ರೈಲ್ವೇ ಸಚಿವಾಲಯ

ಶ್ರೀನಗರ ಸಹಿತ ಕಾಶ್ಮೀರ ಕಣಿವೆಯ ಎಲ್ಲಾ 15 ರೈಲ್ವೇ ನಿಲ್ದಾಣಗಳು ರೈಲ್ ವೈ-ಫೈ ಜಾಲದ ಮೂಲಕ 6021 ರೈಲು ನಿಲ್ದಾಣಗಳಿಗೆ ಜೋಡಣೆ


“ಡಿಜಿಟಲ್ ಇಂಡಿಯಾ ಆಂದೋಲನಕ್ಕೆ ಇದೊಂದು ನಿರ್ಣಾಯಕ ಹೆಜ್ಜೆ ಮತ್ತು ಸಂಪರ್ಕರಹಿತ ಸ್ಥಳಗಳನ್ನು ಜೋಡಿಸುವಲ್ಲಿ ಇದರಿಂದ ಅನುಕೂಲವಾಗಲಿದೆ” - ಶ್ರೀ ಪೀಯುಷ್ ಗೋಯಲ್

Posted On: 20 JUN 2021 12:53PM by PIB Bengaluru

ಶ್ರೀನಗರ ಸಹಿತ ಕಾಶ್ಮೀರ ಕಣಿವೆಯ ಎಲ್ಲಾ 15 ರೈಲು ನಿಲ್ದಾಣಗಳನ್ನು ಈಗ ಭಾರತೀಯ ರೈಲ್ವೇಯ ವೈ-ಫೈ ಜಾಲದ ಮೂಲಕ 6021 ನಿಲ್ದಾಣಗಳ ಜೊತೆ ಬೆಸೆಯಲಾಗಿದೆ.

ರೈಲ್ ವೈರ್ ಬ್ರಾಂಡ್ ಹೆಸರಿನಲ್ಲಿ ಒದಗಿಸಲಾಗಿರುವ ಸಾರ್ವಜನಿಕ ವೈ-ಫೈ ಈಗ ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದ ನಾಲ್ಕು ಜಿಲ್ಲಾ ಕೇಂದ್ರಗಳಾದ ಶ್ರೀನಗರ, ಬುಡ್ಗಾಂ, ಬನಿಹಾಲ್ ಮತ್ತು ಕ್ವಾಝಿಗುಂಡ್ ಗಳಲ್ಲಿ ಹರಡಿರುವ 15 ನಿಲ್ದಾಣಗಳಲ್ಲಿ ( ಬಾರಾಮುಲ್ಲಾ, ಹಮ್ರೇ, ಪಠಾಣ್, ಮಾಝೋಮ್, ಬುಡ್ಗಾಂ, ಶ್ರೀನಗರ, ಪ್ಯಾಂಪೋರ್, ಕಾಕಪೋರಾ,ಅವಂತಿಪುರ, ಪಂಝಗಾಂ, ಬಿಜ್ ಬೆಹ್ರಾ, ಅನಂತನಾಗ್, ಸಾದುರಾ, ಕ್ವಾಝಿಗುಂಡ್, ಬನಿಹಾಲ್ ) ಲಭ್ಯವಿದೆ.

ಜಮ್ಮು ಕೇಂದ್ರಾಡಳಿತ ಪ್ರದೇಶದ 15 ನಿಲ್ದಾಣಗಳಲ್ಲಿ ವೈ-ಫೈ ಈಗಾಗಲೇ ಲಭ್ಯವಿದೆ. ಅವುಗಳೆಂದರೆ –ಕಥುವಾ, ಬುಧಿ, ಚಾನ್ ಅರೋರಿನ್, ಹಿರಾ ನಗರ್, ಘಾಗ್ವಾಲ್, ಸಂಬಾ, ವಿಜಯಪುರ, ಬಾರಿ ಬ್ರಹ್ಮನ್, ಜಮ್ಮು ತಾವಿ, ಬಜಾಲ್ತ, ಸಂಗಾರ್, ಮನ್ವಾಲ್, ರಾಂ ನಗರ್.

ಸಾರ್ವಜನಿಕ ವೈ-ಫೈ ಯನ್ನು ಎಲ್ಲಾ ರೈಲು ನಿಲ್ದಾಣಗಳಲ್ಲಿ ಒದಗಿಸುವ ಜವಾಬ್ದಾರಿಯನ್ನು ರೈಲ್ವೇ ಸಚಿವಾಲಯವು ರೈಲ್ ಟೆಲ್ ಗೆ ನೀಡಿತ್ತು. ರೈಲ್ವೇ ಪ್ಲಾಟ್ ಫಾರಂಗಳನ್ನು ಡಿಜಿಟಲ್ ಸೇರ್ಪಡೆಯ ಪ್ಲಾಟ್ ಫಾರಂಗಳಾಗಿ ರೂಪಿಸುವುದು ಇದರ ಹಿಂದಿನ ಉದ್ದೇಶ. ಇಂದು ವೈ-ಫೈ ಜಾಲವು ದೇಶಾದ್ಯಂತ 6000 ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ಹರಡಿಕೊಂಡಿದೆ ಮತ್ತು ಇದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಮಗ್ರೀಕೃತ ವೈ-ಫೈ ಜಾಲವಾಗಿದೆ.

