ಪ್ರಧಾನ ಮಂತ್ರಿಯವರ ಕಛೇರಿ

“ತೌಕ್ತೆ’ ಚಂಡಮಾರುತ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಪರಾಮರ್ಶೆಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಮಂತ್ರಿ


ಜನರ ಸುರಕ್ಷಿತ ಸ್ಥಳಾಂತರ ಖಾತ್ರಿಪಡಿಸಲು ಸಾಧ್ಯವಾದ ಎಲ್ಲ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ ನಿರ್ದೇಶನ

ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರು ಸೇರಿ ಎಲ್ಲ ಅಗತ್ಯ ಸೇವೆ ಯಥಾಸ್ಥಿತಿ ಖಾತ್ರಿಪಡಿಸಬೇಕು : ಪ್ರಧಾನಮಂತ್ರಿ

ಆಸ್ಪತ್ರೆಗಳಲ್ಲಿ ಕೋವಿಡ್ ನಿರ್ವಹಣೆಗೆ ವಿಶೇಷ ಸಿದ್ಧತಾ ಕ್ರಮ ಅತ್ಯಗತ್ಯ; ಲಸಿಕೆ ಶೈತ್ಯಾಗಾರ ಮತ್ತು ವಿದ್ಯುತ್ ಬ್ಯಾಕ್ ಅಪ್ ಹಾಗೂ ಚಂಡಮಾರುತ ಹಿನ್ನೆಲೆ ಸೂಕ್ಷ್ಮ ಸ್ಥಳಗಳಲ್ಲಿ ಅಗತ್ಯ ಔಷಧಗಳ ದಾಸ್ತಾನು ಅಗತ್ಯ: ಪ್ರಧಾನಮಂತ್ರಿ

Posted On: 15 MAY 2021 6:51PM by PIB Bengaluru

‘ತೌಕ್ತೆ’ ಚಂಡಮಾರುತದಿಂದಾಗಿ ಉದ್ಭವಿಸಲಿರುವ ಸ್ಥಿತಿಗತಿ ನಿರ್ವಹಣೆ ಕುರಿತಂತೆ ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು/ಸಂಸ್ಥೆಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು.

ಭಾರತೀಯ ಹವಾಮಾನ ಇಲಾಖೆ(ಐಎಂಡಿ) ‘ತೌಕ್ತೆ’ ಚಂಡಮಾರುತ ಮೇ 18ರ ಮಧ್ಯಾಹ್ನ/ಸಂಜೆ ವೇಳೆಗೆ ಗಂಟೆಗೆ ಸುಮಾರು 175 ಕಿ.ಮೀ. ವೇಗದಲ್ಲಿ ಗುಜರಾತ್ ನ ಕರಾವಳಿಯ ಪೋರಬಂದರ್ ಮತ್ತು ನಲಿಯಾ ಸುತ್ತಮುತ್ತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ಇದರಿಂದಾಗಿ ಗುಜರಾತ್ ನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ವಿಶೇಷವಾಗಿ ಜುನಗಢ್ ಮತ್ತು ಗಿರ್ ಸೋಮನಾಥ್ ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸೌರಾಷ್ಟ್ರ, ಕಚ್ ಮತ್ತು ದಿಯು ಜಿಲ್ಲೆಗಳಲ್ಲಿ ಅಂದರೆ ಗಿರ್ ಸೋಮನಾಥ್ ದಿಯು, ಜುನಗಢ್, ಪೋರಬಂದರ್, ದೇವಭೂಮಿ ದ್ವಾರಕ, ಅಮ್ರೇಲಿ, ರಾಜ್ ಕೋಟ್ ಮತ್ತು ಜಾಮ್ ನಗರದ ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಭಾರತೀಯ ಹವಾಮಾನ ಇಲಾಖೆ, ಸಮುದ್ರದ ಅಲೆಗಳು 2-3 ಮೀಟರ್ ಮೇಲೇಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇದರಿಂದ ಕರಾವಳಿ ಪ್ರದೇಶಗಳಾದ ಮೊರ್ಬಿ, ಕಚ್, ದೇವಭೂಮಿ ದ್ವಾರಕ ಹಾಗೂ ಜಾಮ್ ನಗರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಲಿದೆ ಮತ್ತು ಪೋರಬಂದರ್, ಜುನಗಢ್, ದಿಯು, ಗಿರ್ ಸೋಮನಾಥ್, ಅಮ್ರೇಲಿ, ಭವನಗರಗಳಲ್ಲಿ ಅಲೆಗಳು ಒಂದರಿಂದ ಎರಡು ಮೀಟರ್ ಮೇಲೇಳವಿವೆ ಹಾಗೂ ಗುಜರಾತ್ ನ ಇತರೆ ಕರಾವಳಿ ಜಿಲ್ಲೆಗಳಲ್ಲಿ ಮೇ 18ರ ಮಧ್ಯಾಹ್ನ/ಸಂಜೆಯ ವೇಳೆಗೆ ವಾಯುಭಾರ ಕುಸಿತದ ಸಂದರ್ಭದಲ್ಲಿ ಅಲೆಗಳು 0.5 ರಿಂದ ಒಂದು ಮೀಟರ್ ಮೇಲೇಳುವ ಸಾಧ್ಯತೆ ಇದೆ.

