ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಟೋಲ್ ಪ್ಲಾಜಾಗಳಲ್ಲಿ ಪ್ರತಿ ವಾಹನ 10 ಸೆಕೆಂಡ್ ಗಿಂತ ಹೆಚ್ಚು ಕಾಯದಂತೆ ಖಾತ್ರಿಪಡಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕ್ರಮ

Posted On: 26 MAY 2021 8:07PM by PIB Bengaluru

ಟೋಲ್ ಪ್ಲಾಜಾಗಳಲ್ಲಿ ಪ್ರತಿ ವಾಹನಗಳ ಸುಗಮ ಮತ್ತು ತ್ವರಿತ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನದಟ್ಟಣೆಯ ಸಮಯ ಸೇರಿ ಎಲ್ಲ ಸಮಯದಲ್ಲೂ ಸಹ ಪ್ರತಿ ವಾಹನದ ಸೇವಾ ಸಮಯ 10 ಸೆಕೆಂಡ್ ಮೀರದಂತೆ ಖಾತ್ರಿಪಡಿಸಬೇಕು ಎಂದು ಸೂಚಿಸಲಾಗಿದೆ.

ಹೊಸ ಮಾರ್ಗಸೂಚಿಯಿಂದಾಗಿ ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಗಿಂತ ಹೆಚ್ಚು ವಾಹನಗಳ ಸರದಿ ನಿಲ್ಲಲು ಅವಕಾಶವಿಲ್ಲ. ಇದರಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಂಚಾರ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯುತ್ತದೆ. ಅಲ್ಲದೆ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಶೇ.100ರಷ್ಟು ಕಡ್ಡಾಯಗೊಳಿಸಿದ ನಂತರ ಯಾವುದೇ ಕಾಯುವಂತಹ ಯಾವುದೇ ಸ್ಥಿತಿಯಿಲ್ಲ. ಒಂದು ವೇಳೆ ಯಾವುದಾದರು ಕಾರಣಕ್ಕೆ ಕಾಯುತ್ತಿರುವ ವಾಹನಗಳ ಸರದಿ 100 ಮೀಟರ್ ಗಿಂತ ಹೆಚ್ಚಾದರೆ ಟೋಲ್ ಬೂತ್ ಗಳಲ್ಲಿ ವಾಹನಗಳ ಸರದಿ 100 ಮೀಟರ್ ಒಳಗೆ ಬರಲು ಉಳಿದ ವಾಹನಗಳಿಗೆ ಯಾವುದೇ ಟೋಲ್ ಪಾವತಿಸದೆ ಸಂಚರಿಸಲು ಅವಕಾಶವಿದೆ. ಉದ್ದೇಶಕ್ಕಾಗಿ ಟೋಲ್ ಬೂತ್ ನಲ್ಲಿ ಪ್ರತಿಯೊಂದು ಟೋಲ್ ಮಾರ್ಗದಲ್ಲಿ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಹಾಕಲಾಗಿದೆ. ಇದು ಟೋಲ್ ಪ್ಲಾಜಾ ಆಪರೇಟರ್ ಗಳಲ್ಲಿ ಹೆಚ್ಚಿನ ಹೊಣೆಗಾರಿಕೆ ಪ್ರಜ್ಞೆಯನ್ನು ಬೆಳೆಸುತ್ತದೆ.

2021 ಫೆಬ್ರವರಿ ಮಧ್ಯದಿಂದೀಚೆಗೆ ಟೋಲ್ ಪ್ಲಾಜಾಗಳನ್ನು ಎನ್ಎಚ್ಎಐ ಶೇ.100ರಷ್ಟು ನಗದುರಹಿತ ವಹಿವಾಟನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಒಟ್ಟಾರೆ ಎನ್ಎಚ್ಎಐ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಪ್ರಮಾಣ ಶೇ.96ರಷ್ಟು ಮತ್ತು ಹಲವು ಪ್ಲಾಜಾಗಳಲ್ಲಿ ಶೇ.99ರಷ್ಟಿದೆ. ದೇಶದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಹೊಸ ವಿನ್ಯಾಸ ಟೋಲ್ ಫ್ಲಾಜಾಗಳನ್ನು ಹೊಂದಲು ಹಾಗೂ ಮುಂದಿನ ಹತ್ತು ವರ್ಷಗಳ ವಾಹನ ಅಂದಾಜು ಮಾಡಿ ಟೋಲ್ ಪ್ಲಾಜಾಗಳನ್ನು  ನಿರ್ಮಿಸಿ ಪರಿಣಾಮಕಾರಿ ಟೋಲ್ ಸಂಗ್ರಹ ವ್ಯವಸ್ಥೆಗೆ ಒತ್ತು ನೀಡಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೊಸ ಪದ್ಧತಿಯಾಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಫಾಸ್ಟ್ ಟ್ಯಾಗ್ ಬಳಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಏಕೆಂದರೆ ಇದು ಚಾಲಕರು ಮತ್ತು ಟೋಲ್ ಆಪರೇಟರ್ ಗಳ ನಡುವೆ ಯಾವುದೇ ನೇರ ಸಂಪರ್ಕ ಆಗುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಹೆದ್ದಾರಿ ಬಳಕೆದಾರರಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆ ನಿರಂತರವಾಗಿ ಹೆಚ್ಚಾಗುತ್ತಿದ್ದು, ಅದು ಉತ್ತೇಜನಕಾರಿಯಾಗಿದೆ ಮತ್ತು ಟೋಲ್ ಕಾರ್ಯಾಚರಣೆಗಳಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ತರಲು ಸಹಾಯಕವಾಗಿದೆ

***


(Release ID: 1722031) Visitor Counter : 265