ಈ ಸಂದರ್ಭದಲ್ಲಿ ಸಂದೇಶ ನೀಡಿದ ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ವಿತರಣೆ ಸಚಿವರಾದ ಶ್ರೀ ಪೀಯುಷ್ ಗೋಯಲ್ ಮಾತನಾಡಿ “ ಜನರನ್ನು ಬೆಸೆಯುವಲ್ಲಿ ಮತ್ತು ಗ್ರಾಮೀಣ ಭಾರತ ಹಾಗು ನಗರ ಭಾರತದ ನಡುವಣ ಡಿಜಿಟಲ್ ಕಂದಕವನ್ನು ತ್ವರಿತಗತಿಯಿಂದ ನಿವಾರಿಸುವಲ್ಲಿ ವೈ-ಫೈಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾರತೀಯ ರೈಲ್ವೇಯು ಅದರ ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಜೊತೆಗೂಡಿ ದೇಶದ ಪ್ರತೀ ಮೂಲೆಗೂ ಹೆಚ್ಚು ವೇಗದ ವೈ-ಫೈ ತರುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಜಾಗತಿಕ ವೈ-ಫೈ ದಿನವಾದ ಇಂದು ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ 14 ನಿಲ್ದಾಣಗಳು ವಿಶ್ವದ ಬೃಹತ್ ಸಮಗ್ರ ಸಾರ್ವಜನಿಕ ವೈ-ಫೈ ಜಾಲದ ಭಾಗವಾಗಿವೆ ಎಂದು ಘೋಷಿಸಲು ನಾನು ಹರ್ಷಿಸುತ್ತೇನೆ. ಈ ಜಾಲವು ದೇಶದ 6000 ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಜೋಡಿಸುತ್ತದೆ. ಇದರೊಂದಿಗೆ ಕಣಿವೆಯ ಎಲ್ಲಾ ರೈಲು ನಿಲ್ದಾಣಗಳು ಈಗ ಸಾರ್ವಜನಿಕ ವೈ-ಫೈ ಯನ್ನು ಹೊಂದಿವೆ. ಇದು ಡಿಜಿಟಲ್ ಇಂಡಿಯಾ ಆಂದೋಲನದ ನಿರ್ಣಾಯಕ ಹೆಜ್ಜೆ, ಮತ್ತು ಇದು ಸಂಪರ್ಕರಹಿತರನ್ನು ಸಂಪರ್ಕಿಸುವಲ್ಲಿ ಬಹಳ ದೂರ ಸಾಗಲಿದೆ. ನಾನು ಭಾರತೀಯ ರೈಲ್ವೇ ಮತ್ತು ರೈಲ್ ಟೆಲ್ ತಂಡಗಳಿಗೆ, ಈ ಗಮನಾರ್ಹವಾದ ಕೆಲಸವನ್ನು ಸಾಧಿಸಲು ಅಹೋರಾತ್ರಿ ಕಾರ್ಯನಿರತವಾದುದಕ್ಕಾಗಿ ಅಭಿನಂದಿಸುತ್ತೇನೆ” ಎಂದರು.