ಭಾರತೀಯ ಹವಾಮಾನ ಇಲಾಖೆ ಮೇ 13ರಿಂದೀಚೆಗೆ ಸಂಬಂಧಿಸಿದ ಎಲ್ಲ ರಾಜ್ಯಗಳಿಗೆ ಹವಾಮಾನ ಮುನ್ಸೂಚನೆ ಕುರಿತಂತೆ ಮೂರು ಗಂಟೆಗೊಮ್ಮೆ ಬುಲೆಟಿನ್ ಗಳನ್ನು ಬಿಡುಗಡೆ ಮಾಡುತ್ತಿದೆ.  

 ಸಚಿವ ಸಂಪುಟ ಕಾರ್ಯದರ್ಶಿ ಸಂಬಂಧಿಸಿದ ಎಲ್ಲ ಕರಾವಳಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರ ಸಚಿವಾಲಯಗಳು/ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕುರಿತು ಚರ್ಚಿಸಲಾಯಿತು.

ಕೇಂದ್ರ ಗೃಹ ವ್ಯವಹಾರಗಳ ಇಲಾಖೆ(ಎಂಎಚ್ಎ) ದಿನದ 24 ಗಂಟೆಗಳೂ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸುತ್ತಿದೆ ಮತ್ತು ಅದು ಸಂಬಂಧಿಸಿದ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಎಂಎಚ್ಎ ಈಗಾಗಲೇ ಎಲ್ಲಾ ರಾಜ್ಯಗಳಿಗೆ ಮುಂಗಡವಾಗಿ ಎಸ್ ಡಿಆರ್ ಎಫ್ ನ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಎನ್ ಡಿಆರ್ ಎಫ್ ನ 42 ತಂಡಗಳು ಈಗಾಗಲೇ ದೋಣಿಗಳು, ಮರ ಕಟಾವು ಯಂತ್ರಗಳು, ದೂರಸಂಪರ್ಕ ಯಂತ್ರಗಳು ಇತ್ಯಾದಿಗಳನ್ನೊಳಗೊಂಡಂತೆ ಸಜ್ಜಾಗಿ ಆರು ರಾಜ್ಯಗಳಲ್ಲಿ ನೆಲೆಗೊಳಿಸಲಾಗಿದೆ. ಜೊತೆಗೆ 26 ತಂಡಗಳನ್ನು ಸನ್ನದ್ಧವಾಗಿಡಲಾಗಿದೆ. 

