ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ರಲ್ಲಿ ಆಮ್ಲಜನಕ ಚಿಕಿತ್ಸಾ ವಿಧಾನ

Posted On: 29 MAY 2021 11:30AM by PIB Bengaluru

ಕೋವಿಡ್-19 ಎರಡನೇ ಅಲೆಯಲ್ಲಿ, ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿ ಕಂಡುಬರುತ್ತಿರುವುದು ವರದಿಯಾಗಿದೆ. ವರದಿಯಾದ ಶೇ.80 ರಷ್ಟು ಕೋವಿಡ್-19 ಪ್ರಕರಣಗಳು ಲಘು ರೋಗ ಲಕ್ಷಣಗಳನ್ನು ಹೊಂದಿವೆ. ಮಧ್ಯಮ ರೋಗ ಲಕ್ಷಣವನ್ನು ಹೊಂದಿರುವ ಕೇವಲ ಶೇ.15 ರಷ್ಟುಕೋವಿಡ್ ರೋಗಿಗಳಲ್ಲಿ ಆಮ್ಲಜನಕ ಮಟ್ಟವು ಶೇ.94 ಕ್ಕಿಂತ ಕಡಿಮೆಯಿರಬಹುದು. ಉಳಿದ ಶೇ. 5 ರಷ್ಟು ಕೋವಿಡ್ ಸೋಂಕಿತರು ತೀವ್ರವಾದ ಕಾಯಿಲೆಗೆ ಒಳಗಾಗಬಹುದು, ಇವರಲ್ಲಿ ಉಸಿರಾಟದ ಪ್ರಮಾಣ 30 / ನಿಮಿಷಕ್ಕಿಂತ ಹೆಚ್ಚು ಮತ್ತು ಆಮ್ಲಜನಕದ ಮಟ್ಟವು ಶೇ.90 ಕ್ಕಿಂತ ಕಡಿಮೆಯಿರುತ್ತದೆ ಎಂದು ಬೆಂಗಳೂರಿನ ರಾಷ್ಟ್ರೀಯ ಕ್ಷಯರೋಗ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ.ರವಿಚಂದ್ರ ವಿವರಿಸುತ್ತಾರೆ.

ಪೂರಕ ಆಮ್ಲಜನಕದ ಅಗತ್ಯವನ್ನು ಹೊಂದಿರುವ ಕಡಿಮೆ ಪ್ರಮಾಣದ ರೋಗಿಗಳ ಅನುಕೂಲಕ್ಕಾಗಿ ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಪುನಃಸ್ಥಾಪಿಸುವುದು ಹೇಗೆ ಎಂಬ ಬಗ್ಗೆ ಕೆಲವು ಪ್ರಮುಖ ಅಂಶಗಳನ್ನು ನೋಡೋಣ.

ಆಮ್ಲಜನಕದ ಮಟ್ಟ ಕಡಿಮೆಯಾಗುವ ಲಕ್ಷಣಗಳ ಬಗ್ಗೆ ಜಾಗರೂಕರಾಗಿರಿ

ಉಸಿರಾಟದ ತೊಂದರೆ, ಗೊಂದಲ, ಎಚ್ಚರಗೊಳ್ಳುವಲ್ಲಿ ತೊಂದರೆ ಮತ್ತು ತುಟಿಗಳು ಅಥವಾ ಮುಖ ನೀಲಿ ಬಣ್ಣಕ್ಕೆ ತಿರುಗುವುದು, ವಯಸ್ಕರಿಗೆ ಎದೆ ನೋವು ಕಾಣಿಸಿಕೊಳ್ಳಬಹುದು. ಮಕ್ಕಳಲ್ಲಿ ಮೂಗಿನ ಹೊಳ್ಳೆಗಳು ಉರಿಯುವುದು, ಉಸಿರಾಡುವಾಗ ಶಬ್ದ ಬರುವುದು ಅಥವಾ ಕುಡಿಯಲು ಅಥವಾ ತಿನ್ನಲು ಕಷ್ಟವಾಗುವುದು ಆಮ್ಲಜನಕದ ಮಟ್ಟ ಕಡಿಮೆಯಾಗುವ ಎಚ್ಚರಿಕೆಯ ಚಿಹ್ನೆಗಳು.

