ಪ್ರಧಾನ ಮಂತ್ರಿಯವರ ಕಛೇರಿ
ಸಿ.ಎಸ್.ಐ.ಆರ್. ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
04 JUN 2021 3:26PM by PIB Bengaluru
ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ನಿರ್ಮಲಾ ಸೀತಾರಾಮನ್ ಜೀ, ಪೀಯುಷ್ ಗೋಯಲ್ ಜೀ, ಡಾ. ಹರ್ಷ ವರ್ಧನ್ ಜೀ, ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ವಿಜಯ ರಾಘವನ್ ಜೀ, ಸಿ.ಎಸ್.ಐ.ಆರ್. ನ ಮಹಾ ನಿರ್ದೇಶಕ ಶೇಕರ್ ಮಂಡೇ ಜೀ, ಎಲ್ಲಾ ವಿಜ್ಞಾನಿಗಳೇ, ಕೈಗಾರಿಕೋದ್ಯಮ ಮತ್ತು ಶೈಕ್ಷನಿಕ ವಲಯದ ಗೌರವಾನ್ವಿತ ಪ್ರತಿನಿಧಿಗಳೇ ಮತ್ತು ಸಹೋದ್ಯೋಗಿಗಳೇ!.
ಸಿ.ಎಸ್.ಐ.ಆರ್.ನ ಪ್ರಮುಖ ಸಭೆ ಬಹಳ ಸಂಕೀರ್ಣ ಕಾಲಘಟ್ಟದಲ್ಲಿ ಇಂದು ನಡೆಯುತ್ತಿದೆ. ಕೊರೊನಾವೈರಸ್ ಜಾಗತಿಕ ಸಾಂಕ್ರಾಮಿಕವು ವಿಶ್ವದೆದುರು ಈ ಶತಮಾನದ ಬಹಳ ದೊಡ್ಡ ಸವಾಲಾಗಿ ಉದ್ಭವಿಸಿದೆ. ಆದರೆ ಮಾನವತೆಯು ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾದ ಸಂದರ್ಭದಲ್ಲಿ ವಿಜ್ಞಾನವು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲು ಹಾದಿಯನ್ನು ರೂಪಿಸಿದ್ದಕ್ಕೆ ಇತಿಹಾಸವು ಸಾಕ್ಷಿಯಾಗಿದೆ. ಬಿಕ್ಕಟ್ಟಿನಲ್ಲಿ ಪರಿಹಾರಗಳನ್ನು ಹುಡುಕುವುದು ಮತ್ತು ಸಾಧ್ಯತೆಗಳನ್ನು ಅನ್ವೇಷಿಸುವುದು ಮತ್ತು ಹೊಸ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ವಿಜ್ಞಾನದ ಮೂಲಸ್ವರೂಪ. ಶತಮಾನಗಳಿಂದ ಜಗತ್ತಿನ ಮತ್ತು ಭಾರತದ ವಿಜ್ಞಾನಿಗಳು ಇದನ್ನು ಮಾಡುತ್ತಲೇ ಬಂದಿದ್ದಾರೆ ಮತ್ತು ಅದು ಈಗಲೂ ಮುಂದುವರಿದಿದೆ. ಚಿಂತನೆಯನ್ನು