ಪ್ರಧಾನ ಮಂತ್ರಿಯವರ ಕಛೇರಿ

ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

18 ವರ್ಷ ಮೇಲ್ಪಟ್ಟ ಎಲ್ಲ ಭಾರತೀಯ ನಾಗರಿಕರಿಗೂ ಉಚಿತವಾಗಿ ಲಸಿಕೆ ಒದಗಿಸಲಿರುವ ಭಾರತ ಸರ್ಕಾರ

ರಾಜ್ಯ ಸರ್ಕಾರಗಳ ಬಳಿ ಇದ್ದ ಶೇ.25ರಷ್ಟು ಲಸಿಕೆ ಕಾರ್ಯವನ್ನು ಈಗ ಕೇಂದ್ರ ಸರ್ಕಾರವೇ ಪಡೆದುಕೊಳ್ಳಲಿದೆ: ಪ್ರಧಾನಮಂತ್ರಿ

ಉತ್ಪಾದಕರು ತಯಾರಿಸುವ ಶೇ.75ರಷ್ಟು ಲಸಿಕೆಯನ್ನು ಭಾರತ ಸರ್ಕಾರವೇ ಖರೀದಿಸಲಿದ್ದು, ರಾಜ್ಯಗಳಿಗೆ ಉಚಿತವಾಗಿ ಪೂರೈಸಲಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ದೀಪಾವಳಿವರೆಗೆ ವಿಸ್ತರಣೆ: ಪ್ರಧಾನಮಂತ್ರಿ

ನವೆಂಬರ್ ವರೆಗೆ 80 ಕೋಟಿ ಜನರು ಪ್ರತಿ ತಿಂಗಳೂ ಉಚಿತ ಆಹಾರ ಧಾನ್ಯ ಪಡೆಯುವುದು ಮುಂದುವರಿಯುತ್ತದೆ: ಪ್ರಧಾನಮಂತ್ರಿ

ಕೊರೊನಾ, ಕಳೆದ 100 ವರ್ಷಗಳಲ್ಲೇ ಅತ್ಯಂತ ಕೆಟ್ಟ ಸಾಂಕ್ರಾಮಿಕ: ಪ್ರಧಾನಮಂತ್ರಿ

ಲಸಿಕೆಯ ಪೂರೈಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಲಿದೆ: ಪ್ರಧಾನಮಂತ್ರಿ

ಹೊಸ ಲಸಿಕೆಗಳ ಅಭಿವೃದ್ಧಿಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಪ್ರಧಾನಮಂತ್ರಿ

ಮಕ್ಕಳಿಗಾಗಿ ಲಸಿಕೆ ಮತ್ತು ಮೂಗಿಗೆ ಹಾಕುವ ಲಸಿಕೆ ಪ್ರಯೋಗದ ಹಂತದಲ್ಲಿ: ಪ್ರಧಾನಮಂತ್ರಿ

ಯಾರು ಲಸಿಕೆಯ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೋ ಅವರು ಮುಗ್ಧ ಜನರ ಜೀವದೊಂದಿಗೆ ಆಟವಾಡುತ್ತಿದ್ದಾರೆ: ಪ್ರಧಾನಮಂತ್ರಿ

Posted On: 07 JUN 2021 6:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.

ಸಾಂಕ್ರಾಮಿಕದಲ್ಲಿ ಜೀವ ಕಳೆದುಕೊಂಡ ಜನರಿಗೆ ಸಂತಾಪ ಸೂಚಿಸಿದರು. ಕಳೆದ ನೂರು ವರ್ಷಗಳಲ್ಲೇ ಅತ್ಯಂತ ದೊಡ್ಡ ವಿಪತ್ತು ಸಾಂಕ್ರಾಮಿಕ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಕಣ್ಣಿಗೆ ಕಾಣದ ಸಾಂಕ್ರಾಮಿಕವನ್ನು ಆಧುನಿಕ ಜಗತ್ತು ಹಿಂದೆಂದೂ ಕಂಡಿರಲಿಲ್ಲ, ಭಾರತ ಇದರ ವಿರುದ್ಧ ಹಲವು ರಂಗದಲ್ಲಿ ಹೋರಾಡುತ್ತಿದೆ ಎಂದು ತಿಳಿಸಿದರು. ಶ್ರೀ ಮೋದಿಯವರು ಹಲವು ಪ್ರಮುಖ ಪ್ರಕಟಣೆಗಳನ್ನೂ ಮಾಡಿದರು.    