ನಾವು ಯಾಕೆ ಕಾಳಜಿ ವಹಿಸಬೇಕು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೈಪೋಕ್ಸೆಮಿಯಾ (ರಕ್ತದಲ್ಲಿ ಕಡಿಮೆ ಆಮ್ಲಜನಕದ ಮಟ್ಟ) ಅಂತಿಮವಾಗಿ ಜೀವಹಾನಿಗೆ ಕಾರಣವಾಗಬಹುದು. ಕೋವಿಡ್-19 ರಂತಹ ಕಾಯಿಲೆಯಿಂದಾಗಿ ಆಮ್ಲಜನಕದ ಮಟ್ಟ ಕಡಿಮೆಯಾದಾಗ, ದೇಹದ ಜೀವಕೋಶಗಳು ತಮ್ಮ ಸಾಮಾನ್ಯ ಕೆಲಸಗಳನ್ನು ನಿರ್ವಹಿಸಲು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ. ಆಮ್ಲಜನಕ ಮಟ್ಟವು ದೀರ್ಘಕಾಲದವರೆಗೆ ಕಡಿಮೆಯಾಗಿದ್ದರೆ, ಚಿಕಿತ್ಸೆಯ ಕೊರತೆಯಿಂದಾಗಿ, ಅಂಗಗಳು ನಿಷ್ಕ್ರಿಯಗೊಳ್ಳಲು ಪ್ರಾರಂಭಿಸುತ್ತವೆ; ತೀವ್ರತರವಾದ ಪ್ರಕರಣಗಳಲ್ಲಿ, ಇದು ಸಾವಿಗೆ ಕಾರಣವಾಗಬಹುದು.

ಆಮ್ಲಜನಕದ ಮಟ್ಟವನ್ನು ಅಳೆಯುವುದು ಹೇಗೆ

ಆಮ್ಲಜನಕದ ಮಟ್ಟವನ್ನು ಅಳೆಯಲು ಎರಡು ಸುಲಭ ಮಾರ್ಗಗಳಿವೆ.

ಪಲ್ಸ್ ಆಕ್ಸಿಮೀಟರ್: ಪಲ್ಸ್ ಆಕ್ಸಿಮೀಟರ್ ಬಳಸಿ ರೋಗಿಯ ಆಮ್ಲಜನಕದ ಮಟ್ಟವನ್ನು ಅಳೆಯಬಹುದು, ಅದನ್ನು ರೋಗಿಯ ಕೈ ಬೆರಳು, ಕಾಲ್ಬೆರಳು ಅಥವಾ ಕಿವಿಗೆ ಸಿಕ್ಕಿಸಿ ಆಮ್ಲಜನಕದ ಮಟ್ಟವನ್ನು ತಿಳಿಯಬಹುದು. ಇದು ನೋವುರಹಿತ ಪರೀಕ್ಷೆಯಾಗಿದ್ದು, ಎರಡು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಪಲ್ಸ್ ಆಕ್ಸಿಮೀಟರ್ಗಳು ರೋಗಿಯ ರಕ್ತದಲ್ಲಿನ ಆಮ್ಲಜನಕದ ಶುದ್ಧತ್ವ ಅಥವಾ ಆಮ್ಲಜನಕದ ಶೇಕಡಾವಾರು ಪ್ರಮಾಣವನ್ನು ಅಳೆಯುತ್ತವೆ. ಪಲ್ಸ್ ಆಕ್ಸಿಮೆಟ್ರಿ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತರಬೇತಿ ಕೈಪಿಡಿಯ ಪ್ರಕಾರ, ಆಮ್ಲಜನಕದ ಶುದ್ಧತ್ವವು ಶೇ.93 ಅಥವಾ ಅದಕ್ಕಿಂತ ಕಡಿಮೆಯಿದ್ದರೆ, ರೋಗಿಗೆ ತ್ವರಿತವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಶೇ.90 ಕ್ಕಿಂತ ಕಡಿಮೆ ಸ್ಯಾಚುರೇಶನ್ ಕ್ಲಿನಿಕಲ್ ತುರ್ತಾಗಿರುತ್ತದೆ.

ಉಸಿರಾಟದ ದರ: ಉಸಿರಾಟದ ದರವು ವ್ಯಕ್ತಿಯು ನಿಮಿಷಕ್ಕೆ ತೆಗೆದುಕೊಳ್ಳುವ ಉಸಿರಾಟದ ಸಂಖ್ಯೆ. ಬೆಂಗಳೂರಿನ ರಾಷ್ಟ್ರೀಯ ಕ್ಷಯರೋಗ ಸಂಸ್ಥೆಯ ನಿರ್ದೇಶಕ ಡಾ.ಸೋಮಶೇಖರ ಅವರು ಯಾವುದೇ ಸಾಧನವಿಲ್ಲದೆ ಉಸಿರಾಟದ ಪ್ರಮಾಣವನ್ನು ಅಳೆಯುವ ಸರಳ ವಿಧಾನವನ್ನು ವಿವರಿಸುತ್ತಾರೆ. ನಿಮ್ಮ ಅಂಗೈಯನ್ನು ನಿಮ್ಮ ಎದೆಯ ಮೇಲೆ ಇರಿಸಿ, 1 ನಿಮಿಷದವರೆಗೆ ನಿಮ್ಮ ಉಸಿರಾಟದ ಪ್ರಮಾಣವನ್ನು ಅಳೆಯಿರಿ. ಉಸಿರಾಟದ ಪ್ರಮಾಣ ನಿಮಿಷಕ್ಕೆ 24 ಕ್ಕಿಂತ ಕಡಿಮೆಯಿದ್ದರೆ, ನಿಮ್ಮ ಆಮ್ಲಜನಕದ ಮಟ್ಟ ಸುರಕ್ಷಿತವಾಗಿದೆ ಎಂದರ್ಥ. ರೋಗಿಯು ನಿಮಿಷಕ್ಕೆ 30 ಕ್ಕಿಂತ ಹೆಚ್ಚು ಬಾರಿ ಉಸಿರಾಟವನ್ನು ಹೊಂದಿದ್ದರೆ ಆಮ್ಲಜನಕದ ಮಟ್ಟವು ಕಡಿಮೆ ಇರುತ್ತದೆ.

ಕಡಿಮೆ ಆಮ್ಲಜನಕದ ಮಟ್ಟವಿದ್ದಾಗ ನೀವು ಏನು ಮಾಡಬೇಕು?

ಮಕಾಡೆಯಾಗಿ ಮಲಗುವುದು (ಪ್ರೋನಿಂಗ್)

ಮನೆಯ ಆರೈಕೆಯಲ್ಲಿರುವ ರೋಗಿಗಳು ಮಕಾಡೆಯಾಗಿ (ಹೊಟ್ಟೆಯ ಮೇಲೆ) ಮಲಗಲು ಸೂಚಿಸಲಾಗುತ್ತದೆ. ಇದು ಉಸಿರಾಟವನ್ನು ಸುಧಾರಿಸುತ್ತದೆ ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ದಯವಿಟ್ಟು ಕೇಂದ್ರ ಆರೋಗ್ಯ ಸಚಿವಾಲಯದ ಸ್ವಯಂ ಆರೈಕೆಗಾಗಿ ಪ್ರೋನಿಂಗ್ಮಾರ್ಗಸೂಚಿಯಲ್ಲಿ ಹೆಚ್ಚಿನ ವಿವರಗಳನ್ನು ಪರಿಶೀಲಿಸಿ.