ಪ್ರಮೇಯವನ್ನಾಗಿಸಿ ನಮ್ಮ ವಿಜ್ಞಾನಿಗಳು ಅಭಿವೃದ್ಧಿ ಮಾಡಿದ ಪ್ರಮಾಣ ಮತ್ತು ವೇಗ, ಅದನ್ನು ಪ್ರಯೋಗಾಲಯಗಳಲ್ಲಿ ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತಂದು ಕಳೆದೊಂದೂವರೆ ವರ್ಷದಲ್ಲಿ ಸಮಾಜಕ್ಕೆ ಕೊಟ್ಟ ರೀತಿ ಅನಿರೀಕ್ಷಿತ !. ಮಾನವ ಕುಲವನ್ನು ವಿಪತ್ತಿನಿಂದ ಪಾರುಮಾಡಲು ವರ್ಷದೊಳಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿ ಜನರಿಗೆ ನೀಡಿದ ಬಹಳ ದೊಡ್ಡ ಕೆಲಸ ಬಹುಷಃ ಇತಿಹಾಸದಲ್ಲಿ ಇದೇ ಮೊದಲು. ವಿಶ್ವದ ಇತರ ದೇಶಗಳಲ್ಲಿ ಸಂಶೋಧನೆ/ಅನ್ವೇಷಣೆಗಳು ನಡೆದರೆ, ಭಾರತ ಅದಕ್ಕಾಗಿ ಹಲವು ವರ್ಷಗಳ ಕಾಲ ಕಾಯಬೇಕಾಗುತ್ತಿತ್ತು ಎಂಬುದು ಹಿಂದಿನ ಶತಮಾನದ ಅನುಭವ. ಆದರೆ ಇಂದು ನಮ್ಮ ದೇಶದ ವಿಜ್ಞಾನಿಗಳು ಇತರ ದೇಶಗಳ ಜೊತೆ ಹೆಗಲಿಗೆ ಹೆಗಲು ಕೊಟ್ಟು ಅದೇ ವೇಗದಲ್ಲಿ ಮಾನವ ಕುಲಕ್ಕೆ ಸೇವೆ ಸಲ್ಲಿಸಿದರು. ನಮ್ಮ ವಿಜ್ಞಾನಿಗಳು ’ಭಾರತ ನಿರ್ಮಿತ” ಕೊರೊನಾ ಲಸಿಕೆಯನ್ನು ವರ್ಷದೊಳಗೆ ಅಭಿವೃದ್ಧಿಪಡಿಸಿದರು ಮತ್ತು ಅದು ದೇಶವಾಸಿಗಳಿಗೆ ಲಭ್ಯವಾಗುವಂತೆ ಮಾಡಿದರು. ವರ್ಷದೊಳಗೇ ನಮ್ಮ ವಿಜ್ಞಾನಿಗಳು ಕೋವಿಡ್ ಪರೀಕ್ಷಾ ಕಿಟ್ ಗಳು ಮತ್ತು ಅವಶ್ಯ ಸಲಕರಣೆಗಳೊಂದಿಗೆ ದೇಶವನ್ನು ಸ್ವಾವಲಂಬಿಯನ್ನಾಗಿಸಿದರು. ಇಷ್ಟೊಂದು ಅತ್ಯಲ್ಪ ಕಾಲದಲ್ಲಿ ನಮ್ಮ ವಿಜ್ಞಾನಿಗಳು ಕೊರೊನಾ ವಿರುದ್ಧ ಸಮರ್ಪಕ ಮತ್ತು ಪರಿಣಾಮಕಾರಿ ಹೊಸ ಔಷಧಿಗಳನ್ನು ಹುಡುಕಿದ್ದಲ್ಲದೆ, ಆಮ್ಲಜನಕ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಲು ಹಾದಿಗಳನ್ನು ಹುಡುಕಿದರು. ನಿಮ್ಮ ಈ ಕೊಡುಗೆಯಿಂದಾಗಿ ಮತ್ತು ದೇಶದ ಅಸಾಮಾನ್ಯ ಪ್ರತಿಭೆಗಳಿಂದಾಗಿ ದೇಶವು ಇಂದು ಬಹಳ ದೊಡ್ಡ ಯುದ್ಧವನ್ನು ನಡೆಸುತ್ತಿದೆ. ಸಿ.