ಈ ಶ್ಲಾಘನೀಯ ಕೆಲಸವನ್ನು ಮಾಡಿರುವುದಕ್ಕಾಗಿ ಭಾರತೀಯ ರೈಲ್ವೇಯನ್ನು ಅಭಿನಂದಿಸಿದ ಗೌರವಾನ್ವಿತ ಎಂ.ಒ.ಎಸ್. (ಐ.ಸಿ.), ಡಿ.ಒ.ಎನ್.ಇ.ಆರ್, ಎಂ.ಒ.ಎಸ್., ಪಿ.ಎಂ.ಒ., ಡಿ.ಒ.ಎ.ಇ, ಡಿ.ಒ.ಎಸ್., ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ನಿವೃತ್ತಿ ವೇತನ ಸಚಿವರಾದ ಡಾ. ಜಿತೇಂದ್ರ ಸಿಂಗ್ “ ಇಂದು ವೈ.ಫೈ. ಸಮುದಾಯಗಳನ್ನು ಜೋಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವುದು ಮಾತ್ರವಲ್ಲ ಡಿಜಿಟಲ್ ಕಂದಕವನ್ನು ನಿವಾರಿಸಲು ಅನ್ವೇಷಣೆಗಳಿಗೂ ಅವಕಾಶ ನೀಡುತ್ತಿದೆ. ಜಾಗತಿಕ ಸಾಂಕ್ರಾಮಿಕದಿಂದಾಗಿ, ವರ್ಚುವಲ್ ಮೂಲಕ ಸಂಪರ್ಕಿತರಾಗಿರುವುದು ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿದೆ. ಭಾರತೀಯ ರೈಲ್ವೇಯು ನಿಲ್ದಾಣಗಳಲ್ಲಿ ವೈ-ಫೈ ಜಾಲವನ್ನು ಅದರ ಸಿ.ಪಿ.ಎಸ್.ಯು. ರೈಲ್ ಟೆಲ್ ಮೂಲಕ ರೂಪಿಸಿ ಗ್ರಾಮೀಣ ಡಿಜಿಟಲ್ ಕಂದಕವನ್ನು ಬೆಸೆಯುವಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಾಶ್ಮೀರ ಕಣಿವೆಯ 15 ನಿಲ್ದಾಣಗಳು ರೈಲ್ ವೈರ್ ವೈ-ಫೈ ಮೂಲಕ ಸಂಪರ್ಕಿಸಲ್ಪಟ್ಟಿರುವುದು ನನಗೆ ಸಂತೋಷ ತಂದಿದೆ. ಇದು ಈ ವಲಯದ ಜನರಿಗೆ ಮತ್ತು ದೇಶಕ್ಕೆ ಒಂದು ಹೆಚ್ಚುವರಿ ಪೂರಕ ಸೌಲಭ್ಯ . ಪ್ರತಿಯೊಬ್ಬರಿಗೂ ವಿಶ್ವ ವೈ-ಫೈ ದಿನದ ಶುಭಾಶಯಗಳನ್ನು ಕೋರುತ್ತೇನೆ” ಎಂದು ಹೇಳಿದರು.

ಬಳಕೆದಾರರಿಗೆ ಉತ್ತಮ ಅಂತರ್ಜಾಲ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿರುವ ಈ ವೈ-ಫೈ ಸ್ಮಾರ್ಟ್ ಫೋನ್ ಹೊಂದಿರುವ ಮತ್ತು ಕೆ.ವೈ.ಸಿ. ಶರತ್ತುಗಳನ್ನು ಪೂರೈಸಿರುವ ಕಾರ್ಯನಿರತವಾಗಿರುವಂತಹ ಮೊಬೈಲ್ ಸಂಪರ್ಕವನ್ನು ಹೊಂದಿರುವ ಯಾವುದೇ ಬಳಕೆದಾರರಿಗೆ ರೈಲ್ವೇ ನಿಲ್ದಾಣಗಳಲ್ಲಿ ಲಭ್ಯವಾಗುತ್ತದೆ.

ವೈ-ಫೈ ಲಭ್ಯತೆ ಸಮುದಾಯಗಳನ್ನು ಬೆಸೆಯುವುದು ಮಾತ್ರವಲ್ಲ ಅದು ಅನ್ವೇಷಣೆ ಮತ್ತು ಬೆಳವಣಿಗೆಗೆ ಅವಕಾಶಗಳ ಜಗತ್ತನ್ನು ತೆರೆಯುತ್ತದೆ. ಈ ವರ್ಷದ ವೈ-ಫೈ ದಿನ ಆಚರಣೆಯು ಡಿಜಿಟಲ್ ಕಂದಕವನ್ನು ಬೆಸೆಯಲು ಕೈಗೆಟಕುವ ದರದಲ್ಲಿ ವೈ-ಫೈ ಲಭ್ಯತೆಯನ್ನು ತ್ವರಿತಗೊಳಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಭಾರತವು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಗಮನಾರ್ಹ ಡಿಜಿಟಲ್ ಕಂದಕವನ್ನು ಹೊಂದಿದೆ. ನಿಲ್ದಾಣಗಳಲ್ಲಿ ರೈಲ್ ವೈರ್ ವೈ-ಫೈ ಸೌಲಭ್ಯವು ಗ್ರಾಮಭಾರತದಲ್ಲಿರುವ ದುರ್ಬಲ ಸಂಪರ್ಕ ಜಾಲ ಹೊಂದಿರುವ ಸಂಪರ್ಕರಹಿತ ಸಾರ್ವಜನಿಕರಿಗೆ 5000 ಕ್ಕೂ ಅಧಿಕ ನಿಲ್ದಾಣಗಳ ಮೂಲಕ ಸಂಪರ್ಕ ಒದಗಿಸಲು ಸಹಾಯ ಮಾಡುತ್ತದೆ.

ಭಾರತೀಯ ರೈಲ್ವೇಯು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ವೈ-ಫೈ ಒದಗಿಸುವ ಮೂಲಕ ರೈಲ್ವೇ ನಿಲ್ದಾಣಗಳನ್ನು ಡಿಜಿಟಲ್ ತಾಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮತ್ತು 6021 ನಿಲ್ದಾಣಗಳು ರೈಲ್ ಟೆಲ್ ವೈ ಫೈ ಜಾಲದಲ್ಲಿವೆ.

***



(Release ID: 1728796) Visitor Counter : 264