ಮಕಾಡೆಯಾಗಿ ಮಲಗುವುದರಿಂದ ಶ್ವಾಸಕೋಶದಲ್ಲಿ ಆಮ್ಲಜನಕ ಪೂರೈಕೆ ಸುಧಾರಿಸುತ್ತದೆ

ಮನೆಯ ರೋಗಿಗಳಿಗೆ ಆಕ್ಸಿಮೀಟರ್ ನಲ್ಲಿ ಎಸ್ಪಿಒ2 ಶೇ. 94 ಕ್ಕಿಂತ ಕಡಿಮೆ ತೋತರಿಸಿದರೆ ಅವರು ಮಕಾಡೆಯಾಗಿ (ಹೊಟ್ಟೆಯ ಮೇಲೆ) ಮಲಗಲು ಸೂಚಿಸಲಾಗುತ್ತದೆ. ಇದು ಉಸಿರಾಟವನ್ನು ಸುಧಾರಿಸುತ್ತದೆ ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.

1.         ಸಮತಟ್ಟಾದ ಹಾಸಿಗೆಯ ಮೇಲೆ 30 ನಿಮಿಷದಿಂದ 2 ಗಂಟೆಗಳ ಕಾಲ ಮಕಾಡೆಯಾಗಿ ಮಲಗುವ ಮೂಲಕ ಪ್ರಾರಂಭಿಸಿ

2021 ಮೇ 24 ರಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಕೋವಿಡ್-19 (ವಯಸ್ಕರಲ್ಲಿ) ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರ ಪ್ರಕಾರ

ಪೂರಕ ಆಮ್ಲಜನಕ ಚಿಕಿತ್ಸೆಯ ಅಗತ್ಯವಿರುವ ಎಲ್ಲಾ ರೋಗಿಗಳಲ್ಲಿ ಮಕಾಡೆಯಾಗಿ ಮಲಗುವುದನ್ನು ಪ್ರೋತ್ಸಾಹಿಸಬೇಕು.

ಅನುಸರಿಸಬೇಕಾದ ಮಾನದಂಡ

 

ಮಕಾಡೆ ಮಲಗುವುದನ್ನು ತಪ್ಪಿಸಿ

 

  • ಸಾಮಾನ್ಯ ಮಾನಸಿಕ ಸ್ಥಿತಿ
  • ಕನಿಷ್ಠ ಸಹಾಯದಿಂದ ಮಕಾಡೆ ಮಲಗುವುದು ಅಥವಾ ಭಂಗಿಯನ್ನು ಬದಲಾಯಿಸುವ ಸಾಮರ್ಥ್ಯವಿರುವವರು
  • ರಕ್ತ ಸಂಚಾರದ (ಹಿಮೋಡೈನಮಿಕ್ ) ತೊಂದರೆಗಳಿರುವವರು
  • ಸಮೀಪದ ಮೇಲ್ವಿಚಾರಣೆ ಸಾಧ್ಯವಿಲ್ಲದವರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಲಹೆಯು ವೆಂಟಿಲೇಟರ್ ನಲ್ಲಿ ಇಲ್ಲದ ರೋಗಿಗಳು ಮಕಾಡೆಯಾಗಿ ಮಲಗುವ ಬಗ್ಗೆ ಪ್ರಮುಖವಾದ ಅಂಶಗಳನ್ನು ಒತ್ತಿಹೇಳುತ್ತದೆ.

    • ಆಸ್ಪತ್ರೆಗೆ ದಾಖಲಿಸುವಷ್ಟು ತೀವ್ರವಾದ ಉಸಿರಾಟದ ಸಮಸ್ಯೆ ಇರುವ ಯಾವುದೇ ಕೋವಿಡ್-19 ರೋಗಿಯನ್ನು ಮಕಾಡೆಯಾಗಿ ಮಲಗಿಸಬಹುದು.
    • ರೋಗಿಯ ತಿರುಗುವಿಕೆಯ ಸಮಯದಲ್ಲಿ ಆಮ್ಲಜನಕದ ಹರಿವಿಗೆ ಅಡ್ಡಿಯಾಗದಂತೆ ಅಡ್ಡಿಪಡಿಸದಂತೆ ಎಚ್ಚರ ವಹಿಸಬೇಕು
    • 30–120 ನಿಮಿಷಗಳು ಮಕಾಡೆಯಾಗಿ ಮಲಗುವುದು, ನಂತರ 30-120 ನಿಮಿಷಗಳು ಎಡ ಪಾರ್ಶ್ವದ ಮೇಲೆ, ಬಲ ಪಾರ್ಶ್ವದ ಮೇಲೆ ಮಲಗುವುದು ಮತ್ತು ನೇರವಾಗಿ ಕುಳಿತುಕೊಳ್ಳುವುದು.