ಎಸ್.ಐ.ಆರ್.ನ ವಿಜ್ಞಾನಿಗಳು ಈ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ನಾನು ಎಲ್ಲಾ ವಿಜ್ಞಾನಿಗಳಿಗೂ, ನಮ್ಮ ಸಂಸ್ಥೆಗಳಿಗೂ ಮತ್ತು ಕೈಗಾರಿಕಾ ವಲಯಕ್ಕೂ ಮತ್ತು ನಿಮ್ಮೆಲ್ಲರಿಗೂ ಇಡೀ ದೇಶದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಯಾವುದೇ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಉದ್ಯಮದ ಜೊತೆ ಅಂತರ್ಸಂಬಂಧ, ಸಮನ್ವಯ ಮತ್ತು ಬಾಂಧವ್ಯ ಹೊಂದಿದಾಗ ಅದು ಹೊಸ ಎತ್ತರಗಳನ್ನು ತಲುಪುತ್ತದೆ. ಮತ್ತು ಮಾರುಕಟ್ಟೆಗೂ ಲಭ್ಯವಾಗುತ್ತದೆ. ನಮ್ಮ ದೇಶದಲ್ಲಿ ವಿಜ್ಞಾನ, ಸಮಾಜ ಮತ್ತು ಉದ್ಯಮಗಳು ಅದೇ ವ್ಯವಸ್ಥೆಯನ್ನು ನಿಭಾಯಿಸುವುದಕ್ಕಾಗಿ ಸಿ.ಎಸ್.ಐ.ಆರ್. ಒಂದು ಸಾಂಸ್ಥಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಈ ಸಂಸ್ಥೆ ದೇಶಕ್ಕೆ ಅನೇಕ ಪ್ರತಿಭೆಗಳನ್ನು, ವಿಜ್ಞಾನಿಗಳನ್ನು ನೀಡಿದೆ. ಪ್ರಖ್ಯಾತ ವಿಜ್ಞಾನಿ ಶಾಂತಿ ಸ್ವರೂಪ ಭಟ್ನಾಗರ್ ಅವರಂತಹವರು ಈ ಸಂಸ್ಥೆಗೆ ನಾಯಕತ್ವ ನೀಡಿದ್ದಾರೆ. ನಾನು ನಿಮ್ಮೊಂದಿಗೆ ಬಂದಾಗೆಲ್ಲಾ ಮತ್ತು ಪ್ರತೀ ಸಂದರ್ಭದಲ್ಲಿಯೂ ಇಂತಹ ಶ್ರೇಷ್ಟ ಆಡಳಿತ ಪರಂಪರೆ ಇರುವಂತಹ ಸಂಸ್ಥೆಗೆ ಭವಿಷ್ಯದ ಕುರಿತ ಜವಾಬ್ದಾರಿಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂಬುದನ್ನು ಒತ್ತುಕೊಟ್ಟು ಹೇಳಿದ್ದೇನೆ. ಈಗಲೂ, ನಾನು ಮತ್ತು ದೇಶ, ಮಾನವ ಕುಲ ಸಹಿತ, ವಿಜ್ಞಾನಿಗಳು ಮತ್ತು ತಂತ್ರಜ್ಞರಿಂದ ಅತ್ಯುನ್ನತ ನಿರೀಕ್ಷೆಗಳನ್ನು ಮಾಡುತ್ತಿದೆ.