ಭಾರತೀಯ ಕರಾವಳಿ ಪಡೆ ಮತ್ತು ನೌಕಾಪಡೆ ಪರಿಹಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಹಡಗುಗಳು ಹಾಗೂ ಹೆಲಿಕಾಪ್ಟರ್ ಗಳನ್ನು ನಿಯೋಜಿಸಿವೆ. ವಾಯುಪಡೆ ಮತ್ತು ಸೇನೆಯ ಇಂಜಿನಿಯರಿಂಗ್ ಕಾರ್ಯಪಡೆ, ದೋಣಿಗಳು ಹಾಗೂ ರಕ್ಷಣಾ ಉಪಕರಣಗಳ ಮೂಲಕ ನಿಯೋಜನೆಗೆ ಸನ್ನದ್ಧವಾಗಿವೆ. ಪಶ್ಚಿಮ ಕರಾವಳಿ ಉದ್ದಕ್ಕೂ ಏಳು ಹಡಗುಗಳು ಮಾನವರ ರಕ್ಷಣೆಗೆ ಮತ್ತು ವಿಪತ್ತು ಪರಿಹಾರ ಘಟಕಗಳ ಮೂಲಕ ಸನ್ನದ್ಧವಾಗಿವೆ. ಪಶ್ಚಿಮ ಕರಾವಳಿ ಉದ್ದಕ್ಕೂ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಕಣ್ಗಾವಲು ನಡೆಸುತ್ತಿವೆ. ಪಶ್ಚಿಮ ಕರಾವಳಿ ಉದ್ದದ ತ್ರಿವೇಂಡ್ರಮ್, ಕಣ್ಣೂರು ಮತ್ತು ಇತರ ಜಾಗಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳು(ಡಿಆರ್ ಟಿಎಸ್) ಮತ್ತು ವೈದ್ಯಕೀಯ ತಂಡ(ಎಂಟಿಎಸ್) ಗಳನ್ನು ಸನ್ನದ್ಧಗೊಳಿಸಲಾಗಿದೆ.

 ಇಂಧನ ಸಚಿವಾಲಯ ತನ್ನ ತುರ್ತು ನಿರ್ವಹಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ ಮತ್ತು ಅದು ತುರ್ತಾಗಿ ವಿದ್ಯುತ್ ಪುನರ್ ಸ್ಥಾಪನೆಗೆ ಅಗತ್ಯ ಟ್ರಾನ್ಸ್ ಫಾರ್ಮರ್ ಗಳು, ಡಿಜಿ ಸೆಟ್ ಗಳು ಮತ್ತು ಇತರ ಸಾಧನಗಳನ್ನು ಸಿದ್ಧವಾಗಿಟ್ಟಿದೆ. ದೂರಸಂಪರ್ಕ ಸಚಿವಾಲಯ ಎಲ್ಲ ದೂರಸಂಪರ್ಕ ಟವರ್ ಗಳು ಮತ್ತು ವಿನಿಮಯ ಕೇಂದ್ರಗಳ ಮೇಲೆ ನಿಗಾ ಇರಿಸಿದ್ದು, ದೂರಸಂಪರ್ಕ ಜಾಲ ಪುನರ್ ಸ್ಥಾಪನೆಗೆ ಸಂಪೂರ್ಣ ಸಜ್ಜಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಚಂಡಮಾರುತದಿಂದ ಬಾಧಿತವಾಗಲಿರುವ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಸಚಿವಾಲಯಗಳಿಗೆ ಸೂಚನೆಯನ್ನು ನೀಡಿದ್ದು, ಕೋವಿಡ್ ನಿಂದ ಬಾಧಿತವಾದ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಆರೋಗ್ಯ ವಲಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದೆ. ಅಲ್ಲದೆ ತುರ್ತು ಔಷಧಗಳ ಸಹಿತ 10 ಕ್ಷಿಪ್ರ ಪ್ರತಿಸ್ಪಂದನಾ ವೈದ್ಯಕೀಯ ತಂಡಗಳು ಮತ್ತು ಐದು ಸಾರ್ವಜನಿಕ ಆರೋಗ್ಯ ನಿರ್ವಹಣಾ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ. ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯ ಎಲ್ಲಾ ಹಡಗುಗಳ ಸುರಕ್ಷತೆಗೆ ಕ್ರಮಗಳನ್ನು ಕೈಗೊಂಡಿದೆ ಮತ್ತು ತುರ್ತು ಹಡಗುಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ.  