ಹಲವು ರಾಜ್ಯಗಳು ಲಸಿಕೆಯ ಕಾರ್ಯತಂತ್ರ ಮರು ಪರಿಶೀಲಿಸುವಂತೆ ಮುಂದೆ ಬಂದಿದ್ದವು, ಮತ್ತು ಮೇ 1 ಮೊದಲು ಇದ್ದ ವ್ಯವಸ್ಥೆಯನ್ನು ಮರಳಿ ತರಲು ಕೋರಿದರು ಎಂದು ತಿಳಿಸಿದ ಪ್ರಧಾನಮಂತ್ರಿ, ಈಗ ರಾಜ್ಯಗಳ ಬಳಿ ಇರುವ ಶೇ.25ರಷ್ಟು ಲಸಿಕೆಯ ಕಾರ್ಯವನ್ನು ಭಾರತ ಸರ್ಕಾರವೇ ಮರಳಿ ಪಡೆದುಕೊಳ್ಳಲಿದೆ ಎಂದು ಪ್ರಕಟಿಸಿದರು. ಇದನ್ನು ಇನ್ನು ಎರಡು ವಾರಗಳಲ್ಲಿ ಜಾರಿಗೊಳಿಸಲಾಗುವುದು. ಎರಡು ವಾರಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಹೊಸ ಮಾರ್ಗಸೂಚಿ ರೂಪಿಸಲಿವೆ ಎಂದರು. ಪ್ರಧಾನಮಂತ್ರಿಯವರು ಜೂನ್ 21 ತರುವಾಯ ಭಾರತ ಸರ್ಕಾರ, 18 ವರ್ಷ ಮೇಲ್ಪಟ್ಟ ಎಲ್ಲ ಭಾರತೀಯ ಪ್ರಜೆಗಳಿಗೂ ಉಚಿತವಾಗಿ ಲಸಿಕೆ ಹಾಕುವುದು ಎಂದು ಪ್ರಕಟಿಸಿದರು. ಭಾರತ ಸರ್ಕಾರ ಲಸಿಕಾ ಕಂಪನಿಗಳು ಉತ್ಪಾದಿಸುವ ಶೇ.75ರಷ್ಟು ಲಸಿಕೆಯನ್ನು ತಾನೇ ಖರೀದಿಸಿ, ರಾಜ್ಯಗಳಿಗೆ ಉಚಿತವಾಗಿ ಪೂರೈಸಲಿದೆ ಎಂದು ತಿಳಿಸಿದರು. ಲಸಿಕೆಗಾಗಿ ಯಾವುದೇ ರಾಜ್ಯ ಸರ್ಕಾರ ಒಂದು ರೂಪಾಯಿಯನ್ನೂ ವೆಚ್ಚ ಮಾಡುವುದಿಲ್ಲ ಎಂದು ತಿಳಿಸಿದರು. ಈವರೆಗೆ ಕೋಟ್ಯಂತರ ಜನರು ಉಚಿತ ಲಸಿಕೆ ಪಡೆದುಕೊಂಡಿದ್ದಾರೆ. ಈಗ 18 ವರ್ಷದ ವಯೋಮಾನದವರನ್ನೂ ಇದಕ್ಕೆ ಸೇರ್ಪಡೆ ಮಾಡಲಾಗಿದೆ. ಭಾರತ ಸರ್ಕಾರ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಪೂರೈಸಲಿದೆ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