ಸ್ನೇಹಿತರೇ,
ಸಿ.ಎಸ್.ಐ.ಆರ್. ಅತ್ಯಂತ ಶಕ್ತಿಶಾಲಿಯಾದ ಸಂಶೋಧನಾ ಮತು ಪೇಟೆಂಟ್ ಗಳ ವ್ಯವಸ್ಥೆಯನ್ನು ಹೊಂದಿದೆ. ಮತು ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ನೀವೂ ಕಾರ್ಯನಿರತರಾಗಿದ್ದೀರಿ. ಆದರೆ ಇಂದು ದೇಶದ ಗುರಿಗಳು ಮತ್ತು ದೇಶವಾಸಿಗಳ ಕನಸುಗಳು 21 ನೇ ಶತಮಾನದ ನೆಲೆಗಟ್ಟಿನ ಮೇಲೆ ನಿಂತಿವೆ. ಮತ್ತು ಆದುದರಿಂದ ಸಿ.ಎಸ್.ಐ.ಆರ್.ನಂತಹ ಸಂಸ್ಥೆಗಳ ಗುರಿಗಳು ಕೂಡಾ ಅಸಾಮಾನ್ಯವಾದಂತಹವುಗಳಾಗಿವೆ. ಇಂದು ಭಾರತವು ಸ್ವಾವಲಂಬಿಯಾಗಲು ಮತ್ತು ಪ್ರತೀ ಕ್ಷೇತ್ರದಲ್ಲಿಯೂ ಸಶಕ್ತೀಕರಣವನ್ನು ಸಾಧಿಸಲು ಇಚ್ಛಿಸುತ್ತಿದೆ. ಕೃಷಿಯಿಂದ ಹಿಡಿದು ಖಗೋಳವಿಜ್ಞಾನದವರೆಗೆ, ವಿಪತ್ತು ನಿರ್ವಹಣೆಯಿಂದ ಹಿಡಿದು ರಕ್ಷಣಾ ತಂತ್ರಜ್ಞಾನದವರೆಗೆ, ಲಸಿಕೆಯಿಂದ ಹಿಡಿದು ವರ್ಚುವಲ್ ರಿಯಾಲಿಟಿಯವರೆಗೆ ಮತ್ತು ಜೈವಿಕ ತಂತ್ರಜ್ಞಾನದಿಂದ ಹಿಡಿದು ಬ್ಯಾಟರಿ ತಂತ್ರಜ್ಞಾನದವರೆಗೆ ಅದು ಸ್ವಾವಲಂಬನೆ, ಸಶಕ್ತೀಕರಣವನ್ನು ಬಯಸುತ್ತಿದೆ. ಇಂದು ಸುಸ್ಥಿರ ಅಭಿವೃದ್ಧಿಯಲ್ಲಿ ಮತ್ತು ಸ್ವಚ್ಛ ಇಂಧನದಲ್ಲಿ ಭಾರತವು ಜಗತ್ತಿಗೆ ದಾರಿಯನ್ನು ತೋರಿಸುತ್ತಿದೆ. ಇಂದು ನಾವು ಇತರ ದೇಶಗಳ ಅಭಿವೃದ್ಧಿಗೂ ವೇಗ ತಂದುಕೊಡುತ್ತಿದ್ದೇವೆ. ಮತ್ತು ಸಾಫ್ಟ್ ವೇರ್ ನಿಂದ ಹಿಡಿದು ಉಪಗ್ರಹಗಳವರೆಗೆ ಅಭಿವೃದ್ಧಿಯ ಪ್ರಮುಖ ಇಂಜಿನ್ ಆಗಿ ಕೆಲಸ ಮಾಡುತ್ತಿದ್ದೇವೆ. ಆದುದರಿಂದ ನಮ್ಮ ಗುರಿಗಳು ಈಗಿನದಕ್ಕಿಂತ ಎರಡು ಹೆಜ್ಜೆ ಮುಂದಿರಬೇಕಾಗುತ್ತದೆ. ನಾವು ಬರಲಿರುವ ದಶಕಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ಮತ್ತು ಈ ದಶಕದ ಆವಶ್ಯಕತೆಗಳನ್ನೂ ಗಮನಿಸಬೇಕಾಗಿದೆ. ವಿಪತ್ತುಗಳಿಗೆ ಪರಿಹಾರ ಹುಡುಕುವ ನಡುವೆಯೂ, ನಾವು ಜಾಗತಿಕ ಸಾಂಕ್ರಾಮಿಕವಾದ ಕೊರೊನಾವನ್ನು ಎದುರಿಸಬೇಕಾಗಿದೆ. ಆದರೆ ಭವಿಷ್ಯದಲ್ಲಿ ಇಂತಹ ಅನೇಕ ಸವಾಲುಗಳು ಅಡಗಿರಬಹುದು. ಉದಾಹರಣೆಗೆ ಜಗತ್ತಿನಾದ್ಯಂತ ತಜ್ಞರು ಹವಾಮಾನ ವೈಪರೀತ್ಯಗಳ ಬಗ್ಗೆ ಸತತ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ವಿಜ್ಞಾನಿಗಳು ಮತ್ತು ನಮ್ಮೆಲ್ಲ ಸಂಸ್ಥೆಗಳು ಈ ಭವಿಷ್ಯದ ಸವಾಲುಗಳನ್ನು ಈಗಿನಿಂದಲೇ ವೈಜ್ಞಾನಿಕ ಧೋರಣೆಯಿಂದ ಎದುರಿಸಲು ಸಿದ್ದರಾಗಬೇಕು. ಕಾರ್ಬನ್ ಹಿಡಿದಿಡುವಿಕೆಯಿಂದ ಹಿಡಿದು ಇಂಧನ ದಾಸ್ತಾನು ಮತ್ತು ಹಸಿರು ಹೈಡ್ರೋಜನ್ ತಂತ್ರಜ್ಞಾನಗಳವರೆಗೆ ನಾವು ಮುಂಚೂಣಿ ಸ್ಥಾನದಲ್ಲಿರಬೇಕು.
