ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕರ್ನಾಟಕ ಸೇರಿದಂತೆ ದೇಶದ 7 ರಾಜ್ಯಗಳಾದ್ಯಂತ 143 ಖೇಲೋ ಇಂಡಿಯಾ ಕೇಂದ್ರ ತೆರೆಯಲು ಕ್ರೀಡಾ ಸಚಿವಾಲಯದ ಸಮ್ಮತಿ

Posted On: 25 MAY 2021 5:05PM by PIB Bengaluru

ಕ್ರೀಡಾ ಸಚಿವಾಲಯ 14.30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕವೂ ಸೇರಿದಂತೆ ದೇಶದ 7 ರಾಜ್ಯಗಳಾದ್ಯಂತ 143 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಿದ್ದು, ಈ ಕೇಂದ್ರಗಳಿಗೆ ತಲಾ ಒಂದು ಕ್ರೀಡಾ ವಿಭಾಗವನ್ನು ವಹಿಸಲಾಗುವುದು. 3.10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕದಲ್ಲಿ 31 ಖೇಲೋ ಇಂಡಿಯಾ ಕೇಂದ್ರಗಳು ತಲೆ ಎತ್ತಲಿವೆ. ಈ 7 ರಾಜ್ಯಗಳಲ್ಲಿ ಮಹಾರಾಷ್ಟ್ರ, ಮಿಜೋರಾಂ, ಗೋವಾ, ಕರ್ನಾಟಕ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಮತ್ತು ಮಣಿಪುರ ಸೇರಿವೆ.

ರಾಜ್ಯವಾರು ವಿಭಜನೆಯಲ್ಲಿ ಈ ಕೆಳಗಿನವುಗಳು ಸೇರಿವೆ:

1.         ಮಹಾರಾಷ್ಟ್ರ – 3.60 ಕೋಟಿ ರೂ. ಬಜೆಟ್ ಅಂದಾಜಿನೊಂದಿಗೆ 30 ಜಿಲ್ಲೆಗಳಲ್ಲಿ 36 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಾಗುವುದು.

2.         ಮಿಜೋರಾಂ – 20 ಲಕ್ಷ ರೂ. ಬಜೆಟ್ ಅಂದಾಜಿನಲ್ಲಿ  ಕೊಲಾಸಿಬ್ ಜಿಲ್ಲೆಯಲ್ಲಿ 2 ಖೇಲೋ ಇಂಡಿಯಾ ಕೇಂದ್ರ ತೆರೆಯುವುದು.

3.         ಅರುಣಾಚಲ ಪ್ರದೇಶ – 4.12 ಕೋಟಿ ರೂ. ಬಜೆಟ್ ಅಂದಾಜಿನಲ್ಲಿ 26 ಜಿಲ್ಲೆಯಲ್ಲಿ 52 ಖೇಲೋ ಇಂಡಿಯಾ ಕೇಂದ್ರ ತೆರೆಯುವುದು.

4.         ಮಧ್ಯಪ್ರದೇಶ – 40 ಲಕ್ಷ ರೂ. ಬಜೆಟ್ ಅಂದಾಜಿನಲ್ಲಿ 4 ಖೇಲೋ ಇಂಡಿಯಾ ಕೇಂದ್ರ ತೆರೆಯುವುದು.

5.         ಕರ್ನಾಟಕ – 3.10 ಕೋಟಿ  ರೂ. ಬಜೆಟ್ ಅಂದಾಜಿನಲ್ಲಿ 31 ಖೇಲೋ ಇಂಡಿಯಾ ಕೇಂದ್ರ ತೆರೆಯುವುದು

6.         ಮಣಿಪುರ – 1.60 ಕೋಟಿ ರೂ. ಬಜೆಟ್ ಅಂದಾಜಿನಲ್ಲಿ 16 ಖೇಲೋ ಇಂಡಿಯಾ ಕೇಂದ್ರ ತೆರೆಯುವುದು

