲಿ ಜಪಾನ್ ಪ್ಲಸ್ ಎಂಬ ವಿಶೇಷ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಜಪಾನಿನ ಮಾಜಿ ಪ್ರಧಾನ ಮಂತ್ರಿ ಮತ್ತು ನನ್ನ ಸ್ನೇಹಿತರಾದ ಶ್ರೀ ಶಿಂಜೋ ಅಬೇ ಅವರು ಗುಜರಾತಿಗೆ ಭೇಟಿ ನೀಡಿದಾಗ ಭಾರತ-ಜಪಾನ್ ಬಾಂಧವ್ಯ ಹೊಸ ವೇಗ ಪಡೆದುಕೊಂಡಿತು. ಈಗಲೂ ಕೂಡಾ ನಾನವರೊಂದಿಗೆ ಮಾತನಾಡುವಾಗ ಅವರು ಈ ಗುಜರಾತ್ ಪ್ರವಾಸವನ್ನು ಸ್ಮರಿಸಿಕೊಳ್ಳುತ್ತಾರೆ. ಜಪಾನಿನ ಈಗಿನ ಪ್ರಧಾನ ಮಂತ್ರಿ ಶ್ರೀ ಯೋಶಿಹಿದೆ ಸುಗಾ ಕೂಡಾ ಬಹಳ ಸ್ನೇಹಪರ ವ್ಯಕ್ತಿ. ಮತ್ತು ಭಾರತ ಹಾಗು ಜಪಾನ್ ಬಾಂಧವ್ಯ ಈ ಕೋವಿಡ್ ಜಾಗತಿಕ ಸಾಂಕ್ರಾಮಿಕ ಕಾಲದಲ್ಲಿಯೂ ನಮ್ಮ ಸಹಭಾಗಿತ್ವ, ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ನಾನು ನಂಬುತ್ತೇನೆ. ನಾವು ಬಹಳಷ್ಟು ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವಾಗ ನಮ್ಮ ಬಾಂಧವ್ಯ ಮತ್ತು ಮೈತ್ರಿ ಬಲಗೊಳ್ಳಬೇಕಾದುದು ಬಹಳ ಅವಶ್ಯ. ಖಂಡಿತವಾಗಿಯೂ ಕೈಝೆನ್ ಅಕಾಡೆಮಿಯು  ಅದರ ಅತ್ಯಂತ ಸುಂದರ ಪ್ರತಿಫಲನ.

ಕೈಝೆನ್ ಅಕಾಡೆಮಿಯು ಭಾರತದಲ್ಲಿ ಜಪಾನಿನ ಕೆಲಸದ ಸಂಸ್ಕೃತಿಯನ್ನು ಉತ್ತೇಜಿಸಬೇಕು ಮತ್ತು ಜಪಾನ್ ಹಾಗು ಭಾರತದ ನಡುವೆ ವ್ಯಾಪಾರ ಸಂವಾದಗಳನ್ನು ಮುಂದುವರಿಸಬೇಕು ಎಂದು ಆಶಿಸುತ್ತೇನೆ. ಈ ನಿಟ್ಟಿನಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ನಾವು ನೀಡಬೇಕು. ಉದಾಹರಣೆಗೆ ಗುಜರಾತ್ ವಿಶ್ವವಿದ್ಯಾಲಯ ಮತ್ತು ಒಸಾಕಾದ ಒಟ್ಟೆಮಾನ್ ಗಾಕುಯಿನ್ ವಿಶ್ವವಿದ್ಯಾಲಯ ನಡುವಣ ಭಾರತ –ಜಪಾನ್ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ!. ಈ ಕಾರ್ಯಕ್ರಮ ಕಳೆದ ಐದು ದಶಕಗಳಿಂದ ನಮ್ಮ ಬಾಂಧವ್ಯವನ್ನು ಬಲಪಡಿಸುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸಬಹುದು. ಇಂತಹ ಸಹಭಾಗಿತ್ವವನ್ನುಇ ಉಭಯ ದೇಶಗಳವ್ಯಾಪಾರ ಸಂಸ್ಥೆಗಳ ನಡುವೆ ಬೆಳೆಸಬಹುದು.

ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಮತ್ತು ಭಾರತ ಹಾಗು ಜಪಾನ್ ಒಗ್ಗೂಡಿ ಅಭಿವೃದ್ಧಿಯ ಹೊಸ ಎತ್ತರಗಳನ್ನು ಸಾಧಿಸುತ್ತವೆ ಎಂಬುದು ನನಗೆ ಖಚಿತವಾಗಿದೆ. ಟೋಕಿಯೋ ಒಲಿಂಪಿಕ್ಸ್ ಆಯೋಜಿಸುತ್ತಿರುವುದಕ್ಕಾಗಿ ನಾನು ಜಪಾನ್ ಗೆ ಮತ್ತು ಜಪಾನಿನ ಜನತೆಗೆ ಈ ಕಾರ್ಯಕ್ರಮದ ಮೂಲಕ ಶುಭಾಶಯಗಳನ್ನು ತಿಳಿಸುತ್ತೇನೆ.

ನಿಮ್ಮೆಲ್ಲರಿಗೂ ಬಹಳ ಬಹಳ ಧನ್ಯವಾದಗಳು!.

ಘೋಷಣೆ: ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ ಇದು. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ



(Release ID: 1731093) Visitor Counter : 210