ಎನ್ ಡಿಆರ್ ಎಫ್ ಸೂಕ್ಷ್ಮ ಸ್ಥಳಗಳಿಂದ ಜನರನ್ನು ಸ್ಥಳಾಂತರಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ನೆರವು ನೀಡುತ್ತಿದೆ ಮತ್ತು ಹೇಗೆ ಚಂಡಮಾರುತದ ಸ್ಥಿತಿಗತಿಯನ್ನು ನಿರ್ವಹಿಸಬೇಕೆಂಬ ಕುರಿತು ನಿರಂತರವಾಗಿ ಸಮುದಾಯ ಜಾಗೃತಿ ಅಭಿಯಾನವನ್ನು ಕೈಗೊಳ್ಳುತ್ತಿದೆ.

ಪರಾಮರ್ಶೆ ನಂತರ ಪ್ರಧಾನಮಂತ್ರಿ ಅವರು, ರಾಜ್ಯ ಸರ್ಕಾರಗಳು ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಿದರು ಮತ್ತು ಒಂದು ವೇಳೆ ಚಂಡಮಾರುತದಿಂದಾಗಿ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರು ಇತ್ಯಾದಿ ಅತ್ಯವಶ್ಯಕ ಸೇವೆಗಳಿಗೆ ಹಾನಿಯಾದರೆ ತಕ್ಷಣವೇ ಅವುಗಳನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಆಸ್ಪತ್ರೆಗಳಲ್ಲಿ ಕೋವಿಡ್-19 ನಿರ್ವಹಣೆಗೆ, ಲಸಿಕೆ ಶೈತ್ಯಾಗಾರ ಮತ್ತು ಇತರೆ ವೈದ್ಯಕೀಯ ಸೌಕರ್ಯಗಳಿಗೆ ವಿದ್ಯುತ್ ಬ್ಯಾಕ್ ಅಪ್ ಮತ್ತು ಅಗತ್ಯ ಔಷಧಗಳ ದಾಸ್ತಾನಿಗೆ ಮತ್ತು ಯಾವುದೇ ಅಡೆತಡೆ ಇಲ್ಲದೆ ಆಕ್ಸಿಜನ್ ಟ್ಯಾಂಕರ್ ಗಳ ಸಂಚಾರಕ್ಕೆ ಯೋಜನೆ ರೂಪಿಸುವುದು ಸೇರಿದಂತೆ  ವಿಶೇಷ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ನಿರ್ದೇಶಿಸಿದರು.  ಕಂಟ್ರೋಲ್ ರೂಮ್ ಗಳು ದಿನದ 24 ಗಂಟೆಗಳು ಕಾರ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು. ಜಾಮ್ ನಗರದಿಂದ ಆಕ್ಸಿಜನ್ ಪೂರೈಕೆಯಲ್ಲಿ ಕನಿಷ್ಠ ವ್ಯತ್ಯಯವಾಗುವಂತೆ ವಿಶೇಷ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಸ್ಥಳೀಯ ಸಮುದಾಯವನ್ನು ಸೇರಿಸಿಕೊಂಡು ಸಕಾಲಕ್ಕೆ ಸ್ಯಾನಿಟೈಸೇಷನ್ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು.

  ಗೃಹ ಸಚಿವರು, ಗೃಹ ಖಾತೆ ರಾಜ್ಯ ಸಚಿವರು, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ, ನಾಗರಿಕ ವಿಮಾನಯಾನ, ಇಂಧನ, ದೂರಸಂಪರ್ಕ, ಶಿಪ್ಪಿಂಗ್, ಮೀನುಗಾರಿಕೆ ಸಚಿವಾಲಯಗಳು/ಇಲಾಖೆಗಳು ಕಾರ್ಯದರ್ಶಿಗಳು, ಎನ್ ಡಿಎಂಎ ಸದಸ್ಯ ಕಾರ್ಯದರ್ಶಿ ಮತ್ತು ಸದಸ್ಯರು, ರೈಲ್ವೆ ಮಂಡಳಿ ಅಧ್ಯಕ್ಷರು, ಎನ್ ಡಿಆರ್ ಎಫ್ ಮತ್ತು ಐಎಂಡಿ ಮಹಾನಿರ್ದೇಶಕರು ಹಾಗೂ ಪಿಎಂಒ, ಎಂಎಚ್ಎ ಮತ್ತು ಐಎಂಡಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

***(Release ID: 1718957) Visitor Counter : 218