ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಎನ್‌ಇಜಿವಿಎಸಿಯ ಹೊಸ ಶಿಫಾರಸುಗಳನ್ನು ಅಂಗೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯ


ಎನ್‌ಇಜಿವಿಎಸಿಯ ಹೊಸ ಶಿಫಾರಸುಗಳ ಪ್ರಕಾರ, ಕೋವಿಡ್ ಲಸಿಕೆಯನ್ನು ಅನಾರೋಗ್ಯದಿಂದ ಚೇತರಿಸಿಕೊಂಡ 3 ತಿಂಗಳ ನಂತರ ನೀಡಲಾಗುತ್ತದೆ

ಮೊದಲ ಡೋಸ್ ನಂತರ ಕೋವಿಡ್ ಸೋಂಕಿಗೆ ಒಳಗಾಗಿದ್ದರೆ, ಅನಾರೋಗ್ಯದಿಂದ ಚೇತರಿಕೆಯ ನಂತರ 3 ತಿಂಗಳಲ್ಲಿ 2 ನೇ ಡೋಸ್ ನೀಡಲಾಗುತ್ತದೆ

ಎಲ್ಲಾ ಹಾಲುಣಿಸುವ ಮಹಿಳೆಯರಿಗೂ ಕೋವಿಡ್ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ

ಕೋವಿಡ್ ಲಸಿಕೆ ಹಾಕುವ ಮೊದಲು ಲಸಿಕೆ ಪಡೆಯುವವರಿಗೆ ರಾಪಿಡ್ ಆಂಟಿಜೆನ್ ಟೆಸ್ಟ್ (RAT) ತಪಾಸಣೆ ಇಲ್ಲ

Posted On: 19 MAY 2021 4:17PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಲಸಿಕೆ ನೀಡಿಕೆಯ ರಾಷ್ಟ್ರೀಯ ತಜ್ಞರ ಗುಂಪು (NEGVAC) ಕೋವಿಡ್-19 ಲಸಿಕೆಯ ಬಗ್ಗೆ ಹೊಸ ಶಿಫಾರಸುಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಿದೆ. ಶಿಫಾರಸುಗಳು ಕೋವಿಡ್-19 ಸಾಂಕ್ರಾಮಿಕ ವಿಕಾಸದ ಪರಿಸ್ಥಿತಿ ಮತ್ತು ಜಾಗತಿಕ ವೈಜ್ಞಾನಿಕ ಪುರಾವೆ ಹಾಗೂ ಅನುಭವಗಳನ್ನುಆಧರಿಸಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೆಳಗಿನ ಶಿಫಾರಸುಗಳನ್ನು ಅಂಗೀಕರಿಸಿದೆ ಮತ್ತು ಇವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಿದೆ:

ಕೆಳಗಿನ ಸನ್ನಿವೇಶಗಳಲ್ಲಿ  ಕೋವಿಡ್-19 ಲಸಿಕೆಯನ್ನು ಮುಂದೂಡುವುದು:

  1. ಪ್ರಯೋಗಾಲಯ ಪರೀಕ್ಷೆಯಲ್ಲಿ SARS-2 COVID-19 ಸೋಂಕು ಸಾಬೀತಾಗಿರುವ ವ್ಯಕ್ತಿಗಳು: ಕೋವಿಡ್-19 ಲಸಿಕೆ ನೀಡಿಕೆಯನ್ನು ಅವರು ಚೇತರಿಸಿಕೊಂಡ 3 ತಿಂಗಳವರೆಗೆ ಮುಂದೂಡಲಾಗುತ್ತದೆ.
  2. SARS-2 ಮೊನೊಕ್ಲೋನಲ್ ಪ್ರತಿಕಾಯಗಳು ಅಥವಾ ಪ್ಲಾಸ್ಮಾವನ್ನು ನೀಡಿದ SARS-2 COVID-19 ರೋಗಿಗಳು: ಕೋವಿಡ್-19 ಲಸಿಕೆ ನೀಡಿಕೆಯನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ 3 ತಿಂಗಳವರೆಗೆ ಮುಂದೂಡಲಾಗುತ್ತದೆ.
  3. ಮೊದಲ ಡೋಸ್ ಲಸಿಕೆ ಪಡೆದ ನಂತರ ಲಸಿಕೆಯ ಎರಡೂ ಡೋಸ್ ಪೂರ್ಣಗೊಳಿಸುವ ಮೊದಲು ಕೋವಿಡ್ ಸೋಂಕಿಗೊಳಗಾದ ವ್ಯಕ್ತಿಗಳು: ಕೋವಿಡ್-19 ಅನಾರೋಗ್ಯದಿಂದ ಚೇತರಿಕೆಯ ನಂತರ 3 ತಿಂಗಳವರೆಗೆ 2 ನೇ ಡೋಸ್ ಅನ್ನು ಮುಂದೂಡಬೇಕು.
  4. ಆಸ್ಪತ್ರೆಗೆ ದಾಖಲು ಅಥವಾ ಐಸಿಯು ಆರೈಕೆಯ ಅಗತ್ಯವಿರುವ ಯಾವುದೇ ಗಂಭೀರ ಸಾಮಾನ್ಯ ಕಾಯಿಲೆ ಇರುವ ವ್ಯಕ್ತಿಗಳು ಸಹ ಕೋವಿಡ್-19 ಲಸಿಕೆ ಪಡೆಯುವ ಮೊದಲು 4-8 ವಾರಗಳವರೆಗೆ ಕಾಯಬೇಕು.

ಕೋವಿಡ್-19 ಲಸಿಕೆ ಪಡೆದ 14 ದಿನಗಳ ನಂತರ ಅಥವಾ ಕೋವಿಡ್-19 ಕಾಯಿಲೆಯಿಂದ ಬಳಲುತ್ತಿದ್ದರೆ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯ ನಂತರ ರಕ್ತದಾನ ಮಾಡಬಹುದು.

ಹಾಲುಣಿಸುವ ಎಲ್ಲಾ ಮಹಿಳೆಯರಿಗೆ ಕೋವಿಡ್-19 ಲಸಿಕೆಯನ್ನು ಶಿಫಾರಸು ಮಾಡಲಾಗಿದೆ.

ಕೋವಿಡ್-19 ಲಸಿಕೆ ನೀಡುವ ಮೊದಲು ಲಸಿಕೆ ಪಡೆಯುವವರಿಗೆ ಕ್ಷಿಪ್ರ ಆಂಟಿಜೆನ್ ಪರೀಕ್ಷೆ (RAT) ಅವಶ್ಯಕತೆಯಿಲ್ಲ.

ಗರ್ಭಿಣಿ ಮಹಿಳೆಯರಿಗೆ ಕೋವಿಡ್-19 ಲಸಿಕೆ ಹಾಕುವ ವಿಷಯದ ಬಗ್ಗೆ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ) ಪರಿಶೀಲನೆ ನಡೆಸುತ್ತಿದೆ.

ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಮತ್ತು ಸಂವಹನದ ಎಲ್ಲಾ ಚಾನೆಲ್ಗಳನ್ನು ಬಳಸುವ ಮೂಲಕ ಮಾಹಿತಿಯನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಪ್ರಸಾರ ಮಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ. ಲಸಿಕೆ ನೀಡುವ ಸಿಬ್ಬಂದಿಗೆ ಎಲ್ಲಾ ಹಂತದಲ್ಲೂ ತರಬೇತಿ ನೀಡಲು ರಾಜ್ಯಗಳಿಗೆ ಸೂಚಿಸಲಾಗಿದೆ.

***



(Release ID: 1719981) Visitor Counter : 358