ಗೃಹ ವ್ಯವಹಾರಗಳ ಸಚಿವಾಲಯ

2021ರ ನೈರುತ್ಯ ಮುಂಗಾರು ಸಮಯದಲ್ಲಿ ಎದುರಾಗಲಿರುವ ನೈಸರ್ಗಿಕ ವಿಪತ್ತುಗಳನ್ನು ನಿರ್ವಹಣೆ ಮಾಡಲು ಕೈಗೊಂಡಿರುವ ಸಿದ್ಧತಾ ಕ್ರಮಗಳ ಕುರಿತು ಪರಿಶೀಲಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಪರಿಹಾರ ಆಯುಕ್ತರ ವಾರ್ಷಿಕ ಸಮಾವೇಶ ನಡೆಸಿದ ಕೇಂದ್ರ ಗೃಹ ಸಚಿವಾಲಯ

Posted On: 21 MAY 2021 5:00PM by PIB Bengaluru

 ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಇಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿಗಳು ಮತ್ತು ಪರಿಹಾರ ಆಯುಕ್ತರ ವಾರ್ಷಿಕ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿತ್ತು. ಮುಖ್ಯವಾಗಿ ನೈಋತ್ಯ ಮುಂಗಾರು 2021ರ ಸಮಯದಲ್ಲಿ ಎದುರಾಗಲಿರುವ ನೈಸರ್ಗಿಕ ವಿಪತ್ತುಗಳ ನಿರ್ವಹಣೆಗೆ ಕೈಗೊಂಡಿರುವ ಸಿದ್ಧತೆಗಳ ಪರಾಮರ್ಶೆ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿತ್ತು.

          ಈ ಸಮಾವೇಶದ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಕಾರ್ಯದರ್ಶಿಗಳು ವಹಿಸಿದ್ದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ವರ್ಷವಿಡೀ ದಿನದ 24 ಗಂಟೆಗಳೂ ಸಹ ಸ್ಪಂದಿಸುವ ಸನ್ನದ್ಧವಾಗಿರುವುದನ್ನು ಖಚಿತಪಡಿಸಲು ಸಾಮರ್ಥ್ಯ ವೃದ್ಧಿ ಮತ್ತು ಪೂರ್ವಭಾವಿ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ನೈಋತ್ಯ ಮುಂಗಾರು ಸಮಯದಲ್ಲಿ ಅಥವಾ ಯಾವುದೇ ವಿಪತ್ತಿನ ಸಂದರ್ಭಗಳಲ್ಲಿ ಭಾರೀ ಮಳೆ/ಪ್ರವಾಹದಿಂದ ಆಕ್ಸಿಜನ್ ಉತ್ಪಾದನಾ ಘಟಕಗಳು ಹಾಗೂ ಎಲ್ಲ ಆರೋಗ್ಯ ಸೌಕರ್ಯಗಳ ಸುರಕ್ಷತೆಗೆ ಹೆಚ್ಚಿನ ಪ್ರಯತ್ನಗಳನ್ನು ಕೈಗೊಳ್ಳುವಂತೆ ಅವರು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ಪ್ರವಾಹ, ಚಂಡಮಾರುತ, ಭೂಕಂಪ ಮತ್ತಿತರ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಹಾನಿ ಪ್ರಮಾಣ ಕನಿಷ್ಠವಾಗಿರುವಂತೆ ಉತ್ತಮ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಿಸಿದ ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದರು.  

          ಅಲ್ಲದೆ ಕೇಂದ್ರ ಗೃಹ ಕಾರ್ಯದರ್ಶಿಗಳು, ರಾಷ್ಟ್ರೀಯ ದೂರ ಸಂವೇದಿ ಕೇಂದ್ರ(ಎನ್ಆರ್ ಎಸ್ ಸಿ) ಅಭಿವೃದ್ಧಿಪಡಿಸಿರುವ ರಾಷ್ಟ್ರೀಯ ತುರ್ತು ನಿರ್ವಹಣೆ ದತ್ತಾಂಶ(ಎನ್ ಡಿಇಎಂ)ದ 4.0 ಆವೃತ್ತಿಯನ್ನು ಬಿಡುಗಡೆ ಮಾಡಿದರು. ಇದು ಸಕಾಲಕ್ಕೆ ಮುನ್ನೆಚ್ಚರಿಕೆಗಳನ್ನು ನೀಡುವುದನ್ನು ಒಗ್ಗೂಡಿಸಲು ಮತ್ತು ಹವಾಮಾನ ಸಂಸ್ಥೆಗಳು ಮುನ್ನೆಚ್ಚರಿಕೆಗಳನ್ನು ನೀಡಲು ಹಾಗೂ ಈ ಮಾಹಿತಿಯನ್ನು ದೇಶದಲ್ಲಿ ವಿಪತ್ತು ಅಪಾಯ ತಗ್ಗಿಸಲು ಜಿಲ್ಲಾ ಮಟ್ಟದವರೆಗೆ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ತಲುಪಿಸಲು ಸಹಕಾರಿಯಾಗಲಿದೆ.

          ಹವಾಮಾನ ಮುನ್ಸೂಚನೆ, ಮುನ್ನೆಚ್ಚರಿಕೆ ಮತ್ತು ಮಾಹಿತಿ ಪ್ರಸರಣ ಕಾರ್ಯತಂತ್ರದ  ನಿರ್ವಹಣೆ ಹಾಗೂ ಸಿದ್ಧತಾ ಕ್ರಮಗಳು ಹಾಗೂ ವಿಪತ್ತು ನಿರ್ವಹಣಾ ವಲಯದಲ್ಲಿ ಸಾಮರ್ಥ್ಯವೃದ್ಧಿಯ ತನ್ನ ಭವಿಷ್ಯದ ಯೋಜನೆಗಳ ಕುರಿತು ಭಾರತೀಯ ಹವಾಮಾನ ಇಲಾಖೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿತು.

          ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ಕೇಂದ್ರ ಸಚಿವಾಲಯಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಭಾರತೀಯ ಹವಾಮಾನ ಇಲಾಖೆ(ಐಎಂಡಿ), ಕೇಂದ್ರ ಜಲ ಆಯೋಗ(ಸಿಡಬ್ಲ್ಯೂಸಿ), ಮಂಜು ಮತ್ತು  ಹಿಮರಾಶಿ ಅಧ್ಯಯನ ಕೇಂದ್ರ (ಎಸ್ಎಎಸ್ಇ), ಎನ್ ಆರ್ ಎಸ್ ಸಿ, (ಇಸ್ರೋ), ಜಿಎಸ್ಐ ಮತ್ತು ಇತರ ವೈಜ್ಞಾನಿಕ ಸಂಸ್ಥೆಗಳು, ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಸಿದ್ಧತೆಗಳು, ಮುಂಗಡವಾಗಿಯೇ ಮುನ್ನೆಚ್ಚರಿಕೆ ವ್ಯವಸ್ಥೆ , ಪ್ರವಾಹ ಮತ್ತು ನದಿ/ಜಲಾಶಯ ನಿರ್ವಹಣೆ, ಸ್ಥಳದಲ್ಲೇ ಹಾಗೂ ಆನಂತರದ ವಿಪತ್ತು ನಿರ್ವಹಣೆ ಮತ್ತು  ಭವಿಷ್ಯದ ಯೋಜನೆಗಳ  ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

***



(Release ID: 1720732) Visitor Counter : 226