ಸ್ನೇಹಿತರೇ,
ಉದ್ಯಮದ ಜೊತೆ ಉತ್ತಮ ಸಹಯೋಗಕ್ಕೆ ನೀವು ವಿಶೇಷ ಒತ್ತನ್ನು ನೀಡಿದ್ದೀರಿ. ಆದರೆ ನಾನು ಹೇಳಿದಂತೆ, ಸಿ.ಎಸ್.ಐ.ಆರ್. ನ ಪಾತ್ರ ಒಂದು ಹೆಜ್ಜೆ ಮುಂದಿನದ್ದು. ನೀವು ಉದ್ಯಮವನ್ನು ಮತ್ತು ಸಮಾಜವನ್ನು ಜೊತೆ ಜೊತೆಯಾಗಿ ಕೊಂಡೊಯ್ಯಬೇಕಾಗಿದೆ. ಸಿ.ಎಸ್.ಐ.ಆರ್. ನಾನು ಕಳೆದ ವರ್ಷ ಮಾಡಿದ ಸಲಹೆಯನ್ನು ಅನುಷ್ಠಾನ ಮಾಡಿದುದಕ್ಕಾಗಿ ನಾನು ಸಂತೋಷಪಡುತ್ತೇನೆ, ಅದರನ್ವಯ ಸಮಾಜದ ಜೊತೆ ಸಂವಾದ ನಡೆಸುವುದು ಮತ್ತು ಸಲಹೆಗಳನ್ನು ಸ್ವೀಕರಿಸುವುದು ಆರಂಭವಾಗಿದೆ. ದೇಶದ ಆವಶ್ಯಕತೆಗಳನ್ನು ಕೇಂದ್ರವಾಗಿಟ್ಟುಕೊಂಡು ನಿಮ್ಮ ಪ್ರಯತ್ನಗಳು ಕೋಟ್ಯಂತರ ದೇಶವಾಸಿಗಳ ಭವಿಷ್ಯವನ್ನು ಬದಲು ಮಾಡುತ್ತಿವೆ. ಉದಾಹರಣೆಗೆ ದೇಶವು 2016ರಲ್ಲಿ ಆರೋಮಾ (ಸುವಾಸನೆ) ಆಂದೋಲನವನ್ನು ಆರಂಭಿಸಿತು. ಮತ್ತು ಇದರಲ್ಲಿ ಸಿ.ಎಸ್.ಐ.ಆರ್. ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿತು. ಇಂದು ದೇಶದ ಸಾವಿರಾರು ರೈತರು ಹೂವಿನ ಕೃಷಿಯ ಮೂಲಕ ಅವರ ಅದೃಷ್ಟವನ್ನು ಬದಲಾಯಿಸುತ್ತಿದ್ದಾರೆ. ಶತಮಾನಗಳ ಕಾಲ ಭಾರತೀಯ ಅಡುಗೆ ಮನೆಯ ಭಾಗವಾಗಿತ್ತು ಇಂಗು, ಆದರೆ ಭಾರತವು ಇದಕ್ಕಾಗಿ ಇತರ ದೇಶಗಳಿಂದಾಗುವ ಆಮದನ್ನು ಅವಲಂಬಿಸಿತ್ತು. ಸಿ.ಎಸ್.ಐ.ಆರ್. ಈ ನಿಟ್ಟಿನಲ್ಲಿ ಉಪಕ್ರಮವನ್ನು ಕೈಗೊಂಡಿತು ಮತ್ತು ಇಂದು ಇಂಗಿನ ಉತ್ಪಾದನೆ ಆರಂಭವಾಗಿದೆ. ನಿಮ್ಮ ಪ್ರಯೋಗಾಲಯಗಳಲ್ಲಿ ಹಲವಾರು ಸಾಧ್ಯತೆಗಳು ವಾಸ್ತವವಾಗಿವೆ. ಕೆಲವೊಮ್ಮೆ ನೀವು ಎಷ್ಟೊಂದು ಅದ್ಭುತವಾದ ಕೆಲಸವನ್ನು ಮಾಡುತ್ತೀರಿ ಎಂದರೆ ಸರಕಾರ ಮತ್ತು ಸಚಿವಾಲಯಗಳು ಅವುಗಳ ಬಗೆ ತಿಳಿದುಕೊಂಡಾಗ ಆಶ್ಚರ್ಯಚಕಿತವಾಗುತ್ತವೆ. ನಿಮ್ಮ ಸಂಸ್ಥೆಯ ಎಲ್ಲಾ ಮಾಹಿತಿಯೂ ಜನತೆಗೆ ಲಭ್ಯವಾಗಬೇಕು ಎಂಬುದು ನನ್ನ ಸಲಹೆ. ನೀವು ಸಿ.ಎಸ್.ಐ.ಆರ್. ನ ಸಂಶೋಧನೆಯ ಬಗ್ಗೆ ಹುಡುಕಾಟ ನಡೆಸುವ ಮತ್ತು ನಿಮ್ಮೊಂದಿಗೆ ಸಂಪರ್ಕ ಬಯಸುವ ಯಾರಿಗೇ ಆದರೂ ಸಹಾಯ ಮಾಡಲು ಹೆಚ್ಚು ಒತ್ತು ನೀಡಬೇಕು. ಇದು ನಿಮ್ಮ ಕೆಲಸಕ್ಕೆ ಕೂಡಾ ಸಹಾಯ ಮಾಡುತ್ತದೆ ಮತ್ತು ನಿಮ್ಮ ಉತ್ಪನ್ನಗಳಿಗೂ ನೆರವಾಗುತ್ತದೆ. ಮತ್ತು ಸಮಾಜಕ್ಕೆ ಹಾಗು ಕೈಗಾರಿಕೆಗಳಿಗೆ ವೈಜ್ಞಾನಿಕ ಧೋರಣೆಯನ್ನು ಸೇರಿಸುತ್ತದೆ.