ಶ್ರೀ ಮೋದಿ ವ್ಯವಸ್ಥೆಯಲ್ಲಿ ಶೇ.25ರಷ್ಟು ಲಸಿಕೆಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳು ಖರೀದಿಸುವುದು ಮುಂದುವರಿಯಲಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆಯ ವಾಸ್ತವ ದರದ ಮೇಲೆ  ಕೇವಲ 150 ರೂ. ಸೇವಾ ಶುಲ್ಕವನ್ನು ಮಾತ್ರವೇ ವಿಧಿಸುವುದರ ಬಗ್ಗೆ ರಾಜ್ಯ ಸರ್ಕಾರಗಳು ನಿಗಾ ಇಡಬೇಕು ಎಂದು ಹೇಳಿದರು

ಮತ್ತೊಂದು ಪ್ರಮುಖ ಪ್ರಕಟಣೆ ಹೊರಡಿಸಿದ ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ದೀಪಾವಳಿವರೆಗೆ ವಿಸ್ತರಿಸಿರುವುದಾಗಿ ಪ್ರಕಟಿಸಿದರು. ಅಂದರೆ ನವೆಂಬರ್ ವರೆಗೆ 80 ಕೋಟಿ ಜನರು ಪ್ರತಿ ತಿಂಗಳೂ ಉಚಿತ ಆಹಾರ ಧಾನ್ಯ ಪಡೆಯಲಿದ್ದಾರೆ. ಸಾಂಕ್ರಾಮಿಕದ ವೇಳೆ, ಸರ್ಕಾರ ಬಡ ಜನರೊಂದಿಗೆ ಗೆಳೆಯನಂತೆ ಅವರ ಅವಶ್ಯಕತೆಗಳನ್ನು ಪೂರೈಸಲು ನಿಂತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಎರಡನೇ ಅಲೆಯ ವೇಳೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಹಿಂದೆಂದೂ ಕಾಣದ ರೀತಿಯಲ್ಲಿ ಹೆಚ್ಚಾಗಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸವಾಲನ್ನು ಸರ್ಕಾರ ಎಲ್ಲ ವ್ಯವಸ್ಥೆಯನ್ನೂ ಸಮರೋಪಾದಿಯಲ್ಲಿ ನಿಯೋಜಿಸುವ ಮೂಲಕ ಎದಿರಿಸಿತು. ಭಾರತದ ಇತಿಹಾಸದಲ್ಲೇ ಇಷ್ಟು ಮಟ್ಟದ ವೈದ್ಯಕೀಯ ಆಮ್ಲಜನಕದ ಬೇಡಿಕೆಯ ಅನುಭವ ಭಾರತಕ್ಕೆ ಆಗಿರಲಿಲ್ಲ ಎಂದು ಶ್ರೀಮೋದಿ ಹೇಳಿದರು

ಲಸಿಕೆಗೆ ಇರುವ ಬೇಡಿಕೆಗೆ ಹೋಲಿಸಿದರೆ, ಲಸಿಕೆ ಉತ್ಪಾದಿಸುತ್ತಿರುವ ರಾಷ್ಟ್ರ ಮತ್ತು ಕಂಪನಿಗಳು ಅತ್ಯಂತ ಕಡಿಮೆ. ಇಂತಹ ಸನ್ನಿವೇಶದಲ್ಲಿ, ಮೇಡ್ ಇನ್ ಇಂಡಿಯಾ ಲಸಿಕೆ ಭಾರತಕ್ಕೆ ಅತ್ಯಂತ ಅಗತ್ಯವಾಗಿತ್ತು ಎಂದರು. ಹಿಂದೆ ಭಾರತಕ್ಕೆ ವಿದೇಶದಲ್ಲಿ ಅಭಿವೃದ್ಧಿಯಾದ ಲಸಿಕೆಗಳು ದೊರಕಲು ದಶಕಗಳೇ ಹಿಡಿಯುತ್ತಿದ್ದವು. ಇದರ ಫಲಿತಾಂಶ ಹೇಗಿರುತ್ತಿತ್ತೆಂದರೆ, ಹಿಂದೆ ವಿದೇಶಗಳಲ್ಲಿ ಲಸಿಕೆ ಹಾಕುವ ಕಾರ್ಯ ಪೂರ್ಣಗೊಂಡರೂ, ಭಾರತದಲ್ಲಿ ಅದು ಆರಂಭವೇ ಆಗುತ್ತಿರಲಿಲ್ಲ ಎಂದರು. ಅಭಿಯಾನದೋಪಾದಿಯಲ್ಲಿ, ನಾವು ಲಸಿಕಾ ವ್ಯಾಪ್ತಿಯನ್ನು ಶೇಕಡ 60ರಿಂದ ಕಳೆದ 5-6 ವರ್ಷಗಳಲ್ಲಿ ಶೇ.90ಕ್ಕೆ ಹೆಚ್ಚಿಸಲಾಗಿದೆ ಎಂದು ಶ್ರೀ ಮೋದಿ ತಿಳಿಸಿದರು. ನಾವು ಲಸಿಕೆಯ ವೇಗವನ್ನಷ್ಟೇ ಹೆಚ್ಚಿಸಿಲ್ಲ. ಜೊತೆಗೆ ಲಸಿಕೆಯ ವ್ಯಾಪ್ತಿಯನ್ನೂ ಹೆಚ್ಚಿಸಿದ್ದೇವೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಬಾರಿ, ಭಾರತವು ಎಲ್ಲಾ ಆತಂಕಗಳನ್ನು ನಿವಾರಿಸಿದೆ ಮತ್ತು ಉದ್ದೇಶಗಳು ಪ್ರಾಮಾಣಿಕವಾಗಿದ್ದಾಗ, ಸ್ಪಷ್ಟ ನೀತಿ ಇದ್ದಾಗ ಮತ್ತು ನಿರಂತರ ಕಠಿಣ ಪರಿಶ್ರಮದ ಮೂಲಕ ಕೋವಿಡ್ಗಾಗಿ ಕೇವಲ ಒಂದಲ್ಲ, ಎರಡು ಮೇಕ್ ಇನ್ ಇಂಡಿಯಾ ಲಸಿಕೆಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನಮ್ಮ ವಿಜ್ಞಾನಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಈವರೆಗೂ ದೇಶದಲ್ಲಿ 23 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

ಕೇವಲ ಕೆಲವೇ ಸಾವಿರ ಪ್ರಕರಣಗಳು ಇದ್ದಾಗ, ಲಸಿಕಾ ಕಾರ್ಯ ಪಡೆಯನ್ನು ರಚಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಲಸಿಕಾ ಕಂಪನಿಗಳಿಗೆ ಚಿಕಿತ್ಸಾಲಯ ಪ್ರಯೋಗ ನಡೆಸಲು ಸರ್ಕಾರ ಎಲ್ಲ ಸಾಧ್ಯ ಬೆಂಬಲ ನೀಡಿತು, ಸಂಶೋಧನೆ ಮತ್ತು ಅಭಿವೃದ್ಧಿಗೆ ನಿಧಿ ನೀಡಿತು ಎಂದರು. ಶ್ರೇಷ್ಠ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಫಲವಾಗಿ, ಮುಂಬರುವ ದಿನಗಳಲ್ಲಿ ಲಸಿಕೆಯ ಪೂರೈಕೆ ಹೆಚ್ಚಳವಾಗಲಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಇಂದು, ಏಳು ಕಂಪನಿಗಳು ವಿವಿಧ ಬಗೆಯ ಲಸಿಕೆಯನ್ನು ತಯಾರಿಸುತ್ತಿವೆ. ಮತ್ತೆ ಮೂರು ಲಸಿಕೆಗಳ ಚಿಕಿತ್ಸಾಲಯ ಪ್ರಯೋಗ ಮುಂದುವರಿದಿದೆ ಎಂದೂ ಪ್ರಧಾನಮಂತ್ರಿಯವರು ತಿಳಿಸಿದರು. ಮಕ್ಕಳಿಗಾಗಿ ಮತ್ತು ನೇಸಲ್ ಲಸಿಕೆಯ ಪ್ರಯೋಗದ ಬಗ್ಗೆಯೂ ಮಾಹಿತಿ ನೀಡಿದರು.

ಲಸಿಕಾ ಅಭಿಯಾನದ ಬಗ್ಗೆ ವಿವಿಧ ಮೂಲೆಗಳಿಂದ ಬಂದ ವಿಭಿನ್ನ ಅಭಿಪ್ರಾಯಗಳ ಬಗ್ಗೆ, ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದ್ದ ಸಂದರ್ಭದಲ್ಲಿ, ರಾಜ್ಯಗಳಿಗೆ ಹೆಚ್ಚಿನ ಆಯ್ಕೆ ಇಲ್ಲದ ಬಗ್ಗೆ ಪ್ರಶ್ನೆಗಳು ಎದ್ದವು. ಕೆಲವು ಜನರು ಲಾಕ್ ಡೌನ್ ವೇಳೆ ನಮ್ಯತೆಯ ಬಗ್ಗೆ ಏಕೆ ಕೇಂದ್ರ ಸರ್ಕಾರವೇ ಎಲ್ಲವನ್ನೂ ನಿರ್ಧರಿಸುತ್ತಿದೆ ಎಂದು ಪ್ರಶ್ನಿಸುತ್ತಿದ್ದರು ಮತ್ತು ಎಲ್ಲದಕ್ಕೂ ಒಂದೇ ಅಳತೆ ಹೊಂದಿಕೆ ಆಗುವುದಿಲ್ಲ ಎಂದು ವಾದ ಮುಂದಿಡುತ್ತಿದ್ದರು. ಜನವರಿ 16ರಿಂದ ಆರಂಭವಾಗಿ ಏಪ್ರಿಲ್ ಅಂತ್ಯದವರೆಗೆ ನಡೆದ ಲಸಿಕೆ ಕಾರ್ಯಕ್ರಮ ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲೇ ನಡೆಯಿತು. ಎಲ್ಲರಿಗೂ ಉಚಿತ ಲಸಿಕೆ ನೀಡಿಕೆ ಮುಂದುವರಿದಿತ್ತು ಮತ್ತು ಜನರು ಶಿಸ್ತುಬದ್ಧವಾಗಿ ತಮ್ಮ ಸರದಿ ಬಂದಾಗ ಲಸಿಕೆ ಪಡೆಯುತ್ತಿದ್ದರು. ನಡುವೆ, ವಿಕೇಂದ್ರೀಕರಣ ಮಾಡಬೇಕು ಎಂಬ ಬೇಡಿಕೆಯೂ ಎದ್ದಿತು. ಕೆಲವು ವಯೋಮಾನದ ಗುಂಪುಗಳಿಗೆ ಆದ್ಯತೆ ನೀಡುವ ವಿಚಾರವೂ ಚರ್ಚೆಯಾಗುತ್ತಿತ್ತು. ಹಲವು ರೀತಿಯ ಒತ್ತಡಗಳು ಕೇಳಿಬಂದವು ಮತ್ತು ಕೆಲವು ವರ್ಗದ ಮಾಧ್ಯಮಗಳು ಇದನ್ನು ಚಳವಳಿಯ ರೂಪದಲ್ಲಿ ನಡೆಸಿದವು ಎಂದು ಪ್ರಧಾನಮಂತ್ರಿ ತಿಳಿಸಿದರು.

ಲಸಿಕೆಯ ವಿರುದ್ಧ ವದಂತಿ ಹಬ್ಬಿಸುತ್ತಿರುವವರ ಬಗ್ಗೆ ಜಾಗರೂಕರಾಗಿರುವಂತೆ ಅವರು ಜನರಿಗೆ ಎಚ್ಚರಿಕೆ ನೀಡಿದರು. ಅಂತಹ ಜನರು ಮುಗ್ದ ಜನರ ಜೊತೆ ಆಟವಾಡುತ್ತಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಅಂತಹವರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.

 


***(Release ID: 1725205) Visitor Counter : 184