7.         ಗೋವಾ - 20 ಲಕ್ಷ ರೂ. ಬಜೆಟ್ ಅಂದಾಜಿನಲ್ಲಿ 2 ಖೇಲೋ ಇಂಡಿಯಾ ಕೇಂದ್ರ ತೆರೆಯುವುದು

ದೇಶಾದ್ಯಂತ ಬೇರು ಮಟ್ಟದಲ್ಲಿ ಕ್ರೀಡಾ ಮೂಲಸೌಕರ್ಯದ ಲಭ್ಯತೆಯನ್ನು ಖಾತ್ರಿ ಪಡಿಸಲು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲಿದೆ. ಈ ನಿರ್ಧಾರದ ಬಗ್ಗೆ ಮಾತನಾಡಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ  ಸಚಿವ ಶ್ರೀ ಕಿರೆಣ್ ರಿಜಿಜು, “2028ರ ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಅಗ್ರ 10 ದೇಶಗಳಲ್ಲಿ ಒಂದನ್ನಾಗಿ ಮಾಡುವುದು ನಮ್ಮ ಪ್ರಯತ್ನವಾಗಿದೆ. ಈ ಗುರಿಯನ್ನು ಸಾಧಿಸಲು ನಾವು ಚಿಕ್ಕ ವಯಸ್ಸಿನಿಂದಲೇ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಪೋಷಿಸಬೇಕು. ಜಿಲ್ಲಾ ಮಟ್ಟದ ಖೇಲೋ ಇಂಡಿಯಾ ಕೇಂದ್ರಗಳಲ್ಲಿ ಉತ್ತಮ ತರಬೇತುದಾರರು ಮತ್ತು ಸಲಕರಣೆಗಳ ಸೌಲಭ್ಯಗಳ ಲಭ್ಯತೆಯೊಂದಿಗೆ, ಸರಿಯಾದ ಮಕ್ಕಳನ್ನು ಸರಿಯಾದ ಕ್ರೀಡೆಗೆ ಮತ್ತು ಸರಿಯಾದ ಸಮಯದಲ್ಲಿ ಗುರುತಿಸಲು ನಮಗೆ ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ.” ಎಂದರು.

ಕ್ರೀಡಾ ಸಚಿವಾಲಯ,  ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕನಿಷ್ಠ ಜಿಲ್ಲೆಗೆ ಒಂದರಂತೆ ಹೊಸ 1000 ಕೆ.ಐ.ಸಿ.ಗಳನ್ನು ತೆರೆಯಲು 2020ರ ಜೂನ್ ನಲ್ಲಿ ಯೋಜಿಸಿತ್ತು. ಇದಕ್ಕೂ ಮೊದಲೇ ಹಲವು ರಾಜ್ಯಗಳಾದ್ಯಂತ 217 ಕೆ.ಐ.ಸಿ.ಗಳನ್ನು ತೆರೆಯಲಾಗಿತ್ತು, ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಲಡಾಖ್ ನ, ಪ್ರತಿ ಜಿಲ್ಲೆಗಳಲ್ಲಿ 2 ಕೆಐಸಿಗಳನ್ನು  ತೆರೆಯಲು ನಿರ್ಧರಿಸಲಾಯಿತು.   

ಆಯಾ ರಾಜ್ಯ ಸರ್ಕಾರಗಳು ಈ ಎಲ್ಲಾ ಕೇಂದ್ರಗಳಿಗೆ ಮಾಜಿ ಚಾಂಪಿಯನ್ ಕ್ರೀಡಾಪಟುಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ದೇಶದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬೇರುಮಟ್ಟದಲ್ಲಿ ಬಲಪಡಿಸುವ ಸರ್ಕಾರದ ದೂರದೃಷ್ಟಿಯ ಭಾಗವಾಗಿ, ಕಡಿಮೆ ವೆಚ್ಚದ, ಪರಿಣಾಮಕಾರಿ ಕ್ರೀಡಾ ತರಬೇತಿ ಕಾರ್ಯವಿಧಾನವನ್ನು ರೂಪಿಸಲಾಗಿದೆ, ಇದರಲ್ಲಿ ಮಾಜಿ ಚಾಂಪಿಯನ್ ಅಥ್ಲೀಟ್ ಗಳು ಯುವಕರಿಗೆ ತರಬೇತುದಾರರಾಗಿ ಮಾರ್ಗದರ್ಶಕರಾಗಿರುತ್ತಾರೆ, ಸ್ವಾಯತ್ತ ರೀತಿಯಲ್ಲಿ ಕ್ರೀಡಾ ತರಬೇತಿಯನ್ನು ನೀಡುವುದರ ಜೊತೆಗೆ ಇದು ಅವರ ಜೀವನೋಪಾಯಕ್ಕೂ ದಾರಿ ಆಗಲಿದೆ.

ಈ ಆರ್ಥಿಕ ನೆರವನ್ನು ತರಬೇತುದಾರಾದ ಮಾಜಿ ಚಾಂಪಿಯನ್ ಅಥ್ಲೀಟ್ ಗಳ, ಸಹಾಯಕ ಸಿಬ್ಬಂದಿಯ ಸಂಭಾವನೆ, ಸಲಕರಣೆಗಳು, ಕ್ರೀಡಾ ಕಿಟ್‌ ಗಳು, ಉಪಭೋಗ್ಯ ವಸ್ತುಗಳ ಖರೀದಿ, ಸ್ಪರ್ಧೆಯಲ್ಲಿ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೆ ಬಳಸಬಹುದಾಗಿರುತ್ತದೆ.

***



(Release ID: 1721684) Visitor Counter : 184