ಆಮ್ಲಜನಕ ಸಾಂದ್ರಕಗಳ ಬಳಕೆ

ಆರೋಗ್ಯ ಸೇವೆ ಒದಗಿಸುವವರ ಸಮ್ಮುಖದಲ್ಲಿ ಮಾತ್ರ ಆಮ್ಲಜನಕ ಚಿಕಿತ್ಸೆಯನ್ನು ನೀಡಬಹುದು ಎಂದು ತಜ್ಞರು ಸೂಚಿಸುತ್ತಾರೆ. ಆದರೂ, ವೈದ್ಯಕೀಯ ಚಿಕಿತ್ಸೆಗೆ ಅಥವಾ ಆಂಬ್ಯುಲೆನ್ಸ್ ಗಾಗಿ ಕಾಯುತ್ತಿರುವ ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಬಳಸಬಹುದು.

ಪುಣೆಯ ಬಿಜೆ ವೈದ್ಯಕೀಯ ಕಾಲೇಜಿನ ಅರಿವಳಿಕೆ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಪ್ರೊ.ಸಂಯೋಗಿತಾ ನಾಯಕ್, “ಆಮ್ಲಜನಕದ ಸಾಂದ್ರಕಗಳನ್ನು ಕೋವಿಡ್-19 ಮಧ್ಯಮ ಪ್ರಮಾಣದ ಲಕ್ಷಣಗಳ ಸಂದರ್ಭಗಳಲ್ಲಿ, ರೋಗಿಯ ಆಮ್ಲಜನಕದ ಮಟ್ಟದಲ್ಲಿ ಕುಸಿತ ಕಂಡುಬಂದರೆ, ಆಮ್ಲಜನಕದ ಅವಶ್ಯಕತೆಯು ನಿಮಿಷಕ್ಕೆ ಗರಿಷ್ಠ 5 ಲೀಟರ್ ಇರುವಲ್ಲಿ ಮಾತ್ರ ಬಳಸಬೇಕು.ಎಂದು ಸಲಹೆ ನೀಡುತ್ತಾರೆ.

ಕೋವಿಡ್ ನಂತರದ ತೊಂದರೆಗಳನ್ನು ಅನುಭವಿಸುವ ಆಮ್ಲಜನಕ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕ ಸಾಂದ್ರಕಗಳು ಬಹಳ ಉಪಯುಕ್ತವಾಗಿವೆ ಎಂದು ಅವರು ಹೇಳುತ್ತಾರೆ.

ಮೇಲಿನ ಎರಡೂ ಸಂದರ್ಭಗಳಲ್ಲಿ, ಆಮ್ಲಜನಕ ಚಿಕಿತ್ಸೆಯ ಗುರಿ ಶೇ.94 ರಷ್ಟು ಸ್ಯಾಚುರೇಶನ್ ಮಟ್ಟವನ್ನು ಸಾಧಿಸುವುದು; ಒಮ್ಮೆ ರೋಗಿಯು ಶೇ.93 ರಿಂದ 94 ರಷ್ಟು ಆಮ್ಲಜನಕದ ಮಟ್ಟಕ್ಕೆ ತಲುಪಿದರೆ ಆಮ್ಲಜನಕ ಚಿಕಿತ್ಸೆಯನ್ನು ನಿಲ್ಲಿಸಬಹುದು. ಅಧಿಕ ಆಮ್ಲಜನಕವು ಇಂಗಾಲಾಮ್ಲದ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು, ಇದು ತೊಂದರೆಗಳಿಗೆ ಕಾರಣವಾಗಬಹುದು.

***



(Release ID: 1722692) Visitor Counter : 366