ಸ್ನೇಹಿತರೇ,
ಇಂದು ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನು ಪೂರ್ಣಗೊಳಿಸುವ ಹಂತದಲ್ಲಿರುವಾಗ, ಕಾಲಮಿತಿಯಾಧಾರಿತ ಖಚಿತ ನಿರ್ಧಾರಗಳು ನಿರ್ದಿಷ್ಟ ದಿಕ್ಕಿನಲ್ಲಿ ಮುಂದುವರಿಯಲು ಸಹಾಯ ಮಾಡಬಲ್ಲವು. ಕೊರೊನಾ ವೇಗವನ್ನು ಕಡಿಮೆ ಮಾಡಿರಬಹುದು. ಆದಾಗ್ಯೂ ನಮ್ಮ ನಿರ್ಧಾರ ಏನೆಂದರೆ ಸ್ವಾವಲಂಬಿ ಭಾರತ ಮತ್ತು ಬಲಿಷ್ಟ ಭಾರತ. ಇಂದು ದೇಶವು ಎಂ.ಎಸ್.ಎಂ.ಇ. ಗಳಿಂದ ಹಿಡಿದು ನವೋದ್ಯಮಗಳವರೆಗೆ ಮತ್ತು ಕೃಷಿಯಿಂದ ಹಿಡಿದು ಶಿಕ್ಷಣ ವಲಯದವರೆಗೆ ವ್ಯಾಪಕವಾದ ಸಾಧ್ಯತೆಗಳನ್ನು ಹೊಂದಿದೆ. ಈ ಸಾಧ್ಯತೆಗಳನ್ನು ಈಡೇರಿಸುವ ಮತ್ತು ದೇಶದ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಕೊರೊನಾದಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಉದ್ಯಮಗಳು ವಹಿಸಿದ ಪಾತ್ರವನ್ನು ನಾವು ಇತರ ಕ್ಷೇತ್ರಗಳಲ್ಲಿಯೂ ಪುನರಾವರ್ತಿಸಬೇಕು. ನಿಮ್ಮ ಪ್ರತಿಭೆ ಮತ್ತು ಪರಂಪರೆ, ನಿಮ್ಮ ಸಂಸ್ಥೆಯ ಕಠಿಣ ಶ್ರಮದಿಂದ ದೇಶವು ಹೊಸ ಗುರಿಗಳನ್ನು ಇದೇ ರೀತಿಯಲ್ಲಿ ಸಾಧಿಸಲಿದೆ ಮತ್ತು 130 ಕೋಟಿಗೂ ಅಧಿಕ ದೇಶವಾಸಿಗಳ ಕನಸುಗಳನ್ನು ಈಡೇರಿಸಲಿದೆ. ನನಗೆ ನಿಮ್ಮ ಚಿಂತನೆಗಳನ್ನು ಕೇಳುವ ಆವಕಾಶ ಲಭಿಸಿತ್ತು. ನೀವು ಬಹಳ ಪ್ರಾಯೋಗಿಕವಾದ ವಿಷಯಗಳನ್ನು ನಿಮ್ಮ ಅನುಭವದ ಆಧಾರದಲ್ಲಿ ಹೇಳುತ್ತಿದ್ದೀರಿ. ಈ ಕೆಲಸದ ಜವಾಬ್ದಾರಿಯನ್ನು ಹೊತ್ತುಕೊಂಡವರು ಸಲಹೆಗಳನ್ನು ಮತ್ತು ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಳಂಬ ಮಾಡಬಾರದು ಎಂಬುದಾಗಿ ನಾನು ಆಶಿಸುತ್ತೇನೆ. ಪ್ರತಿಯೊಂದನ್ನೂ ಆಂದೋಲನ ರೀತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಗಳನ್ನು ಮಾಡಬೇಕು. ಯಾಕೆಂದರೆ ನೀವು ಸಾಕಷ್ಟು ಸಮಯವನ್ನು ವ್ಯಯ ಮಾಡಿರುವಿರಿ. ಆದುದರಿಂದ ಬಹಳ ಉತ್ತಮ ಚಿಂತನೆ ಮತ್ತು ಈ ಚರ್ಚಾಕೂಟದಿಂದ ಹೊರಬರುವ ತಿರುಳನ್ನು ಸಾಂಸ್ಥಿಕ ವ್ಯವಸ್ಥೆ ಮತ್ತು ನಿರಂತರ ಸುಧಾರಣೆಯ ಮೂಲಕ ಜನರ ಜೊತೆ ಹಂಚಿಕೊಳ್ಳುವುದು ಸ್ವಾಭಾವಿಕ ಸಂಗತಿ. ನಿಮ್ಮೆಲ್ಲರಿಗೂ ನಾನು ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ. ಬಹಳ ಧನ್ಯವಾದಗಳು. ನಮಸ್ಕಾರ!.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(ಪ್ರಕಟಣೆ ಐ.ಡಿ.: 1727439)
ವಿಸಿಟರ್ ಕೌಂಟರ್ : 251
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam